ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೆರಿಕ ಓಪನ್‌ ಟೆನಿಸ್‌ ಟೂರ್ನಿ: ಜೊಕೊವಿಚ್‌, ಸಬಲೆಂಕಾ ಶುಭಾರಂಭ

ಎರಡನೇ ಸುತ್ತಿಗೆ ಜ್ವರೇವ್, ರುಬ್ಲೆವ್
Published : 27 ಆಗಸ್ಟ್ 2024, 16:19 IST
Last Updated : 27 ಆಗಸ್ಟ್ 2024, 16:19 IST
ಫಾಲೋ ಮಾಡಿ
Comments

ನ್ಯೂಯಾರ್ಕ್‌: ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್‌ ಕಿರೀಟವನ್ನು ಎದುರು ನೋಡುತ್ತಿರುವ ಸರ್ಬಿಯಾದ ಟೆನಿಸ್ ತಾರೆ ನೊವಾಕ್‌ ಜೊಕೊವಿಚ್ ಅವರು ಅಮೆರಿಕ ಓಪನ್‌ನಲ್ಲಿ ಶುಭಾರಂಭ ಮಾಡಿದರು.

ಎರಡನೇ ಶ್ರೇಯಾಂಕದ ಜೊಕೊವಿಚ್‌ ಸೋಮವಾರ ತಡರಾತ್ರಿ ನಡೆದ ಆರಂಭಿಕ ಸುತ್ತಿನ ಪಂದ್ಯದಲ್ಲಿ 6-2, 6-2, 6-4ರ ನೇರ ಸೆಟ್‌ಗಳಿಂದ ಮೊಲ್ಡೊವಾದ ರಾಡ್‌ ಆಲ್ಬೋಟ್ ಅವರನ್ನು ಹಿಮ್ಮೆಟ್ಟಿಸಿ 64ರ ಘಟ್ಟಕ್ಕೆ ಮುನ್ನಡೆದರು. ಈ ಮೂಲಕ ನ್ಯೂಯಾರ್ಕ್‌ನ ಅರ್ಥರ್ ಆ್ಯಷ್ ಕೋರ್ಟ್‌ನಲ್ಲಿ 89ನೇ ಪಂದ್ಯವನ್ನು ಗೆದ್ದು, ಟೆನಿಸ್ ದಂತಕತೆ ರೋಜರ್‌ ಫೆಡರರ್‌ (ಸ್ವಿಟ್ಜರ್ಲೆಂಡ್) ಅವರ ದಾಖಲೆಯನ್ನು ಸರಿಗಟ್ಟಿದರು.

ಕೆಲ ತಿಂಗಳ ಹಿಂದೆ ಬಲ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 37 ವರ್ಷದ ಜೊಕೊವಿಚ್‌ ಅವರು, ಮೂರು ವಾರಗಳ ಹಿಂದೆ ಒಲಿಂಪಿಕ್ಸ್‌ನಲ್ಲಿ ಚೊಚ್ಚಲ ಚಿನ್ನದ ಪದಕ ಗೆದ್ದಿದ್ದರು. ಅದಾದ ಬಳಿಕ ಮೊದಲ ಬಾರಿಗೆ ಸ್ಪರ್ಧಾ ಕಣಕ್ಕೆ ಇಳಿದಿರುವ ಅವರು ಮುಂದಿನ ಸುತ್ತಿನಲ್ಲಿ ಸ್ವದೇಶದ ಲಾಸ್ಲೋ ಡಿಜೆರೆ ಅವರನ್ನು ಎದುರಿಸಲಿದ್ದಾರೆ.

ಅಮೆರಿಕ ಓಪನ್‌ನಲ್ಲಿ ನಾಲ್ಕು ಬಾರಿ ಚಾಂಪಿಯನ್‌ ಆಗಿರುವ ಜೊಕೊವಿಚ್‌, ಇಲ್ಲಿ ಮೊದಲ ಸುತ್ತಿನ ಪಂದ್ಯಗಳ ಗೆಲುವನ್ನು 18-0ಕ್ಕೆ ವಿಸ್ತರಿಸಿಕೊಂಡರು. ಒಟ್ಟಾರೆಯಾಗಿ ಇಲ್ಲಿ 89 ಪಂದ್ಯಗಳನ್ನು ಗೆದ್ದರೆ, 13 ಪಂದ್ಯಗಳಲ್ಲಿ ಸೋತಿದ್ದಾರೆ. 2004ರಿಂದ 2008ರ ಅವಧಿಯಲ್ಲಿ ಸತತ ಐದು ಬಾರಿ ಚಾಂಪಿಯನ್‌ ಆಗಿರುವ ಫೆಡರರ್‌ 89 ಪಂದ್ಯಗಳನ್ನು ಗೆದ್ದಿದ್ದರೆ, 14 ಪಂದ್ಯಗಳನ್ನು ಸೋತಿದ್ದರು. ಅಮೆರಿಕದ ಜಿಮ್ಮಿ ಕಾನರ್ಸ್ (98–17) ಮಾತ್ರ ಇವರಿಬ್ಬರಿಗಿಂತ ಹೆಚ್ಚು ಪಂದ್ಯ ಗೆದ್ದ ದಾಖಲೆ ಹೊಂದಿದ್ದಾರೆ.

2020ರ ರನ್ನರ್‌ ಅಪ್‌, ನಾಲ್ಕನೇ ಶ್ರೇಯಾಂಕದ ಜರ್ಮನಿಯ ಅಲೆಕ್ಸಾಂಡರ್ ಜ್ವರೇವ್ 6-2, 6-7 (5), 6-3, 6-2ರಿಂದ ಜರ್ಮನಿಯ ಮ್ಯಾಕ್ಸಿಮಿಲನ್ ಮಾರ್ಟೆರರ್ ವಿರುದ್ಧ ಗೆದ್ದು ಎರಡನೇ ಸುತ್ತು ಪ್ರವೇಶಿಸಿದರು. ಆರನೇ ಶ್ರೇಯಾಂಕದ ಆ್ಯಂಡ್ರೆ ರುಬ್ಲೆವ್ 6-3, 7-6(3), 7-5ರ ನೇರ ಸೆಟ್‌ಗಳಿಂದ ಬ್ರೆಜಿಲ್‌ನ ಥಿಯಾಗೊ ಸೆಬೊತ್ ವೈಲ್ಡ್ ಅವರನ್ನು ಮಣಿಸಿ ಮುನ್ನಡೆದರು.

ಸಬಲೆಂಕಾ ಮುನ್ನಡೆ: ಮಹಿಳೆಯರ ಸಿಂಗಲ್ಸ್‌ನಲ್ಲಿ ಎರಡನೇ ಶ್ರೇಯಾಂಕದ ಅರಿನಾ ಸಬಲೆಂಕಾ (ಬೆಲಾರಸ್‌) ಶುಭಾರಂಭ ಮಾಡಿದರು. ಎರಡು ಬಾರಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಸಬಲೆಂಕಾ 6–3, 6–3ರಿಂದ ಆಸ್ಟ್ರೇಲಿಯಾದ ಪ್ರಿಸ್ಸಿಲ್ಲಾ ಹಾನ್‌ ಅವರನ್ನು ಹಿಮ್ಮೆಟ್ಟಿಸಿದರು. ಎರಡನೇ ಸುತ್ತಿನಲ್ಲಿ ಅವರು ಇಟಲಿಯ ಲೂಸಿಯಾ ಬ್ರೊನ್ಜೆಟ್ಟಿ ಅವರ ಸವಾಲನ್ನು ಎದುರಿಸುವರು.

‌ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳಾ ಚಿನ್ನದ ಪದಕ ವಿಜೇತೆ, ಏಳನೇ ಕ್ರಮಾಂಕದ ಝೆಂಗ್ ಕಿನ್ವೆನ್ (ಚೀನಾ) 4-6, 6-4, 6-2ರಿಂದ ಅಮೆರಿಕದ ಅಮಂಡಾ ಅನಿಸಿಮೊವಾ ಅವರನ್ನು ಸೋಲಿಸಿದರು. ಅವರು ಎರಡನೇ ಸುತ್ತಿನಲ್ಲಿ ರಷ್ಯಾದ ಎರಿಕಾ ಆಂಡ್ರೀವಾ ಅವರನ್ನು ಎದುರಿಸಲಿದ್ದಾರೆ. ಆಂಡ್ರೀವಾ ಇನ್ನೊಂದು ಪಂದ್ಯದಲ್ಲಿ 6-3, 7-6 (9-7)ರಿಂದ ಚೀನಾದ ಯುವಾನ್ ಯೂ ಅವರನ್ನು ಹಿಮ್ಮೆಟ್ಟಿಸಿದರು. ಮೂರನೇ ಶ್ರೇಯಾಂಕದ ಕೊಕೊ ಗಾಫ್‌ (ಅಮೆರಿಕಾ) ಅವರೂ ಎರಡನೇ ಸುತ್ತು ಪ್ರವೇಶಿಸಿದರು.

ಮೊದಲ ಸುತ್ತಿನಲ್ಲೇ ನಗಾಲ್‌ಗೆ ನಿರಾಸೆ

ನ್ಯೂಯಾರ್ಕ್: ಭಾರತದ ಅಗ್ರಮಾನ್ಯ ಸಿಂಗಲ್ಸ್‌ ಆಟಗಾರ ಸುಮಿತ್ ನಗಾಲ್ ಅವರು ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದರು. ಭಾರತದ 27 ವರ್ಷ ವಯಸ್ಸಿನ ಆಟಗಾರ ನಗಾಲ್‌ 1-6 3-6 6-7(8) ರಿಂದ ನೆದರ್ಲೆಂಡ್ಸ್‌ನ ಟ್ಯಾಲನ್ ಗ್ರೀಕ್ಸ್‌ಪೂರ್ ವಿರುದ್ಧ ಸೋಲು ಅನುಭವಿಸಿದರು. ಎರಡು ಗಂಟೆ 20 ನಿಮಿಷ ನಡೆದ ಹೋರಾಟದಲ್ಲಿ ಡಚ್ ಆಟಗಾರ ಮೇಲುಗೈ ಸಾಧಿಸಿದರು. ಪಂದ್ಯದಲ್ಲಿ ಸೋತರೂ 2019ರ ನಂತರ ಋತುವಿನ ಎಲ್ಲಾ ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳ ಸಿಂಗಲ್ಸ್‌ ಮುಖ್ಯಸುತ್ತಿನಲ್ಲಿ ಆಡಿದ ಭಾರತದ ಮೊದಲ ಆಟಗಾರ ಹಿರಿಮೆಗೆ ನಗಾಲ್‌ ಪಾತ್ರವಾದರು. ಐದು ವರ್ಷಗಳ ಹಿಂದೆ ಪ್ರಜ್ನೇಶ್ ಗುಣೇಶ್ವರನ್ ಈ ಸಾಧನೆ ಮಾಡಿದ್ದರು. ಇದು ವರ್ಷದ ಕೊನೆಯ ಗ್ರ್ಯಾನ್‌ಸ್ಲಾಮ್ ಟೂರ್ನಿಯಾಗಿದ್ದು ಪುರುಷ ಡಬಲ್ಸ್‌ನಲ್ಲಿ ನಗಾಲ್ ಸ್ಪರ್ಧಿಸುತ್ತಿದ್ದಾರೆ. ಅಲ್ಲದೆ ಅನುಭವಿ ಆಟಗಾರ ರೋಹನ್ ಬೋಪಣ್ಣ ಯೂಕಿ ಭಾಂಬ್ರಿ ಎನ್‌. ಶ್ರೀರಾಮ್ ಬಾಲಾಜಿ ತಮ್ಮ ಜೊತೆಗಾರರೊಂದಿಗೆ ಕಣಕ್ಕಿಳಿಯಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT