ಭುವನೇಶ್ವರ: ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಕೈತಪ್ಪಿರುವುದು ದುರದೃಷ್ಟಕರ. ಆದರೆ ಸತತ ಎರಡನೇ ಬಾರಿ ಪದಕ ಗೆಲ್ಲಲು ಸಾಧ್ಯವಾಗಿರುವುದು 'ಮಹತ್ತರ ಸಾಧನೆ' ಎಂದು ಭಾರತ ಪುರುಷರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಬಣ್ಣಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಪೇನ್ ತಂಡವನ್ನು ಮಣಿಸಿದ್ದ ಭಾರತ, ಸತತ ಎರಡನೇ ಸಲ ಕಂಚಿನ ಪದಕವನ್ನು ಗೆದ್ದಿತ್ತು. 2021ರ ಟೋಕಿಯೊ ಒಲಿಂಪಿಕ್ಸ್‌ನಲ್ಲೂ ಭಾರತ ಕಂಚಿನ ಪದಕದ ಸಾಧನೆ ಮಾಡಿತ್ತು.
ಆ ಮೂಲಕ 52 ವರ್ಷಗಳಲ್ಲಿ ಮೊದಲ ಸಲ ಒಲಿಂಪಿಕ್ಸ್‌ನಲ್ಲಿ ಸತತ ಎರಡನೇ ಸಲ ಕಂಚಿನ ಪದಕ ಗೆದ್ದಿತ್ತು.
ಭುವನೇಶ್ವರದಲ್ಲಿ ಒಡಿಶಾ ಸರ್ಕಾರವು ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಜರ್ಮನಿ ವಿರುದ್ಧದ ಸೆಮಿಫೈನಲ್ ಪಂದ್ಯ ಅತ್ಯಂತ ನಿಕಟವಾಗಿತ್ತು. ನಮಗೆ ಸಾಕಷ್ಟು ಅವಕಾಶಗಳಿದ್ದವು. ಆದರೆ ಅದೃಷ್ಟ ಕೈಕೊಟ್ಟಿತ್ತು. ಕೆಲವೊಂದು ಹೊಡೆತಗಳನ್ನು ಗುರಿ ಮುಟ್ಟಿಸುವಲ್ಲಿ ವಿಫಲರಾದೆವು' ಎಂದು ಹೇಳಿದ್ದಾರೆ.
'ಬಳಿಕ ನಡೆದ ಕಂಚಿನ ಪದಕ ಪಂದ್ಯವು ಬಹಳ ಮುಖ್ಯವೆನಿಸಿತ್ತು ಎಂದು ನಾನು ಭಾವಿಸುತ್ತೇನೆ. ಇದು ಟೂರ್ನಿಯ ಕೊನೆಯ ಪಂದ್ಯವಾಗಿತ್ತು. ಆ ಪಂದ್ಯ ಗೆದ್ದ ಬಳಿಕ ತುಂಬಾನೇ ಸಂತಸಗೊಂಡಿದ್ದೇನೆ. ಚಿನ್ನದ ಪದಕ ಗೆಲ್ಲುವ ನಮ್ಮ ಕನಸನ್ನು ನನಸಾಗಿಸುವುದು ನಮ್ಮ ಗುರಿಯಾಗಿತ್ತು. ಆದರೆ ಎಲ್ಲೋ ದುರದೃಷ್ಟ ಕಾಡಿತ್ತು' ಎಂದು ಹೇಳಿದ್ದಾರೆ.
ಈ ವೇಳೆ ಭಾರತದ ಹಾಕಿ ತಂಡಕ್ಕೆ ಪ್ರಾಯೋಜಕತ್ವ ನೀಡಿದ ಒಡಿಶಾ ಸರ್ಕಾರಕ್ಕೆ ಹರ್ಮನ್‌ಪ್ರೀತ್ ಧನ್ಯವಾದಗಳನ್ನು ಸಲ್ಲಿಸಿದರು.