ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆ ಉತ್ತರ

ಕಾವ್ಯ ತುಮಕೂರು
ನಾನು 2013ರಲ್ಲಿ ಸಿ.ಇ.ಟಿ. ಬರೆದು 3168ನೇ ವೈದ್ಯಕೀಯ ರ್‌್ಯಾಂಕ್ ಪಡೆದಿದ್ದೆ. ಆದರೆ ಅದರಿಂದ ಪ್ರವೇಶ ಪಡೆಯಲು ಸಾಧ್ಯವಾಗದೆ ಬಿ.ಇ ಸೇರಿದೆ. ಈಗ ನಾನು ಪುನಃ ಸಿ.ಇ.ಟಿ ಪರೀಕ್ಷೆ ಬರೆದು ವೈದ್ಯಕೀಯ ಪ್ರವೇಶ ಪಡೆಯಬಹುದೇ? ಸಿ.ಬಿ.ಎಸ್ಸಿ ಪಠ್ಯಕ್ರಮಕ್ಕೆ ಬದಲಾಗಿರುವುದರಿಂದ ಈಗ ಸಿ.ಇ.ಟಿ ಕಷ್ಟವೇ? 
– ನಿಮಗೆ ವೈದ್ಯಕೀಯಶಾಸ್ತ್ರದಲ್ಲೇ ಹೆಚ್ಚು ಆಸಕ್ತಿ ಇದ್ದರೆ, ಬಿ.ಇ ಮುಂದುವರಿಸುವ ಬದಲು ಮತ್ತೆ ಸಿ.ಇ.ಟಿ ಬರೆದು ಎಂ.ಬಿ.ಬಿ.ಎಸ್ ಗೆ ಸೇರುವ ಪ್ರಯತ್ನ ಮಾಡುವುದು ಒಳ್ಳೆಯದು. ಪಿ.ಯು ಪಠ್ಯ ಬದಲಾಗಿದೆ. ಆದರೆ ೮೦% ಪಠ್ಯ ಹಾಗೇ ಇದೆ. ೨೦೧೪ ರಲ್ಲಿ ಸಿ.ಇ.ಟಿ ತೆಗೆದುಕೊಂಡು ಒಳ್ಳೆಯ ರ್‌್ಯಾಂಕ್ ಪಡೆಯಲು ಕಷ್ಟ ಸಾಧ್ಯ. ನೀವು ಮುಂದಿನ ಒಂದು ವರ್ಷ ಸಿ.ಇ.ಟಿ ಸಿದ್ಧತೆಗೆ ಮುಡಿಪಾಗಿಟ್ಟು ಅಭ್ಯಾಸ ಮಾಡಿದರೆ, ೨೦೧೫ ರಲ್ಲಿ ಸಿ.ಇ.ಟಿ ಬರೆದು ಮೆಡಿಕಲ್‌ಗೆ ಸೇರಿಕೊಳ್ಳಬಹುದು.

ವಿನೀತ್ ಗೊನ್ಸಾಲ್ವಿಸ್, ಉಡುಪಿ
ನಾನು ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿದ್ದು ಪರೀಕ್ಷೆ ಬರೆದಿದ್ದೇನೆ. ಮುಂದೆ ದ್ವಿತೀಯ ಪಿ.ಯು.ಸಿ.ಯನ್ನು ವಾಣಿಜ್ಯ ವಿಭಾಗದಲ್ಲಿ ಮುಂದುವರೆಸಬಹುದೇ?
– ಪ್ರಥಮ ಪಿ.ಯುನಲ್ಲಿ ವಿಜ್ಞಾನ ಅಭ್ಯಾಸ ಮಾಡುವಾಗ, ವಿಜ್ಞಾನದ ವಿಷಯಗಳಲ್ಲಿ ನಿಮಗೆ ಆಸಕ್ತಿ ಇಲ್ಲದಿರುವುದನ್ನು ನೀವು ಆಗಲೇ ಕಂಡುಕೊಂಡಿದ್ದರೆ, ನೀವು ವಾಣಿಜ್ಯ ವಿಭಾಗಕ್ಕೆ ಆಗಲೇ ಬದಲಿಸಿಕೊಂಡು ವಾಣಿಜ್ಯ ವಿಭಾಗದಲ್ಲಿ ಓದಬಹುದಿತ್ತು. ಆದರೆ ನೀವು ಈಗಾಗಲೇ ಪ್ರಥಮ ಪಿ.ಯು. ಮುಗಿಸುವ ಹಂತದಲ್ಲಿರುವುದರಿಂದ, ಪುನಃ ಪ್ರಥಮ ಪಿ.ಯು ವಾಣಿಜ್ಯಕ್ಕೆ ಸೇರಿಕೊಳ್ಳಬೇಕಾಗುತ್ತದೆ. ಪ್ರಥಮ ಪಿ.ಯುನಲ್ಲಿ ಕಲಿಯಬೇಕಾದ ವಾಣಿಜ್ಯ ವಿಷಯಗಳನ್ನು ನೀವು ಅಭ್ಯಾಸಮಾಡಬೇಕಾಗುತ್ತದೆ.

ಶರತ್ ಗೌಡರ್, ಬೆಂಗಳೂರು
ನಾನು ದ್ವಿತೀಯ ಪಿ.ಯು.ಸಿ. (ಪಿ.ಸಿ.ಎಂ.ಸಿ) ಪರೀಕ್ಷೆ ಬರೆದಿದ್ದೇನೆ. ಮುಂದೆ  ಅಣುವಿಜ್ಞಾನಿ ಆಗಬೇಕೆಂಬ ಆಸೆ ಇದೆ. ಕೈಗಾ ಹಾಗೂ ಕೂಡಂಕುಳಂ ಅಣುಸ್ಥಾವರದಲ್ಲಿ ಕೆಲಸಮಾಡಬೇಕೆಂಬ ಆಸೆಯೂ ಇದೆ. ಹಾಗಾಗಿ ಮುಂದೆ ಯಾವ ವಿಷಯದಲ್ಲಿ ಪದವಿ ಗಳಿಸಬೇಕೆಂದು ತಿಳಿಯುತ್ತಿಲ್ಲ.
– ನಿಮಗೆ ಅಣುವಿಜ್ಞಾನಿಯಾಗಬೇಕೆಂಬ ಆಸೆ ಇರುವುದನ್ನು ತಿಳಿದು ಸಂತೋಷವಾಯಿತು. ಈ ಕಾಲದಲ್ಲಿ ಹೆಚ್ಚು ವಿದ್ಯಾರ್ಥಿಗಳು ಎಂಜಿನಿಯರ್ ಅಥವಾ ಡಾಕ್ಟರ್ ಆಗಬೇಕೆಂದು ಹಂಬಲಿಸುತ್ತಿರುವಾಗ ವಿಜ್ಞಾನಿಯಾಗಬೇಕೆಂಬ ಕನಸು ಕಾಣುತ್ತಿರುವ ನಿಮ್ಮಂತಹವರು ಅಪರೂಪ.  ನೀವು ಪಿ.ಯು ನಂತರ ಶುದ್ಧವಿಜ್ಞಾನವನ್ನು ಓದಬೇಕು. ಇದಕ್ಕೆ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ಅಥವಾ ಐ.ಐ.ಎಸ್.ಇ.ಆರ್ ಗಳಲ್ಲಿ ಬಿ.ಎಸ್ ಪದವಿಯನ್ನು ಪಡೆಯಬೇಕು. ಈ ಸಂಸ್ಥೆಗಳಲ್ಲಿ ಅವಕಾಶ ಸಿಗದಿದ್ದರೆ ಒಳ್ಳೆಯ ಕಾಲೇಜಿನಲ್ಲಿ ಬಿ.ಎಸ್ಸಿ ಯನ್ನು ಮಾಡಬಹುದು. ಆನಂತರ ಒಳ್ಳೆಯ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ ಮಾಡಿ ಪಿಎಚ್.ಡಿ ಮಾಡಬಹುದು. ಪಿಎಚ್.ಡಿ ನಂತರ ವಿಜ್ಞಾನಿಗಳ ಸಂಶೋಧನಾ ಲೋಕಕ್ಕೆ ಕಾಲಿಡಬೇಕು.

ಸುಶ್ಮಿತಾ, ಬೆಂಗಳೂರು
ನಾನು 2007ರಲ್ಲಿ ಬಿ.ಇ. ಸೇರಿದೆ. ಆದರೆ ಮೊದಲನೇ ವರ್ಷದ ವಿಷಯವೊಂದರಲ್ಲಿ ಉತ್ತೀರ್ಣಳಾಗದೇ ಇದ್ದುದರಿಂದ ಮೂರನೇ ವರ್ಷಕ್ಕೆ ಪ್ರವೇಶ ಸಿಗಲಿಲ್ಲ. ಅಲ್ಲದೆ ದೂರಶಿಕ್ಷಣದ ಮೂಲಕ 2013ರಲ್ಲಿ ಬಿ.ಕಾಂ ಪದವಿ ಪಡೆದಿದ್ದೇನೆ. ಆದರೂ ಮನೆಯಲ್ಲಿ ಬಿ.ಇ ಮುಗಿಸುವಂತೆ ಉತ್ತೇಜಿಸುತ್ತಿದ್ದಾರೆ. ಇದು ಸಾಧ್ಯವೇ? ವಯಸ್ಸಿನ ಅಡಚಣೆ ಮತ್ತು ಇತರ ಯಾವುದಾದರೂ ತೊಂದರೆ ಇದೆಯೇ? ಅಲ್ಲದೆ ಇದರಿಂದ ನಾನು ಬಿ.ಕಾಂ ಪದವಿ ಪ್ರಮಾಣ ಪತ್ರ ಪಡೆಯಲು ತೊಂದರೆಯಾಗುತ್ತದೆಯೇ? ಮುಂದೆ ಉದ್ಯೋಗಕ್ಕೇನಾದರೂ ತೊಂದರೆಯಾಗುತ್ತದೆಯೇ?
– ನೀವು ಎರಡು ವರ್ಷ ಬಿ.ಇ. ವಿದ್ಯಾಭ್ಯಾಸ ಮಾಡಿ, ಆನಂತರ ದೂರ ಶಿಕ್ಷಣದ ಮೂಲಕ ಬಿ.ಕಾಂ ಮಾಡಿ ಪುನಃ ಬಿ.ಇ ಮುಂದುವರಿಸಲು ಯೋಚಿಸುತ್ತಿದ್ದೀರಿ. ನಿಮ್ಮ ನಡೆ ತುಂಬಾ ಗೊಂದಲಮಯವಾಗಿದೆ. ಬಿ.ಇ. ನಲ್ಲಿ ಅನುತ್ತೀರ್ಣವಾದ ವಿಷಯಗಳ ಬಗ್ಗೆ ಆಗಲೇ ಪರೀಕ್ಷೆ ತೆಗೆದುಕೊಂಡು ಇಷ್ಟು ಹೊತ್ತಿಗೆ ಬಿ.ಇ. ಮುಗಿಸಬಹುದಾಗಿತ್ತು. ಈಗ ಬಿ.ಕಾಂ ಮುಗಿಸಿ ಪುನಃ ಬಿ.ಇ ಮಾಡಲು ಬಯಸುತ್ತೀದ್ದೀರಿ. ನಿಮ್ಮ ಆಸಕ್ತಿ ಕಾಮರ್ಸ್ ಕಡೆಗಿದೆಯೋ ಅಥವಾ ಎಂಜಿನಿಯರಿಂಗ್ ಕಡೆಗಿದೆಯೋ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಿ

. ಬಿ.ಇ ಮುಗಿಸಲೇ ಬೇಕೆಂಬ ಆಸೆ ಇದ್ದರೆ ನೀವು ಹಿಂದೆ ಬಿ.ಇ ಓದಿದ ಕಾಲೇಜಿಗೆ ಹೋಗಿ ಈ ಬಗ್ಗೆ ವಿಚಾರಿಸಿ. ಕಳೆದ ವರ್ಷದಲ್ಲಿ ಬಿ.ಇ ಪಠ್ಯ ಬದಲಾಗಿರಬಹುದು. ಈಗ ಪುನಃ ಅನುತ್ತೀರ್ಣವಾದ ವಿಷಯದಲ್ಲಿ ಪರೀಕ್ಷೆ ತೆಗೆದುಕೊಳ್ಳಲು ವಿಟಿಯು ಅನುಮತಿ ಅವಶ್ಯಕ. ನಿಮ್ಮನ್ನು ಮುಂದಿನ ತರಗತಿಗೆ ಸೇರಿಸಿಕೊಳ್ಳಲೂ ಬಿ.ಇ ಕಾಲೇಜು ಸಹ ಸಮ್ಮತಿಸಬೇಕು. ಇದೆಲ್ಲಾ ಸಾಧ್ಯವಾದರೆ ಉದ್ಯೋಗವನ್ನು ಪಡೆಯಲು ಯಾವ ತೊಂದರೆಗಳೂ ಇಲ್ಲ.

ಪ್ರವಲ್ಲಿಕಾ, ಬೆಂಗಳೂರು.
ನಾನು ಈಗ ದ್ವಿತೀಯ ಪಿ.ಯು.ಸಿ. ಪರೀಕ್ಷೆ ಬರೆದಿದ್ದೇನೆ. ಮುಂದೆ ಸಿ.ಇ.ಟಿ. ಬರೆಯುತ್ತೇನೆ. ಆದರೆ ಇದಕ್ಕೆ ತಯಾರಿ ಹೇಗೆ ನಡೆಸಬೇಕು? ಇದರಲ್ಲಿ ಅಂಕಗಳನ್ನು ಹೇಗೆ ನೀಡುತ್ತಾರೆ? ಎಷ್ಟು ಅಂಕಗಳಿಸಿದರೆ ಉತ್ತಮ ರ್‌್ಯಾಂಕ್ ಲಭಿಸುತ್ತದೆ?
– ಈಗಾಗಲೇ ದ್ವಿತೀಯ ಪಿ.ಯು ಪರೀಕ್ಷೆ ಬರೆದು ಮುಂದೆ ಸಿ.ಇ.ಟಿ ಬರೆಯಬೇಕೆಂದಿರುವ ಎಲ್ಲಾ ವಿದ್ಯಾರ್ಥಿಗಳ ಮನಸ್ಸಿನಲ್ಲಿಯೂ ಇರುವಂತಹ ಪ್ರಶ್ನೆಯನ್ನೇ ನೀವೂ ಕೇಳಿದ್ದೀರಿ. ಸಿ.ಇ.ಟಿ ಪರೀಕ್ಷೆಗೆ ತಯಾರಿ ನೀವು ಪಿ.ಯುಗೆ ಮೊದಲನೆಯ ವರ್ಷ ಸೇರ್ಪಡೆಯಾದಾಗಿನಿಂದ ನಡೆದುಕೊಂಡು ಬಂದಿರಬೇಕಾಗಿತ್ತು. ಹಾಗಾಗಿರದಿದ್ದರೂ ಚಿಂತೆಯಿಲ್ಲ. ಈಗ ಮುಂದೆ ಉಳಿದಿರುವ ಕಾಲವನ್ನು ಹೇಗೆ ಸಮರ್ಥವಾಗಿ ಬಳಸಬೇಕೆಂದು ಯೋಚಿಸಿ. ಶೇಕಡಾ ೭೫ ರಷ್ಟು ಪ್ರಶ್ನೆಗಳು ದ್ವಿತೀಯ ಪಿ.ಯು ಪಠ್ಯದಿಂದಲೇ ಬರುವುದರಿಂದ ಹೆಚ್ಚಿನ ಆದ್ಯತೆಯನ್ನು ಅದಕ್ಕೆ ನೀಡುವುದು ಒಳ್ಳೆಯದು. ಈಗಾಗಲೇ ದ್ವಿತೀಯ ಪಿ.ಯು ಪರೀಕ್ಷೆಯನ್ನು ನೀವು ಬರೆದಿರುವುದರಿಂದ ಎಲ್ಲಾ ವಿಷಯಗಳ ಎಲ್ಲ ಮೂಲ ಅಂಶಗಳೂ ನಿಮಗೆ ಮನದಟ್ಟಾಗಿವೆ.

ಈ ಅರಿವನ್ನು ಸಿ.ಇ.ಟಿ ಪರೀಕ್ಷೆಗೆ ಹೇಗೆ ಅನ್ವಯಿಸಬೇಕೆಂದು ಯೋಚಿಸಿ. ಹಿಂದಿನ ವರ್ಷದ ಸಿ.ಇ.ಟಿ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿ, ಪ್ರಶ್ನೆಗಳ ಆಳ ಮತ್ತು ಹರಹನ್ನು ಅರ್ಥಮಾಡಿಕೊಳ್ಳಿ. ಸಿ.ಇ.ಟಿ ಪರೀಕ್ಷೆಯಲ್ಲಿ ಒಂದು ಪ್ರಶ್ನೆಯನ್ನು ಸರಾಸರಿ ಒಂದು ನಿಮಿಷದಲ್ಲಿ ಬಿಡಿಸಬೇಕು. ಆದ್ದರಿಂದ ವೇಗವಾಗಿ ಉತ್ತರಿಸುವ ಕೌಶಲವನ್ನು ಬೆಳೆಸಿಕೊಳ್ಳಬೇಕು. ಪ್ರತಿದಿನ ಒಂದೊಂದು ವಿಷಯದಲ್ಲೂ ಒಂದೊಂದು ಸ್ವಯಂ ಪರೀಕ್ಷೆಯನ್ನು ತೆಗೆದುಕೊಂಡು, ನಿಮ್ಮ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳಿ. ಆತ್ಮವಿಶ್ವಾಸದಿಂದ ಸಿ.ಇ.ಟಿ ಪರೀಕ್ಷೆಯನ್ನು ಎದುರಿಸಿ ಉತ್ತಮ ಅಂಕಗಳನ್ನು ಪಡೆಯಿರಿ. ಸಿ.ಇ.ಟಿಯಲ್ಲಿ ರ್‌್ಯಾಂಕ್‌ಗಳನ್ನು ಬೋರ್ಡ್ ಪರೀಕ್ಷೆ ಮತ್ತು ಸಿ.ಇ.ಟಿ ಪರೀಕ್ಷೆ ಇವೆರಡರಲ್ಲೂ ಗಳಿಸಿದ ಒಟ್ಟು ಅಂಕಗಳ ಮೇಲೆ ನಿರ್ಣಯಿಸುತ್ತಾರೆ. ಬೋರ್ಡ್ ಪರೀಕ್ಷೆಯಲ್ಲಿ ಶೇಕಡಾ ೯೦ ಕ್ಕಿಂತ ಹೆಚ್ಚು ಮತ್ತು ಸಿ.ಇ.ಟಿಯಲ್ಲಿ ಶೇಕಡಾ ೮೦ ಕ್ಕಿಂತ ಹೆಚ್ಚು ಅಂಕಗಳಿಸಿದರೆ ಉತ್ತಮ ರ್‌್ಯಾಂಕ್ ಪಡೆಯಬಹುದು.

ಪ್ರಭಂಜನ್, ಮೈಸೂರು
ಸಿ.ಇ.ಟಿ. ಮತ್ತು ಕಾಮೆಡ್-ಕೆ ಇರುವ ವ್ಯತ್ಯಾಸ ಏನು? ಇದಕ್ಕೆ ಬೇರೆ ಬೇರೆ ತಯಾರಿ ಅವಶ್ಯಕತೆ ಇದೆಯೇ?  
– ಸಿ.ಇ.ಟಿ ಮತ್ತು ಕಾಮೆಡ್-ಕೆ ಪರೀಕ್ಷೆಗಳಲ್ಲಿ ಯಾವ ವ್ಯತ್ಯಾಸಗಳೂ ಇಲ್ಲ. ಎರಡಕ್ಕೂ ಪಠ್ಯ ಒಂದೇ. ಪ್ರಶ್ನೆ ಪತ್ರಿಕೆಯ ಸ್ವರೂಪವೂ ಒಂದೇ. ಆದ್ದರಿಂದ ಎರಡಕ್ಕೂ ತಯಾರಿ ಒಂದೇ ತರಹದ್ದು. ಒಂದಕ್ಕೆ ಮಾಡಿದ ತಯಾರಿ ಮತ್ತೊಂದಕ್ಕೂ ಸಾಕಾಗುತ್ತದೆ. ಸಿ.ಇ.ಟಿ ಪರೀಕ್ಷೆಯ ಮೂಲಕ ಸರಕಾರೀ ಕೋಟಾದ ಅವಕಾಶಗಳು ಮತ್ತು ಕಾಮೆಡ್-ಕೆ ಮೂಲಕ ಖಾಸಗೀ ಕಾಲೇಜುಗಳಲ್ಲಿನ ಅವಕಾಶಗಳು ದೊರೆಯುತ್ತವೆ.

ಫಲ್ಗುಣ, ಶ್ರೀರಂಗಪಟ್ಟಣ
ನಾನು ದ್ವಿತೀಯ ಪಿ.ಯು.ಸಿ. ವಾಣಿಜ್ಯ ವಿಭಾಗದಲ್ಲಿ ಓದಿ ಈಗ ಪರೀಕ್ಷೆ ಬರೆದಿರುತ್ತೇನೆ. ದಯಮಾಡಿ ಮುಂದಿರುವ ವಿದ್ಯಾಭ್ಯಾಸದ ಕುರಿತು ಸೂಕ್ತ ಮಾರ್ಗದರ್ಶನ ಕೊಡಿ.
– ವಾಣಿಜ್ಯ ವಿಭಾಗಕ್ಕೆ ಇತ್ತೀಚಿನ ದಿನಗಳಲ್ಲಿ ಬಹಳ ಮಹತ್ವ ಇದೆ. ನೀವು ಪಿ.ಯು ನಂತರ ಉತ್ತಮ ಕಾಲೇಜಿನಲ್ಲಿ ಬಿ.ಕಾಂ ಅಥವಾ ಬಿ.ಬಿ.ಎಂ ಮಾಡಿ ಮುಂದೆ ಎಂ.ಕಾಂ ಅಥವಾ ಎಂ.ಬಿ.ಎ ಮಾಡಬಹುದು. ವಿದ್ಯಾಭ್ಯಾಸದಲ್ಲಿ ಮುಂದುವರಿದಂತೆ ಮುಂದಿನ ಮಾರ್ಗಗಳು ತಂತಾನೇ ತೆರೆದುಕೊಳ್ಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT