ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆ–ಉತ್ತರ

ಅಕ್ಷರ ಗಾತ್ರ

ಅರುಣ್, ಹಾಸನ
ನಾನು ಹನ್ನೆರಡನೇ ತರಗತಿಯಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಸಂಸ್ಕೃತ, ಇಂಗ್ಲೀಷ್ ತೆಗೆದುಕೊಂಡಿದ್ದೇನೆ.  ಪದವಿಯಲ್ಲಿ ಬಿ.ಸಿ.ಎ. ಓದುವ ಉದ್ದೇಶವಿದೆ.  ಗಣಿತ ಓದುವ ಅಗತ್ಯವಿಲ್ಲದ ಬಿ.ಎಸ್ಸಿ. ಸಾಧ್ಯವಿದೆಯೇ ? ತಿಳಿಸಿ.

–ನೀವು ಹನ್ನೆರಡನೇ ತರಗತಿಯಲ್ಲಿ ಗಣಿತ ತೆಗೆದುಕೊಂಡಿಲ್ಲ. ಒಂದು ವೇಳೆ ನೀವು ಬಿಸಿಎ ಓದಿದರೂ ಅದರಲ್ಲಿ ಅಲ್ಪ ಸ್ವಲ್ಪ ಗಣಿತದ ನೆರವು ಬೇಕಾಗಬಹುದು.  ಬಿ.ಎಸ್ಸಿ.ಯಲ್ಲಿ ಗಣಿತವಿಲ್ಲದ ಸಾಕಷ್ಟು ಕಾಂಬಿನೇಷನ್‌ಗಳು ದೊರಕುತ್ತವೆ.

ಮಧುಸೂದನ್
ಬಿಬಿಎಂ ಓದುವಾಗ ನಾಲ್ಕು ಮತ್ತು ಐದನೇಯ ಸೆಮೆಸ್ಟರ್‌ಗಳಲ್ಲಿ ಪೂರ್ತಿ ಉತ್ತೀರ್ಣನಾಗದೇ ಬೇಸರದಿಂದ ಬಿಟ್ಟೆ. ಈಗ ಬಿಕಾಂ ಮೊದಲಿನಿಂದ ಮಾಡುವ ಇಚ್ಛೆ ಇದೆ. ಪರಿಹಾರ ಸೂಚಿಸಿ.

–ನಿಮ್ಮ ಅಪೇಕ್ಷೆಯಂತೆ ನೀವು ಬಿಕಾಂಗೆ ಮೊದಲಿನಿಂದ ಸೇರಿಕೊಂಡು ಓದಬಹುದು. ಅದಕ್ಕೂ ಮೊದಲು ನೀವು ಏಕೆ ಬಿಬಿಎಂನಲ್ಲಿ ಉತ್ತೀರ್ಣರಾಗುತ್ತಿರಲಿಲ್ಲ ಎನ್ನುವ ಬಗ್ಗೆ ತಿಳಿದುಕೊಳ್ಳಿ. ಆತ್ಮ ವಿಮರ್ಶೆಯೊಂದಿಗೆ ಯಾರಾದರೂ ಹಿರಿಯರ, ತಜ್ಞರ ಸಹಾಯ ಪಡೆದು ನಿಮ್ಮ ಕೊರತೆಗಳನ್ನು ಕಂಡುಕೊಂಡು, ಮುಂದಿನ ದಿನಗಳಲ್ಲಿ ಅವನ್ನು ಪರಿಹಾರ ಮಾಡಿಕೊಳ್ಳುವ ಮಾರ್ಗ ಹುಡುಕಿಕೊಳ್ಳಿ.  ಏಕೆಂದರೆ ಬಿಬಿಎಂ ಹಾಗೂ ಬಿಕಾಂಗಳಲ್ಲಿ ಸಾಕಷ್ಟು ಸಾಮ್ಯ ಇದೆ.  ಇಲ್ಲವಾದರೆ ಯಾವುದಾದರೂ ಅಲ್ಪಾವಧಿ ಕೋರ್ಸು ಮಾಡಿಕೊಂಡು ನೌಕರಿ ಅಥವಾ ಸ್ವಂತ ಉದ್ಯೋಗ ಮಾಡಬಹುದು.

ಕಾವ್ಯ, ಬೆಂಗಳೂರು
ನನಗೆ ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಹಾಗೂ ಸಿಎ ಕೋರ್ಸಿನ ಬಗ್ಗೆ ಆಸಕ್ತಿ ಇದೆ.  ಬ್ಯಾಂಕಿನ ಪರೀಕ್ಷೆಗಳ ಬಗ್ಗೆ ವಿವರಗಳು ಯಾವಾಗ ತಿಳಿಯುತ್ತವೆ. ಇದಕ್ಕೆ ಎಂಕಾಂ ಬೇಕಾಗುತ್ತದೆಯೇ. ನಮ್ಮ ಕಾಲೇಜಿನಲ್ಲಿ ಬಿಕಾಂ ಜೊತೆಗೆ ಸಿಎ ಕೋರ್ಸಿಗೆ ಅಭ್ಯಾಸ ಮಾಡಲು ಅನುಕೂಲವಿದೆ. ಬಿಕಾಂ ಮತ್ತು ಸಿಎಗೆ ಯಾವ ಕಂಪ್ಯೂಟರ್ ಕೋರ್ಸು ಕಲಿಯಬೇಕು?

–ಬ್ಯಾಂಕಿಂಗ್ ಪರೀಕ್ಷೆಗಳ ಬಗ್ಗೆ ಪತ್ರಿಕೆ ಹಾಗೂ ವೆಬ್‌ಸೈಟ್‌ಗಳ ಮೂಲಕ ಮಾಹಿತಿ ಪಡೆದುಕೊಳ್ಳಬಹುದು. ಬ್ಯಾಂಕಿಂಗ್ ಪರೀಕ್ಷೆಗೆ ತಯಾರಾಗಲು ಸಾಕಷ್ಟು ತರಬೇತಿ ಕೇಂದ್ರಗಳು ಹಾಗೂ ಮಾಹಿತಿ ಸಿಗುತ್ತವೆ.  ಎಂ.ಕಾಂ. ಮಾಡಲೇಬೇಕೆಂಬ ನಿರ್ಬಂಧವಿಲ್ಲ. ಸಿಎ ಮಾಡಲು ಮೊದಲ ಹಂತದ ಪರೀಕ್ಷೆಗೆ ನಿಮ್ಮ ಕಾಲೇಜಿನಲ್ಲಿ ಉತ್ತಮ ತರಬೇತಿಗೆ ಅವಕಾಶವಿದ್ದಲ್ಲಿ ಸೇರಿಕೊಳ್ಳಬಹುದು. ಐಪಿಸಿಸಿ ಅಥವಾ ಬಿಕಾಂ ಮುಗಿಸಿದವರು ಹಿರಿಯ ಸಿಎ ಬಳಿ ಮೂರು ವರ್ಷಗಳ ತರಬೇತಿಗೆ ಸೇರಿಕೊಳ್ಳುವಾಗ ಕಂಪ್ಯೂಟರ್ ತರಬೇತಿಯ ಸರ್ಟಿಫೀಕೇಟು ಅಗತ್ಯವಾಗಿರುತ್ತದೆ. ಟ್ಯಾಲಿ ಮುಂತಾದವುಗಳಲ್ಲಿ ಪರಿಣತಿ ಅಗತ್ಯ.

ಸಾಗರ್, ಬೆಂಗಳೂರು
ನಾನು ಕಲಾ ವಿಭಾಗದಲ್ಲಿ ಎಚ್.ಇ.ಪಿ.ಎಸ್. ವಿಷಯದಲ್ಲಿ ಎರಡನೇ ಪಿಯುಸಿ ಪರೀಕ್ಷೆ ಬರೆದಿರುತ್ತೇನೆ. ಈಗ ನನಗೆ ಕಲಾ ವಿಭಾಗದಲ್ಲಿ ಮುಂದುವರಿಯಲು ಇಷ್ಟವಿಲ್ಲ.  ನಾನು ಬಿಕಾಂ ಅಥವಾ ಡಿಪ್ಲೋಮಾಗೆ ಸೇರಬಹುದೇ? ನನಗೆ ಕಂಪ್ಯೂಟರ್ ಕೋರ್ಸು ಮಾಡುವ ಆಸೆ ಇದ್ದು ಯಾವ ಕೋರ್ಸು ಉತ್ತಮ?

–ನೀವು ಡಿಪ್ಲೋಮಾ ಮಾಡಿಕೊಂಡಲ್ಲಿ ತಾಂತ್ರಿಕ ಕ್ಷೇತ್ರದಲ್ಲಿ ಮುಂದುವರಿಯ ಬಹುದು. ಅಥವಾ ನೀವು ಬಿಕಾಂಗೆ ಸಹ ಸೇರಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಬಿಕಾಂಗೆ ಹೆಚ್ಚಿನ ಬೇಡಿಕೆ ಇದ್ದು ಅಲ್ಲಿಗೆ ಸೇರಲು ಹೆಚ್ಚು ಅಂಕಗಳಿಸಿದವರಿಗೆ ಆದ್ಯತೆ ಇದೆ. ಇನ್ನೂ ಕಂಪ್ಯೂಟರ್ ತರಬೇತಿ ಬಗ್ಗೆ ಹೇಳುವುದಾದರೆ ಅದರಲ್ಲಿ ಅನೇಕ ವೈವಿಧ್ಯಮಯ ಕೋರ್ಸುಗಳು ಲಭ್ಯವಿದ್ದು ನಿಮ್ಮ ಆಸಕ್ತಿ ಹಾಗೂ ಆರ್ಥಿಕ ಸ್ಥಿತಿಯ ಮೇಲೆ ಇದು ಅವಲಂಬಿತವಾಗುತ್ತದೆ. ಸಿಎ ಪರಿಣತರಿಗೆ ಹೆಚ್ಚಿನ ಬೇಡಿಕೆ ಇದೆ.

ಅರ್ಚನಾ
ನಾನು ಹನ್ನೆರಡನೇ ತರಗತಿಯ ಪರೀಕ್ಷೆ ಬರೆದಿದ್ದೇನೆ. ನನಗೆ ಸೈನ್ಯದಲ್ಲಿ ಅಧಿಕಾರಿಯಾಗುವ ಅಪೇಕ್ಷೆ ಇದೆ. ಇದಕ್ಕೆ ಪೂರಕ ಮಾರ್ಗದರ್ಶನ ನೀಡಿ.

– ಸೇನೆಯಲ್ಲಿ ನೇರವಾಗಿ ಆಫೀಸರ್ ಆಗಲು ಪದವಿ ಹಾಗೂ ತರಬೇತಿ ಅಗತ್ಯ.  ಖಡಕವಾಸ್ಲಾ ಮೊದಲಾದ ಕಡೆ ಇರುವ ಆರ್ಮಿ ಅಧಿಕಾರಿಗಳ ತರಬೇತಿ ಕಾಲೇಜಿಗೆ ಸೇರಲು ಕಠಿಣವಾದ ಸ್ಪರ್ಧಾತ್ಮಕ ಆಯ್ಕೆ ಪರೀಕ್ಷೆ ಇರುತ್ತದೆ. ಇದಲ್ಲದೆ ವಿಜ್ಞಾನ ಪದವೀಧರರು, ಎಂಜಿನಿಯರುಗಳು, ಡಾಕ್ಟರುಗಳಿಗೆ ಸೇನೆಯಲ್ಲಿ ಅಧಿಕಾರಿಗಳಾಗಿ ಸೇರಲು ಅವಕಾಶವಿರುತ್ತದೆ. ಸೇನೆ ಮಾತ್ರವಲ್ಲದೆ, ನೌಕಾದಳ, ವಾಯುದಳದ ವೆಬ್‌ಸೈಟುಗಳಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು.


ನಾಗರಾಜ ಮಲ್ಲಾಡ್
ನಾನು ಭೌತಶಾಸ್ತ್ರ, ಗಣಿತ ಮತ್ತು ಸ್ಟಾಟಿಸ್ಟಿಕ್ಸ್ ಆರಿಸಿಕೊಂಡು ಬಿಎಸ್ಸಿ ಓದುತ್ತಿದ್ದೇನೆ.  ಬಿಎಸ್ಸಿ ಮುಗಿಸಿದ ನಂತರ ನಾನು ಎಂಜಿನಿಯರಿಂಗ್‌ ಸೇರಿಕೊಳ್ಳಬಹುದೇ? 

–ನೀವು ಬಿಎಸ್ಸಿ ನಂತರ ಎಂಜಿನಿಯರಿಂಗ್‌ಗೆ ಸೇರಬಹುದು.  ಆದರೆ ಆ ವರ್ಷದ ಸಿಇಟಿ ಪರೀಕ್ಷೆ ಎಲ್ಲರಂತೆ ಬರೆದು ರ್‌್ಯಾಂಕು ಪಟ್ಟಿಯಲ್ಲಿ ಸ್ಥಾನಗಳಿಸಬೇಕಾಗುತ್ತದೆ.

ರಂಗ ಮತ್ತು ಮಿತ್ರರು
ಬ್ಯಾಂಕ್ ಪರೀಕ್ಷೆ, ನೇಮಕಾತಿಗಳ ಬಗ್ಗೆ ಮಾಹಿತಿ ನೀಡಿ.

–ಬ್ಯಾಂಕಿನಲ್ಲಿ ಸ್ಪರ್ಧಾತ್ಮಕ ಆಯ್ಕೆ ಪರೀಕ್ಷೆ ಮೂಲಕ ಕೆಲಸಕ್ಕೆ ಸೇರಬಹುದು.  ಸಾಮಾನ್ಯವಾಗಿ ಪದವೀಧರರಿಗೆ ಹೆಚ್ಚಿನ ಅವಕಾಶವಿರುತ್ತದೆ. ಬ್ಯಾಂಕಿನ ಪರೀಕ್ಷೆ ಎದುರಿಸಲು ತರಬೇತಿ ನೀಡುವ ಸಾಕಷ್ಟು ಸಂಸ್ಥೆಗಳಿವೆ. ಪರೀಕ್ಷಾ ವಿಧಾನವನ್ನು ವೆಬ್‌ಸೈಟ್ ಮೂಲಕ ಅರಿತು ಈಗಿನಿಂದಲೇ ತಯಾರಿ ನಡೆಸಿದರೆ ಉತ್ತಮ ಫಲಿತಾಂಶ ಪಡೆಯಬಹುದು.

ನಿಂಗಪ್ಪ ಕೆ.
ಅಂತಿಮ ಬಿಎ ಓದುತ್ತಿದ್ದು ಮುಂದೆ ಎಂಬಿಎ ಕೋರ್ಸನ್ನು ರೆಗ್ಯೂಲರ್ ಅಥವಾ ದೂರಶಿಕ್ಷಣ ಇವೆರಡರಲ್ಲಿ ಯಾವುದರ ಮೂಲಕ ಮಾಡಿದರೆ ಅನುಕೂಲ ತಿಳಿಸಿ.

– ಎಂಬಿಎ ಅನ್ನು ಎರಡು ವಿಧಗಳಲ್ಲೂ ಮಾಡಬಹುದು. ನೇರವಾಗಿ ಮಾಡಿದಾಗ ಶಿಕ್ಷಕರು, ಲೈಬ್ರರಿ, ವಸ್ತು ಸಾಮಾಗ್ರಿ ಸಹಪಾಠಿಗಳ ನೆರವು ಇದ್ಯಾವುದೈ ಇರುವುದಿಲ್ಲ. ಆದರೆ ದೂರಶಿಕ್ಷಣದ ಮೂಲಕ ಮಾಡುವಾಗ ಚೆನ್ನಾಗಿ ಅಭ್ಯಾಸ ಮಾಡಲು ಹಾಗೂ ಉತ್ತಮ ಅಂಕಗಳಿಸಲು ಹೆಚ್ಚಿನ ಸ್ವಪ್ರಯತ್ನ ಅಗತ್ಯ. ಎಂಬಿಎ ಮಾಡಿದವರಿಗೆ ನೌಕರಿಗಾಗಿ ಆಯ್ಕೆ ಮಾಡುವಾಗ ಕೆಲವು ವೇಳೆ ನೀವು ಕಲಿತ ವಿವಿ ಅಥವಾ ಕಾಲೇಜುಗಳ ಪ್ರಸಿದ್ಧಿಗೂ ಮಹತ್ವ ನೀಡಲಾಗುತ್ತದೆ.

ವನಿತಾ, ವಿಜಾಪುರ
ನಾನು ಕರ್ನಾಟಕ ವಿಶ್ವವಿದ್ಯಾಲಯದಿಂದ 2010ರಲ್ಲಿ ಎಂ.ಎಸ್ಸಿ. ಮುಗಿಸಿದ್ದೇನೆ.  2012ರಲ್ಲಿ ವಿಜಾಪುರದ ಮಹಿಳಾ ವಿಶ್ವವಿದ್ಯಾಲಯದಲ್ಲಿ ಬಿ.ಎಡ್‌. ಮಾಡಿದ್ದೇನೆ.  ಈಗ ಜುಲೈ 2013ರಿಂದ ಸರ್ಕಾರಿ ಪ್ರೌಢಶಾಲೆಯಲ್ಲಿ ಸಹಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಸೇವಾ ದಾಖಲೆಯಲ್ಲಿ ಎಂ.ಎಸ್ಸಿ ನಮೂದಿಸಲು ಸಾಧ್ಯವಾಗಿಲ್ಲ.  ಕೇವಲ ಬಿ.ಎಸ್ಸಿ./ಬಿ.ಇಡ್. ಎಂದು ನಮೂದಾಗಿದೆ. ಇದರಿಂದ ಮುಂದೆ ನನ್ನ ಬಡ್ತಿಗೆ ತೊಂದರೆಯಾಗಬಹುದು. ಬೆಂಗಳೂರಿನಲ್ಲಿ ಸೇವಾ ಬಡ್ತಿಗಾಗಿ ಪಿ.ಜಿ. ನಮೂದಿಸಿರುವ ಕೇಂದ್ರವಿದೆಯೆಂದು ಕೇಳಿದ್ದೇನೆ. ಇದು ನಿಜವೇ. ಮಾಹಿತಿ ನೀಡಿ.  ಸಹಶಿಕ್ಷಕರಾಗಿ ಕೆಲಸ ಮಾಡುತ್ತಿರುವವರೂ ಟಿ.ಇ.ಟಿ. ಪರೀಕ್ಷೆ ಬರೆಯಬೇಕೆ?  ಬರೆಯದಿದ್ದರೆ / ಬರೆದರೂ ಪಾಸಾಗದಿದ್ದರೆ ಏನಾಗುತ್ತದೆ? 

–ನಿಮ್ಮ ಸೇವಾ ದಾಖಲೆಗಳಲ್ಲಿ ಎಂ.ಎಸ್ಸಿ. ಎಂದು ನಮೂದಿಸಲು ಕೋರಿ ಬಂದ ಮನವಿಯನ್ನು ಸೂಕ್ತ ದಾಖಲೆಗಳೊಡನೆ ನಿಮ್ಮ ಮೇಲಾಧಿಕಾರಿಗಳ ಮೂಲಕ ಇಲಾಖೆಗೆ ಸಲ್ಲಿಸಿ. ಇದರ ಒಂದು ಪ್ರತಿಯನ್ನು ಬೆಂಗಳೂರಿಗೂ ಕಳುಹಿಸಿಕೊಡಿ, ಮುಂದೆ ಬಡ್ತಿಗಾಗಿ ಕಾಯುತ್ತಿರುವವರ ಹಿರಿತನದ ಪಟ್ಟಿಯಲ್ಲಿ ನಿಮ್ಮ ಹೆಸರು ಬರುವಂತೆ ನೋಡಿಕೊಳ್ಳಿ. ಸದ್ಯದಲ್ಲಿ ಸಹ ಶಿಕ್ಷಕರಾಗಿ ಈಗಾಗಲೇ ಕೆಲಸ ಮಾಡುತ್ತಿರುವವರಿಗೆ ಟಿಇಟಿ ಬರೆಯುವ ನಿರ್ಬಂಧವಿಲ್ಲ. ಆದರೆ ಮುಂದೆ ಹೊರ ದೇಶಗಳಲ್ಲಿರುವಂತೆ ಇಂತಿಷ್ಟು ವರ್ಷಗಳಿಗೊಮ್ಮೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಬಡ್ತಿ ಪಡೆಯಬೇಕಾದ ಕಾನೂನು ಜಾರಿಗೆ ಬರಬಹುದು. ಶಿಕ್ಷಕರ ಜ್ಞಾನದ ಮಟ್ಟ ನಿಂತ ನೀರಿನಂತಾಗದೆ ಅವರು ಸದಾ ಶೈಕ್ಷಣಿಕವಾಗಿ ಬೆಳೆಯಲಿ ಎಂಬುದು ಇದರ ಆಶಯ. ಸಮಾಜದ ಹಿತದೃಷ್ಟಿಯಿಂದ ಇದು ಅಗತ್ಯವೂ ಹೌದು.

ಲೋಕೇಶ ಪ್ರಸಾದ್ ಬಿ. ರಾಮನಗರ
ನಾನು ವಿಜ್ಞಾನ ವಿಭಾದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದೇನೆ. ಇನ್ನೇನು ಫಲಿತಾಂಶ ಬರಲಿದೆ. ಬಿ.ಫಾರ್ಮ್ ಓದಲು ಆಸಕ್ತಿ ಇದೆ. ದಯವಿಟ್ಟು ಮಾಹಿತಿ ನೀಡಿ.

–ಔಷಧ ಶಾಸ್ತ್ರಕ್ಕೆ ಸಂಬಂಧಪಟ್ಟ ಬಿ.ಫಾರ್ಮ್ ಕಾಲೇಜುಗಳು ಅನೇಕ ಕಡೆ ಇವೆ.  ಕೆಲವು ಸರ್ಕಾರಿ ಹಾಗೂ ಕೆಲವು ಖಾಸಗಿ ಆಡಳಿತದಲ್ಲಿವೆ. ಆಯ್ಕೆ ಪರೀಕ್ಷೆ ಮೂಲಕ ಅಥವಾ ಮ್ಯಾನೇಜ್‌ಮೆಂಟ್ ಕೋಟಾದಲ್ಲಿ ಸೀಟು ಪಡೆಯಬಹುದು. ವಿವರಗಳನ್ನು ವೆಬ್‌ಸೈಟ್‌ ಮೂಲಕ ಪಡೆಯಬಹುದು.

ಧನಸಿಂಗ್ ಹರಿಲಾಲ್ ರಾಠೋಡ
ನಾನು ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದೇನೆ.  ಮುಂದೆ ಸಿ.ಎ. ಮಾಡಬೇಕೆಂಬ ಆಸೆ ಇದೆ. ಆದರೆ ನನಗೆ ಮಾತಿನ ಸಮಸ್ಯೆ ಇದೆ.  ಸ್ಪಷ್ಟವಾಗಿ ಮಾತನಾಡಲಾರೆ. ಮಾತನಾಡುವಾಗ ತೊದಲುತ್ತೇನೆ. ಇದರಿಂದ ಸಿ.ಎ. ಪ್ರವೇಶ ಸಿಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಈ ತೊಂದರೆ ಇರುವ ನನಗೆ ಯಾವ ಯಾವ ಕೋರ್ಸುಗಳಲ್ಲಿ ಅವಕಾಶ ಸಿಗುವುದಿಲ್ಲ ಮತ್ತು ಯಾವ ಕೋರ್ಸು ನನಗೆ ಉತ್ತಮ ಎಂಬುದನ್ನು ತಿಳಿಸಿ.

–ನನಗೆ ತಿಳಿದಿರುವಂತೆ ಸಿ.ಎ. ಮಾಡಲು ನಿಮಗಿರುವ ತೊಂದರೆ ಯಾವ ರೀತಿಯಲ್ಲಿಯೂ ಅಡ್ಡಿಯಾಗುವುದಿಲ್ಲ. ಇದಲ್ಲದೆ ಬೇರೆ ದೈಹಿಕ ಅಂಗವೈಕಲ್ಯ ಉಳ್ಳ ಕೆಲವರಿಗೆ ಕೆಲವು ರಿಯಾಯಿತಿಗಳು ಉಂಟು. ಹಿಂಜರಿಕೆ ಸ್ವಭಾವವೂ ಕೆಲವು ಸಂದರ್ಭಗಳಲ್ಲಿ ಉಗ್ಗುವ ಸಮಸ್ಯೆಗೆ ಕಾರಣವಾಗಬಹುದು. ಆದ್ದರಿಂದ ನೀವು ಧೈರ್ಯವಾಗಿ ಮುಂದುವರಿದು ಆತ್ಮ ವಿಶ್ವಾಸದಿಂದ ಸಿ.ಎ. ಮಾಡಿಕೊಳ್ಳಿ. ನಾನು ಕೇಳಿರುವ ಹಿರಿಯ ಸಿ.ಎ. ಒಬ್ಬರಿಗೆ ತುಂಬಾ ತೊದಲು ಇದ್ದರೂ ಅವರು ಅನೇಕ ಪದವಿಗಳನ್ನು ಗಳಿಸಿ ಜೀವನದಲ್ಲಿ ಯಶಸ್ಸಿಯಾಗಿದ್ದಾರೆ.

ಪ್ರವೀಣ, ದಾವಣಗೆರೆ
ನಾನು ಕೆ.ಎಸ್.ಓ.ಯು. ಅಧ್ಯಯನ ಕೇಂದ್ರದಲ್ಲಿ ದೂರ ಶಿಕ್ಷಣದ ಮೂಲಕ ಬಿ.ಎ. ಪದವಿಗೆ ಸೇರ್ಪಡೆಯಾಗಿದ್ದೇನೆ. ಇಲ್ಲಿ ಆನ್‌ಲೈನ್ ಮೂಲಕ ಪರೀಕ್ಷೆ ನಡೆಸಲಾಗುವುದು ಎಂದು ಆ ಕೇಂದ್ರದ ಮುಖ್ಯಸ್ಥರು ಹೇಳುತ್ತಿದ್ದಾರೆ. ಅದರೆ ಇದು ಸಾಧ್ಯವೇ? ಈ ಮೂಲಕ ಪಡೆಯುವ ಪದವಿಗೆ ಮುಂದೆ ಮಾನ್ಯತೆ ಇದೆಯೇ? ಸರ್ಕಾರಿ ಉದ್ಯೋಗ ಪಡೆಯಬಹುದೇ? ನಾನು ಬಡವ ಕಷ್ಟ ಪಟ್ಟು ದುಡ್ಡು ಹಾಕಿ ಈ ಪದವಿಗೆ ಸೇರಿದ್ದೇನೆ. ಇದರಿಂದ ಮುಂದೆ ಉಪಯೋಗವಿದೆಯೋ ಇಲ್ಲವೊ ತಿಳಿಸಿ.

–ನಿಮಗೆ ದೂರಕುವ ಪದವಿ ಕೆ.ಎಸ್.ಓ.ಯು. ದಿಂದ ಅಧಿಕೃತವಾಗಿ ಪ್ರಮಾಣೀಕೃತವಾಗಿದ್ದರೆ ಯಾವ ತೊಂದರೆಯೂ ಇರುವುದಿಲ್ಲ. ಪರೀಕ್ಷಾ ವಿಧಾನಗಳನ್ನು ವಿಶ್ವವಿದ್ಯಾಲಯವೆ ನಿರ್ಧರಿಸುತ್ತದೆ. ಅದರ ಬಗ್ಗೆ ವಿವಿ ಪ್ರಕಟಣೆಗಳು ಹಾಗೂ ವೆಬ್‌ಸೈಟ್ ಮೂಲಕ ಅಧಿಕೃತ ಮಾಹಿತಿ ಪಡೆಯಬಹುದು.

ತೇಜಶ್ರೀ
ದ್ವಿತೀಯ ಪಿಯುಸಿ ಓದುತ್ತಿದ್ದೇನೆ. ಮುಂದೆ ಸಿಬಿಐ ಇಲಾಖೆಯಲ್ಲಿ ಕೆಲಸ ಮಾಡುವ ಆಸೆ ಇದೆ. ಇದಕ್ಕೆ ಅನುಕೂಲವಾಗುವಂತೆ ಯಾವ ಪದವಿ ಓದಲಿ. ತಯಾರಿ ಹೇಗೆ?

–ಸಿಬಿಐ ಕೂಡ ಇತರ ಪೊಲೀಸು ಇಲಾಖೆಗಳಂತೆ ಕೇಂದ್ರ ಸರಕಾರದ ಮೂಲಕ ಆಯ್ಕೆ ಇತ್ಯಾದಿ ಪ್ರಕ್ರಿಯೆಗಳನ್ನು ನಡೆಸುವ ಸಂಸ್ಥೆ. ಇದರಲ್ಲಿ ಕೆಳಗಿನ ಹಂತದ ನೌಕರರನ್ನು ನಿಯಮಾವಳಿಗಳ ಪ್ರಕಾರ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಬಗ್ಗೆ ಪ್ರಕಟಣೆಗಳನ್ನು ಆಗಿಂದಾಗ್ಗೆ ನೀಡಲಾಗುತ್ತದೆ. ಇನ್ನೂ ಮೇಲಿನ ಹಂತದಲ್ಲಿ ಐಪಿಎಸ್ ಅಧಿಕಾರಿಗಳನ್ನು ನಿಯೋಜನೆ ಮೇರೆಗೆ ಆರಿಸಿಕೊಳ್ಳುತ್ತಾರೆ. ಯಾವುದಕ್ಕೂ ನೀವು ಪದವಿ ಗಳಿಸಿ ಸ್ಪರ್ಧಾತ್ಮಾಕ ಪರೀಕ್ಷೆಗಳಿಗೆ ತಯಾರಿ ನಡೆಸುವುದು ಒಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT