ಪ್ಯಾರಿಸ್: ಕಂಚಿನ ಪದಕ ಗೆದ್ದ ಭಾರತ ಹಾಕಿ ತಂಡದ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್ ಅವರು ಭಾನುವಾರ ನಡೆಯಲಿರುವ ಒಲಿಂಪಿಕ್ ಕ್ರೀಡೆಗಳ ಸಮಾರೋಪ ಸಮಾರಂಭದಲ್ಲಿ ಮನು ಭಾಕರ್ ಅವರೊಂದಿಗೆ ಭಾರತದ ಧ್ವಜಧಾರಿ ಆಗಲಿದ್ದಾರೆ.
ಸುಮಾರು ಎರಡು ದಶಕ ಭಾರತ ತಂಡದ ಗೋಲ್ ಕೀಪರ್ ಆಗಿದ್ದ ಶ್ರೀಜೇಶ್, ಒಲಿಂಪಿಕ್ಸ್ ತಮ್ಮ ಕೊನೆಯ ಹಾಕಿ ಸ್ಪರ್ಧಾಕಣ ಎಂದು ಘೋಷಿಸಿದ್ದರು.
‘ಪ್ಯಾರಿಸ್ 2024 ಒಲಿಂಪಿಕ್ ಕ್ರೀಡೆಗಳಿಗೆ ಮನು ಭಾಕರ್ ಜೊತೆ ಜಂಟಿ ಧ್ವಜಧಾರಿಯಾಗಿ ಪಿ.ಆರ್.ಶ್ರೀಜೇಶ್ ಅವರನ್ನು ನಾಮನಿರ್ದೇಶನ ಮಾಡಲು ಭಾರತ ಒಲಿಂಪಿಕ್ ಸಂಸ್ಥೆ ಸಂತಸಪಡುತ್ತಿದೆ’ ಎಂದು ಐಒಎ ಪ್ರಕಟಣೆಯಲ್ಲಿ ತಿಳಿಸಿದೆ.
ಶ್ರೀಜೇಶ್ ಅವರಿಗೆ ಈ ಗೌರವಕ್ಕೆ ಆಯ್ಕೆ ಮಾಡುವ ಮೊದಲು ಭಾರತ ಒಲಿಂಪಿಕ್ ಸಂಸ್ಥೆ ಅಧ್ಯಕ್ಷೆ ಪಿ.ಟಿ.ಉಷಾ ಅವರು ಜಾವೆಲಿನ್ ಥ್ರೋವರ್ ನೀರಜ್ ಚೋಪ್ರಾ ಅವರೊಂದಿಗೆ ಚರ್ಚಿಸಿದ್ದರು. ಅವರೂ ಸಹ ನಿವೃತ್ತರಾಗಲಿರುವ ಶ್ರೀಜೇಶ್ ಅವರನ್ನೇ ಧ್ವಜದಾರಿಯಾಗಿ ನೋಡಲು ಇಷ್ಟಪಡುವುದಾಗಿ ಹೇಳಿದರು.
ಗುರುವಾರ ತಡರಾತ್ರಿ ನಡೆದ ಜಾವೆಲಿನ್ ಥ್ರೊ ಸ್ಪರ್ಧೆಯಲ್ಲಿ ನೀರಜ್ ಬೆಳ್ಳಿ ಪದಕ ಗೆದ್ದಿದ್ದರು. ಮೂರು ವರ್ಷ ಹಿಂದೆ ನಡೆದ ಟೋಕಿಯೊ ಕ್ರೀಡೆಗಳಲ್ಲಿ ಅವರು ಚಾರಿತ್ರಿಕ ಚಿನ್ನದ ಪದಕ ಜಯಿಸಿದ್ದರು.
18 ವರ್ಷಗಳಷ್ಟು ದೀರ್ಘ ಕಾಲ ಭಾರತ ತಂಡದಲ್ಲಿ ಆಡಿರುವ ಶ್ರೀಜೇಶ್ ಒಲಿಂಪಿಕ್ಸ್‌ನಲ್ಲಿ ಐದು ಬಾರಿ ಭಾಗವಹಿಸಿದ್ದಾರೆ. ಈ ಒಲಿಂಪಿಕ್ಸ್‌ನ ಕಂಚಿನ ಪದಕದ ಪ್ಲೇ ಆಫ್ ಪಂದ್ಯದಲ್ಲಿ ಭಾರತ 2–1 ಗೋಲುಗಳಿಂದ ಸ್ಪೇನ್ ತಂಡವನ್ನು ಸೋಲಿಸಿತ್ತು.
ಈ ಒಲಿಂಪಿಕ್ಸ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡಿರುವ ಮನು ಭಾಕರ್ ಈ ಮೊದಲೇ ಮಹಿಳಾ ಧ್ವಜಧಾರಿಯಾಗಿ ನಾಮನಿರ್ದೇಶನಗೊಂಡಿದ್ದರು.