ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆ–ಉತ್ತರ

Last Updated 26 ಜನವರಿ 2014, 19:30 IST
ಅಕ್ಷರ ಗಾತ್ರ

ಎಸ್. ಚೇತನ್, ಗದ್ದೆ ಕಣ್ಣೂರು, ತಮಕ ಕೋಲಾರ
ನಾನು ಎಸ್ಸೆಸೆಲ್ಸಿಯಲ್ಲಿ ಶೇ ೮೧ ಅಂಕ ಗಳಿಸಿ ಈಗ ಪ್ರಥಮ ಪಿಯುಸಿ ವಿಜ್ಞಾನ ಓದುತ್ತಿದ್ದೇನೆ. ನಾವು ತುಂಬಾ ಬಡವರಾಗಿದ್ದು, ಓದು ಮುಂದುವರಿಸಲು ಕಷ್ಟವಾಗಿದೆ. ಆದ್ದರಿಂದ ಸಂಪೂರ್ಣ ಉಚಿತವಾಗಿ ಶಿಕ್ಷಣ ನೀಡುವ ಸಂಸ್ಥೆಗಳ ಬಗ್ಗೆ ತಿಳಿಸಿ. ಸ್ಕಾಲರ್‌ಶಿಪ್ ಸಿಗಲು ಪರೀಕ್ಷೆ ಬರೆಯಬೇಕೆ? ಕಾಲೇಜುಗಳು ದತ್ತು ತೆಗೆದುಕೊಳ್ಳುತ್ತವೆಯೇ? ಹಾಗೆಯೇ ನೆಸ್ಟ್ ಬಗ್ಗೆಯೂ ತಿಳಿಸಿ.
–ಪ್ರತಿಭಾವಂತ ಮಕ್ಕಳಿಗೆ ಸರ್ಕಾರ, ಸಂಘ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು ಹೆಚ್ಚು ನೆರವು ನೀಡುತ್ತಿವೆ. ಸರ್ಕಾರಿ ಪಿಯುಸಿ ಕಾಲೇಜುಗಳಲ್ಲಿ ಹೆಚ್ಚು ಕಡಿಮೆ ಉಚಿತ ಶಿಕ್ಷಣ ದೊರಕುತ್ತಿದೆ. ಇವಲ್ಲದೇ ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಉಚಿತ ಹಾಸ್ಟೆಲ್ ವ್ಯವಸ್ಥೆ ಇದೆ. ನೀವು ವಿಜ್ಞಾನದಲ್ಲಿ ಆಸಕ್ತಿ ಹೊಂದಿದ್ದು, ಹೇಗಾದರೂ ಪಿಯುಸಿ ಮುಗಿಸಿಕೊಂಡು ಸರ್ಕಾರಿ ಕೋಟಾದಲ್ಲಿ ಸೀಟು ಪಡೆದುಕೊಂಡಲ್ಲಿ ಓದು ಮುಂದುವರಿಸುವುದು ಸುಲಭವಾಗುತ್ತದೆ.  ಸಾಧಾರಣ ಸ್ಕಾಲರ್ ಶಿಪ್‌ಗೆ ಕೆಲವು ವಿಶೇಷ ಸಂದರ್ಭಗಳನ್ನು ಹೊರತು ಪಡಿಸಿ, ಪರೀಕ್ಷೆಗಳನ್ನು ನಡೆಸುವ ರೂಢಿ ಕಡಿಮೆ.  ಶುದ್ಧ ವಿಜ್ಞಾನದಲ್ಲಿ ಪ್ರತಿಭಾವಂತರನ್ನು ಸೆಳೆಯುವ ಆಯ್ಕೆ ಪರೀಕ್ಷೆ ‘ನೆಸ್ಟ್’ (ನ್ಯಾಷನಲ್ ಎಂಟ್ರೆನ್ಸ್ ಸ್ಕ್ರೀನಿಂಗ್ ಟೆಸ್ಟ್) ಇದರಲ್ಲಿ ಐದು ವರ್ಷದ ಎಂ.ಎಸ್ಸಿ ಕೋರ್ಸಿಗೆ ಆಯ್ಕೆ ನಡೆಯುತ್ತದೆ. ಆಯ್ಕೆಯಾದವರಿಗೆ ಸ್ಕಾಲರ್‌ಶಿಪ್ ಹಾಗೂ ಪ್ರಾಜೆಕ್ಟ್‌ಗೆ ಧನ ಸಹಾಯ ಸಿಗುತ್ತದೆ. ಬೆಂಗಳೂರಿನ ಐಐಎಸ್‌ಸಿ ನಲ್ಲಿ ಸಹ ಇಂತಹದೇ ಸೌಲಭ್ಯವಿದೆ. ಹೆಚ್ಚಿನ ವಿವರಗಳನ್ನು ವೆಬ್‌್್ ಸೈಟ್ ಮೂಲಕ ಪಡೆಯಬಹುದು.

ಕಿಷನ್, ಬೆಂಗಳೂರು
ನಾನು ಬಿ.ಕಾಂ. ಪದವಿ ಮುಗಿಸಿದ್ದು, ಸಿಎ ಐಪಿಸಿಸಿಗೆ ಪ್ರವೇಶ ಪಡೆದಿದ್ದೇನೆ. ಈಗ ನಾನು ಚಾರ್ಟರ್ಡ್ ಅಕೌಂಟೆಂಟ್ ಬಳಿ ಮೂರು ವರ್ಷ ಕೆಲಸ ಮಾಡಬೇಕಾಗಿದೆ. ಇದಕ್ಕೆ ಇರಬೇಕಾದ ಜ್ಞಾನ, ಕೌಶಲ, ಅರ್ಹತೆಗಳೇನು ಎಂಬುದನ್ನು ತಿಳಿಸಿ.
–ಇತ್ತೀಚಿನ ಸಿಎ ಪರೀಕ್ಷೆಯ ನಿಯಮಾವಳಿಗಳ ಪ್ರಕಾರ ಬಿಕಾಂ ಆದವರು ನೇರವಾಗಿ ಸಿಎ ಬಳಿ ಕೆಲಸ ಮಾಡಲು ಸೇರಿಕೊಳ್ಳಬಹುದು. ಆದರೆ ಇದಕ್ಕೆ ನಿಗದಿಪಡಿಸಿರುವ ಸ್ಟೈಫಂಡ್ ಐಪಿಸಿಸಿ ಪಾಸು ಮಾಡಿದವರಿಗಿಂತ ಕಡಿಮೆ ಇರುತ್ತದೆ. ಇಂತಹ ತರಬೇತಿಗೆ ಸೇರಿಕೊಳ್ಳಬೇಕಾದರೆ ನೀವು ಸಿಎ ಅಥವಾ ಯಾವುದಾದರೂ ಸಿಎ ಕಂಪೆನಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಅವರು ತಮಗೆ ದೊರಕಿರುವ ಟ್ರೈನಿಗಳ ಸಂಖ್ಯೆಯ ಮಿತಿಯೊಳಗೆ ತಮಗೆ ಬೇಕಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸಿಎ ಪರೀಕ್ಷೆ ಸಾಕಷ್ಟು ಕಠಿಣವಾಗಿದ್ದು, ಪರಿಶ್ರಮ ಬಯಸುತ್ತದೆ. ವಿಷಯಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ತರಬೇತಿ ಹೊಂದುವ ಜೊತೆಗೆ, ಪರೀಕ್ಷೆಗೂ ಸಿದ್ಧತೆ ನಡೆಸಬೇಕಾಗುತ್ತದೆ. ತರಬೇತಿ ಅವಧಿಯಲ್ಲಿ ಬೇರೆ ಬೇರೆ ಸಂಸ್ಥೆಗಳಿಗೆ, ಸ್ಥಳಗಳಿಗೆ ಹೋಗಿ ಆಡಿಟ್‌ನಲ್ಲಿ ಭಾಗವಹಿಸ ಬೇಕಾಗುತ್ತದೆ. 

ರವಿ ಕುಮಾರ್, ಚಾಮರಾಜನಗರ
ನಾನು ವೃತ್ತಿಯಲ್ಲಿ ಶಿಕ್ಷಕನಾಗಿದ್ದು, ಚಿತ್ರಕಲೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ. ಚಿತ್ರಕಲೆಗೆ ಸಂಬಂಧಪಟ್ಟಂತೆ ಯಾವುದಾದರೂ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆಯಬಯಸಿದ್ದೇನೆ. ದೂರಶಿಕ್ಷಣದ ಮೂಲಕ ಚಿತ್ರಕಲೆಗೆ ಸಂಬಂಧಪಟ್ಟ ಕೋರ್ಸುಗಳಿದ್ದರೆ ಮಾಹಿತಿ ನೀಡಿ.
–ದೂರಶಿಕ್ಷಣದ ಮೂಲಕ ಚಿತ್ರಕಲೆಯಲ್ಲಿ ಬಿ.ಎಫ್.ಎ ಹಾಗೂ ಎಂ.ಎಫ್.ಎ ಪದವಿಗಳನ್ನು ಪಡೆಯಬಹುದು. ಈ ಸಂದರ್ಭದಲ್ಲಿ ಕಾಂಟ್ಯಾಕ್ಟ್ ಪ್ರೋಗ್ರಾಂಗೆ ಹೋಗಬೇಕಾದ ಅಗತ್ಯವಿದೆ. ಮೈಸೂರಿನಲ್ಲೇ ಈ ಸೌಲಭ್ಯವಿದ್ದು, ಎರಡು ಸಂಸ್ಥೆಗಳು ವಿದ್ಯಾರ್ಥಿಗಳನ್ನು ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಇನ್ನೂ ಅನೇಕ ಕಡೆ ದೂರಶಿಕ್ಷಣಕ್ಕೆ ಅವಕಾಶವಿದೆ.

ಕುಸುಮ, ಹಾಸನ
ನನ್ನ ಮಗ ಎಂ.ಬಿ.ಎ ಮಾಡುತ್ತಿದ್ದು ಕಳೆದ ಮೂರು ಸೆಮಿಸ್ಟರ್‌ಗಳಲ್ಲಿ ಶೇ 60ರಷ್ಟು ಅಂಕ ಗಳಿಸಿದ್ದಾನೆ. ಅವನಿಗೆ ಸರ್ಕಾರಿ ಕೆಲಸ ಸಿಗುತ್ತದೆಯೇ? ಬ್ಯಾಂಕಿನಲ್ಲಿ ಕೆಲಸ ಸಿಗಬಹುದೇ. ಬೇರೆ ಯಾವ ಇಲಾಖೆಯಲ್ಲಿ ಕೆಲಸ ಸಿಗುತ್ತದೆ. ನನ್ನ ಮಗಳು ಬಿಕಾಂ ಮುಗಿಸಿ ಸಿ.ಎಸ್ ಪರೀಕ್ಷೆಗೆ ಬೆಂಗಳೂರಿನಲ್ಲಿ ಕೋಚಿಂಗ್ ಪಡೆಯುತ್ತಿದ್ದಾಳೆ. ಇದು ಸಿಎ ಗಿಂತ ಹೇಗೆ ಭಿನ್ನ. ಒಂದು ವಾರ ಕ್ಲಾಸಿಗೆ ಹೋಗಬೇಕು, ಕಂಪ್ಯೂಟರ್ ಪರೀಕ್ಷೆ ಬರೆಯಬೇಕು ಎನ್ನುತ್ತಾಳೆ. ಅವಳಿಗೆ ಉತ್ತಮ ಭವಿಷ್ಯವಿದೆಯೇ?
– ನಿಮ್ಮ ಮಕ್ಕಳು ತಮಗೆ ಇಷ್ಟವಾದ ಉತ್ತಮ ಕೋರ್ಸುಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರಿಗೆ ಸರ್ಕಾರಿ ಕೆಲಸಕ್ಕಿಂತ ಖಾಸಗಿ ವಲಯದಲ್ಲಿ ಹೆಚ್ಚಿನ ಅವಕಾಶಗಳು ಸಿಗುತ್ತವೆ. ಈಗಿನ ಕಾಲದಲ್ಲಿ ಪ್ರತಿಭಾವಂತರು ಸರ್ಕಾರಿ ಕೆಲಸಕ್ಕಿಂತ ಖಾಸಗಿ ರಂಗದಲ್ಲಿ ಇರಲು ಹೆಚ್ಚಿನ ಆಸಕ್ತಿ ತೋರಿಸುತ್ತಾರೆ.  ಅವರಿಗೆ ಪ್ರೋತ್ಸಾಹ ನೀಡುವುದು ಒಳ್ಳೆಯದು. ಎಂ.ಬಿ.ಎ ಮಾಡಿದವರು ಎಲ್ಲರಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ಹಾಗೂ ಬ್ಯಾಂಕುಗಳಲ್ಲಿಯೂ ಕೆಲಸ ದೊರಕಿಸಿಕೊಳ್ಳಬಹುದು. ಸಿಎಸ್ ಎನ್ನುವುದು ಕಂಪೆನಿ ಸೆಕ್ರೆಟರಿ ಪರೀಕ್ಷೆ. ಸಿಎ ಎನ್ನುವುದು ಚಾರ್ಟರ್ಡ್ ಅಕೌಂಟೆಂಟುಗಳ ಪರೀಕ್ಷೆ. ಸಿಎಸ್ ಮಾಡಿದವರಿಗೆ ದೊಡ್ಡ ಕಂಪೆನಿಗಳಲ್ಲಿ ಕೆಲಸ ಸಿಗುತ್ತದೆ.  ಇವರು ಕಂಪೆನಿ ನಿಯಾವಳಿಗಳ ಬಗ್ಗೆ ಹೆಚ್ಚಿನ ತಿಳಿವಳಿಕೆ ಹೊಂದಿರುತ್ತಾರೆ.  ಈ ತರಬೇತಿ ಅವಧಿಯಲ್ಲಿ ಸಿ.ಆರ್.ಪಿ. ತರಗತಿಗಳು ಕಂಪ್ಯೂಟರ್ ಪರೀಕ್ಷೆ ಎಲ್ಲವೂ ಸಾಮಾನ್ಯ.

ಪಿ.ಎಸ್. ನಾಗರತನ್, ಕೊರಟಗೆರೆ
ನಾನು ಬಿಕಾಂ ವ್ಯಾಸಂಗ ಮಾಡುತ್ತಿದ್ದೇನೆ. ಬ್ಯಾಂಕ್ ಮ್ಯಾನೇಜರ್ ಆಗ ಬಯಸಿದ್ದೇನೆ. ಅದಕ್ಕೆ ಎಂಕಾಂ ಅಧ್ಯಯನ ಮಾಡಬೇಕೇ? ಅಥವಾ ಯಾವುದಾದರೂ ಬ್ಯಾಂಕಿಂಗ್ ಪರೀಕ್ಷೆಯನ್ನು ತೆಗೆದುಕೊಳ್ಳಲೇ? –ನೀವು ಬಿಕಾಂ ಮುಗಿಸಿದ ನಂತರ ಬ್ಯಾಂಕಿನ ಪರೀಕ್ಷೆಗಳನ್ನು ತೆಗೆದುಕೊಳ್ಳುವುದು ಉತ್ತಮ. ಬ್ಯಾಂಕಿನ ಉದ್ಯೋಗಕ್ಕೆ ಆಯ್ಕೆಯಾದಲ್ಲಿ ಅಲ್ಲಿಯೇ ಆಫೀಸರ್ ಆಗಿ ಬಡ್ತಿ ಹೊಂದಲು ಸಾಕಷ್ಟು ಅವಕಾಶಗಳೂ ಇರುತ್ತವೆ. ದೂರಶಿಕ್ಷಣದ ಮೂಲಕ ಎಂ.ಕಾಂ. ಸಹ ಮಾಡಿಕೊಳ್ಳಬಹುದು.

ಅಭಿಷೇಕ್ ಕುಮಾರ್ ಹೆಚ್. ಎಸ್
ಎಸ್ಸೆಸೆಲ್ಸಿ ಮುಗಿಸಿದ ನಂತರ ಅನಿವಾರ್ಯ ಕಾರಣಗಳಿಂದ ಓದು ಮುಂದುವರಿಸಲಾಗಲಿಲ್ಲ. ನನಗೆ ಈಗ 20 ವರ್ಷ. ಬಿ.ಎ ಮಾಡಬೇಕೆಂಬ ಆಸೆ. ಓದಲು ಅವಕಾಶವಿದೆಯೇ? ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕಲು ವಯೋಮಿತಿ ಎಷ್ಟು?
– ನೀವು ಓದು ಮುಂದುವರಿಸಲು ಎಲ್ಲ ಅವಕಾಶಗಳಿವೆ. ರೆಗ್ಯುಲರ್ ಆಗಿ ಸಂಜೆ ಕಾಲೇಜಿನ ಮೂಲಕ ಅಥವಾ ದೂರ ಶಿಕ್ಷಣದ ಮೂಲಕವೂ ಪದವಿ ಪಡೆಯಬಹುದು. ಸರ್ಕಾರಿ ನೌಕರಿಗೆ ಸೇರುವ ವಯಸ್ಸು ಬೇರೆ ಬೇರೆ ವರ್ಗಗಳಿಗೆ ಭಿನ್ನವಾಗಿರುತ್ತದೆ.

ಕಾವ್ಯ, ನಾಗರಹಾಳು, ಕಡೂರು
ನಾನು ಹತ್ತನೇ ತರಗತಿಯನ್ನು ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದೇನೆ. ಪಿಯುಸಿಯಲ್ಲಿ ಏನನ್ನು ಆಯ್ಕೆ ಮಾಡಿಕೊಳ್ಳಲಿ. ಯಾವ ರೀತಿ ಸರ್ಕಾರಿ ಉದ್ಯೋಗ ಪಡೆಯಬಹುದು. ಐಎಎಸ್ ಮಾಡಬೇಕೆಂಬ ಆಸೆ. ಅದಕ್ಕೆ ಯಾವ ರೀತಿ ಓದಬೇಕು?
– ಹತ್ತನೇ ತರಗತಿ ಮುಗಿಸಿದವರಿಗೆ ಆಯ್ಕೆ ಮಾಡಿಕೊಳ್ಳಲು ಅನೇಕ ಕೋರ್ಸುಗಳಿವೆ. ಆದರೆ ಐಎಎಸ್ ಗೆ ಒಂದು ಪದವಿ ಅತ್ಯಗತ್ಯವಾದ್ದರಿಂದ ಪಿಯುಸಿ ಸೇರುವುದು ಒಳ್ಳೆಯದು. ನೀನು ಮುಂದೆ ಸೇರಬಹುದಾದ ಕಾಲೇಜು, ಅಲ್ಲಿರುವ ಅನುಕೂಲಗಳು ಹಾಗೂ ನಿನ್ನ ಆಸಕ್ತಿಯನ್ನು ಅವಲಂಬಿಸಿ ಪಿಯುಸಿಯಲ್ಲಿ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಈಗಿನ ಕಾಲದಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಉತ್ತಮ ಅಂಕಗಳ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಪಾಸಾಗಬೇಕಾಗುತ್ತದೆ. ಅಲ್ಲಿ ಆಯ್ಕೆ ಮಾಡಿಕೊಂಡ ವಿಷಯಗಳ ಜೊತೆಗೆ ಸಾಮಾನ್ಯ ಜ್ಞಾನಕ್ಕೂ ಮಹತ್ವವಿರುತ್ತದೆ.  ಇದು ಐಎಎಸ್‌ಗೂ ಅನ್ವಯಿಸುತ್ತದೆ. ಆದ್ದರಿಂದ ಈಗಿನಿಂದಲೇ ಚೆನ್ನಾಗಿ ಅಭ್ಯಾಸ ಮಾಡಿ. ಸಾಮಾನ್ಯ ಜ್ಞಾನ ಹೆಚ್ಚಿಸಿಕೊಂಡು ಸ್ಪರ್ಧೆಯನ್ನು ಎದುರಿಸಿಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು.

ವಿಶ್ವನಾಥ ಬಿ.ಬಿ
ನಾನು ಕಳೆದ ವರ್ಷ ವಿಜ್ಞಾನದಲ್ಲಿ ಪಿಯುಸಿ ಮುಗಿಸಿದ್ದೇನೆ. ಆದರೆ  ಸಿಇಟಿ ಬರೆದಿಲ್ಲ. ಈಗ ಗದಗದಲ್ಲಿ ಡಿಪ್ಲೋಮಾಕ್ಕೆ ಸೇರಿದ್ದೇನೆ. ಬರುವ ವರ್ಷ ಸಿಇಟಿಯಲ್ಲಿ ರ್‌್ಯಾಂಕ್ ಗಳಿಸಿ ಎಂಜಿನಿಯರಿಂಗ್ ಮಾಡಬಹುದೇ ?
– ನೀವು ಬರುವ ವರ್ಷ ಸಿಇಟಿ ಬರೆದು, ಎಂಜಿನಿಯರಿಂಗ್‌ಗೆ ಸೇರಬಹುದು.  ಅದಕ್ಕೆ ಯಾವುದೇ ತೊಂದರೆ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT