ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಪು ಅಧ್ಯಯನ ಹೀಗಿರಲಿ

Last Updated 16 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಗುಂಪು ಅಧ್ಯಯನ ಯಾವ ವಯೋಮಾನದಲ್ಲಿ ಒಳಿತು ಎಂಬುವುದರ ಬಗ್ಗೆ ಹಲವಾರು ವಾದಗಳಿವೆ. ಅದರೆ ಸಾಮಾನ್ಯವಾಗಿ ಹದಿಹರೆಯದ ಮಕ್ಕಳು ಗುಂಪು ಅಧ್ಯಯನಕ್ಕೆ ಮುಂದಾಗುತ್ತಾರೆ. ಎಸ್‌ಎಸ್‌ಎಲ್‌ಸಿಯ ಮಕ್ಕಳು ಈಗಾಗಲೇ ತಮ್ಮಿಷ್ಟದ ಸ್ನೇಹಿತರೊಂದಿಗೆ ಓದುವ ಯೋಜನೆಯನ್ನು ಹಾಕಿಕೊಂಡು, ಓದು ಆರಂಭಿಸಿಯೂ ಇರುತ್ತಾರೆ. ಆದರೆ ಯಾವ ವಯಸ್ಸಿನವರು ಎಷ್ಟು ಜನರು, ಹೇಗೆ ಮಾಡಿದರೆ ಒಳಿತು ಎನ್ನುವುದು ಗೊತ್ತೆ?

ಹದಿಹರೆಯದ ಮಕ್ಕಳು ಒಂದೆಡೆ ಸೇರಿದರೆ ಗುಂಪು ಅಧ್ಯಯನಕ್ಕಿಂತಲೂ ಹಾಳು ಹರಟೆ ಹೆಚ್ಚಾಗಬಹುದು ಎನ್ನುವ ಅನುಮಾನ ಹೆತ್ತವರಿಗಿದ್ದೇ ಇರುತ್ತದೆ. ಈ ಅನುಮಾನ ಪರಿಹರಿಸುವ ಹೊಣೆ ಯಾವತ್ತಿದ್ದರೂ ಮಕ್ಕಳ ಮೇಲೆಯೇ ಇರುತ್ತದೆ. ಆದಷ್ಟೂ ತಮ್ಮ ಸ್ನೇಹಿತರು, ಅವರ ಪಾಲಕರೊಡನೆ ಪರಿಚಯ ಇರುವವರ ಮನೆಯಲ್ಲಿಯೇ ಗುಂಪು ಅಧ್ಯಯನಕ್ಕೆ ತೊಡಗುವುದು ಸೂಕ್ತ. ಸುರಕ್ಷಿತ. 

ವಯಸ್ಸು
ಗ್ರೂಪ್ ಸ್ಟಡಿ ರೂಪುರೇಷೆ ಯಾವಾಗಲೂ ಮಕ್ಕಳ ವಯಸ್ಸನ್ನು ಅವಲಂಬಿಸಿರುತ್ತದೆ. ಪ್ರಾಥಮಿಕ ಹಂತದಿಂದ ಪ್ರೌಢಶಾಲೆವರೆಗೆ ಮಕ್ಕಳ ಶಿಕ್ಷಕರ ಮಾರ್ಗ­ದರ್ಶನ ಹಾಗು ಮೇಲ್ವಿಚಾರಣೆ ತುಂಬಾ ಮಹತ್ವದ್ದು. ಪ್ರಾಥಮಿಕ ಹಂತದಲ್ಲಿ ಶಾಲೆಯಲ್ಲಿಯೇ ಗುಂಪು ಅಧ್ಯಯನದ ಪರಿಕಲ್ಪನೆಯನ್ನು ಪರಿಚಯಿಸಬಹುದಾಗಿದೆ. ಅತಿಜಾಣ, ಜಾಣ ಹಾಗೂ ಸಾಮಾನ್ಯ ವಿದ್ಯಾರ್ಥಿಗಳ ಗುಂಪುಗಳನ್ನು ರಚಿಸಿ ಓದಲು ಪ್ರೇರೇಪಿಸಬಹುದಾಗಿದೆ. ಸಾಂಘಿಕ ಯತ್ನ ಮತ್ತು ಪರಸ್ಪರ ಸಹಕಾರ ಗುಣಗಳನ್ನು ಬೆಳೆಸಲು ಇದು ಅನುಕೂಲವಾಗುತ್ತದೆ. ಪ್ರತಿ ಗುಂಪಿನಲ್ಲಿಯೂ ಪರಸ್ಪರ ಮತ್ಸರವಿರದಂತೆ ಸಾಂಘಿಕ ಗುಣವನ್ನು ಬೆಳೆಸುವುದು ಶಿಕ್ಷಕರ ಹೊಣೆಯಾಗಿರುತ್ತದೆ. ಮೇಲರಿಮೆ–ಕೀಳರಿಮೆಗಳಿಲ್ಲದೇ ಮಕ್ಕಳು ಬೆಳೆಯಲು ಅನುಕೂಲವಾಗುತ್ತದೆ.

ಶಾಲಾ ಶಿಕ್ಷಣದಲ್ಲಿ ಗುಂಪು ಅಧ್ಯಯನ ಶಿಕ್ಷಕರ ಮಾರ್ಗದರ್ಶನದಲ್ಲಿ ನಡೆಯುವುದರಿಂದ ಕೆಲವು ಋಣಾತ್ಮಕ ಪರಿಣಾಮಗಳಿದ್ದರೂ ನಗಣ್ಯ ಎನಿಸುತ್ತವೆ ಎನ್ನುತ್ತಾರೆ ಬೇಗೂರು ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕಿ ಎನ್.ಎ. ರಾಧಾ.

‘ಮಾರ್ಗದರ್ಶನ ಎಂದಾಕ್ಷಣ ಮಕ್ಕಳಲ್ಲಿ ಭಯ ಹುಟ್ಟಿಸಿ ಅಥವಾ ಒತ್ತಾಯಕ್ಕೆ ಅಧ್ಯಯನ ನಡೆಸುವಂತೆ ಮಾಡುವುದಲ್ಲ. ಕಲಿಕೆಗೆ ಅನುಕೂಲ­ವಾಗುವಂತೆ, ಅಧ್ಯಯನ ವಿಷಯಾಂತರ­ವಾಗದಂತೆ ಹಾಗೂ ಕಾಡು ಹರಟೆಗೆ ಪರಿವರ್ತನೆ ಆಗದಂತೆ ನಿಯಂತ್ರಿಸುವ ಮತ್ತು ಉತ್ತೇಜನ ನೀಡುವ ಜಾಣ್ಮೆ ಮಾರ್ಗದರ್ಶಕರಿ­ಗೆ ಇರಬೇಕಾಗುತ್ತದೆ’ ಎನ್ನುವುದು ಅವರ ಅಭಿಮತ. ವಾಸ್ತವದಲ್ಲಿ ಶಾಲಾ ಮಟ್ಟದಲ್ಲಿ ನಡೆಯುವ ಅದೆಷ್ಟೋ ‘ಗ್ರೂಪ್ ಸ್ಟಡಿ’ ಸಾಮಾನ್ಯವಾಗಿ ಗುಂಪಾಗಿ ಕುಳಿತು­ ತಮ್ಮಷ್ಟಕ್ಕೆ ತಾವು ಓದಿಕೊಳ್ಳು­ವುದಕ್ಕೆ ಸೀಮಿತವಾಗಿರುತ್ತದೆ. ಇಲ್ಲಿ ಚರ್ಚೆ­ಗಾಗಲೀ, ವಿಚಾರ ವಿನಿಮ­ಯವಾಗಲೀ ನಡೆಯುವುದೇ ಇಲ್ಲ.

ಮನಸ್ಥಿತಿ
ವಯಸ್ಸಿನ ಜತೆಗೆ ವಿದ್ಯಾರ್ಥಿಗಳ ಮನಸ್ಥಿತಿಯೂ ಗ್ರೂಪ್‌ ಸ್ಟಡಿ ಯಶಸ್ಸಿಗೆ ಬಹಳಾನೇ ಮುಖ್ಯ. ಅವರ ನಡುವಿನ ಹೊಂದಾಣಿಕೆ, ಸ್ಪರ್ಧೆಗಿಂತ ಸಹಕಾರ ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಹತ್ತನೇ ತರಗತಿಯಿಂದ ಗುಂಪು ಅಧ್ಯಯನದ ಸ್ವರೂಪವು ಬದಲಾಗುತ್ತದೆ. ಸಮಾನ ಮನಸ್ಕರು ತಮಗೆ ಕಠಿಣವೆನಿಸುವ ವಿಷಯಗಳನ್ನು ಚರ್ಚಿಸುತ್ತ, ಮನನ ಮಾಡಿಕೊಳ್ಳಲು ಗುಂಪು ಅಧ್ಯಯನವನ್ನು ಅವಲಂಬಿಸುತ್ತಾರೆ. ಎಲ್ಲ ವಿಷಯಗಳಿಗೂ ಗುಂಪುಗೂಡಿ ಓದುವ ಬದಲು, ತಮಗೆ ಕಠಿಣವೆನಿಸಿದ ಅಧ್ಯಾಯ, ವಿಷಯಗಳನ್ನು ಒಂದೆಡೆ ಕಲೆತು ಓದುವ ಅಭ್ಯಾಸ ಮಾಡಿಕೊಳ್ಳುತ್ತಾರೆ. ಪರಸ್ಪರ ಚರ್ಚೆಯ ನಂತರವೂ ವಿಷಯ ತಿಳಿಗೊಳ್ಳದಿದ್ದರೆ ಅಧ್ಯಾಪಕರ ಸಹಾಯ ಯಾಚಿಸುವುದು ಈ ಗುಂಪಿನ ಉದ್ದೇಶವಾಗಿರುತ್ತದೆ.

ಒಬ್ಬರೇ ಓದಿರುವುದನ್ನು ಮನನ ಮಾಡಿಕೊಳ್ಳುವುದು, ಸ್ಮರಣೆಯಲ್ಲಿ ಉಳಿಯುವುದಕ್ಕಿಂತಲೂ ಪರಸ್ಪರ ಚರ್ಚೆಯಿಂದ ತಿಳಿದುಕೊಳ್ಳುವುದು ಬಹುಪಾಲು ಮಟ್ಟಿಗೆ ಓದಿದ್ದು ಮನದಟ್ಟಾಗುತ್ತದೆ. ಈ ವ್ಯತ್ಯಾಸದಿಂದಲೇ ಬಹುಪಾಲು ವಿದ್ಯಾರ್ಥಿಗಳು ಗುಂಪು ಅಧ್ಯಯನವನ್ನು ಅವಲಂಬಿಸಿರುತ್ತಾರೆ. ಪ್ರತಿ ಗುಂಪಿನಲ್ಲಿಯೂ ಒಬ್ಬಿಬ್ಬರು ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯ ಕೊರತೆ ಇದ್ದೇ ಇರುತ್ತದೆ. ಅಂಥವರು ತಾವೂ ಓದದೇ ಇತರರನ್ನು ಮಾತಿಗೆಳೆಯುವ ಯತ್ನದಲ್ಲಿರುತ್ತಾರೆ. ಆದರೆ ಗುರಿ ಸ್ಪಷ್ಟ ಇರುವ ವಿದ್ಯಾರ್ಥಿಗಳು ಇಂಥವರನ್ನು ಕ್ರಮೇಣ ಗುಂಪಿನಿಂದ ದೂರ ಮಾಡುತ್ತಾರೆ, ಇಲ್ಲವೇ ಅವರನ್ನೂ ಓದಿನ ಹಾದಿಗೆಳೆಯುತ್ತಾರೆ. ಯಾವುದಕ್ಕೂ ಬಹುಪಾಲು ಜನರು ಓದಿನ ಬಗ್ಗೆ ಸ್ಪಷ್ಟ ಚಿತ್ರಣವಿದ್ದಲ್ಲಿ ಆ ಗುಂಪು ಅಧ್ಯಯನ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ ಎಂದೇ ಅರ್ಥ.

ಒಂದು ತರಗತಿಯಲ್ಲಿ ಗ್ರೂಪ್‌ ಸ್ಟಡಿ ಎನ್ನುವುದು ಸಾಮಾನ್ಯವಾಗಿ ಮೂರು ವಿಭಾಗವಾಗಿ ರೂಪುಗೊಳ್ಳುತ್ತದೆ ಎನ್ನುತ್ತಾರೆ ಸೆ. ಆ್ಯನೆ ಮಹಿಳಾ ಕಾಲೇಜಿನ ಸಹಾಯ ಉಪನ್ಯಾಸಕ ಆರ್‌.ಎಂ. ಸಂತೋಷ್‌ ಕುಮಾರ್‌. ರ್‍ಯಾಂಕ್‌ ಬರುವ ವಿದ್ಯಾರ್ಥಿಗಳು ಬೇರೆ ವಿದ್ಯಾರ್ಥಿಗಳೊಂದಿಗೆ ಹೆಚ್ಚಾಗಿ ಬೆರೆಯಲು ಇಷ್ಟಪಡುವುದಿಲ್ಲ. ಸದಾ ಇಬ್ಬರಿಂದ ಮೂವರು ಸೇರಿ ಜತೆಯಲ್ಲೇ ಇರುತ್ತಾರಾದರೂ ಕಲಿಕೆಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನೂ ಮುಕ್ತವಾಗಿ ಚರ್ಚಿಸುವುದಿಲ್ಲ. ಇನ್ನು ಶೇ 60ರಿಂದ ಶೇ 80ರ ಮಧ್ಯೆ ಅಂಕ ಪಡೆಯುವ ವಿದ್ಯಾರ್ಥಿಗಳು ತಮ್ಮ ಅಂಕ ಸುಧಾರಿಸಿಕೊಳ್ಳಲು ನಿರ್ಧರಿಸಿ ಒಂದು ಗುಂಪು ಕಟ್ಟಿಕೊಳ್ಳುತ್ತಾರೆ. ಅಂತೆಯೇ ಕೊನೆಯದಾಗಿ ಫೇಲಾಗುವ ಭಯವಿರುವ ಅಥವಾ ಕೇವಲ ಪಾಸಾಗುವಷ್ಟು ಅಂಕ ಪಡೆಯುವ ವಿದ್ಯಾರ್ಥಿಗಳು ತಮಗಿಂತ ಹೆಚ್ಚು ಅಂಕ ಪಡೆಯುವವರ ಸ್ನೇಹ ಸಂಪಾದಿಸಿ ಅವರೊಂದಿಗೆ ಗುಂಪು ಕಲಿಕೆ ನಡೆಸುತ್ತಾರೆ. ಈ ಎರಡೂ ಹಂತಗಳಲ್ಲಿ ಗ್ರೂಪ್‌ ಸ್ಟಡಿ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ ಎನ್ನುತ್ತಾರೆ ಅವರು.

ಗುಂಪಿನ ರಚನೆ
ಗ್ರೂಪ್ ಸ್ಟಡಿ ನಡೆಸಲು ಮುಖ್ಯವಾಗಿ ಸಮಾನ ಮನಸ್ಕರು, ಓದಿನಲ್ಲಿ ಆಸಕ್ತಿ ಇರುವವರು ಅತ್ಯಗತ್ಯ. ಅಂತೆಯೇ ಎಲ್ಲರ ಮನೆಯೂ ಹತ್ತಿರದಲ್ಲೇ ಇದ್ದರೆ, ಗ್ರೂಪ್ ಸ್ಟಡಿಗೆಂದು ಎಲ್ಲರೂ ಒಂದೆಡೆ ಸೇರಲು ಹೆಚ್ಚು ಸಮಯ ವ್ಯರ್ಥವಾಗುವುದು ತಪ್ಪುತ್ತದೆ. ಅಲ್ಲದೆ ಮನೆಯವರಿಗೂ ಉಳಿದ ಮಕ್ಕಳ ಬಗ್ಗೆ ತಿಳಿದಿರುತ್ತದೆ.

ನಿರ್ದಿಷ್ಟ ಸಮಯ
ಇದೇ ರೀತಿಯಾಗಿ ಇದರ ಯಶಸ್ಸಿಗೆ ಗ್ರೂಪ್ ಸ್ಟಡಿ ನಡೆಯುವ ಸಮಯ ಕೂಡ ತನ್ನದೇ ಆದ ಪಾತ್ರವನ್ನು ನಿರ್ವಹಿಸುತ್ತದೆ. ಬಹುತೇಕ ಮಕ್ಕಳು ನೀರವವೆನಿಸುವ ರಾತ್ರಿಯನ್ನು ಅಥವಾ ಬೆಳಗಿನ ಜಾವವನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ. ಪರೀಕ್ಷೆಗಳು ಸಮೀಪವಿದ್ದಾಗ ಯಾವುದೇ ಸದ್ದುಗದ್ದಲಗಳಿರದ ಈ ಸಮಯ ಓದುವುದಕ್ಕೆ ಅನುಕೂಲವೆಂಬುದು ಅನೇಕ ವಿದ್ಯಾರ್ಥಿಗಳ ನಂಬಿಕೆ. ಗುಂಪು ಓದಿಗೆ ಅನುಕೂಲವಿರುವ ಮನೆಗಳನ್ನು ಗುರುತಿಸಿಕೊಳ್ಳುವುದು ಒಳಿತು.

ಖಾಲಿ ಹೊಟ್ಟೆಯಲ್ಲಿ ಓದುವ ಬದಲು ಹಾಲು, ಹಣ್ಣಿನ ಸೇವನೆಯು ಓದಿಗೆದ್ದು ಬೇಗ ಗ್ರಹಿಸಲು ಅನುಕೂಲವಾಗುತ್ತದೆ. ಗಾಳಿ ಬೆಳಕಿನ ತೊಂದರೆ ಇರಬಾರದು. ಎಲ್ಲಕ್ಕೂ ಹೆಚ್ಚಾಗಿ ಓದುವುದರಿಂದ ಗಮನ ಭಂಗವಾಗುವ ಯಾವುದೇ ಚಟುವಟಿಕೆಗಳು ಸುತ್ತಮುತ್ತ ಇರಬಾರದು. ಇವನ್ನೆಲ್ಲ ಗಮನದಲ್ಲಿರಿಸಿಕೊಂಡರೆ ಗುಂಪು ಅಧ್ಯಯನ ಖಂಡಿತವಾಗಿಯೂ ವ್ಯಕ್ತಿತ್ವವಿಕಸನಕ್ಕೆ, ಉತ್ತಮ ಅಂಕಗಳ ಗಳಿಕೆಗೆ ಸಹಾಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT