ಪ್ಯಾರಿಸ್: ಕುಸ್ತಿಪಟು ಅಮನ್ ಸೆಹ್ರಾವತ್ ಅವರು ಒಲಿಂಪಿಕ್ಸ್ ಪದಕ ಗಳಿಸುವ ಮುನ್ನ ಒಂದಷ್ಟು ಕಳೆದುಕೊಳ್ಳಬೇಕಾದ ಸವಾಲು ಎದುರಿಸಿದ್ದರು.
ಗುರುವಾರ ಅವರು 57 ಕೆ.ಜಿ. ಫ್ರೀಸ್ಟೈಲ್ ಕುಸ್ತಿ ಸೆಮಿಫೈನಲ್‌ನಲ್ಲಿ ಜಪಾನಿನ ರೀ ಹಿಗುಚಿ ವಿರುದ್ಧ ಸೋತಿದ್ದರು. ಅದರ ನಂತರ ಮರುದಿನ (ಶುಕ್ರವಾರ) ಕಂಚಿನ ಪದಕಕ್ಕಾಗಿ ಪ್ಲೇ ಆಫ್‌ನಲ್ಲಿ ಸೆಣಸಬೇಕಿತ್ತು. ಆದರೆ ಅವರ ದೇಹತೂಕವು 61.5 ಕೆ.ಜಿ.ಗೆ ಏರಿತ್ತು. ನಿಗದಿತ ತೂಕದ ವ್ಯಾಪ್ತಿಗೆ ಬರಬೇಕಾದರೆ 4.5 ಕೆ.ಜಿ. ಇಳಿಸಬೇಕಿತ್ತು. ಸ್ಪರ್ಧೆಯ ನಿಯಮದ ಪ್ರಕಾರ ಎರಡನೇ ದಿನದ ತೂಕ ಪರೀಕ್ಷೆ ಮಾಡಿಸಿಕೊಳ್ಳಲು ಅವರ ಬಳಿ ಇದ್ದದ್ದು ಕೇವಲ 10 ಗಂಟೆಗಳು ಮಾತ್ರ.
ಈ ಅವಧಿಯಲ್ಲಿಯೇ ಕೋಚ್‌ಗಳಾದ ಜಗಮಂದರ್ ಸಿಂಗ್ ಮತ್ತು ವೀರೇಂದರ್ ಸಿಂಗ್ ಅವರ ಮಾರ್ಗದರ್ಶನದಲ್ಲಿ 4.6 ಕೆ.ಜಿ. ಇಳಿಸುವಲ್ಲಿ ಅಮನ್ ಯಶಸ್ವಿಯಾದರು. ಅವರು ಸ್ಪರ್ಧಾದಿನದಂದು ತೂಕದ ಯಂತ್ರದ ಮೇಲೆ ನಿಂತಾಗ 56.9 ಕೆ.ಜಿ. ಎಂದು ತೋರಿಸಿತ್ತು.
ಮಹಿಳೆಯರ 50 ಕೆ.ಜಿ. ವಿಭಾಗದ ಫೈನಲ್ ಪ್ರವೇಶಿಸಿದ್ದ ವಿನೇಶ್ ಫೋಗಟ್ ಅವರು ಬೌಟ್ ದಿನದಂದು 100 ಗ್ರಾಮ್ ಹೆಚ್ಚು ತೂಗಿದ್ದರಿಂದ ಅನರ್ಹಗೊಂಡಿದ್ದರು. ಅದರೊಂದಿಗೆ ಭಾರತಕ್ಕೆ ಒಂದು ಪದಕ ಕೈತಪ್ಪಿತ್ತು. ಆದರೆ ಅಮನ್ ತಮ್ಮ ನಿಗದಿಯ ತೂಕಕ್ಕಿಂತ 100 ಗ್ರಾಮ್ ಕಡಿಮೆಯಾಗಿದ್ದರು.
ಇದಕ್ಕಾಗಿ ಅವರು ಇಡೀ ರಾತ್ರಿ ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ. ಗುರುವಾರ ಸೆಮಿಫೈನಲ್ ಮುಗಿಯುತ್ತಿದ್ದಂತೆಯೇ ತೂಕ ಇಳಿಸುವ ಕಾರ್ಯ ಆರಂಭವಾಯಿತು. ಇಬ್ಬರೂ ಅನುಭವಿ ಕೋಚ್‌ಗಳ ಸೂಚನೆಯಂತೆ ಅಮನ್ ತಮ್ಮ ದೇಹ ದಂಡಿಸಿದರು. ಸುಮಾರು ಒಂದೂವರೆ ತಾಸು ಕುಸ್ತಿಯಲ್ಲಿ ನಿಂತುಕೊಂಡು ಪ್ರಯೋಗಿಸುವ ಪಟ್ಟುಗಳ ಅಭ್ಯಾಸ ನಡೆಸಿದರು. ಅದಾದ ಕೂಡಲೇ ಒಂದು ಗಂಟೆ ಬಿಸಿ ನೀರು ಸ್ನಾನ. ಮಧ್ಯರಾತ್ರಿ 12.30ಕ್ಕೆ ಜಿಮ್ನಾಷಿಯಂನಲ್ಲಿ ಟ್ರೆಡ್‌ಮಿಲ್ ಮೇಲೆ ಒಂದು ಗಂಟೆ ಸತತ ಓಟ. ನಂತರ 30 ನಿಮಿಷ ವಿಶ್ರಾಂತಿ ಪಡೆದರು.
ಮತ್ತೆ ಕಸರತ್ತು ಮುಂದುವರಿಸಿದ ಅವರು, ತಲಾ 5 ನಿಮಿಷದ ಐದು ಸೆಷನ್‌ಗಳ ಹಬೆಸ್ನಾನ ಮಾಡಿದರು.ಇದು ಮುಕ್ತಾಯವಾದ ನಂತರ ತೂಕ ನೋಡಿದಾಗ ಇನ್ನೂ 900 ಗ್ರಾಂ ಹೆಚ್ಚು ತೂಕವಿತ್ತು. ಆಗ ಅವರಿಗೆ ಮಸಾಜ್ ಮಾಡಲಾಯಿತು. ನಂತರ 15 ನಿಮಿಷ ನಿಧಾನಗತಿಯಲ್ಲಿ ಜಾಗಿಂಗ್ ಮಾಡಿದರು. ಬೆಳಗಿನ ಜಾವ 4.30ರ ವೇಳೆಗೆ ಅವರ ತೂಕವು 56.9 ಕೆ.ಜಿ ತೋರಿಸಿದಾಗ ಅಮನ್ ಮತ್ತು ಕೋಚ್‌ಗಳು ನಿರಾಳರಾದರು.
ಈ ಕಸರತ್ತುಗಳ ನಡುವೆ ಅಮನ್ ಅವರು ಬೆಚ್ಚಗಿನ ನೀರಿನಲ್ಲಿ ನಿಂಬೆರಸ ಮತ್ತು ಜೇನುತುಪ್ಪ ಮಿಶ್ರ ಮಾಡಿ ಕುಡಿದಿದ್ದರು. ಸ್ವಲ್ಪ ಕಾಫಿ ಕೂಡ ಕುಡಿದಿದ್ದರು. ಇಷ್ಟೆಲ್ಲ ಆದ ನಂತರ ಅಮನ್ ಮಲಗಲಿಲ್ಲ.
‘ಇಡೀ ರಾತ್ರಿ ನಾನು ಕುಸ್ತಿ ಬೌಟ್‌ಗಳ ವಿಡಿಯೊ ನೋಡುತ್ತಿದ್ದೆ. ಪ್ರತಿ ಗಂಟೆಗೊಮ್ಮೆ ತೂಕದ ಪರೀಕ್ಷೆ ಮಾಡುತ್ತಿದ್ದೆವು. ಬೌಟ್‌ಗೂ ಮುನ್ನ ದೇಹತೂಕ ಇಳಿಸುವ ಕಸರತ್ತು ನಮ್ಮ ಕೆಲಸದ ಭಾಗ. ಇದರಲ್ಲಿ ಹೊಸದೇನಿಲ್ಲ. ಆದರೆ ಈ ಬಾರಿ ನಮಗೂ ಬಹಳ ಒತ್ತಡವಾಯಿತು. ಈಚೆಗೆ ನಡೆದ ಘಟನೆ (ವಿನೇಶ್ ಫೋಗಟ್) ಇದಕ್ಕೆ ಕಾರಣ. ಮತ್ತೊಂದು ಪದಕ ನಮ್ಮ ಕೈಯಿಂದ ಜಾರಿಹೋಗದಂತೆ ನೋಡಿಕೊಳ್ಳಬೇಕಿತ್ತು’ ಎಂದು ಕೋಚ್ ದಹಿಯಾ ವಿವರಿಸಿದರು.
ಈ ಎಲ್ಲ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಲಭಿಸಿತು. 21 ವರ್ಷದ ಅಮನ್ ಅವರು ಪೋರ್ಟೊರಿಕೊದ ಡೇರಿಯನ್ ಕ್ರೂಸ್ ಅವರನ್ನು ಸೋಲಿಸಿ ಕಂಚಿನ ಪದಕ ಗಳಿಸಿದರು. ಈ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಕುಸ್ತಿಯಲ್ಲಿ ಒಲಿದ ಏಕೈಕ ಪದಕ ಇದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.