ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆ– ಉತ್ತರ

ವಿಷ್ಣುಪ್ರಿಯ, ಬೆಂಗಳೂರು
ನಾನು ದ್ವಿತೀಯ ಪಿ.ಯು.ಸಿ. ಓದುತ್ತಿದ್ದೇನೆ. ನನಗೆ ಮುಂದೆ ಶುದ್ಧ ವಿಜ್ಞಾನದಲ್ಲಿ ಮುಂದುವರೆಯಬೇಕೆಂಬ ಹಂಬಲ ಇದೆ. ಆದರೆ ಅದು ಹೇಗೆ? ಎಲ್ಲಿ ಯಾವ ಕಾಲೇಜು? ಯಾವ ವಿಭಾಗ ಸೂಕ್ತ? ಅದಕ್ಕೆ ಉದ್ಯೋಗಾವಕಾಶಗಳು ಹೇಗಿವೆ? ಎಷ್ಟು ಹಣ ಖರ್ಚಾಗಬಹುದು?

–ಶುದ್ಧ ವಿಜ್ಞಾನದಲ್ಲಿ ನಿಮಗೆ ಆಸಕ್ತಿ ಇರುವುದನ್ನು ತಿಳಿದು ಸಂತೋಷವಾಯಿತು. ನೀವು ಪಿ.ಯು. ನಂತರ ಯಾವುದಾದರೂ ಉತ್ತಮ ಕಾಲೇಜಿನಲ್ಲಿ ಬಿ.ಎಸ್ಸಿ. ಕೋರ್ಸಿಗೆ ಸೇರಿಕೊಂಡು ನಂತರ ಎಂ.ಎಸ್ಸಿ ಮಾಡಬೇಕು. ಪಿ.ಯು ಮಾಡುವಾಗಲೇ ಕೆ.ವಿ.ಪಿ.ವೈ ಅಥವಾ ಐ.ಐ.ಟಿ, ಜೆ.ಇ.ಇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗಿ ಉತ್ತಮ ರ್ಯಾಂಕ್‌ ಪಡೆದರೆ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರ ಅಥವಾ ಐ.ಐ.ಎಸ್.ಇ.ಆರ್‌ಗಳಲ್ಲಿ ಶುದ್ಧ ವಿಜ್ಞಾನಕ್ಕೆ ಸಂಬಂಧಪಟ್ಟ ಬಿ.ಎಸ್ ಪ್ರೋಗ್ರಾಂಗೆ ಸೇರಿಕೊಳ್ಳಬಹುದು. ಕೆಲವು ವಿಶ್ವವಿದ್ಯಾಲಯಗಳಲ್ಲಿ ಲಭ್ಯವಿರುವ ಇಂಟಿಗ್ರೇಟೆಡ್ ಎಂ.ಎಸ್ಸಿ ಕೋರ್ಸಿಗೂ ಪಿ.ಯು ನಂತರ ಸೇರಿಕೊಳ್ಳಬಹುದು.

ಜಯಶ್ರೀ
ನಾನು ಎಸ್.ಎಸ್.ಎಲ್.ಸಿ. ಮುಗಿಸಿದ್ದೇನೆ. ಮುಂದೆ ಪಿ.ಯು.ಸಿ. ನಂತರ ಐ.ಐ.ಟಿ./ಎ.ಐ.ಇ.ಇ.ಇ. ಬರೆದು ಏರೋನಾಟಿಕಲ್ ಎಂಜಿನಿಯರ್ ಆಗಬೇಕೆಂಬ ಹಂಬಲ ಇದೆ. ಈ ಪ್ರವೇಶ ಪರೀಕ್ಷೆಗಳಿಗೆ ತಯಾರಿ ಹೇಗೆ ಎಂಬುದನ್ನೂ ತಿಳಿಸಿ ಮಾರ್ಗದರ್ಶನ ಕೊಡಿ?

–ನೀವು ಪಿ.ಯು. ಓದುವಾಗಲೇ ಐ.ಐ.ಟಿ.ಜೆ.ಇ.ಇ ಸ್ಫರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಬೇಕು. ನಿಮ್ಮ ಪಿ.ಯು ಕಾಲೇಜಿನ ಸನಿಹದಲ್ಲಿರುವ ತರಬೇತಿ ಕೇಂದ್ರಗಳಿಂದ ಸೂಕ್ತ ಮಾಹಿತಿ ಪಡೆಯಿರಿ. ದೂರಶಿಕ್ಷಣದ ಮೂಲಕವೂ ಈ ತರಹದ ತರಬೇತಿಗಳು ಲಭ್ಯವಿದೆ. ವೃತ್ತ ಪತ್ರಿಕೆಗಳಿಂದ ಈ ಮಾಹಿತಿ ಪಡೆದು, ಸಿದ್ಧತೆ ಪ್ರಾರಂಭಿಸಿ.

ಕಿರಣ್
ನಾನು ದ್ವಿತೀಯ ಪಿ.ಯು.ಸಿ.ಯನ್ನು 65%ನೊಂದಿಗೆ ಮುಗಿಸಿದ್ದೇನೆ. ಮುಂದೆ ಸಿ.ಎ. ಮಾಡಬೇಕೆಂದಿದ್ದೇನೆ. ಮಾಹಿತಿ ಮತ್ತು ಮಾರ್ಗದರ್ಶನ ಕೊಡಿ

–ಪಿ.ಯು. ವಾಣಿಜ್ಯ ಕೋರ್ಸ್‌ನ್ನು ನೀವು ಮುಗಿಸಿದ್ದರೆ, ಬಿ.ಕಾಂ ಮಾಡುತ್ತಲೇ ನೀವು ಸಿ.ಎ ಪರೀಕ್ಷೆ ತೆಗೆದುಕೊಳ್ಳಬಹುದು. ಇದಕ್ಕೆ ನೀವು ಸಿ.ಎ ಸಂಸ್ಥೆಯಲ್ಲಿ ಪರೀಕ್ಷೆಗೆ ನೊಂದಾಯಿಸಿಕೊಳ್ಳಬೇಕು. ವರ್ಷದಲ್ಲಿ ಜೂನ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಈ ಪರೀಕ್ಷೆ ಇರುತ್ತದೆ. ನೀವು ಅಕ್ಟೋಬರ್ ತಿಂಗಳೊಳಗೆ ನೊಂದಾಯಿಸಿಕೊಂಡರೆ, ಡಿಸೆಂಬರ್ ತಿಂಗಳಲ್ಲಿ ನಡೆಯುವ ಸಿ.ಪಿ.ಟಿ ಪರೀಕ್ಷೆ ಬರೆಯಬಹುದು.

ರಕ್ಷಿತಾ
ನಾನು ಪ್ರಥಮ ಬಿ.ಎಸ್ಸಿ. ಓದುತ್ತಿದ್ದೇನೆ. ಈಗ ಯಾವುದಾದರೂ ಕಂಪ್ಯೂಟರ್ ತರಬೇತಿ ಪಡೆಯಬೇಕೆಂದಿದ್ದೇನೆ. ಸೂಕ್ತ ಮಾರ್ಗದರ್ಶನ ಕೊಡಿ?

–ಯಾವ ಐಚ್ಛಿಕ ವಿಷಯಗಳೊಂದಿಗೆ ನೀವು ಬಿ.ಎಸ್ಸಿ ಅಧ್ಯಯನ ಮಾಡುತ್ತಿರುವಿರಿ ಎಂದು ತಿಳಿಸಿಲ್ಲ. ಗಣಕ ವಿಜ್ಞಾನ ನಿಮ್ಮ ಅಧ್ಯಯನದ ವಿಷಯವಾಗಿರದಿದ್ದರೆ, ನೀವು ಖಾಸಗಿ ಕಂಪ್ಯೂಟರ್ ಕೇಂದ್ರಗಳಿಗೆ ಹೋಗಿ ಕೆಲವು ಕಂಪ್ಯೂಟರ್ ಕೋರ್ಸುಗಳನ್ನು ಮಾಡಿಕೊಳ್ಳುವುದು ಒಳ್ಳೆಯದು. ಈ ಕಾಲದಲ್ಲಿ ಎಲ್ಲ ವಿದ್ಯೆಗಳನ್ನು ಕಲಿತೂ, ಕಂಪ್ಯೂಟರ್ ವಿದ್ಯೆಯನ್ನು ಸ್ವಲ್ಪವಾದರೂ ಕಲಿಯದಿದ್ದರೆ ಅನಕ್ಷರಸ್ಥನ ಹಾಗೇ ಸರಿ. ಆದ್ದರಿಂದ ನಿಮ್ಮ ಓದಿನ ಜೊತೆಯಲ್ಲಿಯೇ ಕಂಪ್ಯೂಟರ್ ಜ್ಞಾನವನ್ನು ಗಳಿಸುವುದು ಒಳ್ಳೆಯದು.

ಬಾಲಾಜಿ
ನಾನು 2007ರಲ್ಲಿ ಡಿಪ್ಲೊಮಾ ಮುಗಿಸಿದೆ. ನಂತರ ಬಿ.ಇ. ಸೇರಿದೆ. ಆದರೆ ಮುಗಿಸಲು ಸಾಧ್ಯವಾಗಲಿಲ್ಲ. ನಂತರ ಪೆರಿಯಾರ್ ವಿಶ್ವವಿದ್ಯಾಲಯದಿಂದ ದೂರಶಿಕ್ಷಣದ ಮೂಲಕ ಒಂದು ವರ್ಷದಲ್ಲಿ ಬಿ.ಸಿ.ಎ. ಮುಗಿಸಿ ಪದವಿ ಪಡೆದಿದ್ದೇನೆ. ಇದಕ್ಕೆ ಮಾನ್ಯತೆ ಇದೆಯೇ? ನಾನು ಸರ್ಕಾರಿ ಕೆಲಸಗಳಿಗೆ ಅರ್ಜಿ ಸಲ್ಲಿಸಬಹುದೇ? 

–ಸರ್ಕಾರಿ ಕೆಲಸಗಳಿಗೆ ಮೂರು ವರ್ಷದ ಪದವಿ ಶಿಕ್ಷಣ ಅಗತ್ಯ. ಜೊತೆಗೆ ಪದವಿ ನೀಡುವ ವಿಶ್ವವಿದ್ಯಾಲಯ ಯು.ಜಿ.ಸಿಯಿಂದ ಮಾನ್ಯತೆ ಪಡೆದಿರಬೇಕು. ಹೀಗಿಲ್ಲದಿದ್ದರೂ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗಕ್ಕೆ ತೊಂದರೆಗಳಿಲ್ಲ. ಖಾಸಗಿ ಕ್ಷೇತ್ರದಲ್ಲಿ ನಿಮ್ಮ ಡಿಗ್ರಿಗಿಂತ ನೀವು ಸಂಪಾದಿಸುವ ಜ್ಞಾನ ಮತ್ತು ಕೌಶಲ್ಯಕ್ಕೆ ಮಾನ್ಯತೆ ಹೆಚ್ಚು. ಉದ್ಯೋಗಗಳೂ ಖಾಸಗಿ ಕ್ಷೇತ್ರದಲ್ಲಿಯೇ ಜಾಸ್ತಿ. ಆದ್ದರಿಂದ ಸರ್ಕಾರಿ ಕ್ಷೇತ್ರದ ಉದ್ಯೋಗಕ್ಕೆ ನೀವು ಅರ್ಹರಾಗುತ್ತೀರೋ ಇಲ್ಲವೋ ಎಂಬ ಭಯ ಬೇಡ.

ಫಣಿರಾಜ್, ಹೊಸಪೇಟೆ
ನಾನು ಇಲೆಕ್ಟ್ರಿಕಲ್ ಡಿಪ್ಲೊಮಾ 6ನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದೇನೆ. ಇದುವರೆಗೂ ಪಡೆದ ಶೇಕಡಾವಾರು ಅಂಕಗಳು 72%. ಮುಂದೆ ಡಿಪ್ಲೊಮಾ ನಂತರ ದೈನಂದಿನ ತರಗತಿಗಳಿಗೆ ಹೋಗಿ ಬಿ.ಇ. ಪಡೆಯಲು ಸಾಧ್ಯವಿಲ್ಲ. ಆದರೆ ನಾನು ಸಂಜೆ ಕಾಲೇಜಿನಲ್ಲಿ ಓದಬಹುದೇ? ಇದಕ್ಕೆ ಸಿ.ಇ.ಟಿ. ಬರೆಯಬೇಕೆ?

–ಡಿಪ್ಲೊಮಾನಲ್ಲಿ ಉತ್ತಮ ಅಂಕಗಳನ್ನು ನೀವು ಗಳಿಸುತ್ತಿರುವುದು ಸಂತೋಷದ ವಿಷಯ. ಡಿಪ್ಲೊಮಾ ನಂತರ ನೀವು ಸಂಜೆ ಕಾಲೇಜಿನಲ್ಲಿ ಬಿ.ಇ ಮಾಡಬಹುದು. ಈ ಅನುಕೂಲ ಇರುವ ನಗರದಲ್ಲಿ ನೀವು ಡಿಪ್ಲೊಮಾ ನಂತರ ಉದ್ಯೋಗಕ್ಕೆ ಸೇರಿಕೊಳ್ಳಬೇಕು. ಒಂದು ವರ್ಷದ ಕೆಲಸದ ಅನುಭವ ಪಡೆದ ನಂತರ ನಿಮ್ಮ ಡಿಪ್ಲೊಮಾ ಅಂಕಗಳ ಆಧಾರದ ಮೇಲೆ ಸಂಜೆ ಕಾಲೇಜಿಗೆ ಸೇರಬಹುದು. ಇದಕ್ಕೆ ಪುನಃ ಸಿ.ಇ.ಟಿ. ಬರೆಯುವ ಅಗತ್ಯವಿಲ್ಲ.

ಪ್ರೇಮಾಶ್ರೀ ಬಿ.ಸಿ., ಭದ್ರಾವತಿ
ನಾನು ಬಿ.ಎಸ್ಸಿ. ಪದವಿಯ ಮೊದಲ ಎರಡು ವರ್ಷಗಳನ್ನು ಪೂರ್ಣಗೊಳಿಸಿದ್ದು ಮೂರನೇ ವರ್ಷದಲ್ಲಿ ಫೇಲಾಗಿದ್ದೇನೆ. 5ನೇ ಸೆಮಿಸ್ಟರ್‌ನ ಒಂದು ವಿಷಯವನ್ನು ಮೂರು ಬಾರಿ ಬರೆದರೂ ಇನ್ನೂ ಪಾಸಾಗಿಲ್ಲ. ಪದವಿ ಕಾಲಾವಕಾಶದ ಮಿತಿ ಗೊತ್ತಿಲ್ಲ. ಈ ವಿಚಾರವಾಗಿ ಕಾಲೇಜಿನಲ್ಲಿ ಕೇಳಿದರೆ ಪರೀಕ್ಷೆಯ ಸಂದರ್ಭದಲ್ಲೇ ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಗುವುದು ಅದರ ಮುಂಚೆ ತಿಳಿಸಲಾಗದು ಎನ್ನುತ್ತಿದ್ದಾರೆ. ಈ ಬಗ್ಗೆ ತುಂಬಾ ಗೊಂದಲದಲ್ಲಿದ್ದೇನೆ. ಮಾರ್ಗದರ್ಶನ ಕೊಡಿ?

–ನಿಮ್ಮ ವ್ಯಥೆಯ ಕತೆ ಕೇಳಿ ನೋವಾಗುತ್ತಿದೆ. ನೀವು ಹೇಗಾದರೂ ಬಿ.ಎಸ್ಸಿ ಮುಗಿಸುವುದು ಅತಿ ಅಗತ್ಯ. ನೀವು ಮೂರು ಬಾರಿ ಒಂದೇ ವಿಷಯದಲ್ಲಿ ಏಕೆ ಅನುತ್ತೀರ್ಣರಾಗಿದ್ದೀರಿ ಎಂಬುದನ್ನು ಸಮರ್ಪಕವಾಗಿ ವಿಶ್ಲೇಷಿಸಿ ಉತ್ತರ ಕಂಡುಕೊಳ್ಳಿ.
ಈ ವಿಷಯವನ್ನು ಪೂರ್ಣ ಅರ್ಥಮಾಡಿಕೊಳ್ಳಲು ನಿಮಗೆ ಏಕೆ ಸಾಧ್ಯವಾಗುತ್ತಿಲ್ಲ? ಪರೀಕ್ಷೆ ಪಾಸು ಮಾಡಲು ಮಾತ್ರ ಈ ವಿಷಯವನ್ನು ಅಧ್ಯಯನ ಮಾಡುತ್ತಿದ್ದೀರೋ ಹೇಗೆ? ಪರೀಕ್ಷೆಯಲ್ಲಿ ಶೇಕಡಾ 35ಅಂಕಗಳಿಸುವ ಸಂಕುಚಿತ ದೃಷ್ಠಿಯಿಂದ ಓದಿದರೆ ಹೀಗಾಗಬಹುದು. ಉತ್ತಮ ಪುಸ್ತಕಗಳ ಸಹಾಯದಿಂದ ಈ ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಂಡು ಪ್ರೀತಿಯಿಂದ ಓದಿ. ಉತ್ತಮ ಅಧ್ಯಾಪಕರ ಸಲಹೆಯನ್ನು ತೆಗೆದುಕೊಳ್ಳಿ ಸಕಾರಾತ್ಮಕವಾದ ಯೋಚನೆಯೊಂದಿಗೆ ಮುಂದಿನ ಪರೀಕ್ಷೆಯನ್ನು ಎದುರಿಸಿ. ನಿಮಗೆ ಖಂಡಿತಾ ಯಶಸ್ಸು ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT