ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿಯಮಗಳಿಗೆ ಬದ್ಧರಾಗಬೇಕಾಗುತ್ತದೆ: ವಿಶ್ವ ಕುಸ್ತಿ ಸಂಸ್ಥೆ ಮುಖ್ಯಸ್ಥ

Published : 11 ಆಗಸ್ಟ್ 2024, 14:33 IST
Last Updated : 11 ಆಗಸ್ಟ್ 2024, 14:33 IST
ಫಾಲೋ ಮಾಡಿ
Comments

ನವದೆಹಲಿ: ತಮಗೆ ಬೆಳ್ಳಿ ಪದಕ ನೀಡುವಂತೆ ಅನರ್ಹಗೊಂಡಿರುವ ಕುಸ್ತಿಪಟು ವಿನೇಶ್ ಫೋಗಟ್‌ ಅವರ ಮನವಿಗೆ ಸಂಬಂಧಿಸಿ ಕ್ರೀಡಾ ನ್ಯಾಯಮಂಡಳಿ (ಸಿಎಎಸ್‌) ನಿರ್ಧಾರಕ್ಕೆ ಇಡೀ ದೇಶ ಕಾತರದಿಂದ ಕಾಯುತ್ತಿದೆ. ಈ ಮಧ್ಯೆ ವಿಶ್ವ ಕುಸ್ತಿ ಆಡಳಿತ ನಿರ್ವಹಿಸುವ ಯುನೈಟೆಡ್‌ ರೆಸ್ಲಿಂಗ್‌ ಫೆಡರೇಷನ್‌ (ಯುಡಬ್ಲ್ಯುಡಬ್ಲ್ಯು) ಅಧ್ಯಕ್ಷ ನೆನಾದ್‌ ಲಾಲೊವಿಕ್ ಅವರು ದೇಹತೂಕ ವಿವಾದಕ್ಕೆ ಸಂಬಂಧಿಸಿ ಮಾತನಾಡಿದ್ದು, ವಿನೇಶ್ ಬಗ್ಗೆ ಅನುಕಂಪವನ್ನೂ ವ್ಯಕ್ತಪಡಿಸಿದ್ದಾರೆ.

ಆದರೆ ಫಲಿತಾಂಶ ಬದಲಾಗುವ ಸಾಧ್ಯತೆ ಕಡಿಮೆ. ಏನು ನಿಯಮಗಳಿವೆಯೊ ಅದನ್ನಷ್ಟೇ ಯುಡಬ್ಲ್ಯುಡಬ್ಲ್ಯು ಪಾಲಿಸುತ್ತದೆ ಎಂದಿದ್ದಾರೆ.

50 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ವಿನೇಶ್‌, ಫೈನಲ್ (ಆಗಸ್ಟ್‌ 7) ದಿನ ಬೆಳಿಗ್ಗೆ ತೂಕ ನೋಡುವ ವೇಳೆ ನಿಗದಿ (50ಕೆ.ಜಿ)ಗಿಂತ 100 ಗ್ರಾಂ ಅಧಿಕ ತೂಕ ಹೊಂದಿದ್ದ ಕಾರಣ ಸ್ಪರ್ಧೆಯಿಂದ ಅನರ್ಹಗೊಂಡಿದ್ದರು. ಇದರ ವಿರುದ್ಧ ಅವರು ಸಿಎಎಸ್‌ ಮೊರೆಹೋಗಿದ್ದಾರೆ.

‘ನಡೆದುಹೋಗಿರುವ ಪ್ರಕರಣದ ಬಗ್ಗೆ ನನಗೆ ವಿಷಾದವಿದೆ. ಇಲ್ಲಿ ದೇಹದ ಗಾತ್ರ ಲೆಕ್ಕಕ್ಕೆ ಬರುವುದಿಲ್ಲ. ಕ್ರೀಡಾಪಟುಗಳು ಕ್ರೀಡಾಪಟುಗಳಷ್ಟೇ. ತೂಕ ನೋಡುವುದು ಬಹಿರಂಗವಾಗಿ. ಏನಾಗಿದೆ ಎಂಬುದನ್ನು ಎಲ್ಲರೂ ನೋಡಿದ್ದಾರೆ. ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಾದ ಮೇಲೆ ಅಂಥವರಿಗೆ ನಾವು ಸ್ಪರ್ಧೆಗೆ ಅವಕಾಶ ನೀಡುವುದಾದರೂ ಹೇಗೆ? ನಮ್ಮ ಮುಂದೆ ನಿಯಮ ಪಾಲಿಸದೇ ಬೇರೇನೂ ಪರ್ಯಾಯಗಳು ಇರಲಿಲ್ಲ’ ಎಂದು ಲಾಲೊವಿಕ್‌ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಅಥ್ಲೀಟುಗಳ ಆರೋಗ್ಯದ ಮೇಲಿನ ಕಾಳಜಿಯಿಟ್ಟುಕೊಂಡು ನಾವು ನಿಯಮ ರೂಪಿಸಿದ್ದೆವು. ಸ್ಪರ್ಧಿಸಬೇಕಾದರೆ ಅಥ್ಲೀಟುಗಳು ತೂಕನಿಯಮಕ್ಕೆ ಬದ್ಧರಾಗಬೇಕಾಗುತ್ತದೆ. ನಿಯಮದಲ್ಲಿ ಸಣ್ಣಪುಟ್ಟ ಮಾರ್ಪಾಡು ಮಾಡಬಹುದೇನೊ. ಆದರೆ ನಿಯಮ ತೆಗೆದುಹಾಕಲು ಆಗುವುದಿಲ್ಲ’ ಎಂದರು.

50 ಕೆ.ಜಿ. ವಿಭಾಗದಲ್ಲಿ ಮೂರು ದಿನಗಳ ಹಿಂದೆಯೇ ಚಿನ್ನ, ಬೆಳ್ಳಿ, ಕಂಚಿನ ಪದಕಗಳ ಪ್ರದಾನವಾಗಿದೆ.

ಕುಸ್ತಿಯಲ್ಲಿ ಎರಡನೇ ಬೆಳ್ಳಿ ಪದಕ ನೀಡಲು ಅವಕಾಶವಿಲ್ಲ. ಆದರೆ ವಿನೇಶ್‌ ಮತ್ತು ಅವರ ಪರ ಹೋರಾಟ ಮಾಡುವವರು ಇನ್ನೂ ವಿಶ್ವಾಸ ಹೊಂದಿದ್ದಾರೆ. ಆಗಸ್ಟ್‌ 13ರಂದು ಈ ಬಗ್ಗೆ ನಿರ್ಧಾರ ಆಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT