ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಂಗಲ್‌ನಲ್ಲಿ ಅಂತರರಾಜ್ಯ ಮುಕ್ತ ಅಥ್ಲೆಟಿಕ್ಸ್: ಅಮ್ಲನ್, ಚಿತ್ರವೇಲ್‌ಗೆ ಚಿನ್ನ

Last Updated 19 ಸೆಪ್ಟೆಂಬರ್ 2021, 16:38 IST
ಅಕ್ಷರ ಗಾತ್ರ

ವಾರಂಗಲ್: ಅಸ್ಸಾಂನ ಅಮ್ಲನ್ ಬೊರ್ಗೊಹೈನ್ ಮತ್ತು ತಮಿಳುನಾಡಿನ ಪ್ರವೀಣ ಚಿತ್ರವೇಲ್ ಭಾನುವಾರ ಇಲ್ಲಿ ಮುಕ್ತಾಯವಾದ 60ನೇ ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ದಾಖಲೆ ಬರೆದರು.

ಪುರುಷರ 200 ಮೀಟರ್ಸ್ ಓಟದಲ್ಲಿ 20.75 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಅಮ್ಲನ್ ಚಿನ್ನ ಗೆದ್ದರು. 23 ವರ್ಷದ ಅಮ್ಲನ್ ಹೈದರಾಬಾದ್‌ನಲ್ಲಿ ನೆಲೆಸಿದ್ದಾರೆ. 2014ರ ನಂತರ ಅವರು ಇದೇ ಮೊದಲ ಸಲ 200 ಮೀಟರ್ಸ್ ಓಟದಲ್ಲಿ ಭಾಗವಹಿಸಿದ್ದಾರೆ.

ತಮಿಳುನಾಡಿನ 20 ವರ್ಷದ ಚಿತ್ರವೇಲ್ ಅವರು ಪುರುಷರ ಟ್ರಿಪಲ್ ಜಂಪ್‌ನಲ್ಲಿ 16.88 ಮೀಟರ್ ದೂರ ಜಿಗಿದು ಚಿನ್ನದ ಪದಕ ಜಯಿಸಿದರು. 2019ರಲ್ಲಿ ತಾವೇ ಮಾಡಿದದ 16.51 ಮೀಟರ್ ದಾಖಲೆಯನ್ನು ಉತ್ತಮಪಡಿಸಿಕೊಂಡರು.

ಈ ಹಿಂದೆ ಉತ್ತಮ ಸಾಧನೆ ಮಾಡಿದ್ದ ರಂಜೀತ್ ಮಹೇಶ್ವರಿ (17.30 ಮೀ) ಮತ್ತು ಅರ್ಪಿಂದರ್ ಸಿಂಗ್ (17.17 ಮೀ) ಅವರ ನಂತರದ ಸ್ಥಾನವನ್ನು ಚಿತ್ರವೇಲ್ ಪಡೆದರು.

ಇಲ್ಲಿ ಅವರಿಗೆ ನಿಕಟ ಪೈಪೋಟಿಯೊಡ್ಡಿದ ಅಬ್ದುಲ್ಲಾ ಅಬೂಬಕ್ಕರ್ (16.84ಮೀ) ಮತ್ತು ಕಾರ್ತಿಕ್ ಉನ್ನಿಕೃಷ್ಣನ್ (16.80ಮೀ) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು.

ಮಂಜು ಬಾಲಾ ದಾಖಲೆ: ಮಹಿಳೆಯರ ಹ್ಯಾಮರ್ ಥ್ರೋನಲ್ಲಿ ಐದು ಥ್ರೋಗಳನ್ನು 60 ಮೀಟರ್ಸ್‌ಗಿಂತಲೂ ಹೆಚ್ಚು ಅಂತರಕ್ಕೆ ಎಸೆದ ಮಂಜು ಬಾಲಾಸಿಂಗ್ ನೂತನ ದಾಖಲೆ ಬರೆದರು. ಅವರು ತಮ್ಮ ಮೂರನೇ ಎಸೆತದಲ್ಲಿ 64.42 ಮೀ ಸಾಧನೆ ಮಾಡಿ ದಾಖಲೆ ಬರೆದರು.

2014ರ ಏಷ್ಯನ್ ಗೇಮ್ಸ್‌ನಲ್ಲಿ ಮಂಜುಬಾಲಾ ಪದಕ ಜಯಿಸಿದ್ದರು.

ಎಸ್‌ಡಬ್ಲ್ಯುಆರ್‌ಗೆ 5 ಚಿನ್ನ

ನೈರುತ್ಯ ರೈಲ್ವೆಯ ಅಥ್ಲೀಟ್‌ಗಳು ಐದು ಚಿನ್ನ, ಒಂದು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳನ್ನು ಜಯಿಸಿದ್ದಾರೆ.

ಬೆಂಗಳೂರಿನ ರೈಲ್ವೆ ಕಚೇರಿಯಲ್ಲಿ ಜೂನಿಯರ್ ಕ್ಲರ್ಕ್ ಆಗಿರುವ ಐಶ್ವರ್ಯ ಶನಿವಾರ ಲಾಂಗ್ ಜಂಪ್ ಮತ್ತು ಟ್ರಿಪಲ್ ಜಂಪ್‌ನಲ್ಲಿ ಚಿನ್ನದ ಪದಕಗಳನ್ನು ಜಯಿಸಿದರು.

ಜೆಸ್ಸಿ ಸುಂದರೇಶನ್ ಹೈಜಂಪ್ ನಲ್ಲಿ ಚಿನ್ನ, ಸಿಮಿ 100 ಮೀಟರ್‌ ಓಟದಲ್ಲಿ ಕಂಚು, 4X100 ಮೀ ಓಟದಲ್ಲಿ ಚಿನ್ನದ ಪದಕ ಜಯಿಸಿದರು.

ಚಿನ್ನ ಗೆದ್ದ ಮಹಿಳೆಯರ ರಿಲೇ ತಂಡದಲ್ಲಿ ದಾನೇಶ್ವರಿ ಅವರೂ ಇದ್ದರು. ‌20 ಕಿ.ಮೀ ರೇಸ್‌ ವಾಕ್‌ನಲ್ಲಿ ರವೀನಾ ಬೆಳ್ಳಿ ಮತ್ತು ಪೋಲ್‌ವಾಲ್ಟ್‌ನಲ್ಲಿ ಮೆರಿಯಾ ಜೇಸನ್ ಕಂಚು ಜಯಿಸಿದರು. ಪುರುಷರ 20 ಕಿ.ಮೀ ರೇಸ್‌ ವಾಕ್‌ನಲ್ಲಿ ಜುನೀದ್ ಕಂಚು ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT