ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆ–ಉತ್ತರ

Last Updated 3 ನವೆಂಬರ್ 2013, 19:30 IST
ಅಕ್ಷರ ಗಾತ್ರ

–ಕಿರಣ್, ಮಂಡ್ಯ
ನಾನು ಬಿ.ವಿ.ಎಸ್.ಸಿ. ಎರಡನೇ ವರ್ಷದಲ್ಲಿ ಕಲಿಯುತ್ತಿದ್ದೇನೆ. ಕೆ.ಎ.ಎಸ್., ಐ.ಎ.ಎಸ್., ಐ.ಪಿ.ಎಸ್. ಪರೀಕ್ಷೆಗಳ ಬಗ್ಗೆ ನನಗೆ ಮಾಹಿತಿ ನೀಡಿ.

ನೀವು ಕೇಳಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನಿಷ್ಠ ವಿದ್ಯಾರ್ಹತೆ ಯಾವುದೇ ಒಂದು ಪದವಿ. ಕರ್ನಾಟಕ ಲೋಕಸೇವಾ ಆಯೋಗದವರು ಕೆ.ಎ.ಎಸ್. ಆಯ್ಕೆ ಪರೀಕ್ಷೆ ನಡೆಸಿದರೆ, ಕೇಂದ್ರೀಯ ಆಯೋಗದವರು ಐ.ಪಿ.ಎಸ್., ಐ.ಎ.ಎಸ್. ಮುಂತಾದ ಪರೀಕ್ಷೆಗಳನ್ನು ನಿರ್ವಹಿಸುತ್ತಾರೆ.

  ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಮೊದಲ ಹಂತದ ಪರೀಕ್ಷೆ ನಡೆಸಿ, ಕೆಲವರನ್ನು ಮಾತ್ರ ಅವರ ಅರ್ಹತೆ ಆಧಾರದ ಮೇಲೆ ಮುಂದಿನ ಹಂತದ ಪರೀಕ್ಷೆ ಬರೆಯಲು ಅವಕಾಶ ನೀಡುತ್ತಾರೆ. ಪರೀಕ್ಷೆಯಲ್ಲಿ ಕನಿಷ್ಠ ಅಂಕಗಳಿಂದ ಪಾಸು– ಫೇಲು ನಿರ್ಧಾರ ಆಗುವುದಿಲ್ಲ.  ಬದಲಿಗೆ, ಲಭ್ಯವಿರುವ ಹುದ್ದೆಗಳ ಆಧಾರದ ಮೇಲೆ ರ‍್ಯಾಂಕಿಂಗ್ ನೀಡಲಾಗುತ್ತದೆ. ಎಲ್ಲ ವಿವರಗಳನ್ನು ಸಂಬಂಧಪಟ್ಟ ವೆಬ್‌ಸೈಟ್‌ಗಳಿಂದ ಪಡೆದುಕೊಳ್ಳಬಹುದು.

–ಮಂಜುನಾಥ ಟಿ.ಎಲ್. ತೂದೂರು
ನಾನು ಅಂಗವಿಕಲನಾಗಿದ್ದು, ಸರ್ಕಾರಿ ಸೀಟ್ ಮೂಲಕ ಡಿ.ಇಡಿ. ಮುಗಿಸಿದ್ದೇನೆ. ಈಗ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಡಿ.ಜಿ.ಎನ್.ಎಂ. ನರ್ಸಿಂಗ್‌ ಕೋರ್ಸ್‌ಗೆ ಸರ್ಕಾರಿ ಸೀಟಿನಲ್ಲಿ ಆಯ್ಕೆಯಾಗಿದ್ದೇನೆ.  ನನಗೆ ಬಿ.ಎ. ಪದವಿ ಪಡೆಯುವ ಆಸೆ ಇದೆ. ಮುಕ್ತ ವಿ.ವಿ. ಮೂಲಕ ಬಿ.ಎ. ಹಾಗೂ ನರ್ಸಿಂಗ್‌ ಒಟ್ಟಿಗೆ ಮಾಡಬಹುದೇ?  ಈ ಶೈಕ್ಷಣಿಕ ಹಂತದಲ್ಲಿ ಅಂಗವಿಕಲರಿಗೆ ದೊರೆಯುವ ಸೌಲಭ್ಯಗಳಾವುವು? ಡಿ.ಜಿ.ಎನ್.ಎಂ. ಕೋರ್ಸ್‌ನ ಬಗ್ಗೆ ಮಾಹಿತಿ ನೀಡಿ.


ನೀವು ನರ್ಸಿಂಗ್‌ ಕೋರ್ಸ್‌ನ ಜೊತೆಗೆ ಬಿ.ಎ. ಅನ್ನು ಮುಕ್ತ  ವಿ.ವಿ. ಮೂಲಕ ಮಾಡಬಹುದು.  ಆದರೆ ನರ್ಸಿಂಗ್‌ ಕಾಲೇಜಿನ ನಿಯಮಾವಳಿಗಳಲ್ಲಿ ಇದಕ್ಕೆ ಅವಕಾಶವಿದೆಯೇ ಎಂಬುದನ್ನು ಮೊದಲು ಖಚಿತ ಪಡಿಸಿಕೊಳ್ಳಿ. ಡಿ.ಜಿ.ಎನ್.ಎಂ. ಎಂದರೆ ಡಿಪ್ಲೊಮಾ ಇನ್ ಜನರಲ್ ನರ್ಸಿಂಗ್‌ ಮತ್ತು ಮಿಡ್ ವೈಫ್ರೀ. ಇದು ಮೂರು ವರ್ಷಗಳ ಕೋರ್ಸ್‌. 

ನಂತರ ಆರು ತಿಂಗಳ ತರಬೇತಿ ಇರುತ್ತದೆ.  ಇದನ್ನು ಮಾಡಿಕೊಂಡವರಿಗೆ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್‌ ಮುಂತಾದ ಕೋರ್ಸ್‌ಗಳನ್ನು ಮಾಡಲು ಅವಕಾಶವಿದೆ. ಅಂಗವೈಕಲ್ಯದ  ಸ್ವರೂಪವನ್ನು ಆಧರಿಸಿ ಸರ್ಕಾರಿ ನಿಯಮಗಳ ಪ್ರಕಾರ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

–ನವೀದ್ ಜಾನಿ ವಾಕರ್
ನಾನು ಕೆಲವು ಕಾರಣಗಳಿಂದ ಪಿ.ಯು. ಶಿಕ್ಷಣವನ್ನು ನೀಯಾಸ್‌ನಲ್ಲಿ ವಿಜ್ಞಾನ ವಿಷಯದಲ್ಲಿ ಮುಗಿಸಿದ್ದೇನೆ.  ಮುಂದೆ ನೇರವಾಗಿ ಕಾಲೇಜಿಗೆ ಹೋಗಿ ಪದವಿ ಮುಗಿಸಲು ಸಾಧ್ಯವೇ? ನನಗೆ ಅರ್ಹತೆ ಇದೆಯೇ? ಮುಂದೆ ನನ್ನ ಪದವಿಗೆ ಮಾನ್ಯತೆ ಸಿಗುವುದೇ?  ನಾನು ಪಿ.ಎಸ್.ಐ. ಪರೀಕ್ಷೆ ಬರೆಯಲು ಏನೂ ತೊಂದರೆಯಾಗುವುದಿಲ್ಲವೇ?

ನೀಯಾಸ್ ಒಂದು ರಾಷ್ಟ್ರೀಯ ಸಂಸ್ಥೆಯಾಗಿದ್ದು ಇದರಲ್ಲಿ ತೇರ್ಗಡೆ ಹೊಂದಿದವರು ವಿದ್ಯಾಭ್ಯಾಸ ಮುಂದುವರಿಸಲು ಅವಕಾಶವಿದೆ.  ನೀವು ರೆಗ್ಯುಲರ್ ಕಾಲೇಜಿಗೆ ಸೇರಬಹುದು. ಪದವಿ ಪಡೆದ ಮೇಲೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ನಿಮಗೆ ಅವಕಾಶ ಸಿಗುತ್ತದೆ.

–ಸಿದ್ಧಲಿಂಗ ರಮೇಶ ಕಕ್ಕಳ ಮೇಲಿ, ಶಿವಣಗಿ
ನಾನೀಗ ಬಿ.ಎ. ಮೊದಲನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದೇನೆ.  ಇಂಗ್ಲಿಷ್‌ ಕಲಿಯಲು ಕನ್ನಡದಲ್ಲಿ  ಇಂಗ್ಲಿಷ್ ಗ್ರಾಮರ್ ಮತ್ತು ಸ್ಪೋಕನ್ ಇಂಗ್ಲಿಷ್‌ಗೆ ಸಂಬಂಧಿಸಿದಂತೆ ಅಂತರ್ಜಾಲ ಅಥವಾ ಬೇರೆ ಕಡೆ ಆಡಿಯೊ, ವಿಡಿಯೊಗಳು ಸಿಗುತ್ತವೆಯೇ? ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾದಂತಹ ವೆಬ್‌ಸೈಟುಗಳಿದ್ದರೆ ತಿಳಿಸಿ. ಇಂಗ್ಲಿಷ್‌ ಕನ್ನಡ  ಶಬ್ದಕೋಶ ಆಡಿಯೊ ರೂಪದಲ್ಲಿ ಅಂತರ್ಜಾಲದಲ್ಲಿ ಅಥವಾ ಯಾವುದಾದರೂ ಅಂಗಡಿಗಳಲ್ಲಿ ಲಭ್ಯವಿದೆಯೇ ಸರ್.

ಇಂಗ್ಲಿಷ್‌ ಕಲಿಯಲು ಅಂತರ್ಜಾಲದಲ್ಲಿ ಮತ್ತು ಬೇರೆ ಕಡೆ ಆಡಿಯೊ, ವಿಡಿಯೊಗಳು ಸಿಗುತ್ತವೆ.  ಆದರೆ ಕನ್ನಡದ ಮೂಲಕ ಕಲಿಯಲು ಉಚಿತವಾಗಿ ಸಿಗುವುದು ಕಷ್ಟ. ಕೆಲವು ಕಂಪೆನಿಗಳು ಇಂಗ್ಲಿಷ್‌ನ್ನು ಕನ್ನಡದ ಮೂಲಕ ಕಲಿಸುವ ಪುಸ್ತಕಗಳನ್ನು ಹೊರ ತಂದಿವೆ.

ಅವುಗಳನ್ನು ಕೊಂಡುಕೊಂಡರೆ ಜೊತೆಗೆ ಆಡಿಯೊ ಸಿ.ಡಿ. ಸಹ ಇರುತ್ತದೆ.  ಲಭ್ಯವಿರುವ ವೆಬ್‌ಸೈಟುಗಳಿಂದ ನಿಮ್ಮ ಮೊಬೈಲ್‌ನಲ್ಲಿ ಸೌಲಭ್ಯ ಇದ್ದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇಂಗ್ಲಿಷ್‌ ಕನ್ನಡ ಶಬ್ದಕೋಶ ಅಂತರ್ಜಾಲದಲ್ಲಿ ಲಭ್ಯವಿದೆ.  ಆಂಡ್ರಾಯ್ಡನಲ್ಲೂ  ಪಡೆಯಬಹುದು.

–ಕಾವೇರಿ ವೈ.ಮ.ಬಸವಕಲ್ಯಾಣ, ಬೀದರ ಜಿಲ್ಲೆ
ನಾನು ಪಿಯುಸಿ ಪಾಸಾಗಿಲ್ಲ. ಹತ್ತು ವರ್ಷ ಆಗಿದೆ. ಈಗ ಕಂಪ್ಯೂಟರ್ ಕಲಿತುಕೊಂಡು ಕೆ.ಇ.ಬಿ.ಯಲ್ಲಿ  ತಾತ್ಕಾಲಿಕ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದೇನೆ. ಮುಕ್ತ ವಿ.ವಿ.ಯಲ್ಲಿ ಬಿ.ಎ. ಮಾಡುತ್ತಿದ್ದೇನೆ. ಪಿಯುಸಿ ಇಲ್ಲದೆ ಬಿ.ಎ. ಮುಗಿಸಿದರೆ ಮುಂದೆ ಸರ್ಕಾರಿ ಹುದ್ದೆಗೆ ಏನಾದರೂ ಸಮಸ್ಯೆ ಆಗುತ್ತದೆಯೇ ಅಥವಾ ನಾನು ಮೊದಲು ದೂರ ಶಿಕ್ಷಣದಲ್ಲಿ ಪಿ.ಯು.ಸಿ. ಮುಗಿಸಬೇಕೇ?

ದೂರಶಿಕ್ಷಣದ ಮೂಲೋದ್ದೇಶ ಶೈಕ್ಷಣಿಕವಾಗಿ ಬೆಳೆಯುವ ಮತ್ತು ಉದ್ಯೋಗ ಅವಕಾಶಗಳನ್ನು ಒದಗಿಸುವುದು.  ಹೀಗಾಗಿ ವಯಸ್ಸಿನ ಆಧಾರದ ಮೇಲೆ ನೇರವಾಗಿ ಕೆಲವು ಕೋರ್ಸ್‌ಗಳನ್ನು ಮಾಡಿಕೊಳ್ಳಲು ಅನುಕೂಲ ಇದೆ.  ನೀವು ಮೊದಲು ಬಿ.ಎ. ಮುಗಿಸಿಕೊಳ್ಳಿ.  ಅದರಿಂದ ಪದವಿ ಅರ್ಹತೆ ಅಗತ್ಯವಿರುವ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಆದರೆ ಕೆಲವು ಕಡೆ ಸ್ಪಷ್ಟವಾಗಿ 10+2+3 ಶಿಕ್ಷಣ ಪಡೆದವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು ಎಂದು ಕೇಳಿದ್ದರೆ ನಿಮಗೆ ತೊಂದರೆಯಾಗಬಹುದು. ಆದರೆ ಅಂತಹ ಸಂದರ್ಭಗಳು ಅಪರೂಪ.

–ಮಲ್ಲಿಕಾರ್ಜುನ ನಟಲ್ವಾರ್
ನಾನೀಗ ದೂರ ಶಿಕ್ಷಣದ ಮುಖಾಂತರ ಪಿಯುಸಿ ಮುಗಿಸಿದ್ದೇನೆ. ನನಗೆ ಸರ್ಕಾರಿ ಸೇವೆಗೆ ಸೇರಲು ಏನಾದರೂ ತೊಂದರೆಗಳಿವೆಯೇ? ಮುಂದೆ ಬಿ.ಎಸ್ಸಿ. ಅಗ್ರಿಕಲ್ಚರ್ ಮಾಡಬೇಕೆಂದಿದ್ದೇನೆ. ಅದಕ್ಕೆ ಸಿಇಟಿ ಇರುತ್ತದೆಯೇ?

ದೂರ ಶಿಕ್ಷಣದಲ್ಲಿ ಪಿಯುಸಿ ಮುಗಿಸಿರುವುದರಿಂದ ಸರ್ಕಾರಿ ಸೇವೆಗೆ ಸೇರಲು ಯಾವುದೇ ಅಡ್ಡಿ ಇಲ್ಲ.  ನೀವು ವಿಜ್ಞಾನ ವಿಷಯದಲ್ಲಿ ಜೀವಶಾಸ್ತ್ರವೂ ಸೇರಿದಂತೆ ಪಿಯುಸಿ ಮಾಡಿದ್ದರೆ ಸಾಮಾನ್ಯ ಸಿಇಟಿ ಬರೆದು ಆಯ್ಕೆಯಾಗಬೇಕಾಗುತ್ತದೆ.

–ಮಹಾಂತಯ್ಯ ಕೆ. ಮಠ, ಗುಲ್ಬರ್ಗ
ನಾನು ಸರ್ಕಾರಿ ಶಾಲಾ ಶಿಕ್ಷಕನಾಗಿದ್ದು ಹದಿನೈದು ವರ್ಷಗಳಿಂದ ಸೇವೆಯಲ್ಲಿದ್ದೇನೆ. ಮುಂದೆ ಶಿಕ್ಷಕರ ಮೌಲ್ಯಮಾಪನ ಪರೀಕ್ಷೆ ಎದುರಿಸಬೇಕಾಗಿದೆ. ದಯಮಾಡಿ ಯಾವ ಯಾವ ವಿಷಯಗಳನ್ನು ಓದಬೇಕು ತಿಳಿಸಿ.

ನೀವು ವೃತ್ತಿನಿರತರಾಗಿದ್ದು, ಸಂಬಂಧಿಸಿದ ಮೌಲ್ಯಮಾಪನ ಪರೀಕ್ಷೆ ಎದುರಿಸ­ಬೇಕಾ­ಗಿದ್ದಲ್ಲಿ, ಇಲಾಖೆ ಮೂಲಕವೇ ಪೂರ್ಣ ವಿವರ ಪಡೆಯುವುದು ಒಳಿತು.

–ರವಿ, ಹಾಸನ
ನಾನು ಈಗ ಅಂತಿಮ ಬಿ.ಎ. (ಇಇಪಿ) ಓದುತ್ತಿದ್ದೇನೆ.  ಮನೆಯವರೆಲ್ಲ ಮುಂದೆ ಎಂ.ಎ. ಮಾಡು ಎಂದು ಒತ್ತಾಯಿಸುತ್ತಿದ್ದಾರೆ. ನನಗೆ ಶಿಕ್ಷಕನಾಗಿ ಕಾರ್ಯ ನಿರ್ವಹಿಸಲು ಇಷ್ಟವಿಲ್ಲ. ಆದ್ದರಿಂದ ಎಂ.ಎ. ಮುಗಿದ ನಂತರ ಬೇರೆ ಯಾವುದಾ­ದರೂ ಕೆಲಸಕ್ಕೆ ಎಂ.ಎ. ಮಾಡಿದ ಆಧಾರದ ಮೇಲೆ ಅರ್ಜಿ ಹಾಕಬಹುದೇ  ಅಥವಾ ಈಗಲೇ ಬಿ.ಎ. ಆಧಾರದ ಮೇಲೆ ಕೆಲಸಕ್ಕೆ ಅರ್ಜಿ ಹಾಕುವುದು ಒಳಿತೇ?

ಎಂ.ಎ. ಮಾಡಿದವರು ಶಿಕ್ಷಕರೇ ಆಗಬೇಕು ಎಂದೇನೂ ಇಲ್ಲ. ಎಂ.ಎ.ಯಲ್ಲಿ ಕಲಿತ ವಿಷಯ, ಶೈಕ್ಷಣಿಕ ಸಾಧನೆ, ವೈಯಕ್ತಿಕ ಅರ್ಹತೆ ಮುಂತಾದವುಗಳನ್ನು ಆಧರಿಸಿ ಸಾಕಷ್ಟು ಜನ ನೌಕರಿ ಗಳಿಸುತ್ತಿದ್ದಾರೆ. ಬಿ.ಎ. ಮಾಡಿದ ಮೇಲೆ ಎಂ.ಎ. ಅಲ್ಲದೆ ಇನ್ನಿತರ ಹಲವಾರು ಕೋರ್ಸ್‌ಗಳೂ ಲಭ್ಯವಿವೆ.

ಅವುಗಳಲ್ಲಿ ಹಲವಕ್ಕೆ  ಉದ್ಯೋಗಾವಕಾಶ ಚೆನ್ನಾಗಿದೆ. ನೀವು  ಮನೆಯವರ ಹಿತವಚನದ ಜೊತೆಗೆ ನಿಮ್ಮದೇ ಆಸಕ್ತಿ, ಅಭಿಪ್ರಾಯಗಳನ್ನು ಪರಿಗಣಿಸುವುದು ಉಚಿತ. ನಿಮಗೆ ಬಿ.ಎ. ಆಧಾರದ ಮೇಲೆ ನೌಕರಿ ದೊರೆತಲ್ಲಿ ಸೇರಿಕೊಳ್ಳಿ.  ಓದನ್ನು ಮುಂದುವರಿಸಿ.

ಪ್ರಶ್ನೆ ಕಳುಹಿಸಬೇಕಾದ ವಿಳಾಸ: ಸಂಪಾದಕರು, ಶಿಕ್ಷಣ ವಿಭಾಗ, ಪ್ರಜಾವಾಣಿ, ನಂ. 75, ಎಂ.ಜಿ. ರಸ್ತೆ, ಬೆಂಗಳೂರು– 560 001
ಇ- ಮೇಲ್ ವಿಳಾಸ: shikshana@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT