ಪ್ಯಾರಿಸ್: ಒಲಿಂಪಿಕ್ಸ್‌ನಲ್ಲಿ ಕುಸ್ತಿಪಟು ವಿನೇಶಾ ಫೋಗಟ್ ಅವರ ಅನರ್ಹತೆಯಿಂದ ತೀವ್ರ ಆಘಾತ ಮತ್ತು ನಿರಾಸೆಯಾಗಿದೆ ಎಂದು ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಅಧ್ಯಕ್ಷೆ ಪಿ.ಟಿ.ಉಷಾ ಪ್ರತಿಕ್ರಿಯಿಸಿದ್ದಾರೆ.
ಫೋಗಟ್ ಅನರ್ಹ ಸಂಬಂಧ ಯುನೈಟೆಡ್ ವರ್ಲ್ಡ್ ರೆಸ್ಲಿಂಗ್‌ಗೆ (ಯುಡಬ್ಲ್ಯುಡಬ್ಲ್ಯು) ಐಒಎ ತೀವ್ರ ಪ್ರತಿಭಟನೆ ದಾಖಲಿಸಿದ್ದು, ಸಾಧ್ಯವಿರುವುದೆಲ್ಲವನ್ನೂ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.
'ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಗ್ರಾಮದಲ್ಲಿ ನಾನು ವಿನೇಶಾ ಫೋಗಟ್ ಅವರನ್ನು ಭೇಟಿಯಾಗಿದ್ದೇನೆ. ಭಾರತ ಒಲಿಂಪಿಕ್ ಸಂಸ್ಥೆ, ಭಾರತೀಯ ಸರ್ಕಾರ ಮತ್ತು ಇಡೀ ದೇಶದ ಪರವಾಗಿ ಫೋಗಟ್ ಅವರಿಗೆ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದ್ದೇನೆ' ಎಂದು ಅವರು ತಿಳಿಸಿದ್ದಾರೆ.
ವಿನೇಶಾ ಫೋಗಟ್ ಅವರಿಗೆ ವೈದ್ಯಕೀಯ ಹಾಗೂ ಭಾವನಾತ್ಮಕ ಬೆಂಬಲ ನೀಡುವುದಾಗಿ ಅವರು ಹೇಳಿದ್ದಾರೆ.
'ಒಲಿಂಪಿಕ್ಸ್‌ನಿಂದ ವಿನೇಶಾ ಫೋಗಟ್ ಅವರನ್ನು ಅನರ್ಹಗೊಳಿಸಿರುವ ನಿರ್ಣಯವನ್ನು ಮರುಪರಿಶೀಲಿಸುವಂತೆ ಯುಡಬ್ಲ್ಯುಡಬ್ಲ್ಯುಗೆ ಭಾರತೀಯ ಕುಸ್ತಿ ಫೆಡರೇಷನ್ ಮನವಿ ಸಲ್ಲಿಸಿದೆ. ಈ ಪ್ರಕರಣ ಸಂಬಂಧ ಐಒಎ ಸಾಧ್ಯವಿರುವ ಎಲ್ಲವನ್ನೂ ಮಾಡಲಿದೆ' ಎಂದು ತಿಳಿಸಿದ್ದಾರೆ.
ತೂಕ ಇಳಿಸಲು ಶ್ರಮ: ಉಷಾ
ವಿನೇಶಾ ಫೋಗಟ್ ಅವರ ತೂಕವನ್ನು ಇಳಿಸಲು ವೈದ್ಯಕೀಯ ತಂಡವು ಸಾಧ್ಯವಿರುವ ಎಲ್ಲವನ್ನೂ ಮಾಡಿದೆ ಎಂದು ಪಿ.ಟಿ.ಉಷಾ ಸ್ಪಷ್ಟಪಡಿಸಿದ್ದಾರೆ.
ವೈದ್ಯ ದಿನ್ಶಾ ಪರ್ದಿವಾಲಾ ನೇತೃತ್ವದ ವೈದ್ಯಕೀಯ ತಂಡ, 'ಷೆಫ್ ಡಿ ಮಿಷನ್' ಗಗನ್ ನಾರಂಗ್ ಮತ್ತು ವಿನೇಶಾ ಅವರು ತೂಕ ಇಳಿಸಲು ಅವಿರತ ಪ್ರಯತ್ನವನ್ನು ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮಹಿಳೆಯರ 50 ಕೆ.ಜಿ ಕುಸ್ತಿ ವಿಭಾಗದಲ್ಲಿ 100 ಗ್ರಾಂನಷ್ಟು ತೂಕ ಹೆಚ್ಚಿದ್ದರಿಂದ ವಿನೇಶಾ ಅವರನ್ನು ಅನರ್ಹಗೊಳಿಸಲಾಗಿತ್ತು. ಈ ಮೊದಲು ಒಲಿಂಪಿಕ್ಸ್ ಕುಸ್ತಿಯಲ್ಲಿ ಫೈನಲ್ ತಲುಪಿದ್ದ ಫೋಗಟ್, ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಕುಸ್ತಿಪಟುವೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
VIDEO | Paris Olympics 2024: "Vinesh Phogat's disqualification is very shocking, and I met Vinesh at Olympic Village a short while ago and assured her of complete support from Indian Olympic Association, Government of India and the entire country. We are providing Vinesh all the… pic.twitter.com/AFPNa808Ql
— Press Trust of India (@PTI_News) August 7, 2024
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.