ನವದೆಹಲಿ: ಭಾರತ ಕುಸ್ತಿ ಫೆಡರೇಷನ್ ಮೇಲೆ 15 ತಿಂಗಳ ಹಿಂದೆ ವಿಧಿಸಿದ್ದ ಅಮಾನತನ್ನು ಕ್ರೀಡಾ ಸಚಿವಾಲಯ ಸೋಮವಾರ ಹಿಂಪಡೆದುಕೊಂಡಿದೆ. ಇದರಿಂದ ಕ್ರೀಡೆಯ ಸುತ್ತ ಹಲವು ತಿಂಗಳಿಂದ ಕವಿದಿದ್ದ ಅನಿಶ್ಚಿತತೆ ಕೊನೆಗೊಂಡಿದೆ.

ಅಮ್ಮಾನ್ನಲ್ಲಿ ಮುಂಬರುವ ಏಷ್ಯನ್ ಚಾಂಪಿಯನ್ಷಿಪ್ಗೆ ಆಯ್ಕೆ ಟ್ರಯಲ್ಸ್ ಸೇರಿದಂತೆ ಕುಸ್ತಿ ಚಟುವಟಿಕೆಗಳ ಪುನರಾರಂಭಕ್ಕೆ ಹಾದಿಯೂ ಸುಗಮಗೊಂಡಿದೆ.

ಫೆಡರೇಷನ್ನ ಹೊಸ ಸಮಿತಿಯ ಆಡಳಿತದಲ್ಲಿ ಮತ್ತು ಕಾರ್ಯನಿರ್ವಹಣೆಯಲ್ಲಿ ಲೋಪಗಳುಂಟಾಗಿವೆ ಎಂದು ಕೇಂದ್ರ ಕ್ರೀಡಾ ಸಚಿವಾಲಯ 2023ರ ಡಿಸೆಂಬರ್ 24ರಂದು ಕುಸ್ತಿ ಫೆಡರೇಷನ್ ಮೇಲೆ ಅಮಾನತು ಹೇರಿತ್ತು. ಫೆಡರೇಷನ್ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ಅಡ್ಹಾಕ್ ಸಮಿತಿ ರಚಿಸುವಂತೆ ಭಾರತ ಒಲಿಂಪಿಕ್ ಸಂಸ್ಥೆಗೆ ಸೂಚಿಸಿತ್ತು.

ಸಂಜಯ್ ಸಿಂಗ್ ನೇತೃತ್ವದ ಹೊಸ ಸಮಿತಿ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಗೊಂಡಾದ ನಂದಿನಿನಗರದಲ್ಲಿ 15 ವರ್ಷದೊಳಗಿನ ಮತ್ತು 20 ವರ್ಷದೊಳಗಿನವರ ರಾಷ್ಟ್ರೀಯ ಚಾಂಪಿಯನ್ಷಿಪ್ ನಡೆಸುವುದಾಗಿ ಘೋಷಿಸಿತ್ತು. ಆದರೆ ಸ್ಥಳದ ಆಯ್ಕೆ ಮತ್ತು ಅವಸರ ಸರ್ಕಾರದ ಆಕ್ರೋಶಕ್ಕೆ ಕಾರಣವಾಗಿತ್ತು. ಗೊಂಡಾ ನಗರವು, ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಶೋಷಣೆ ನಡೆಸಿದ ಆರೋಪ ಹೊತ್ತಿರುವ ಬಿಜೆಪಿಯ ಮಾಜಿ ಸಂಸದ ಬ್ರಿಜ್ಭೂಷಣ್ ಶರಣ್ ಸಿಂಗ್ ಅವರ ಭದ್ರ ನೆಲೆಯಾಗಿದೆ.

ಕ್ರೀಡೆಯ ಮತ್ತು ಅಥ್ಲೀಟ್ಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅಮಾನತು ಹಿಂಪಡೆಯುವುದಾಗಿ ಸಚಿವಾಲಯವು ಸೋಮವಾರ ಆದೇಶ ಹೊರಡಿಸಿದೆ.

ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಅವರ ಮನೆಯಿಂದ ಕುಸ್ತಿ ಫೆಡರೇಷನ್ ಕೆಲಸ ನಿರ್ವಹಿಸುತ್ತಿದೆ ಎಂಬ ದೂರುಗಳಿದ್ದವು. ಇದರ ಸತ್ಯಾಸತ್ಯತೆ ಅರಿಯಲು ಸಚಿವಾಲಯವು ಸಮಿತಿಯೊಂದನ್ನು ರಚಿಸಿತ್ತು. ಫೆಡರೇಷನ್ ತನ್ನ ಕಚೇರಿಯನ್ನು ಸ್ಥಳಾಂತರಿಸಿದ್ದು, ಅದು ಪ್ರಸ್ತುತ ವಿನೋದ್ನಗರ ಪೂರ್ವ ಪ್ರದೇಶದಲ್ಲಿ ಇದೆ ಎಂದು ಈ ಸಮಿತಿಯ ಪರಿಶೀಲನೆಯಲ್ಲಿ ತಿಳಿದುಬಂದಿತ್ತು.

ಫೆಡರೇಷನ್ ತನ್ನ ಕಾರ್ಯನಿರ್ವಹಣೆ ಸುಧಾರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿರುವ ಸಚಿವಾಲಯವು, 2028ರ ಒಲಿಂಪಿಕ್ ಕ್ರೀಡೆಗಳಲ್ಲಿ ಭಾರತದ ಪದಕ ಸಾಧ್ಯತೆ ಹೆಚ್ಚಿಸುವ ಉದ್ದೇಶದಿಂದ ಪೂರ್ಣಪ್ರಮಾಣದಲ್ಲಿ ಫೆಡರೇಷನ್ಗೆ ಅಧಿಕಾರ ನೀಡಲು ಮುಂದಾಗಿ, ಅಮಾನತು ಹಿಂಪಡೆಯಿತು.

‘ಸರ್ಕಾರಕ್ಕೆ ಧನ್ಯವಾದ’:

‘ಈ ಕ್ರಮ ಕೈಗೊಂಡಿರುವುದಕ್ಕೆ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುವೆ. ಇದರಿಂದಾಗಿ ಫೆಡರೇಷನ್ ತನ್ನ ಕೆಲಸಗಳನ್ನು ಸುಸೂತ್ರವಾಗಿ ನಡೆಸಲು ಅವಕಾಶವಾಗಲಿದೆ. ಕ್ರೀಡೆಯ ಹಿತಾಸಕ್ತಿಯಿಂದ ಈ ಕ್ರಮ ಅಗತ್ಯವಿತ್ತು. ಸ್ಪರ್ಧೆಗಳಿಲ್ಲದೇ ಕುಸ್ತಿಪಟುಗಳು ತೊಂದರೆ ಎದುರಿಸುತ್ತಿದ್ದರು’ ಎಂದು ಫೆಡರೇಷನ್ನ ಅಧ್ಯಕ್ಷ ಸಂಜಯ್ ಸಿಂಗ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ನಿರ್ದೇಶನ:

ಸಚಿವಾಲಯವು ಫೆಡರೇಷನ್ಗೆ ಕೆಲವು ನಿರ್ದೇಶನಗಳನ್ನೂ ನೀಡಿದೆ. ಇದರ ಪ್ರಕಾರ, ಹೊಸ ಪದಾಧಿಕಾರಿಗಳಲ್ಲಿ ಅಧಿಕಾರ ಹಂಚಿಕೆಯಾಗುವಂತೆ ನೋಡಿಕೊಳ್ಳಬೇಕು. ಅಮಾನತಾಗಿರುವ/ ವಜಾಗೊಂಡಿರುವ ಪದಾಧಿಕಾರಿಗಳಿಂದ ಅಂತರ ಕಾಪಾಡಿಕೊಳ್ಳಬೇಕಾಗಿದೆ.

ಈಗಿನ ಪದಾಧಿಕಾರಿಗಳ ಪೈಕಿ ಪ್ರಧಾನ ಕಾರ್ಯದರ್ಶಿ ಪ್ರೇಮಚಂದ್ ಲೋಚಬ್ ಅವರು ಸಂಜಯ್ ಸಿಂಗ್ ಎದುರಾಳಿ ಗುಂಪಿನಲ್ಲಿ ಗುರುತಿಸಿಕೊಂಡವರು. ಸಚಿವಾಲಯದ ಆದೇಶ ಈ ನಿಟ್ಟಿನಲ್ಲಿ ಮಹತ್ವದ್ದಾಗಿದೆ.

ಫೆಡರೇಷನ್ನ ಕಾರ್ಯಕಾರಿ ಸಮಿತಿ ಈ ಬಗ್ಗೆ ನಾಲ್ಕು ವಾರಗಳಲ್ಲಿ ಮುಚ್ಚಳಿಕೆ ನೀಡಬೇಕಾಗಿದೆ. ಇದನ್ನು ಉಲ್ಲಂಘೀಸಿದರೆ ಕಾನೂನು ಕ್ರಮಕ್ಕೆ ದಾರಿಯಾಗುತ್ತದೆ ಎಂದೂ ಸಚಿವಾಲಯದ ಆದೇಶದಲ್ಲಿ ಎಚ್ಚರಿಸಲಾಗಿದೆ.

ಅಂತರರಾಷ್ಟ್ರೀಯ ಪಂದ್ಯಾವಳಿಗಳಿಗೆ ಆಯ್ಕೆಯು ನ್ಯಾಯಸಮ್ಮತ ಮತ್ತು ಪಾರದರ್ಶಕ ರೀತಿಯಲ್ಲಿರಬೇಕು. ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ (ವಿಶ್ವ ಕುಸ್ತಿ ಸಂಸ್ಥೆ) ಕಾಲಕಾಲಕ್ಕೆ ಹೊರಡಿಸಿದ ಸೂಚನೆ ಮತ್ತು ಕ್ರೀಡಾ ಸಂಹಿತಿಗೆ ಅನುಗುಣವಾಗಿರಬೇಕು ಎಂದೂ ತಿಳಿಸಲಾಗಿದೆ.

ಇದರಲ್ಲಿ ಅನುಸರಿಸಲಾಗದ್ದು ಯಾವುದೂ ಇಲ್ಲ ಎಂದು ಫೆಡರೇಷನ್ನ ಅಧ್ಯಕ್ಷರು ತಿಳಿಸಿದ್ದಾರೆ.

‘ನಾವು ಈಗಾಗಲೇ ಹೊಸ ಕಚೇರಿಗೆ ಸ್ಥಳಾಂತರಗೊಂಡಿದ್ದೇವೆ. ಕಾರ್ಯಕಾರಿ ಸಮಿತಿ ಸಭೆಯನ್ನು ಸದ್ಯದಲ್ಲೇ ಕರೆಯಲಿದ್ದೇವೆ. ಆಯ್ಕೆ ಟ್ರಯಲ್ಸ್ಗೆ ಸಂಬಂಧಿಸಿ ಅಧಿಸೂಚನೆ ಹೊರಡಿಸುತ್ತೇವೆ. ಈ ಸೂಚನೆಗಳನ್ನು ಅನುಸರಿಸಲು ನಮಗೇನೂ ಸಮಸ್ಯೆಯಾಗದು’ ಎಂದಿದ್ದಾರೆ.

ಏಷ್ಯನ್ ಕುಸ್ತಿ ಚಾಂಪಿಯನ್ಷಿಪ್ ಜೋರ್ಡಾನ್ನ ರಾಜಧಾನಿ ಅಮ್ಮಾನ್ನಲ್ಲಿ ಮಾರ್ಚ್ 25ರಿಂದ ನಡೆಯಲಿದೆ.

ಅಮಾನತು ಮತ್ತು ನ್ಯಾಯಾಲಯದ ಪ್ರಕರಣಗಳಿಂದಾಗಿ, ಯಾಗ್ರೆಬ್ ಮತ್ತು ಅಲ್ಬೇನಿಯಾದಲ್ಲಿ ನಡೆದಿದ್ದ ರ್ಯಾಂಕಿಂಗ್ ಟೂರ್ನಿಗಳಲ್ಲಿ ಭಾರತದ ಪೈಲ್ವಾನರಿಗೆ ಸ್ಪರ್ಧಿಸಲು ಸಾಧ್ಯವಾಗಿರಲಿಲ್ಲ. ವಿನೇಶ್ ಫೋಗಟ್, ಬಜರಂಗ್ ಪೂನಿಯ, ಸತ್ಯವ್ರತ ಕಾದಿಯಾನ್ ಮೊದಲಾದ ಪ್ರಮುಖ ಕುಸ್ತಿಪಟುಗಳು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.