ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆ – ಉತ್ತರ

ಸಾವಿತ್ರಿ ಕಡೂರ, ಕಟ್ಟೇಹಳ್ಳೀ, ಹಾವೇರಿ ಜಿಲ್ಲೆ
ನನ್ನ ಮಗ ಎಸ್ಸೆಸೆಲ್ಸಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿ ನಂತರ ಪಿ.ಯು.ಸಿ.ಯಲ್ಲಿ ಪಿ.ಸಿ.ಎಂ.ಬಿ. ಪಡೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿ  ಈಗ ಆಟೋಮೊಬೈಲ್ ಬಿ.ಇ. ಮಾಡುತ್ತಿದ್ದಾನೆ. ಅವನಿಗೆ ಐ.ಪಿ.ಎಸ್. ಮಾಡಿಸಬೇಕೆಂಬ ಆಸೆ ಇದೆ. ಐ.ಪಿ.ಎಸ್. ಮಾಡಬೇಕಾದರೆ ಯಾವ ರೀತಿಯ ತರಬೇತಿ ಕೊಡಿಸಬೇಕು? ಬಿ.ಇ.ಮಾಡುತ್ತಲೇ ಇದನ್ನು ಮಾಡಬಹುದೇ? ಇದಕ್ಕೆ ಬೇಕಾದ ಸಂಪನ್ಮೂಲಗಳು ಎಲ್ಲಿ ಸಿಗುತ್ತವೆ? ನನ್ನ ಮಗನನ್ನು ಸಮಾಜದಲ್ಲಿ ಸತ್ಪ್ರಜೆಯಾಗಿ ಮಾಡಬೇಕೆಂದುಕೊಂಡಿದ್ದೇನೆ.  ಸೂಕ್ತ ಸಲಹೆ ಕೊಡಿ.

- ನಿಮ್ಮ ಮಗನಿಗೆ ಐ.ಪಿ.ಎಸ್. ಮಾಡಿಸಬೇಕೆಂಬ ಆಸೆ ತಿಳಿದು ಸಂತೋಷವಾಯಿತು. ಇದು ನಿಮ್ಮ ಮಗನ ಆಸೆಯೂ ಆಗಿರುವುದು ತುಂಬಾ ಮುಖ್ಯ.  ಸಮಾಜದಲ್ಲಿ ಸತ್ಪ್ರಜೆಯಾಗಿ ಬಾಳಲು ಐ.ಪಿ.ಎಸ್. ಮಾಡಿ ಪೊಲೀಸ್ ಅಧಿಕಾರಿಯೇ ಆಗಬೇಕೆಂದೇನೂ ಇಲ್ಲ. ನಿಮ್ಮ ಮಗನಿಗೂ ಪೋಲಿಸ್ ಅಧಿಕಾರಿಯಾಗಿ ಸಮಾಜಸೇವೆ ಮಾಡಬೇಕೆಂಬ ಆಸೆ ಇದ್ದರೆ ಅದು ಉತ್ತಮ.

ಐ.ಪಿ.ಎಸ್. ತೆಗೆದುಕೊಳ್ಳುವ ಮೊದಲು ಬಿ.ಇ. ಮುಗಿಸಿರಬೇಕು. ಯಾವುದೇ ವಿಭಾಗದಲ್ಲಿ ಪದವಿಯನ್ನು ಪಡೆದವರು ಈ ಪರೀಕ್ಷೆಯನ್ನು ತೆಗೆದುಕೊಳ್ಳ ಬಹುದು. ಈ ಪರೀಕ್ಷೆಗೆ ತರಬೇತಿ ನೀಡಲು ಹಲವಾರು ಮಾರ್ಗದರ್ಶಿ ಪುಸ್ತಕಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಈಗಿನಿಂದಲೇ ಓದುತ್ತಿರಬೇಕು. ಈ ಅಭ್ಯಾಸ ಮಾಡುತ್ತಿರುವುದು ಒಳ್ಳೆಯದು. ಜೊತೆಗೆ ಅವನು ಈಗ ಓದುತ್ತಿರುವ ಬಿ.ಇ. ಪರೀಕ್ಷೆಗಳಲ್ಲೂ ಉತ್ತಮ ಅಂಕಗಳನ್ನು ಪಡೆಯುವುದೂ ಮುಖ್ಯ

ರಕ್ಷಿತ, ಬೆಂಗಳೂರು
ನಾನು ಈಗ ಮೂರನೇ ವರ್ಷದ ಬಿ.ಎಸ್ಸಿ. ಪದವಿಯನ್ನು ಮುಗಿಸುವವಳಿದ್ದೇನೆ. ಮುಂದೆ ಯಾವ ಕೋರ್ಸ್ ಮಾಡಿದರೆ ಉತ್ತಮ? ನನಗೆ ಎಂ.ಎಸ್ಸಿ. ಗಣಿತ ಮತ್ತು ರಸಾಯನಶಾಸ್ತ್ರ ಮಾಡಲು ಇಷ್ಟವಿದೆ.  ಆದರೆ ಇದಕ್ಕೆ ಉದ್ಯೋಗಾವಕಾಶಗಳು ಕಡಿಮೆ ಎನ್ನುತ್ತಾರೆ. ಎಂ.ಬಿ.ಎ/ಎಂ.ಸಿ.ಎ. ಮಾಡಿದರೆ ಉತ್ತಮವೋ? ಅಂತೆಯೇ ಕೆ.ಇ.ಎ. ನಡೆಸುವ ಸಿ.ಮ್ಯಾಟ್ ಕುರಿತಾಗಿಯೂ ಸೂಕ್ತ ಮಾಹಿತಿ ಒದಗಿಸಿಕೊಡಿ.

- ಉದ್ಯೋಗಾವಕಾಶಗಳ ಬಗ್ಗೆ ವಿದ್ಯಾಭ್ಯಾಸದ ಸಮಯದಲ್ಲಿ ಯೋಚನೆ ಮಾಡುವುದು ಅನಗತ್ಯ. ಯಾವುದೇ ವಿಭಾಗದಲ್ಲಾದರೂ ಶ್ರದ್ಧೆಯಿಂದ ಓದಿ ಹೆಚ್ಚಿನ ಪರಿಣತಿಯನ್ನು ಗಳಿಸಿದರೆ ಉದ್ಯೋಗ ಸಾಧ್ಯ. ಪರಿಣತಿ ಪಡೆಯಲು ನಮಗೆ ಇಷ್ಟವಾದ ವಿಷಯವನ್ನು ಅಧ್ಯಯನಕ್ಕೆ ಆರಿಸಿಕೊಳ್ಳುವುದು ಮುಖ್ಯ. ಗಣಿತಶಾಸ್ತ್ರದಲ್ಲಿ ಎಂ.ಎಸ್ಸಿ. ಮಾಡಿದರೆ ಅಧ್ಯಾಪಕ ವೃತ್ತಿಗೆ ಸೇರಬಹುದು.ಸಂಶೋಧನಾ ಸಹಾಯಕರಾಗಿ ರಾಷ್ಟ್ರಮಟ್ಟದ ಸಂಶೋಧನಾ ಸಂಸ್ಥೆಗಳಲ್ಲಿ  ಉದ್ಯೋಗ ಪಡೆಯಬಹುದು.

ರಸಾಯನಶಾಸ್ತ್ರದಲ್ಲಿ ಎಂ.ಎಸ್ಸಿ. ಮಾಡಿದರೆ ಅಧ್ಯಾಪಕ ವೃತ್ತಿಯೂ ಸಾಧ್ಯ. ಇಲ್ಲದಿದ್ದರೆ ರಾಸಾಯನಿಕ ಉದ್ಯಮಗಳಲ್ಲಿ ಉದ್ಯೋಗಮಾಡಹುದು. ಶುದ್ಧ ವಿಜ್ಞಾನ ಕ್ಷೇತ್ರದಲ್ಲಿ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ವಿಪುಲವಾಗಿವೆ. ಆದ್ದರಿಂದ ಬೇರೆಯವರ ಮಾತಿಗೆ ತಲೆಕೆಡಿಸಿಕೊಳ್ಳದೆ ನೀವು ರಸಾಯನಶಾಸ್ತ್ರ ಅಥವಾ ಗಣಿತದಲ್ಲಿ ಎಂ.ಎಸ್ಸಿ. ಮಾಡಿ.

ಸೌಜನ್ಯ
ನಮ್ಮ ಮಗಳನ್ನು ದೂರದ ಊರಿನಲ್ಲಿ ಪಿ.ಯು.ಸಿ. ಓದಿಸುತ್ತಿದ್ದೇವೆ. ಈಗ ಪ್ರಥಮ ವರ್ಷ ಮುಗಿದಿದೆ. ಅವಳಿಗೆ ಅಲ್ಲಿಯ ವಾತಾವರಣ ಹೊಂದುತ್ತಿಲ್ಲ. ಆರೋಗ್ಯ ತಪ್ಪುತ್ತಿರುತ್ತದೆ. ಊರಿಗೆ ಹತ್ತಿರದ ಕಾಲೇಜಿಗೆ ದ್ವಿತೀಯ ವರ್ಷಕ್ಕೆ ಸೇರಿಸಬೇಕೆಂದು ಕೊಂಡಿದ್ದೇವೆ. ಇದಲ್ಲದೆ ಅವಳಿಗೆ ಬಿ.ಎಸ್ಸಿ.ಎಜಿ ಮಾಡಿಸಬೇಕಾದರೆ ಏನು ಮಾಡಬೇಕು?

–‘ದೂರದ ಬೆಟ್ಟ ನುಣ್ಣಗೆ’ ಎಂಬ ಗಾದೆಯಂತೆ ಹತ್ತಿರದ ವಿದ್ಯಾಸಂಸ್ಥೆಗಳಿಗಿಂತ ದೂರದ ವಿದ್ಯಾಸಂಸ್ಥೆಗಳು ಆಕರ್ಷಕವಾಗಿ ಕಾಣುತ್ತವೆ. ಇದು ವಾಸ್ತವವೇ ಆದರೂ ಅದು ನಮ್ಮ ಮಕ್ಕಳಿಗೆ ಸೂಕ್ತವೇ ಎಂದು ವಿಮರ್ಶಿಸಿಕೊಳ್ಳಬೇಕು.  ಮಕ್ಕಳು ಆರೋಗ್ಯವಾಗಿರುವುದು ಮತ್ತು ಸಂತೋಷಕರವಾಗಿರುವುದು ವಿದ್ಯಾಭ್ಯಾಸಕ್ಕೆ ತುಂಬಾ ಅಗತ್ಯ. ಹತ್ತಿರದ ಶಾಲೆಯಲ್ಲಿಯೇ ಅಧ್ಯಾಪಕರ ಮಾರ್ಗದರ್ಶನದಲ್ಲಿ ಮತ್ತು ಮಾರ್ಗದರ್ಶಿ ಪುಸ್ತಕಗಳ ಸಹಾಯದಿಂದ ಅವಳು ಒಳ್ಳೆಯ ಅಂಕ ಗಳಿಸಬಹುದು. ಕೃಷಿ ವಿಶ್ವವಿದ್ಯಾಲಯಕ್ಕೆ ಸೇರಿಕೊಳ್ಳಲು ಈಗ ಸಿ.ಇ.ಟಿ. ಅಂಕಗಳನ್ನೇ ಪರಿಗಣಿಸಲಾಗುತ್ತದೆ. ಹಾಗಾಗಿ ಬೋರ್ಡ್ ಮತ್ತು ಸಿ.ಇ.ಟಿ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯಲು ಪ್ರಯತ್ನಿಸಲಿ.

ಜರ್ನಾದನ ರಾಥೋಡ್, ರಾಯಚೂರು
ನಾನು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ. ಕುವೆಂಪು ವಿಶ್ವ ವಿದ್ಯಾಲಯದಿಂದ ಬಿ.ಎಸ್ಸಿ. ಪದವಿ ಪಡೆದಿದ್ದೇನೆ. ಕೆ.ಎಸ್.ಒ.ಯು.ನಲ್ಲಿ ಬಿ.ಎಡ್‌ ಮಾಡುತ್ತಿದ್ದು ಮುಗಿಯುವ ಹಂತದಲ್ಲಿದೆ. ಇದರ  ಜೊತೆಗೆ ಕುವೆಂಪು ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ. ರಸಾಯನವನ್ನು ಬಾಹ್ಯವಾಗಿ ಮಾಡಬೇಕೆಂದುಕೊಂಡಿದ್ದೇನೆ. ಇದು ಸಾಧ್ಯವೇ?

– ಶಿಕ್ಷಕರು ತಾವು ಹೊಂದಿರುವ ಜ್ಞಾನದಲ್ಲೇ ತೃಪ್ತರಾಗದೆ ನಿರಂತರ ಅಧ್ಯಯನದಲ್ಲಿ ತೊಡಗಿ ಮೇಲು ಮೇಲಿನ ಸ್ತರಗಳಿಗೆ ಹೋಗುವ ಪ್ರಯತ್ನವನ್ನು ಮಾಡುತ್ತಿರಬೇಕು. ನೀವು ಕುವೆಂಪು ವಿಶ್ವವಿದ್ಯಾಲಯದ ಮುಖಾಂತರ ರಸಾಯನಶಾಸ್ತ್ರದಲ್ಲಿ ಅಂಚೆ ಶಿಕ್ಷಣದ ಮೂಲಕ ಎಂ.ಎಸ್ಸಿ. ಮಾಡಬಹುದು. ಈ ಬಗ್ಗೆ ವಿಶ್ವವಿದ್ಯಾಲಯವನ್ನು ಸಂಪರ್ಕಿಸಿ ವಿವರಗಳನ್ನು ಪಡೆದುಕೊಳ್ಳಿ.

ರೋಹಿತ್ ಕುಲಕರ್ಣಿ, ಲಿಂಗಸೂರು, ರಾಯಚೂರು ಜಿಲ್ಲೆ.
ನಾನು ಅಂತಿಮ ವರ್ಷದ ಡಿಪ್ಲೊಮಾ ಮೆಕ್ಯಾನಿಕಲ್ ಓದುತ್ತಿದ್ದೇನೆ. ಆರ್ಥಿಕ ಪರಿಸ್ಥಿತಿಯಿಂದಾಗಿ ರೆಗ್ಯುಲರ್ ಬಿ.ಇ.ಗೆ ಸೇರಲು ಸಾಧ್ಯವಿಲ್ಲ. ಸಂಜೆ ಅಥವಾ ಮುಕ್ತ ವಿಶ್ವವಿದ್ಯಾಲಯದಲ್ಲಿ ಮಾಡಬೇಕು. ಆದರೆ ಇದಕ್ಕೆ ಸರಿಯಾದ ಬೆಲೆ ಇಲ್ಲ ಎನ್ನುತ್ತಾರೆ. ಜೊತೆಗೆ ಸಂಜೆ ಕಾಲೇಜಿಗೆ ಪ್ರವೇಶ ಪಡೆಯಲು ಎರಡು ವರ್ಷದ ಅನುಭವ ಬೇಕು ಎನ್ನುತ್ತಾರೆ ಏನು ಮಾಡಬೇಕು?

–ಡಿಪ್ಲೊಮಾ ವಿದ್ಯಾಭ್ಯಾಸದ ನಂತರ ನೀವು ಖಂಡಿತಾ ಬಿ.ಇ. ಮಾಡಬಹುದು. ನೀವು ಡಿಪ್ಲೊಮಾ ನಂತರ ಉದ್ಯೋಗದಲ್ಲಿದ್ದು ಕೊಂಡೇ ಸಂಜೆ ಕಾಲೇಜಿನಲ್ಲಿ ಬಿ.ಇ. ಮಾಡಬಹುದು. ಇಂತಹ ಬಿ.ಇ.ಗೆ ಬೆಲೆಯಿಲ್ಲ ಎಂಬುದು ಅರ್ಥ ಇಲ್ಲದ ಮಾತು. ಯಾವ ಪದವಿಗೂ ತನ್ನಿಂದ ತಾನೇ ಬೆಲೆ ಬರುವುದಿಲ್ಲ. ಪದವಿಯ ಜೊತೆ ಗಳಿಸಬೇಕಾದ ವಿದ್ಯೆ ಮತ್ತು ಪರಿಣತಿಯನ್ನು ಪಡೆಯದಿದ್ದರೆ ಎಲ್ಲ ಪದವಿಗಳೂ ವ್ಯರ್ಥವೇ.  ಸರ್ಕಾರಿ ಉದ್ಯೋಗಗಳಿಗಿಂತ ಖಾಸಗಿ ಉದ್ಯೋಗಗಳೇ ಹೆಚ್ಚಾಗಿರುವ ಈ ದಿನಗಳಲ್ಲಿ  ಪದವಿಯ ಜೊತೆ ಗಳಿಸಿರುವ ವಿದ್ಯೆಯೇ ಮುಖ್ಯ.

ವಿಜಯ್ ಭಾರದ್ವಾಜ
ನಾನು 2002ರಲ್ಲಿ ಬಿ.ಇ. (ಐ.ಎಸ್.ಇ) ಪದವಿ ಮುಗಿಸಿದ್ದೇನೆ. ನಾನು ಸರ್ಕಾರಿ ಕೆಲಸವನ್ನು ಅರಸುತ್ತಿದ್ದೇನೆ. ಕಾರಣಾಂತರಗಳಿಂದ ನನಗೆ ಇಷ್ಟವಾದ ವೈಮಾನಿಕ ತಂತ್ರಜ್ಞಾನ ವಿಭಾಗದಲ್ಲಿ ಓದಲಾಗಲಿಲ್ಲ. ಈಗ ಬೇರೆ ಉದ್ಯೋಗದಲ್ಲಿ ಆಸಕ್ತಿ ಇಲ್ಲದಾಗಿದೆ. ಈಗ ನಾನು ವೈಮಾನಿಕ ತಂತ್ರಜ್ಞಾನ ಕ್ಷೇತ್ರಕ್ಕೆ ಹೋಗಬೇಕಾದರೆ ಏನು ಮಾಡಬೇಕು? ಅದರಲ್ಲಿ ವಿದ್ಯಾಭ್ಯಾಸ ಹೇಗೆ ಮುಂದುವರೆಸಬಹುದು?

– ವೈಮಾನಿಕ ತಂತ್ರಜ್ಞಾನ ನಿಮಗೆ ಇಷ್ಟವಾದ ವಿಷಯವಾಗಿದ್ದರೆ ನೀವು ಬಿ.ಇ. ಮಾಡುವಾಗಲೇ ಮೆಕಾನಿಕಲ್ ಅಥವಾ ಏರೋನಾಟಿಕಲ್ ವಿಭಾಗವನ್ನು ಆರಿಸಿಕೊಳ್ಳಬೇಕಾಗಿತ್ತು. ಈಗ ಗಡಿಯಾರವನ್ನು ಹಿಂದಕ್ಕೆ ತಿರುಗಿಸಲಾಗುವುದಿಲ್ಲ. ಮಿಂಚಿಹೋದ ವಿಚಾರಕ್ಕೆ ಚಿಂತಿಸಿ ಫಲವಿಲ್ಲ. ಈಗ ನೀವು ಓದಿದ ವಿಚಾರದಲ್ಲೇ ಆಸಕ್ತಿ ಬೆಳಸಿಕೊಂಡು ಮುಂದುವರೆಯುವುದು ಬುದ್ಧಿವಂತಿಕೆ. ಏರೋನಾಟಿಕಲ್ಸ್ ವಿಭಾಗದಲ್ಲಿ ಎಂ.ಟೆಕ್. ಮಾಡಲು ಅವಕಾಶ ಸಿಗುತ್ತದೆಯೇ ಎಂದು ಕಾಲೇಜು ಅಥವಾ ವಿಶ್ವವಿದ್ಯಾಲಯದಲ್ಲಿ ವಿಚಾರಿಸಿ. ಅಥವಾ ಏರೋನಾಟಿಕಲ್ ವಿಭಾಗಕ್ಕೆ ಸಂಬಂಧಿಸಿದ ಬೇರೆ ಬೇರೆ ಕ್ಷೇತ್ರಗಳಲ್ಲಿ ಪಿ.ಜಿ.ಡಿಪ್ಲೊಮಾ ಮಾಡಲು ಪ್ರಯತ್ನಿಸಿ.

ಉಷಾಬಾಯಿ, ಬಳ್ಳಾರಿ
ನಾನು ಬಿ.ಎಸ್ಸಿ. (ಪಿ.ಸಿ.ಎಂ.) ಓದುತ್ತಿದ್ದೇನೆ. ಮುಂದೆ ಭೌತಶಾಸ್ತ್ರದಲ್ಲಿ ಎಂ.ಎಸ್ಸಿ. ಮಾಡಬೇಕೆಂದುಕೊಂಡಿದ್ದೇನೆ. ಎಂ.ಎಸ್ಸಿ. ನಂತರ ಅಧ್ಯಾಪಕ ವೃತ್ತಿ ಬಿಟ್ಟು, ಫ್ಯಾಕ್ಟರಿ ಮತ್ತು ಸ್ವಯಂ ವೃತ್ತಿಯಲ್ಲಿ ಅಥವಾ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಅವಕಾಶಗಳಿವೆಯೇ? 

–ನಿಮ್ಮ ಗುರಿಯಲ್ಲಿ ಸ್ಪಷ್ಟತೆ ಕಾಣುತ್ತಿಲ್ಲ. ನಿಮಗೆ ಭೌತಶಾಸ್ತ್ರದಲ್ಲಿ ಬಹಳ ಆಸಕ್ತಿ ಇದ್ದರೆ ಮುಂದೆ ಅಧ್ಯಾಪಕರಾಗಬಹುದು ಅಥವಾ ಭೌತಶಾಸ್ತ್ರದಲ್ಲಿ ಸಂಶೋಧನೆ ಕೈಗೊಳ್ಳಬಹುದು. ನಿಮಗೆ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಆಸಕ್ತಿ ಇದ್ದರೆ ಬಿ.ಎಸ್ಸಿ. ನಂತರ ಎಂ.ಸಿ.ಎ ಮಾಡುವುದು ಒಳ್ಳೆಯದು. ಇದೆಲ್ಲಕ್ಕೂ ಮೊದಲು ನಿಮ್ಮ ನಿರ್ದಿಷ್ಟ ಗುರಿಯನ್ನು ಖಚಿತ ಪಡಿಸಿಕೊಂಡು ಮುಂದುವರೆಯಿರಿ. ಶುಭವಾಗಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT