ಹಾಂಗ್‌ಝೌ: ಕ್ರೀಡಾಜ್ಯೋತಿಯನ್ನು ಹಿಡಿದು ಓಡೋಡಿ ಬಂದ ಆ ‘ಕ್ರೀಡಾಪಟು‘ವಿನ ಮೈತುಂಬ ದೀಪಗಳು. ಆ ಓಟಗಾರ ಓಡಿದ ಹಾದಿಯುದ್ದಕ್ಕೂ ಚೆಲ್ಲಿದ ಬೆಳಕಿನ ರಂಗವಲ್ಲಿ ಮೂಡಿತು. ಕಾಲ್ಡ್ರನ್‌ನಲ್ಲಿ ಕ್ರೀಡಾಜ್ಯೋತಿಯನ್ನು ಪ್ರಜ್ವಲಿಸಿದಾಗ ನೋಡಿದವರೆಲ್ಲರ ಕಂಗಳಲ್ಲಿ ಅಚ್ಚರಿ, ಆನಂದದ ಬೆಳಕು ಚಿಮ್ಮಿತು!

ಹೌದು; ಶನಿವಾರ ರಾತ್ರಿ ಒಲಿಂಪಿಕ್ ಸ್ಪೋರ್ಟ್ಸ್ ಸೆಂಟರ್ ಕ್ರೀಡಾಂಗಣದಲ್ಲಿ ನಡೆದ 19ನೇ ಏಷ್ಯನ್ ಗೇಮ್ಸ್ ಉದ್ಘಾಟನೆ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿದ ಕ್ರೀಡಾಪಟು ಅಂತಿಂಥ ವ್ಯಕ್ತಿಯಲ್ಲ. ಅದು ಡಿಜಿಟಲ್ ಕ್ರೀಡಾಪಟು. ಇದೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ ಮತ್ತು ಪರಿಸರ ತಂತ್ರಜ್ಞಾನದ ಸಮ್ಮಿಲನದ ವೈಭವ ಪ್ರದರ್ಶಿಸಿದ ಕಾರ್ಯಕ್ರಮ ಕಣ್ಮನ ಸೆಳೆಯಿತು.

ಭವಿಷ್ಯದ ಜಗತ್ತಿನ ತಂತ್ರಜ್ಞಾನದ ವೈಭವ ಕಣ್ಣಿಗೆ ಕಟ್ಟಿತು. ‘ಏಷ್ಯಾದ ಅಲೆಗಳ ಅಬ್ಬರ’ ಘೋಷಣೆಯ ಈ ಕೂಟದಲ್ಲಿ ಮುಂಬರುವ ಯುಗದಲ್ಲಿ ಚೀನಾ, ಏಷ್ಯಾ ಮತ್ತು ವಿಶ್ವವನ್ನು ಮಿಲನಗೊಳಿಸುವ ಸಂದೇಶವನ್ನು ಸಾರಲಾಯಿತು. ಏಷ್ಯಾದ ಸರ್ವ ಜನರ ಏಕತೆ, ಪ್ರೀತಿ ಮತ್ತು ಸ್ನೇಹದ ಬೆಸುಗೆಯೂ ಅಲ್ಲಿತ್ತು.

ಅರುಣಾಚಲಪ್ರದೇಶ ಗಡಿ ವಿವಾದದ ಹಿನ್ನೆಲೆಯಲ್ಲಿ ಭಾರತದ ಮೂವರು ವುಷು ಕ್ರೀಡಾಪಟುಗಳಿಗೆ ವೀಸಾ ನಿರಾಕರಿಸಿದ್ದ ಚೀನಾ ಉದ್ಘಾಟನೆ ಸಮಾರಂಭದಲ್ಲಿ ಡಿಜಿಟಲ್ ಲೋಕವನ್ನು ಪ್ರದರ್ಶಿಸಿತು.

ಡಿಜಿಟಲ್ ದೀಪೋತ್ಸವ, ಡಿಜಿಟಲ್ ಟಾರ್ಚ್ ರಿಲೆಯ ವೈಭವ ಗಮನ ಸೆಳೆಯಿತು. ಕ್ವಿಯಾಂಟಗ್ ನದಿಯ ಮೇಲಿಂದ ಬೀಸಿ ಬಂದ ತಂಗಾಳಿಯೂ ಮನಕ್ಕೆ ಮುದ ನೀಡಿತು. 3ಡಿ ತಂತ್ರಜ್ಞಾನವೂ ಮೊಟ್ಟಮೊದಲ ಬಾರಿಗೆ ಪ್ರದರ್ಶಿತವಾಯಿತು. ನದಿಯ ಅಲೆಗಳ ಮೇಲೆ ಹೆಜ್ಜೆಯಿಡುತ್ತ ಬಂದ ಒಬ್ಬ ಪುರುಷ ಮತ್ತು ಒಬ್ಬ ಮಹಿಳೆ ಗಾಳಿಯಲ್ಲಿಯೇ ನರ್ತಿಸಿ ಅಚ್ಚರಿ ಮೂಡಿಸಿದರು.

ಅಹ್ಲಾದಕರ ಸಂಜೆ ನಡೆದ ಎರಡು ಗಂಟೆಗಳ ಕಾರ್ಯಕ್ರಮ ಚೀನಾದ ಸಂಸ್ಕೃತಿ, ಪರಂಪರಾಗತ ನೃತ್ಯ ಹಾಗೂ ಗಾಯನಕ್ಕೂ ವೇದಿಕೆಯಾಯಿತು. ಸಾವಿರಾರು ವರ್ಷಗಳ ನಾಗರಿಕತೆ ಮತ್ತು ಆಧುನಿಕ ತಂತ್ರಜ್ಞಾನದ ಬೆಳವಣಿಗೆಯನ್ನು ಅದ್ಭುತ ವಿಡಿಯೊ ತುಣುಕುಗಳ ಮೂಲಕ ಪ್ರದರ್ಶನಗೊಂಡವು.

ಏಷ್ಯಾ ಖಂಡದ 45 ದೇಶಗಳ ಸುಮಾರು 12 ಸಾವಿರ ಕ್ರೀಡಾಪಟುಗಳು ಭಾಗವಹಿಸಿರುವ ಈ ಕ್ರೀಡಾಕೂಟವನ್ನು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಉದ್ಘಾಟಿಸಿದರು. ಅಕ್ಟೋಬರ್ 8ರವರೆಗೂ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ.

ಈ ಸಂದರ್ಭದಲ್ಲಿ ಏಷ್ಯಾ ಒಲಿಂಪಿಕ್ ಕೌನ್ಸಿಲ್ (ಒಸಿಎ) ಹಂಗಾಮಿ ಅಧ್ಯಕ್ಷ ರಣಧೀರ್ ಸಿಂಗ್, ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಮುಖ್ಯಸ್ಥ ಥಾಮಸ್ ಬಾಕ್, ಬೇರೆ ಬೇರೆ ದೇಶಗಳ ರಾಷ್ಟ್ರೀಯ ಒಲಿಂಪಿಕ್ ಕಮಿಟಿಯ ಮುಖ್ಯಸ್ಥರು ಹಾಜರಿದ್ದರು.

ಡಿಜಿಟಲ್ ಪಟಾಕಿ: ಈ ಬಾರಿ ‘ಇಂಗಾಲ ತಟಸ್ಥ ಹಾಗೂ ಹಸಿರು ಕ್ರೀಡಾಕೂಟ‘ ನಡೆಸಲಾಗುತ್ತಿದೆ. ಅದರಿಂದಾಗಿ ಎಂದಿನಂತೆ ಸುಡುಮದ್ದುಗಳನ್ನು ಬಳಸಲಿಲ್ಲ. ಆದರೆ ಡಿಜಿಟಲ್ ಪಟಾಕಿ, ಮದ್ದುಗಳು ಸುಂದರ ಚಿತ್ತಾರ ಮೂಡಿಸಿದವು.

ದೊಡ್ಡ ಕಮಲ ಹೂವಿನ ಆಕಾರದಲ್ಲಿರುವ ಕ್ರೀಡಾಂಗಣದಲ್ಲಿ ಸೇರಿದ್ದ 80 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಹೋದ ವರ್ಷವೇ ಈ ಕ್ರೀಡಾಕೂಟ ನಡೆಯಬೇಕಿತ್ತು. ಆದರೆ ಚೀನಾದಲ್ಲಿ ಕೋವಿಡ್ ಹರಡಿದ್ದ ಕಾರಣ ಮುಂದೂಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.