ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pro Kabaddi: ಕಬಡ್ಡಿಯಲ್ಲಿ ಮಿಶ್ರಕ್ರೀಡೆಗಳ ತಂತ್ರ ಪ್ರಯೋಗ

‘ಏಸ್‌’ ಪ್ರಮಾಣಪತ್ರ ಪಡೆದಿರುವ ಪುಣೇರಿ ಪಲ್ಟನ್ ಫಿಟ್‌ನೆಸ್ ಕೋಚ್‌ ವಿವಿನ್ ವಿನ್ಸೆಂಟ್‌
Published 21 ಡಿಸೆಂಬರ್ 2023, 23:30 IST
Last Updated 21 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಪುಣೆ: ಎದುರಾಳಿಯನ್ನು ಚಿತ್ ಮಾಡಲು ಕುಸ್ತಿಯಲ್ಲಿ ಬಳಸುವ ಹಿಡಿತದ ತಂತ್ರ, ಟೆಕ್ವಾಂಡೊದಲ್ಲಿ ಮುಖಾಮುಖಿಯಾಗುವಾಗ ಬಳಸುವ ವೇಗ, ಬಾಕ್ಸಿಂಗ್‌ನಲ್ಲಿ ಯಶಸ್ಸು ತಂದುಕೊಡುವ ಪಾದಚಲನೆಯ ಶೈಲಿ, ಅಥ್ಲೆಟಿಕ್ಸ್‌ನ ಚುರುಕು...

ಇವೆಲ್ಲವನ್ನೂ ಸಂದರ್ಭಕ್ಕೆ ತಕ್ಕಂತೆ ಕಬಡ್ಡಿಯಲ್ಲಿ ಸಮಗ್ರವಾಗಿ ಬಳಕೆ ಮಾಡಿ ಯಶಸ್ಸು ಕಂಡಿದ್ದಾರೆ, ಬೆಂಗಳೂರಿನ ವಿವಿನ್ ವಿನ್ಸೆಂಟ್‌. ಆಟಗಾರರ ಫಿಟ್‌ನೆಸ್‌ಗೆ ಮಿಶ್ರಕ್ರೀಡೆಗಳ ತಂತ್ರಗಳನ್ನು ಪ್ರಯೋಗ ಮಾಡುತ್ತಿರುವ ಅವರು ಕನ್ನಡಿಗ ಬಿ.ಸಿ.ರಮೇಶ್ ಅವರು ಕೋಚ್ ಆಗಿರುವ ಪುಣೇರಿ ಪಲ್ಟನ್ ತಂಡದ ಫಿಟ್‌ನೆಸ್ ತರಬೇತುದಾರ. 10ನೇ ಆವೃತ್ತಿಯ 3 ಲೆಗ್‌ಗಳ ಮುಕ್ತಾಯಕ್ಕೆ ಪುಣೇರಿ 26 ಪಾಯಿಂಟ್‌ಗಳೊಂದಿಗೆ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.

ಅಮೆರಿಕನ್ ಕೌನ್ಸಿಲ್ ಆಫ್‌ ಎಕ್ಸರ್ಸೈಸ್‌ನಿಂದ (ಏಸ್‌) ಲೆವೆಲ್‌–2 ಪ್ರಮಾಣಪತ್ರ ಪಡೆದುಕೊಂಡಿರುವ ಅವರು ಇದಕ್ಕಾಗಿ ಅಧ್ಯಯನ ಮಾಡಿದ ವಿಷಯಗಳನ್ನು ಕಬಡ್ಡಿಯ ಮೌಲ್ಯವರ್ಧನೆಗಾಗಿ ಬಳಸಿಕೊಳ್ಳಲು ನಿರ್ಧರಿಸಿ ಪ್ರಯೋಗಗಳನ್ನು ಮಾಡುತ್ತಿದ್ದಾರೆ.

‘ಪ್ರೊ ಕಬಡ್ಡಿ ಟೂರ್ನಿಯ ಕ್ರಾಂತಿಯಿಂದಾಗಿ ಕಬಡ್ಡಿಯ ಎಲ್ಲ ವಿಭಾಗಗಳಲ್ಲೂ ಮಹತ್ವದ ಬದಲಾವಣೆಗಳು ಆಗಿವೆ. ಫಿಟ್‌ನೆಸ್‌ಗೆ ಹೆಚ್ಚು ಆದ್ಯತೆ ಸಿಗುತ್ತಿದೆ. ಹಿಂದೆಲ್ಲ ಕಬಡ್ಡಿ ಆಟಗಾರರನ್ನು ಮರಳು ಮತ್ತು ಗುಡ್ಡಗಾಡು ಪ್ರದೇಶದಲ್ಲಿ ಓಡಿಸುತ್ತಿದ್ದರು. ಕಬಡ್ಡಿಯಲ್ಲಿ ಬಳಸುವ ತಾಕತ್ತು ವಿಶಿಷ್ಟ ಆಗಿರುವುದರಿಂದ ಆಟಗಾರರಿಗೆ ಬರೀ ಓಟದ ಅಭ್ಯಾಸ ಮಾತ್ರ ಸಾಕಾಗುವುದಿಲ್ಲ. ಆದ್ದರಿಂದ ಬಹುಶಿಸ್ತೀಯ ವ್ಯಾಯಾಮ ಹೇಳಿಕೊಡಲು ಮುಂದಾದೆ’ ಎಂದು ವಿವಿನ್ ವಿನ್ಸೆಂಟ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಬಡ್ಡಿಯಲ್ಲಿ ಪ್ರತಿ ರೇಡ್‌ನ ಅರ್ಧ ನಿಮಿಷವನ್ನು ಸದುಪಯೋಗ ಮಾಡಿಕೊಳ್ಳುವುದು ಮುಖ್ಯ. ಅದಕ್ಕೆ ವಿಶಿಷ್ಟ ಸಾಮರ್ಥ್ಯ ಬೇಕು. ಅದಕ್ಕೆ ವಿಶಿಷ್ಟವಾದ ಪರಿಶ್ರಮ ಬೇಕು, ಪರಿಣಿತಿ ಬೇಕು. ದೈಹಿಕ ಕ್ಷಮತೆಯೂ ಇರಬೇಕು. ಶಕ್ತಿ, ವೇಗ, ಕ್ಷಿಪ್ರವಾಗಿ ಪ್ರತಿಕ್ರಿಯಿಸುವ ಸಾಮರ್ಥ್ಯ ಹೆಚ್ಚಬೇಕು. ಅದರಲ್ಲಿ ಯಶಸ್ವಿಯಾದರೆ ಉತ್ತಮ ಫಲಿತಾಂಶ ಸಿಗುತ್ತದೆ’ ಎಂದು ಅವರು ವಿವರಿಸಿದರು.

ಪ್ರೊ ಕಬಡ್ಡಿ ಲೀಗ್ ಆರಂಭವಾಗುವ ಮೊದಲು ಕೋಚ್ ಜೊತೆ ಚರ್ಚಿಸಿ ವರ್ಕೌಟ್ ಕಾರ್ಯಕ್ರಮವನ್ನು ಸಿದ್ಧಪಡಿಸಲಾಗುತ್ತದೆ. ಕುಸ್ತಿ, ಟೇಕ್ವಾಂಡೊ, ಬಾಕ್ಸಿಂಗ್ ಮುಂತಾದ ಕ್ರೀಡೆಗಳಿಂದ ಕಬಡ್ಡಿಗೆ ಪೂರಕವಾಗುವ ಅಂಶಗಳನ್ನು ತೆಗೆದುಕೊಂಡು ಸಮರ ಕಲೆಯ ಮಾದರಿಯನ್ನು ಸಿದ್ಧಪಡಿಸಿ ಆಟಗಾರರನ್ನು ಸಜ್ಜುಗೊಳಿಸಲಾಗುತ್ತದೆ’ ಎಂದು ಅವರು ವಿವರಿಸಿದರು.

ಬೆಂಗಳೂರಿನ ಸುಲ್ತಾನ್ ಪಾಳ್ಯ ನಿವಾಸಿ ವಿವಿನ್ ಅವರಿಗೆ ಪ್ರೊ ಕಬಡ್ಡಿಯಲ್ಲಿ ಇದು ನಾಲ್ಕನೇ ಆವೃತ್ತಿ. 6ನೇ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದ ಬೆಂಗಳೂರು ಬುಲ್ಸ್‌ ಮತ್ತು 7ನೇ ಆವೃತ್ತಿಯ ಚಾಂಪಿಯನ್‌ ಬೆಂಗಾಳ್ ವಾರಿಯರ್ಸ್ ತಂಡಗಳಲ್ಲಿ ಇದ್ದ ಅವರು ಕಳೆದ ಬಾರಿ ಗುಜರಾತ್ ಫಾರ್ಚೂನ್‌ ಜೈಂಟ್ಸ್‌ ಜೊತೆ ಇದ್ದರು.

ತಳಮಟ್ಟದಲ್ಲಿ ಪ್ರಯೋಗಗಳನ್ನು ಮಾಡುತ್ತ ಅನುಭವಿಗಳ ಸಂಪರ್ಕದ ಮೂಲಕ ಕಬಡ್ಡಿಯ ಆಳ ಅರಿತುಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಅದರಿಂದ ಹೆಚ್ಚು ಪ್ರಯೋಜನ ಆಗಿದೆ.
-ವಿವಿನ್ ವಿನ್ಸೆಂಟ್‌, ಪುಣೇರಿ ಪಲ್ಟನ್ ಟ್ರೇನರ್‌
ವಿವಿನ್ ವಿನ್ಸೆಂಟ್‌
ವಿವಿನ್ ವಿನ್ಸೆಂಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT