ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆ-ಉತ್ತರ

ಅಕ್ಷರ ಗಾತ್ರ

ಲೋಕೇಶ್ ಎಂ.ಇಂದೇಶಿ

ನಾನು ಮೆಕ್ಯಾನಿಕಲ್ ಡಿಪ್ಲೊಮಾ ಮಾಡುತ್ತಿದ್ದೇನೆ. ಡಿಪ್ಲೊಮಾ ನಂತರ ಪಾರ್ಟ್ ಟೈಮ್ ಬಿಇ ಉತ್ತಮವೋ ಅಥವಾ ರೆಗ್ಯುಲರ್ ಬಿಇ ಉತ್ತಮವೋ? ದಯಮಾಡಿ ಸಲಹೆ ಕೊಡಿ.

ಮೆಕ್ಯಾನಿಕಲ್ ಡಿಪ್ಲೊಮಾ ಮುಗಿಸಿದ ನಂತರ ನೀವು ಬಿಇ ಯನ್ನು ಸಂಜೆ ಕಾಲೇಜಿನಲ್ಲಿಯೋ ಅಥವಾ ಕ್ರಮಬದ್ಧವಾದ ದಿನದ ಕಾಲೇಜಿನಲ್ಲಿಯೋ ಮಾಡಬಹುದು. ಎರಡೂ ಆಯ್ಕೆಗಳಿವೆ. ದಿನದ ಕಾಲೇಜಿನಲ್ಲಿ ಬಿಇ ಮಾಡಲು ನೀವು ಇನ್ನೊಂದು ಸಿಇಟಿ ಪರೀಕ್ಷೆ ತೆಗೆದುಕೊಳ್ಳಬೇಕಾಗುತ್ತದೆ. ಸಂಜೆ ಕಾಲೇಜಿನಲ್ಲಿ ಮಾಡಲು ಡಿಪ್ಲೊಮಾ ನಂತರ ಯಾವುದಾದರೂ ಉದ್ಯಮದಲ್ಲಿ ಒಂದು ವರ್ಷ ಕೆಲಸ ಮಾಡಿ ಪಡೆದ ಅನುಭವ ಪ್ರಮಾಣ ಪತ್ರ ಬೇಕಾಗುತ್ತದೆ. ಹಗಲು ಹೊತ್ತು ನೀವು ಕೆಲಸ ಮಾಡುತ್ತಲೂ ಓದಬಹುದು. ನಿಮ್ಮ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಯೋಚಿಸಿ ಸೂಕ್ತ ನಿರ್ಧಾರ ಮಾಡಿ.

ನಾಗೇಂದ್ರ ಎಂ

ನಾನು ಬಿಕಾಂ ಪದವಿಯ ಕೊನೆಯ ಸೆಮಿಸ್ಟರ್ ಪರೀಕ್ಷೆ ಬರೆಯುತ್ತಿದ್ದೇನೆ. ಪದವಿಯ ನಂತರ ನಾನು ಎಂಸಿಎ ಪದವಿಗೆ ಸೇರಬಹುದೇ? ಈ ಕೋರ್ಸಿಗೆ ಸೇರಲು ಸಿಇಟಿ ಅವಶ್ಯಕತೆ ಇದೆಯೇ? ದಯಮಾಡಿ ಸೂಕ್ತ ಸಲಹೆ ನೀಡಿ.

ಬಿಕಾಂ ಮುಗಿದ ನಂತರ ನೀವು ಎಂಸಿಎಗೆ ಸೇರಲಾಗುವುದಿಲ್ಲ. ಎಂಸಿಎ ಕಂಪ್ಯೂಟರ್‌ನ ಅನ್ವಯಗಳನ್ನು ಕುರಿತದ್ದು. ಈ ಬಗ್ಗೆ ಪದವಿ ಹಂತದಲ್ಲಿ ಕಂಪ್ಯೂಟರ್‌ನ ಮೂಲಭೂತ ರಚನೆ, ಕೆಲವು ಕಂಪ್ಯೂಟರ್ ಭಾಷೆಗಳು ಮತ್ತು ಗಣಿತವನ್ನು ಕಲಿತಿರಬೇಕಾಗುತ್ತದೆ. ಬಿಕಾಂನಲ್ಲಿ ನೀವು ಈ ವಿಷಯಗಳನ್ನು ಕಲಿಯದಿರುವುದರಿಂದ ಎಂಸಿಎಗೆ ಹೋಗಲು ಸಾಧ್ಯವಿಲ್ಲ. ನೀವು ಬೇಕಾದರೆ ಎಂಬಿಎ ಮಾಡಬಹುದು.

ಪವಿತ್ರ ರಾಜ್, ಚಿತ್ರದುರ್ಗ

ನಾನು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿದ್ದೇನೆ. ನಾನು ಜೀವಶಾಸ್ತ್ರ ಪರೀಕ್ಷೆಯನ್ನು ಕನ್ನಡ ಭಾಷೆಯಲ್ಲಿ ಬರೆಯಬಹುದೇ?

ಜೀವಶಾಸ್ತ್ರ ಪರೀಕ್ಷೆಯನ್ನು ನೀವು ಕನ್ನಡದಲ್ಲಿ ಬರೆಯಲು ಯಾವುದೇ ಅಡ್ಡಿಯಿಲ್ಲ. ಜೀವಶಾಸ್ತ್ರ ಮಾತ್ರವಲ್ಲ. ನೀವು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ಪ್ರಶ್ನೆಪತ್ರಿಕೆಗಳನ್ನು ಕನ್ನಡದಲ್ಲಿ ಉತ್ತರಿಸಬಹುದು. ಬೇಕಾದರೆ ಕೆಲವು ಪ್ರಶ್ನೆಗಳನ್ನು ಇಂಗ್ಲಿಷಿನಲ್ಲಿಯೂ ಕೆಲವು ಪ್ರಶ್ನೆಗಳನ್ನು ಕನ್ನಡದಲ್ಲೂ ಉತ್ತರಿಸಬಹುದು. ಇಂಗ್ಲಿಷ್‌ನ ತಾಂತ್ರಿಕ ಪದಗಳನ್ನು ಮಧ್ಯೆ ಮಧ್ಯೆ ಉಪಯೋಗಿಸುತ್ತಾ ಕನ್ನಡದಲ್ಲಿ ಬರೆಯಬಹುದು. ಮೌಲ್ಯಮಾಪಕರೆಲ್ಲರೂ ಕರ್ನಾಟಕದವರೇ ಆಗಿರುವುದರಿಂದ ಉತ್ತರದಲ್ಲಿ ಭಾಷೆ ಮುಖ್ಯವಾಗದೆ ವಿಷಯ ಮುಖ್ಯವಾಗುತ್ತದೆ.

ಸುರೇಶ್‌ಗೌಡ

ನಾನು 4ನೇ ಸೆಮಿಸ್ಟರ್ ಮೆಕ್ಯಾನಿಕಲ್ ಬಿಇ ಓದುತ್ತಿದ್ದೇನೆ. ಮೊದಲನೇ ಸೆಮಿಸ್ಟರ್‌ನಲ್ಲಿ ಅತೀ ಕಡಿಮೆ ಅಂಕಗಳು ಬಂದಿವೆ. ಮೊದಲನೇ ವರ್ಷದಲ್ಲಿ ಶೇ 56 ಪಡೆದಿದ್ದೇನೆ. ಹೀಗಿರುವಾಗ ಮುಂದೆ ನನಗೆ ಕೆಲಸ ಸಿಗುವುದೇ? ಇಂಟರ್‌ವ್ಯೆನಲ್ಲಿ ಇದನ್ನೆಲ್ಲಾ ನೋಡದೆ ನನ್ನ ಬುದ್ಧಿ, ಕುಶಲತೆಗೆ ಬೆಲೆ ಕೊಡುತ್ತಾರೆಯೇ? ತುಂಬಾ ಹೆದರಿಕೆಯಾಗುತ್ತದೆ. ದಯಮಾಡಿ ಮಾರ್ಗದರ್ಶನ ಕೊಡಿ.

ನಿಮ್ಮ ಮನೋಧರ್ಮ ಮತ್ತು ಕೌಶಲ್ಯ ಎಷ್ಟೇ ಉತ್ತಮವಾಗಿದ್ದರೂ, ಪರೀಕ್ಷೆಗಳಲ್ಲಿ ಶೇಕಡಾವಾರು ಒಳ್ಳೆಯ ಅಂಕಗಳನ್ನು ಗಳಿಸುವುದು ಅಷ್ಟೇ ಮುಖ್ಯವಾಗುತ್ತದೆ. ಕ್ಯಾಂಪಸ್ ಇಂಟರ್‌ವ್ಯೆನಲ್ಲಿ ಕೆಲವೊಮ್ಮೆ ನಿರ್ದಿಷ್ಟ ಶೇಕಡಾವಾರು ಅಂಕಗಳನ್ನು ಪಡೆದವರಿಗೆ ಮಾತ್ರ ಅವಕಾಶಗಳು ಸಿಗುತ್ತವೆ. ಹೀಗಾಗಿ ಉತ್ತಮ ಅಂಕಗಳಿಲ್ಲದೆ ನಿಮಗೆ ಉದ್ಯೋಗಾವಕಾಶಗಳು ಕಡಿಮೆಯಾಗುವವು. ಇನ್ನೂ 5 ಸೆಮಿಸ್ಟರ್‌ಗಳು ನಿಮ್ಮ ಮುಂದೆ ಇವೆ. ಇವುಗಳಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಲು ಪ್ರಯತ್ನಿಸಿ. ವಿಷಯಗಳನ್ನು ಅರ್ಥಮಾಡಿಕೊಳ್ಳುವ ಜೊತೆಯಲ್ಲಿ ಪರೀಕ್ಷೆಯಲ್ಲಿ ಉತ್ತರಿಸುವ ಕೌಶಲ್ಯವನ್ನು ಬೆಳೆಸಿಕೊಳ್ಳಿ. ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಉತ್ತರಿಸಿ, ಸಂಭವನೀಯ ಪ್ರಶ್ನೆಗಳ ಉತ್ತರಗಳನ್ನು ಸಿದ್ಧವಾಗಿರಿಸಿಕೊಳ್ಳಿ. ಪರೀಕ್ಷೆ ಚೆನ್ನಾಗಿ ಬರೆದು ಉತ್ತಮ ಅಂಕಗಳಿಸಿ.

ನಿಖಿಲ್ ಆರ್

ನಾನು ದ್ವಿತೀಯ ಪಿಯುಸಿ ವಿಜ್ಞಾನ ಓದಿದ್ದೇನೆ. ಮುಂದೆ ಉತ್ತಮ ಭವಿಷ್ಯಕ್ಕಾಗಿ ಏನು ಮಾಡಬೇಕೆಂದು ತೋಚುತ್ತಿಲ್ಲ. ದಯಮಾಡಿ ಮಾರ್ಗದರ್ಶನ ಕೊಡಿ. ಹಾಗೆಯೇ ಬಿಇ ಮತ್ತು ಬಿಟೆಕ್ ಗಳಿಗೆ ಇರುವ ವ್ಯತ್ಯಾಸವನ್ನು ತಿಳಿಸಿಕೊಡಿ.

ಬಿಇ ಮತ್ತು ಬಿಟೆಕ್ ಎರಡೂ ಕೋರ್ಸುಗಳೂ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಪದವಿ ಶಿಕ್ಷಣ ನೀಡುವಂತಹವು. ಕೆಲವು ಸಂಸ್ಥೆಗಳು ಬಿಇ ಪದವಿ ನೀಡಿದರೆ ಕೆಲವು ಬಿಟೆಕ್ ಪದವಿ ನೀಡುತ್ತವೆ. ಈ ಶಿಕ್ಷಣ ನೀಡುವ ಸಂಸ್ಥೆಗಳ ಮೌಲ್ಯದ ಮೇಲೆ ಈ ಪದವಿಯ ಗುಣಮಟ್ಟ ಅವಲಂಬಿತವಾಗಿರುತ್ತದೆ. ಐಐಟಿಗಳು, ಎನ್‌ಐಟಿಗಳು ನೀಡುವ ಬಿಟೆಕ್ ಶಿಕ್ಷಣ ಎಂಜಿನಿಯರಿಂಗ್ ಕ್ಷೇತ್ರದ ಅತ್ಯಾಧುನಿಕ ಅಂಶಗಳನ್ನು ಒಳಗೊಂಡು ಮೌಲ್ಯಯುತವಾಗಿರುತ್ತದೆ. ಎಂಜಿನಿಯರಿಂಗ್ ಇರುವ ಬೇರೆ ಬೇರೆ ಕ್ಷೇತ್ರಗಳಲ್ಲಿ, ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಅಧ್ಯಯನಕ್ಕೆ ಆರಿಸಿಕೊಳ್ಳಿ. ಉದ್ಯೋಗಾವಕಾಶ ಎಲ್ಲಾ ಕ್ಷೇತ್ರಗಳಲ್ಲೂ ವಿಪುಲವಾಗಿವೆ.

ಸಲ್ಮಾನ್, ಹುಕ್ಕೇರಿ

ನಾನು ಬಿಎ ಎರಡನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದೇನೆ. ನನಗೆ ಎಂಬಿಎ ಮಾಡುವ ಆಸೆ ಇದೆ. ಆದರೆ ಇದು ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ತುಂಬಾ ಕಷ್ಟ ಎಂದು ಹೇಳುತ್ತಾರೆ. ಸರಿಯಾದ ನಿರ್ಧಾರ ತೆಗೆದುಕೊಳ್ಳಲು ತೋಚುತ್ತಿಲ್ಲ. ದಯಮಾಡಿ ನನಗೆ ಸೂಕ್ತ ಮಾರ್ಗದರ್ಶನ ಕೊಡಿ.

ಎಂಬಿಎ ಮಾಡಲು ಕಲೆ, ವಾಣಿಜ್ಯ, ವಿಜ್ಞಾನ ಮುಂತಾದ ಯಾವುದೇ ವಿಭಾಗದಲ್ಲಿ ಪದವಿ ಪಡೆದಿದ್ದರೆ ಸಾಕು. ಬಿಎಯಲ್ಲಿ ನೀವು ಅರ್ಥಶಾಸ್ತ್ರವನ್ನು ಓದಿರುವುದು ಎಂಬಿಎಗೆ ಸಹಾಯವಾಗುತ್ತದೆ. ಈ ಅನುಕೂಲ ಬಿಎಸ್ಸಿ ಆದ ವಿದ್ಯಾರ್ಥಿಗಳಿಗಿಲ್ಲ. ನಿಮಗೆ ಎಂಬಿಎ ಮಾಡಲು ಆಸಕ್ತಿ ಇದ್ದರೆ ಈಗಿನಿಂದಲೇ ನಿಮ್ಮ ಇಂಗ್ಲಿಷ್ ಭಾಷಾ ಜ್ಞಾನ ಮತ್ತು ಸಂವಹನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದರ ಕಡೆ ಗಮನ ಕೊಡಿ.

ಮೊಹಮದ್ ಷಾನ್‌ವಾಜ್‌

ನಾನು ಬಿಬಿಎಂ ಮುಗಿಸಿದ್ದೇನೆ. ಇದರ ಜೊತೆಗೆ ನಾನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಟೈಪಿಂಗ್ ಕೋರ್ಸ್ ಮುಗಿಸಿದ್ದೇನೆ. ಜೂನಿಯರ್ ಮತ್ತು ಸೀನಿಯರ್ ಎರಡೂ ಪರೀಕ್ಷೆಗಳನ್ನು ಪೂರೈಸಿದ್ದೇನೆ. ಡಿಟಿಪಿಗೆ ಉಪಯುಕ್ತವಾಗುವ ತರಬೇತಿ ಮತ್ತು ಟ್ಯಾಲಿ ಸಾಫ್ಟ್‌ವೇರ್ ಕೂಡ ಕಲಿತಿದ್ದೇನೆ. ದಯಮಾಡಿ ಉತ್ತಮ ಉದ್ಯೋಗ ಪಡೆಯಲು ಪೂರಕ ಸಲಹೆಗಳನ್ನು ಕೊಡಿ.

ನೀವು ಓದಿರುವ ಕೋರ್ಸುಗಳು ಕಚೇರಿ ಸಹಾಯಕರಾಗಿ ಅಥವಾ ಪ್ರಥಮದರ್ಜೆ ಗುಮಾಸ್ತರಾಗಿ ಕೆಲಸ ನಿರ್ವಹಿಸಲು ಸೂಕ್ತವಾಗಿವೆ. ಸರ್ಕಾರೀ ಉದ್ಯೋಗವೇ ಬೇಕೆಂದರೆ ನೀವು ಕೆಪಿಎಸ್‌ಸಿ ಯವರು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಂಡು ಉತ್ತೀರ್ಣರಾಗಬೇಕು. ಸರ್ಕಾರೀ ಕ್ಷೇತ್ರಕ್ಕಿಂತ ಖಾಸಗೀ ಕ್ಷೇತ್ರದಲ್ಲೆೀ ಇಂತಹ ಉದ್ಯೋಗಗಳು ವಿಪುಲವಾಗಿವೆ. ಆದ್ದರಿಂದ ಖಾಸಗೀ ಕಚೇರಿಗಳಿಗೆ ನಿಮ್ಮ ವಿವರಗಳನ್ನು (ಸಿ.ವಿ./ ಬಯೋಡೇಟ) ಕಳುಹಿಸಿ ಉದ್ಯೋಗಕ್ಕಾಗಿ ಪ್ರಯತ್ನಿಸಿ.

ಗಂಗಾಧರ ಪೈ

ನಾನು ಬಿಎಸ್ಸಿ (ಸಿಬಿಝಡ್) ಮುಗಿಸಿ ನಂತರ ಮೈಸೂರು ಹಿಂದಿ ಪ್ರಚಾರ ಪರಿಷತ್‌ನಿಂದ ಹಿಂದಿ ಎಂಎಯನ್ನು ದೂರಶಿಕ್ಷಣದಲ್ಲಿ ಮಾಡಿಕೊಂಡೆ. ಜೊತೆಗೆ ಕನ್ನಡದಲ್ಲಿ ಎಂಎ ಮತ್ತು ರಸಾಯನಶಾಸ್ತ್ರದಲ್ಲಿ ಎಂಎಸ್ಸಿ ಮಾಡಿಕೊಂಡಿದ್ದೇನೆ. ಈಗ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ನಾನು ಈಗ ಕನ್ನಡ ಅಥವಾ ರಸಾಯನಶಾಸ್ತ್ರ ವಿಷಯದಲ್ಲಿ ಸರ್ಕಾರಿ ಉಪನ್ಯಾಸಕ ಹುದ್ದೆಯನ್ನು ಅರಸಬಹುದೇ? ದಯಮಾಡಿ ಸಲಹೆ ಕೊಡಿ.

ನೀವು ಸ್ನಾತಕ ಮತ್ತು ಸ್ನಾತಕೋತ್ತರ ಹಂತಗಳೆರಡರಲ್ಲಿಯೂ ರಸಾಯನಶಾಸ್ತ್ರವನ್ನು ಅಭ್ಯಾಸ ಮಾಡಿರುವುದರಿಂದ ಸರ್ಕಾರೀ ಕಾಲೇಜುಗಳಲ್ಲಿ ಅಧ್ಯಾಪಕ ವೃತ್ತಿಗೆ ಅರ್ಹರಾಗಿರುತ್ತೀರಿ. ಆದರೆ ಕನ್ನಡವನ್ನು ಐಚ್ಛಿಕ ವಿಷಯವಾಗಿ ಪದವಿ ಹಂತದಲ್ಲಿ ಓದದೇ ಇರುವುದರಿಂದ ಕನ್ನಡ ಪ್ರಾಧ್ಯಾಪಕರಾಗಲು ಅರ್ಹತೆ ಇರುವುದಿಲ್ಲ. ಖಾಸಗೀ ಕಾಲೇಜುಗಳಲ್ಲಿ ಈ ಯಾವ ನಿಬಂಧನೆಗಳೂ ಇರುವುದಿಲ್ಲ. ನಿಮ್ಮ ಅಧ್ಯಾಪನ ಸಾಮರ್ಥ್ಯಕ್ಕೆ ಮಾತ್ರ ಮಾನ್ಯತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT