ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಹಾಕಿ ಇಂಡಿಯಾ: ಭಿನ್ನಾಭಿಪ್ರಠಾಯವಿಲ್ಲ...’: ಅಧ್ಯಕ್ಷ, ಕಾರ್ಯದರ್ಶಿ ಜಂಟಿ ಹೇಳಿಕೆ

Published 28 ಫೆಬ್ರುವರಿ 2024, 14:35 IST
Last Updated 28 ಫೆಬ್ರುವರಿ 2024, 14:35 IST
ಅಕ್ಷರ ಗಾತ್ರ

ನವದೆಹಲಿ: ಹಾಕಿ ಇಂಡಿಯಾ ಸಿಇಒ ಎಲೆನಾ ನಾರ್ಮನ್ ಅವರು ಆರೋಪಿಸಿರುವ ರೀತಿ ತಮ್ಮ ನಡುವೆ ಯಾವುದೇ ಒಡಕು ಇಲ್ಲ ಎಂದು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ ಮತ್ತು ಮಹಾ ಕಾರ್ಯದರ್ಶಿ ಭೋಲಾನಾಥ್ ಸಿಂಗ್ ಬುಧವಾರ ಹೇಳಿದ್ದಾರೆ. ತಾವು ಒಗ್ಗಟ್ಟಾಗಿದ್ದು, ಕ್ರೀಡೆಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆ.

ನಾರ್ಮನ್ ಅವರು ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹಾಕಿ ಇಂಡಿಯಾದಲ್ಲಿ ಎರಡು ಬಣಗಳಿವೆ. ಟಿರ್ಕಿ ಮತ್ತು ಸಿಂಗ್ ನಡುವೆ ಕಲಹ ನಡೆಯುತ್ತಿದ್ದು, ಸಂಸ್ಥೆಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎನ್ನುವ ವಾತಾವರಣ ಇದೆ’ ಎಂದು ಆಸ್ಟ್ರೇಲಿಯಾದ 49 ವರ್ಷ ವಯಸ್ಸಿನ ಎಲೆನಾ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ದೂರಿದ್ದರು.

ಆದರೆ ಟಿರ್ಕಿ ಮತ್ತು ಸಿಂಗ್ ಅವರು ಜಂಟಿ ಹೇಳಿಕೆಯಲ್ಲಿ ಎಲೆನಾ ಆರೋಪಗಳನ್ನು ನಿರಾಕರಿಸಿದ್ದಾರೆ. ‘ಇತ್ತೀಚೆಗೆ ಹಾಕಿ ಇಂಡಿಯಾದಿಂದ ಹೊರಹೋಗುತ್ತಿರುವ ಅಧಿಕಾರಿಗಳು ಸಂಸ್ಥೆಯಲ್ಲಿ ಬಣಗಳು ಇವೆ ಎಂದು ಮಾಧ್ಯಮಗಳ ಮುಂದೆ ಹೇಳುತ್ತಿದ್ದಾರೆ. ಇದು ಸರ್ವಥಾ ಸರಿಯುಲ್ಲ. ನಾವು ಒಗ್ಗಟ್ಟಾಗಿದ್ದು, ಈ ಹಿಂದಿನಂತೆ ಕ್ರೀಡೆಯ ಹಿತಾಸಕ್ತಿ ಲಕ್ಷಿಸಿ ಕಾರ್ಯನಿರ್ವಹಿಸುತ್ತಿದ್ದೇವೆ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಹಾಕಿ ಇಂಡಿಯಾ ಭಾರತದಲ್ಲಿ ಆಟದ ಏಳಿಗೆ, ಅಭಿವೃದ್ಧಿಗಾಗಿ ಬದ್ಧವಾಗಿರುವ ಸ್ವಾಯತ್ತ ಸಂಸ್ಥೆ. ಹಾಕಿ ಇಂಡಿಯಾವು ಹಿಂದಿನಿಂದಲೂ ತಂಡಗಳನ್ನು ಮತ್ತು ಆಟಗಾರರನ್ನು ಸಮಾನವಾಗಿ ಕಾಣುತ್ತಿದೆ. ಸಂಸ್ಥೆಯಲ್ಲೂ ಸಮಾನತೆಯ ವಾತಾವರಣ ಇದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ದೀರ್ಘಕಾಲ ಸಿಇಒ ಆಗಿದ್ದ ನಾರ್ಮನ್ ಅವರ ರಾಜೀನಾಮೆ ಹಾಕಿ ಇಂಡಿಯಾಕ್ಕೆ ಎರಡನೇ ಹೊಡೆತ ಎನಿಸಿದೆ. ಕೆಲವೇ ದಿನಗಳ ಹಿಂದೆ ಮಹಿಳಾ ತಂಡದ ಕೋಚ್‌ ಯಾನೆಕ್‌ ಶೋಪ್ಮನ್ ಅವರು ರಾಜೀನಾಮೆ ನೀಡಿದ್ದರು. ಅವರೂ ಕೆಲಸ ಮಾಡಲು ಯೋಗ್ಯ ವಾತಾವರಣ ಇಲ್ಲ ಎಂದಿದ್ದರು. ಅಷ್ಟೇ ಅಲ್ಲ, ಹಾಕಿ ಇಂಡಿಯಾವು, ಮಹಿಳಾ ಹಾಕಿ ಕಡೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ದೂರಿದ್ದರು

ನರೀಂದರ್ ಬಾತ್ರಾ ಅವರು ಹಾಕಿ ಇಂಡಿಯಾ ಮುಖ್ಯಸ್ಥರಾಗಿದ್ದ ಸಂದರ್ಭದಲ್ಲಿ, 2011ರಲ್ಲಿ ಎಲೆನಾ ನಾರ್ಮನ್ ಅವರು ಸಂಸ್ಥೆಯ ಮೊದಲ ಸಿಇಒ ಆಗಿ ನೇಮಕಗೊಂಡಿದ್ದರು.

‘ಹಾಕಿ ಇಂಡಿಯಾದಲ್ಲಿ ಎರಡು ಬಣಗಳಿವೆ. ಅಧ್ಯಕ್ಷ ದಿಲೀಪ್ ಟಿರ್ಕಿ ಮತ್ತು ನನ್ನನ್ನು ಒಳಗೊಂಡ ಒಂದು ಗುಂಪು. ಕಾರ್ಯದರ್ಶಿ ಬೋಲಾನಾಥ್‌, ಕಾರ್ಯನಿರ್ವಾಹಕ ನಿರ್ದೇಶಕ ಕಮಾಂಡರ್ ಆರ್‌.ಕೆ.ಶ್ರೀವಾಸ್ತವ ಮತ್ತು ಖಜಾಂಚಿ ಶೇಖರ್ ಜೆ.ಮನೋಹರನ್ ನೇತೃತ್ವದ ಇನ್ನೊಂದು ಗುಂಪು ಇದೆ’ ಎಂದಿದ್ದರು ಎಲೆನಾ.

‘ಅಲ್ಲಿರುವ (ಹಾಕಿ ಇಂಡಿಯಾ) ಕೆಲವರಿಗೆ ಅಧಿಕಾರವಷ್ಟೇ ಬೇಕಿದೆ. ದಿಲೀಪ್‌ ಒಳ್ಳೆಯ ವ್ಯಕ್ತಿ. ಭಾರತ ಹಾಕಿಯ ಏಳಿಗೆಯನ್ನಷ್ಟೇ ಅಪೇಕ್ಷಿಸಿರುವವರು’ ಎಂದು ಹೇಳಿದ್ದರು.

‘ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ವಿಫಲವಾಗಿರುವ ಭಾರತ ಮಹಿಳಾ ತಂಡವನ್ನು ಮತ್ತೆ ಕಟ್ಟುವುರು. ಈ ವರ್ಷ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಪುರುಷರ ತಂಡಕ್ಕೆ ನೆರವಾಗುವುದರ ಕಡೆ ನಮ್ಮ ಗಮನ ಇರಲಿದೆ’ ಎಂದು ಟಿರ್ಕಿ ಮತ್ತು ಭೋಲಾನಾಥ್ ಸಿಂಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT