ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ: ದಕ್ಷಿಣ ಕನ್ನಡದಲ್ಲಿ ಅರಳಿದ ಪ್ರತಿಭೆಗಳು

ಪ್ರೊ ಕಬಡ್ಡಿ: ನಾಲ್ವರಿಗೆ ಮತ್ತೆ ಮಿಂಚುವ ಅವಕಾಶ; ಪದಾರ್ಪಣೆ ನಿರೀಕ್ಷೆಯಲ್ಲಿ ಇಬ್ಬರು
ವಿಕ್ರಂ ಕಾಂತಿಕೆರೆ
Published 2 ಡಿಸೆಂಬರ್ 2023, 6:26 IST
Last Updated 2 ಡಿಸೆಂಬರ್ 2023, 6:26 IST
ಅಕ್ಷರ ಗಾತ್ರ

ಮಂಗಳೂರು: ಪ್ರೊ ಕಬಡ್ಡಿ ಟೂರ್ನಿಯ 10ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಟೂರ್ನಿಯಲ್ಲಿ ಈ ಬಾರಿ ಕರ್ನಾಟಕದ 6 ಮಂದಿ ಆಟಗಾರರು ಪಾಲ್ಗೊಳ್ಳುತ್ತಿದ್ದು ರಾಜ್ಯದ ವಿವಿಧ ಕಡೆಯ ನಿವಾಸಿಗಳಾದ ಇವರೆಲ್ಲರೂ ತರಬೇತಿ ಪಡೆದದ್ದು ಮತ್ತು ಅಭ್ಯಾಸ ಮಾಡಿರುವುದು ದಕ್ಷಿಣ ಕನ್ನಡದಲ್ಲಿ.

ಜೈಪುರ್ ಪಿಂಕ್‌ ಪ್ಯಾಂಥರ್ಸ್ ತಂಡದಲ್ಲಿರುವ ಲೆಫ್ಟ್‌ ಕವರ್ ಡಿಫೆಂಡರ್‌ ಅಭಿಷೇಕ್‌, ರೈಡರ್‌ ಶಶಾಂಕ್‌ ಬಿ, ಬೆಂಗಳೂರು ಬುಲ್ಸ್‌ನಲ್ಲಿರುವ ರೈಟ್ ಕವರ್‌ ಡಿಫೆಂಡರ್ ರಕ್ಷಿತ್, ಪಟ್ನಾ ಪೈರೇಟ್ಸ್‌ನ ರೈಡರ್‌ ರಂಜಿತ್ ನಾಯ್ಕ್‌, ಬೆಂಗಾಲ್‌ ವಾರಿಯರ್ಸ್‌ನ ರೈಡರ್‌ ವಿಶ್ವಾಸ್‌ ಎಸ್‌. ಮತ್ತು ಯು.ಪಿ. ಯೋಧಾದಲ್ಲಿರುವ ರೈಡರ್‌ ಗಗನ್ ಗೌಡ ಅವರಿಗೆ ದಕ್ಷಿಣ ಕನ್ನಡ, ಪ್ರೊ.ಕಬಡ್ಡಿಗೆ ಹೆಬ್ಬಾಗಿಲು ಆಯಿತು.

ಮೈಸೂರಿನ ರಕ್ಷಿತ್ ಪಿಯುಸಿ ಮತ್ತು ಬಿಕಾಂ ಓದಿದ್ದು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ. ಇಲ್ಲಿದ್ದಾಗಲೇ ಅವರು ತೆಲುಗು ಟೈಟನ್ಸ್‌ ತಂಡದಲ್ಲಿ ಆಡಿದ್ದರು. ಕೆಲವು ತಿಂಗಳ ಹಿಂದೆ ಅಂಚೆ ಇಲಾಖೆಯ ಮೈಸೂರು ಕಚೇರಿಯಲ್ಲಿ ಉದ್ಯೋಗ ಲಭಿಸಿದೆ. ಅವರು ಬೆಂಗಳೂರು ತಂಡದಲ್ಲಿರುವ ಏಕೈಕ ಕನ್ನಡಿಗ. ಇರಾನ್‌ನಲ್ಲಿ ನಡೆದ ಜೂನಿಯರ್ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಭಾರತ ತಂಡದಲ್ಲಿ ಆಡಿದ್ದ ರಕ್ಷಿತ್ ಸೀನಿಯರ್ ಮತ್ತು ಜೂನಿಯರ್ ತಂಡಗಳಲ್ಲಿ ಮಿಂಚಿದ್ದಾರೆ. ಎಸ್‌ಜಿಎಫ್‌ಐ ಟೂರ್ನಿಗಳಲ್ಲೂ ಸಾಧನೆ ಮಾಡಿದ್ದಾರೆ.

ಕಳೆದ ಬಾರಿ ಮೊದಲ ಸಲ ಪ್ರೊ ಕಬಡ್ಡಿ ಮ್ಯಾಟ್‌ಗೆ ಇಳಿದ ಭಟ್ಕಳದ ರಂಜಿತ್‌ ನಾಯ್ಕ 66.67 ನಾಟೌಟ್ ಸಾಧನೆಯೊಂದಿಗೆ ಅಮೋಘ ರೈಡಿಂಗ್ ಸಾಮರ್ಥ್ಯ ತೋರಿದ್ದಾರೆ. ಪಿಯುಸಿಯನ್ನು ಆಳ್ವಾಸ್‌ನಲ್ಲಿ ಮುಗಿಸಿದ ಅವರು ಈಗ ಅದೇ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದಾರೆ. ರಾಷ್ಟ್ರೀಯ ಜೂನಿಯರ್ ಕಬಡ್ಡಿ ಟೂರ್ನಿಯಲ್ಲಿ ಅತಿ ಹೆಚ್ಚು ರೈಡಿಂಗ್ ಪಾಯಿಂಟ್ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾಗಲೇ ಅವರ ಮೇಲೆ ಪ್ರೊ ಕಬಡ್ಡಿ ತಂಡಗಳ ಕಣ್ಣು ಬಿದ್ದಿತ್ತು. ಅಖಿಲ ಭಾರತ ಅಂತರ ವಿವಿ ಟೂರ್ನಿಯಲ್ಲೂ ಆಡಿದ್ದಾರೆ.‌

ಶಿವಮೊಗ್ಗದ ಶಶಾಂಕ್‌ ಮೊದಲ ಬಾರಿ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು ಮ್ಯಾಟ್‌ಗೆ ಇಳಿಯುವ ಭರವಸೆಯಲ್ಲಿದ್ದಾರೆ. ಅವರು ಆಳ್ವಾಸ್ ಕಾಲೇಜಿನಲ್ಲಿ ಬಿಎ ಓದುತ್ತಿದ್ದಾರೆ. ಮಂಡ್ಯದ ವಿಶ್ವಾಸ್ ಎಸ್ 8ನೇ ಆವೃತ್ತಿಯಲ್ಲಿ ಪುಣೇರಿ ಪಲ್ಟನ್ ತಂಡದಲ್ಲಿದ್ದರು. ಈ ಬಾರಿ ಬೆಂಗಾಳ್ ವಾರಿಯರ್ಸ್‌ನಲ್ಲಿದ್ದಾರೆ. ಪಿಯುಸಿಯಿಂದ ಆಳ್ವಾಸ್ ಕಾಲೇಜಿನಲ್ಲಿರುವ ಅವರು ಈಗ ಪದವಿ ವಿದ್ಯಾರ್ಥಿ. ಸೀನಿಯರ್‌ ಮತ್ತು ಜೂನಿಯರ್ ರಾಷ್ಟ್ರೀಯ ಟೂರ್ನಿ ಮತ್ತು ದಕ್ಷಿಣ ವಲಯ ಅಂತರ ವಿವಿ ಟೂರ್ನಿಗಳಲ್ಲಿ ಮಿಂಚಿದ್ದಾರೆ.

ಮಂಡ್ಯದ ಕ್ಯಾತನಹಳ್ಳಿ ನಿವಾಸಿ ಅಭಿಷೇಕ್ ಈ ವರೆಗೆ 18 ಪ್ರೊ ಕಬಡ್ಡಿ ಪಂದ್ಯಗಳನ್ನು ಆಡಿದ್ದಾರೆ. ಅಖಿಲ ಭಾರತ ಮುಕ್ತ ‘ಎ’ ಗ್ರೇಡ್ ಟೂರ್ನಿಗಳಲ್ಲಿ ತೋರಿದ ಉತ್ತಮ ಆಟವೇ ಅವರ ಆಯ್ಕೆಗೆ ಕಾರಣ. ಸುಳ್ಯದ ನೆಹರೂ ಸ್ಮಾರಕ ಕಾಲೇಜಿನಲ್ಲಿ ಪಿಯುಸಿಗೆ ಸೇರಿದ ಅವರು ಈಗ ಅದೇ ಕಾಲೇಜಿನ ಪದವಿ ವಿದ್ಯಾರ್ಥಿ. ಉಜಿರೆ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿ ಗಗನ್ ಗೌಡ ಅವರಿಗೂ ಇದು ಪದಾರ್ಪಣೆ ಆವೃತ್ತಿ. ಶಿವಮೊಗ್ಗ ಜಿಲ್ಲೆಯವರಾದ ಗಗನ್‌ ಯುವ ಕಬಡ್ಡಿಯಲ್ಲಿ ಹಂಪಿ ಹೀರೋಸ್ ತಂಡದ ಪರ ಅಪ್ರತಿಮ ಸಾಮರ್ಥ್ಯ ತೋರಿದ್ದರು.ವಿಶ್ವಾಸ್‌

ಪ್ರೊ ಕಬಡ್ಡಿಯಲ್ಲಿ 2018ರಿಂದಲೇ ಆಡುತ್ತಿದ್ದೇನೆ. ಆದರೂ ತವರಿನ ತಂಡದಲ್ಲಿ ಆಡಬೇಕೆಂಬ ಆಸೆ ಇತ್ತು. ಬುಲ್ಸ್‌ನಲ್ಲಿ ಅವಕಾಶ ಲಭಿಸಿದ್ದಕ್ಕೆ ಖುಷಿಯಾಗಿದೆ. ಮ್ಯಾಟ್‌ಗೆ ಇಳಿಯುವ ನಿರೀಕ್ಷೆಯಲ್ಲಿದ್ದೇನೆ
ರಕ್ಷಿತ್‌, ಬೆಂಗಳೂರು ಬುಲ್ಸ್ ಆಟಗಾರ
ಡಾ ಕೋಟಾದಡಿ ಆಳ್ವಾಸ್ ಕಾಲೇಜಿಗೆ ಸೇರಿರುವ ಕಬಡ್ಡಿ ಆಟಗಾರರು ಜೂನಿಯರ್, ಸೀನಿಯರ್ ರಾಷ್ಟ್ರೀಯ ಟೂರ್ನಿಗಳಲ್ಲಿ ಸಾಮರ್ಥ್ಯ ತೋರಿದ್ದಾರೆ. ಪ್ರೊ ಕಬಡ್ಡಿ ಮ್ಯಾಟ್‌ ಅವರಿಗೆ ಇನ್ನಷ್ಟು ಹುರುಪು ತುಂಬಲಿದೆ.
ಸತೀಶ್ ನಾಯಕ,ಆಳ್ವಾಸ್ ಕಾಲೇಜಿನ ಕೋಚ್‌
ಗಗನ್ ಉತ್ತಮ ರೈಡರ್. ಅರ್ಪಣಾ ಭಾವ ಮತ್ತು ತಪ್ಪದೇ ಅಭ್ಯಾಸ ಮಾಡುವುದು ಅವರ ವೈಶಿಷ್ಟ್ಯ. ರೈತರ ಕುಟುಂಬದಿಂದ ಬಂದಿರುವ ಅವರಿಗೆ ಭಾರತ ತಂಡಕ್ಕೆ ಆಯ್ಕೆಯಾಗುವ ಅರ್ಹತೆಗಳು ಇವೆ.
ಕೃಷ್ಣಾನಂದ,ಉಜಿರೆ ಎಸ್‌ಡಿಎಂ ಕಾಲೇಜಿನ ಕೋಚ್
ನ್ನಾಗಿ ಅಭ್ಯಾಸ ಮಾಡಿದ್ದೇ ಅಭಿಷೇಕ್‌ ಈ ಹಂತಕ್ಕೆ ಬೆಳೆಯಲು ಕಾರಣ. ಲೆಫ್ಟ್ ಕವರ್‌ನಲ್ಲಿ ಅವರು ತಂಡದ ಆಸ್ತಿ. ಪದಾರ್ಪಣೆ ಪಂದ್ಯದಲ್ಲಿ ಪ್ರದೀಪ್ ನರ್ವಾಲ್‌ ಅವರನ್ನು ಕ್ಯಾಚ್ ಮಾಡಿ ಮಿಂಚಿದ್ದರು.
ನಾಗರಾಜ ನಾಯ್ಕ್, ಸುಳ್ಯ ನೆಹರು ಸ್ಮಾರಕ ಕಾಲೇಜು ಕೋಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT