ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಿತಿಗೆ ಎಲ್‌ಪಿಜಿಎ ಜಂಟಿ ಟೂರ್ನಿಯಲ್ಲಿ ಪ್ರವೇಶ

Last Updated 12 ಆಗಸ್ಟ್ 2020, 11:27 IST
ಅಕ್ಷರ ಗಾತ್ರ

ನಾರ್ತ್ ಬೆರ್ವಿಕ್, ಸ್ಕಾಟ್ಲೆಂಟ್‌: ಭಾರತದ ಮಹಿಳಾ ಗಾಲ್ಫ್‌ನಲ್ಲಿ ಬುಧವಾರ ಅಪರೂಪದ ಸಾಧನೆಯೊಂದು ಮೂಡಿ ಬಂತು. ಇದೇ ಮೊದಲ ಬಾರಿ ದೇಶದ ಪ್ರಮುಖ ಆಟಗಾರ್ತಿಯರಾದ ಅದಿತಿ ಅಶೋಕ್‌, ದೀಕ್ಷಾ ಡಾಗರ್ ಮತ್ತು ತ್ವೇಸಾ ಮಲಿಕ್ ಎಲ್‌ಪಿಜಿಎ (ಮಹಿಳೆಯರ ವೃತ್ತಿಪರ ಗಾಲ್ಫ್ ಸಂಸ್ಥೆ) ಜಂಟಿ ಟೂರ್ನಿಯೊಂದರಲ್ಲಿ ಆಡಲು ಅವಕಾಶ ಪಡೆದುಕೊಂಡಿದ್ದಾರೆ. ಗುರುವಾರ ಆರಂಭವಾಗಲಿರುವ ಸ್ಕಾಟಿಷ್ ಓಪನ್‌ನಲ್ಲಿ ಅವರು ವಿದೇಶಿ ಆಟಗಾರ್ತಿಯರೊಂದಿಗೆ ಕಣಕ್ಕೆ ಇಳಿಯಲಿದ್ದಾರೆ.

ಮಹಿಳೆಯರ ಯುರೋಪಿಯನ್‌ ಟೂರ್‌ನಲ್ಲಿ ಪ್ರಮುಖ ಟೂರ್ನಿಯಾಗಿರುವ ಲೇಡೀಸ್ ಸ್ಕಾಟಿಸ್ ಓಪನ್‌ 1986ರಿಂದ ಇದ್ದು 2017ರಲ್ಲಿ ಎಲ್‌ಪಿಜಿಇ ಅನುಮೋದನೆ ಲಭಿಸಿದೆ. ನಾಲ್ಕನೇ ಬಾರಿಎರಡೂ ಟೂರ್ನಿಗಳು ಜಂಟಿಯಾಗಿ ನಡೆಯುತ್ತಿವೆ.

ಗುರುವಾರ ಬೆಳಿಗ್ಗೆ 7.15ಕ್ಕೆ ದೀಕ್ಷಾ ಅವರು ಸ್ಟೆಫಾನಿ ಕಿರಿಯಾಕೊ ಮತ್ತು ಯೂ ಲೀ ಅವರೊಂದಿಗೆ ಕಣಕ್ಕೆ ಇಳಿಯಲಿದ್ದಾರೆ. ನಂತರ ಅದಿತಿ ಅಶೋಕ್ ಅವರು ಸ್ಕಾಟ್ಲೆಂಡ್‌ನ ಪ್ರಮುಖ ಆಟಗಾರ್ತಿ ಕಾರ್ಲಿ ಬೂತ್ ಮತ್ತು ದಕ್ಷಿಣ ಆಫ್ರಿಕಾದ ಲೀ ಆ್ಯನ್ ಅವರೊಂದಿಗೆ ಆಡಲಿದ್ದಾರೆ. ಮಹಿಳೆಯರ ಇಂಡಿಯನ್ ಓಪನ್ ಪ್ರಶಸ್ತಿ ವಿಜೇತೆ ಎಮಿಲಿ ಕ್ರಿಸ್ಟಿನ್ ಪೆಡ್ರೆಸನ್ ಮತ್ತು ಈಲಿಮಿ ನೊಹ್ ಜೊತೆ ಮಧ್ಯಾಹ್ನ ಟ್ವೇಸಾ ಸೆಣಸಲಿದ್ದಾರೆ.

ದೀಕ್ಷಾ ಮತ್ತು ತ್ವೇಸಾ ಶುಕ್ರವಾರ ಇಂಗ್ಲೆಂಡ್‌ಗೆ ತಲುಪಿದ್ದು ಸೋಮವಾರ ಎಡಿನ್‌ಬರೋಗೆ ಪ್ರಯಾಣಿಸಿದ್ದರು. ತಾಯಿಯೊಂದಿಗೆ ಸೋಮವಾರ ಇಲ್ಲಿಗೆ ಬಂದಿಳಿದಿರುವ ಅದಿತಿ ಗಾಲ್ಫ್ ಕೋರ್ಸ್‌ಗೆ ಭೇಟಿ ನೀಡಿ ಖುಷಿಯ ಮಾತುಗಳನ್ನಾಡಿದ್ದಾರೆ.

ದೀಕ್ಷಾ ಅವರ ತಂದೆಯೂ ಕ್ಯಾಡಿಯೂ ಆಗಿರುವ ನರೇನ್ ಡಾಗಾರ್ ‘ವಿಮಾನ ನಿಲ್ದಾಣದಲ್ಲೂ ಇಲ್ಲಿಗೆ ಬಂದ ಮೇಲೆಯೂ ಕೋವಿಡ್–19 ಪರೀಕ್ಷೆ ಮಾಡಿಸಿಕೊಂಡಿದ್ದೇವೆ. ಇದು ವಿಶೇಷ ಟೂರ್ನಿ. ಇಲ್ಲಿಗೆ ಬರುವ ಮುನ್ನ ಭಾರತದಲ್ಲಿ ಅನೇಕರು ನಮಗೆ ಸಹಾಯ ಮಾಡಿದ್ದಾರೆ. ಅವರೆಲ್ಲರ ಒಳ್ಳೆಯತನದಿಂದಾಗಿ ಪ್ರಯಾಣಕ್ಕೆ ಅವಕಾಶ ಲಭಿಸಿದೆ. ಕೊರೊನಾ ಹಾವಳಿಯಿಂದಾಗ ಆತಂಕ ಮತ್ತು ಉದ್ವೇಗ ಇದೆ. ಆದರೆ ಆಯೋಜಕರು ಮತ್ತು ಅಧಿಕಾರಿಗಳು ಧೈರ್ಯ ತುಂಬಿದ್ದಾರೆ’ ಎಂದು ಹೇಳಿದರು.

‘ಈ ಗಳಿಗೆಗಾಗಿ ವರ್ಷಗಳಿಂದ ಕಾಯುತ್ತಿದ್ದೆ. ಕೊರೊನಾ ಹಾವಳಿಯ ನಡುವೆಯೂ ಎಲ್ಲ ಸುರಕ್ಷಾ ಮಾನದಂಡಗಳನ್ನು ಪಾಲಿಸಿಕೊಂಡು ಕಠಿಣ ಅಭ್ಯಾಸ ನಡೆಸಿದ್ದೇನೆ. ಪ್ರಯಾಣದ ಸಂದರ್ಭದಲ್ಲಿ ಪಿಪಿಇ ಸ್ಯೂಟ್ ಧರಿಸಿದ್ದೆವು. ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು ಬಂದಿದ್ದು ಜನಸಂದಣಿಯಿಂದ ದೂರ ಇರುವಂತೆ ಎಚ್ಚರ ವಹಿಸಿದ್ದೇವೆ’ ಎಂದು ಕಳೆದ ಬಾರಿಯ ದಕ್ಷಿಣ ಆಫ್ರಿಕಾ ಓಪನ್ ಪ್ರಶಸ್ತಿ ಗೆದ್ದಿರುವ ದೀಕ್ಷಾ ತಿಳಿಸಿದರು.

ಸ್ಕಾಟಿ‌ಷ್ ಓಪನ್ ಮೂಲಕ ಯುರೋಪ್‌ನಲ್ಲಿ ಈ ವರ್ಷದ ಮಹಿಳೆಯರ ಟೂರ್‌ಗೆ ಚಾಲನೆ ಸಿಗಲಿದೆ. ಕೋವಿಡ್‌ನಿಂದ ಸ್ಥಗಿತಗೊಂಡಿದ್ದ ಎಲ್‌ಪಿಜಿಎ ಈಗಾಗಲೇ ಅಮೆರಿಕದಲ್ಲಿ ಡ್ರೈವ್ ಆನ್ ಚಾಂಪಿಯನ್‌ಷಿಪ್ ಮತ್ತು ಮ್ಯಾರಥಾನ್ ಎಲ್‌ಪಿಜಿಎ ಕ್ಲಾಸಿಕ್ ಟೂರ್ನಿಗಳನ್ನು ಆಯೋಜಿಸಿದೆ. ಈ ಎರಡು ಟೂರ್ನಿಗಳಲ್ಲಿ ಡ್ಯಾನಿಯಲಿ ಕಾಂಗ್ ಗೆಲುವು ಸಾಧಿಸಿಕೊಂಡಿದ್ದು 10 ತಿಂಗಳಲ್ಲಿ ಮೂರು ಜಯ ಗಳಿಸಿದ ಸಾಧನೆ ಅವರದಾಯಿತು.

ಸ್ಕಾಟಿಷ್ ಓಪನ್‌ ನಂತರ ಮುಂದಿನ ವಾರ ರಾಯಲ್ ಟ್ರೂನ್‌ನಲ್ಲಿ ಎಐಜಿ ಮಹಿಳೆಯರ ಓಪನ್ ನಡೆಯಲಿದೆ. ಗುರುವಾರ ಆರಂಭವಾಗುವ ಟೂರ್ನಿಯು ಇದರ ಅರ್ಹತಾ ಟೂರ್ನಿಯೂ ಆಗಿದೆ. ಒಟ್ಟು 144 ಆಟಗಾರ್ತಿಯರು ಕಣದಲ್ಲಿದ್ದು ಕೋಸ್ಟಾ ಡೆಲ್ ಸೋ‌ಲ್‌ನಲ್ಲಿ ನಡೆಯುವ ಟೂರ್ನಿ ಮೇಲೆ ಕಣ್ಣಿಟ್ಟಿರುವ ಪ್ರಮುಖ 20 ಮಂದಿಯಲ್ಲಿ 15 ಮಂದಿ ಪಟ್ಟಿಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT