ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆ ಉತ್ತರ

Last Updated 16 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಮಂಜುನಾಥ - ಕುಷ್ಟಗಿ, ಕೊಪ್ಪಳ
ನಾನು ಎಸ್.ಎಸ್.ಎಲ್.ಸಿ. ನಂತರ ಮೈಸೂರು ವಿಶ್ವವಿದ್ಯಾಲಯದಲ್ಲಿ ಪಿಯುಸಿ ಮುಗಿಸಿದ್ದೇನೆ.  ಸರ್ಟಿಫಿಕೇಟ್‌ನಲ್ಲಿ ಡಿಗ್ರಿ ಬ್ರಿಡ್ಜ್ ಕೋರ್ಸ್ ೧೦ + ೨ ಪರೀಕ್ಷೆ ಎಂದು ಕೊಟ್ಟಿರುತ್ತಾರೆ. ಇದರಿಂದ ಸರ್ಕಾರಿ ನೌಕರಿಗೆ ಅರ್ಜಿ ಸಲ್ಲಿಸಬಹುದೇ? ಮುಕ್ತ ವಿವಿ ಮೂಲಕ ಪತ್ರಿಕೋದ್ಯಮ ಮಾಡಲು ಬಯಸಿದ್ದೇನೆ. ಯಾವ ವಿವಿಯಲ್ಲಿ ಮಾಡಬಹುದು. ಮಾಹಿತಿ ನೀಡಿ.
ನೀವು ನಿಮ್ಮ ಪಿಯುಸಿ ಸರ್ಟಿಫಿಕೇಟ್ ಬಳಸಿ ಸರ್ಕಾರಿ ನೌಕರಿಗೆ ಅರ್ಜಿ ಸಲ್ಲಿಸಬಹುದು.  ಪತ್ರಿಕೋದ್ಯಮದಲ್ಲಿ ದೂರಶಿಕ್ಷಣದ ಮೂಲಕ ಶಿಕ್ಷಣ ಮುಂದುವರಿಸಲು ಇಗ್ನೂ ಸೇರಿದಂತೆ ಅನೇಕ ಮುಕ್ತ ವಿವಿಗಳಲ್ಲಿ ಅವಕಾಶವಿದೆ.  ನೀವು ನಿಮ್ಮ ಅನುಕೂಲದ ಆಧಾರದ ಮೇಲೆ ವಿವಿಯನ್ನು ಆರಿಸಿಕೊಳ್ಳಬಹುದು.

ಮಹಮ್ಮದ್ ನಿಸಾರ್ ಎಂ., ಕುರುಗೋಡು
ನಾನು ಬಿ.ಎಡ್ ಮಾಡುತ್ತಿದ್ದು, ದೂರಶಿಕ್ಷಣದ ಮೂಲಕ ಹಂಪಿ ವಿಶ್ವವಿದ್ಯಾಲಯದಲ್ಲಿ ಎಂ.ಎ ಕಟ್ಟಿದ್ದೇನೆ. ಮುಂದೆ ಉಪನ್ಯಾಸಕನಾಗಲು ಬಯಸಿದ್ದೇನೆ. ಏಕಕಾಲದಲ್ಲಿ ಎರಡು ಕೋರ್ಸು ಮಾಡುತ್ತಿರುವುದರಿಂದ ಮುಂದೆ ತೊಂದರೆಯಾಗುತ್ತದೆಯೇ?
– ಹಿಂದೆ ಒಂದು ಬಾರಿಗೆ ಒಂದೇ ಕೋರ್ಸು ಕಲಿಯುವ ರೂಢಿ ಇತ್ತು.  ಆದರೆ ಇತ್ತೀಚೆಗೆ ದೂರಶಿಕ್ಷಣದ ಅವಕಾಶಗಳೂ ಹೆಚ್ಚಿದಂತೆ ಒಮ್ಮೆಗೆ ಎರಡು ಕೋರ್ಸು ಮಾಡುವವರು ಸಾಕಷ್ಟು ಜನ ಇದ್ದಾರೆ. ಇದನ್ನು ಹೇಗೆ ನಿಭಾಯಿಸುತ್ತಾರೆ ಮತ್ತು ತಾವು ಕಲಿಯುತ್ತಿರುವ ಕೋರ್ಸುಗಳಿಗೆ ಹೇಗೆ ನ್ಯಾಯ ಒದಗಿಸುತ್ತಾರೆ ಎಂಬುದು ಅವರಿಗೆ ಬಿಟ್ಟ ವಿಷಯ. ಯುಜಿಸಿ ಸಹ ಎರಡು ಕೋರ್ಸುಗಳಿಗೆ ಅವಕಾಶ ನೀಡುವ ಬಗ್ಗೆ ನಿಯಮಾವಳಿ ಸಡಿಲಿಸಿ ಸ್ಪಷ್ಟನೆ ನೀಡಿದೆ. ಆದ್ದರಿಂದ ನೀವು ನಿಮ್ಮ ಕೋರ್ಸುಗಳನ್ನು ಮುಂದುವರಿಸಬಹುದು.

ನಾಗರಾಜ ಟಿ. ಸಂತೆಬೆನ್ನೂರು
ನಾನು ಸಹ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದು, ಗಣಿತದಲ್ಲಿ ಎಂ.ಎಸ್ಸಿ ಮಾಡಿರುತ್ತೇನೆ. ಈಗ ದೂರ ಶಿಕ್ಷಣದ ಮೂಲಕ ಪಿ.ಎಚ್‌ಡಿ ಮಾಡಲು ಬಯಸಿರುತ್ತೇನೆ. ಯಾವ ವಿವಿ ಮೂಲಕ ಇದನ್ನು ಮಾಡಬಹುದು?

–ಸಂಶೋಧನಾ ಕ್ಷೇತ್ರದಲ್ಲಿ ಗುಣಮಟ್ಟವನ್ನು ಕಾಪಾಡುವ ದೃಷ್ಟಿಯಿಂದ ಯುಜಿಸಿಯು ಪಿ.ಎಚ್‌ಡಿ ಕೋರ್ಸ್‌ನ ನಿಯಾಮಾವಳಿಗಳನ್ನು ಬಿಗಿ ಮಾಡಿದ್ದು, ರೆಗ್ಯೂಲರ್ ಕೋರ್ಸುಗಳಿಗೆ ಪ್ರಾಮುಖ್ಯತೆ ನೀಡುತ್ತದೆ. ಜೊತೆಗೆ ಅಭ್ಯರ್ಥಿಗಳನ್ನು ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತಿದೆ. ಕೆಲವು ಕಡೆ ಸುಲಭವಾಗಿ ಪಿ.ಎಚ್‌ಡಿ  ಮಾಡಬಹುದೆಂದು ಹೇಳಲಾಗುತ್ತಿದ್ದರೂ ಅವು ಎಷ್ಟರ ಮಟ್ಟಿಗೆ ಅಧಿಕೃತ ಎಂಬುದನ್ನು ದೃಢಪಡಿಸಿಕೊಳ್ಳಬೇಕಾಗುತ್ತದೆ.  ಆದ್ದರಿಂದ ನೀವು ಯುಜಿಸಿ ನಿಯಾಮಾವಳಿ  ಹಾಗೂ ಬೇರೆ ಬೇರೆ ವಿವಿಗಳ ವೆಬ್ ಸೈಟುಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳಿ.

ಹೊಳೆಬಸಪ್ಪ, ಕೀತ್ತನೂರು, ಹಗರಿಬೊಮ್ಮನಹಳ್ಳಿ
ನಾನು ಎಂಟನೇ ತರಗತಿಗೆ ವಿದ್ಯಾಭ್ಯಾಸವನ್ನು ನಿಲ್ಲಿಸಿ ಮೂರು ವರ್ಷಗಳಾಗಿವೆ. ಈಗ ಎಸ್ಸೆಸೆಲ್ಸಿ ಪರೀಕ್ಷೆ ಕಟ್ಟ ಬಯಸಿದ್ದೇನೆ. ಕುವೆಂಪು ವಿವಿಯಿಂದ ಮಾನ್ಯತೆ ಪಡೆದ ಒಂದು ಸಂಸ್ಥೆಯಲ್ಲಿ ಈ ಅವಕಾಶವಿದೆೆ. ಈ ರೀತಿ ಪಡೆದ ಶಿಕ್ಷಣಕ್ಕೆ ಸರ್ಕಾರದ ಮಾನ್ಯತೆ ದೊರೆಯುತ್ತಿದೆಯೇ ಎಂಬ ಗೊಂದಲವಿದೆ. ವಿವರ ನೀಡಿ.

ಸೆಕೆಂಡರಿ ಹಂತದವರೆಗಿನ ಶಿಕ್ಷಣದಲ್ಲಿ ಸಾಮಾನ್ಯವಾಗಿ ಪರೀಕ್ಷೆಗಳನ್ನು ಪರೀಕ್ಷಾ ಮಂಡಲಿಗಳೇ ನಡೆಸುತ್ತವೆ. ಆದ್ದರಿಂದ ನೀವು ತಿಳಿಸಿರುವ ಸಂಸ್ಥೆಯು ಯಾವ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಲಿಗೆ ಪರೀಕ್ಷೆ ಕಟ್ಟಿಸುತ್ತದೆ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಕರ್ನಾಟಕದ ಪರೀಕ್ಷಾ ಮಂಡಲಿ ಅಥವಾ ಭಾರತದ ಮುಕ್ತ ಪರೀಕ್ಷಾ ಮಂಡಲಿ ಅಥವಾ ಇತರ ರಾಜ್ಯಗಳ ಮಾನ್ಯತೆ ಪಡೆದ ಮಂಡಲಿಗಳಲ್ಲಿ ಪರೀಕ್ಷೆ ಕಟ್ಟಬಹುದು. ನೀವು ಹೇಳಿರುವ ಸಂಸ್ಥೆ ಪರೀಕ್ಷೆ ಬರೆಯಲು ತರಬೇತಿ ಪಡೆಯಲು ಸಹಾಯ ಮಾಡಿದಲ್ಲಿ ಅದನ್ನು ಬಳಸಿಕೊಳ್ಳಬಹುದು.

ಶಕುಂತಲಾ, ಗೋಪಾಲಪುರ
ನಾನು ಬಿ.ಎ ಪದವೀಧರಳಾದ ನಂತರ ಟಿಸಿಎಚ್ ಆಧಾರದ ಮೇಲೆ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೇನೆ. ನಂತರ ಅಂಚೆ ತೆರಪಿನ ಮೂಲಕ ಬಿ.ಎಡ್ ಮುಗಿಸಿದ್ದೇನೆ. ವಿದ್ಯಾರ್ಹತೆ ಇದ್ದರೂ ಸೇವಾ ಹಿರಿತನದಿಂದ ಮಾತ್ರ ಬಡ್ತಿ ಪಡೆಯಲು ಸಾಧ್ಯ. ಹೀಗಾಗಿ ಎಂ.ಎ ಮಾಡ ಬಯಸಿದ್ದೇನೆ. ಇಂಗ್ಲಿಷ್ ಅಧ್ಯಾಪಕರಿಗೆ ಹೆಚ್ಚಿನ ಅವಕಾಶ ಇರುವುದರಿಂದ ಅದನ್ನು ಆರಿಸಿಕೊಂಡಿದ್ದೇನೆ. ಆದರೆ ನನ್ನ ವಿದ್ಯಾಭ್ಯಾಸವೆಲ್ಲಾ ಕನ್ನಡದಲ್ಲೇ ಆಗಿದೆ. ಶಾಲೆಯ ಮತ್ತು ಮನೆಯ ನಿರ್ವಹಣೆಯಲ್ಲಿ ಇಂಗ್ಲಿಷ್ ಕಲಿಯುವುದು ಸಾಧ್ಯವೇ ಎನಿಸುತ್ತದೆ.

ಶೀಘ್ರವಾಗಿ ಬಡ್ತಿ ಪಡೆಯಲು ಇಂಗ್ಲಿಷ್ ಎಂ.ಎ ಮಾಡಿದವರಿಗೆ ಹೆಚ್ಚಿನ ಅವಕಾಶಗಳಿರಬಹುದು. ಇದು ಕೇವಲ ಬಡ್ತಿಯ ಪ್ರಶ್ನೆಯಾಗದೆ ಮುಂದೆ ನೀವು ಹೇಗೆ ಪರೀಕ್ಷೆಯಲ್ಲಿ ಯಶಸ್ವಿಯಾಗುತ್ತೀರಿ ಹಾಗೂ ನಂತರ ಬೋಧನೆಯಲ್ಲಿ ಎಷ್ಟರ ಮಟ್ಟಿಗೆ ಸಫಲರಾಗುತ್ತೀರಿ ಎಂಬ ಪ್ರಶ್ನೆ ಸಹ ಮುಖ್ಯವಾಗುತ್ತದೆ.  ಆದ್ದರಿಂದ ಇಂಗ್ಲಿಷ್ ಬಗ್ಗೆ ನಿಮಗೆ ಆತ್ಮ ವಿಶ್ವಾಸವಿದ್ದಲ್ಲಿ ಅದನ್ನು ಮುಂದುವರಿಸಿ, ಇಲ್ಲವಾದರೆ ನಿಮಗೆ ಆಸಕ್ತಿ ಇರುವ ಹಾಗೂ ಬಡ್ತಿಗೆ ಅವಕಾಶವಿರುವ ಇನ್ನೂ ಯಾವುದೇ ವಿಷಯವನ್ನು ಆರಿಸಿಕೊಳ್ಳಿ.

ವಿಜತ್, ಹೊಸಕೆರೆ, ಮೂಡಿಗೆರೆ
ಹತ್ತನೇ ತರಗತಿ ಓದುತ್ತಿರುವ ನಾನು ಡಿಪ್ಲೊಮಾ ಮಾಡಬಯಸಿದ್ದೇನೆ. ನಾನು ಎಚ್ಎಎಲ್ ನಲ್ಲಿ ಕೆಲಸ ಮಾಡಬೇಕಾದರೆ ಏನು ಮಾಡಬೇಕು?

ಎಸ್ಸೆಸೆಲ್ಸಿ ನಂತರ ಅಂಕಗಳ ಆಧಾರದ ಮೇಲೆ ಮೂರು ವರ್ಷಗಳ ಡಿಪ್ಲೋಮಾ ಮಾಡಬಹುದು. ಎಚ್ಎಎಲ್ ನಲ್ಲಿ ಡಿಪ್ಲೋಮಾ ಪಡೆದವರೂ ಸೇರಿದಂತೆ ಬೇರೆ ಬೇರೆ ವಿದ್ಯಾರ್ಹತೆ ಪಡೆದ ಅರ್ಹ ಅಭ್ಯರ್ಥಿಗಳಿಗೆ ಕೆಲಸ ಮಾಡಲು ಅವಕಾಶವಿರುತ್ತದೆ. ಆದರೆ ಈ ಸಂಸ್ಥೆಯವರು ಕೆಲಸಕ್ಕಾಗಿ ಅರ್ಜಿ ಕರೆದಾಗ ನಿಮ್ಮ ಅರ್ಹತೆಗೆ ಅನುಸಾರವಾಗಿ ಪ್ರಯತ್ನಿಸಬಹುದು. ಆಯ್ಕೆಗೆ ಅವಕಾಶಗಳಿಸಬಹುದು. 

ಜಯಲಕ್ಷ್ಮೀ, ತೀರ್ಥಹಳ್ಳಿ
ನಾನು 2008ರಲ್ಲಿ ಕುವೆಂಪು ವಿವಿಯಲ್ಲಿ ಬಿ.ಎ ಕೋರ್ಸ್ ಮುಗಿಸಿದ್ದೇನೆ. ಆದರೆ ಪ್ರಥಮ ಹಾಗೂ ದ್ವಿತೀಯ ವರ್ಷದ ಇಂಗ್ಲಿಷ್ ಉಳಿದುಕೊಂಡಿದೆ. ಈಗ ಮತ್ತೆ ಅದನ್ನು ಬರೆಯಬಹುದೇ? ಪಠ್ಯಕ್ರಮ ಯಾವುದು ಇರುತ್ತದೆ. ಇದಕ್ಕೆ ವಯಸ್ಸಿನ ಮಿತಿ ಇರುತ್ತದೆಯೇ?

–ನೀವು ಯಾವ ಕಾಲೇಜಿನ ಮುಖಾಂತರ ಪರೀಕ್ಷೆ ಕಟ್ಟಿದ್ದಿರೋ ಆ ಕಾಲೇಜಿಗೆ ನಿಮ್ಮ ಎಲ್ಲಾ ದಾಖಲೆಗಳ ಸಹಿತ ಭೇಟಿ ಕೊಟ್ಟು ವಿವರವಾದ ಮಾಹಿತಿ ಪಡೆದುಕೊಳ್ಳಿ. ಒಂದು ವೇಳೆ ನೀವು ದೂರಶಿಕ್ಷಣದ ಮೂಲಕ ಬಿಎ ಬರೆದಿದ್ದರೆ, ನೇರವಾಗಿ ವಿಶ್ವವಿದ್ಯಾಲಯದ ಪರೀಕ್ಷಾ ವಿಭಾಗಕ್ಕೆ ಹೋಗಿ ಖಚಿತ ಮಾಹಿತಿ ಪಡೆದುಕೊಳ್ಳಿ.

ಮೋಹನ ಕುಮಾರ್, ಚಿತ್ರದುರ್ಗ
ನಾನು ಬಿ.ಎಸ್ಸಿ, ಬಿ.ಎಡ್ ಮುಗಿಸಿರುತ್ತೇನೆ. ನನ್ನ ಎಸ್ಸೆಸೆಲ್ಸಿ ಅಂಕಪಟ್ಟಿಯಲ್ಲಿ ಹೆಸರು ಮೋಹನ ಕುಮಾರ ಎಂದಿದೆ. ಪಿಯುಸಿ ಹಾಗೂ ಪದವಿಯಲ್ಲಿ ಮೋಹನ ಕುಮಾರ್ ಎಂದಿದೆ. ಸರ್ಕಾರಿ ಕೆಲಸಕ್ಕೆ ಸೇರುವಾಗ ಏನಾದರೂ ಸಮಸ್ಯೆ ಎದುರಾಗುತ್ತದೆಯೇ? ದಯವಿಟ್ಟು ಸೂಕ್ತ ಮಾರ್ಗದರ್ಶನ ನೀಡಿ.

–ಕೆಲಸಕ್ಕೆ ಸೇರುವಾಗ ಸಾಮಾನ್ಯವಾಗಿ ಎಸ್ಸೆಸೆಲ್ಸಿ ಪ್ರಮಾಣ ಪತ್ರವನ್ನು ಪರಿಶೀಲಿಸುತ್ತಾರೆ. ನೀವು ಮೋಹನ ಕುಮಾರ್ ಎಂಬ ಹೆಸರನ್ನು ಪಿಯುಸಿ ಹಾಗೂ ಪದವಿಯಲ್ಲಿರುವಂತೆ ಉಳಿಸಿಕೊಳ್ಳಬೇಕಾದರೆ ಎಸ್ಸೆಸೆಲ್ಸಿ ಮಂಡಲಿಯಿಂದ ತಿದ್ದು ಪಡಿ ಮಾಡಿಸಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಸೂಕ್ತ ದಾಖಲೆಗಳೊಡನೆ ಒಬ್ಬ ಲಾಯರ್ ನೆರವಿನಿಂದ ಕೋರ್ಟಿಗೆ ಮನವಿ ಮಾಡಿಕೊಂಡು ಆದೇಶ ಪಡೆಯಬೇಕಾಗುತ್ತದೆ. ನಂತರ ಬೋರ್ಡಿಗೆ ಅರ್ಜಿ ಸಲ್ಲಿಸಿ ತಿದ್ದುಪಡಿ ಮಾಡಿಸಿಕೊಳ್ಳಬಹುದು.

shikshana@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT