ವಿಜ್ಕ್ ಆನ್ ಜಿ (ಹಾಲೆಂಡ್): ವಿಶ್ವನಾಥನ್ ಆನಂದ್, ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಒಂದು ಹಂತದಲ್ಲಿ ಇಕ್ಕಟ್ಟಿಗೆ ಸಿಲುಕಿಸಿದರೂ ಅಂತಿಮವಾಗಿ ಪಾಯಿಂಟ್ ಹಂಚಿಕೊಂಡರು. ಟಾಟಾ ಸ್ಟೀಲ್ ಮಾಸ್ಟರ್ಸ್ ಚೆಸ್ ಟೂರ್ನಿಯ ಏಳನೇ ಸುತ್ತಿನ ನಂತರ 3.5 ಪಾಯಿಂಟ್ಸ್ ಸಂಗ್ರಹಿಸಿರುವ ಆನಂದ್ ಈಗ ಕಾರ್ಲ್ ಸನ್ (ನಾರ್ವೆ) ಸೇರಿ ನಾಲ್ವರ ಜೊತೆ ಐದನೇ ಸ್ಥಾನ ಹಂಚಿಕೊಂಡಿದ್ದಾರೆ.
ಭಾನುವಾರ ಬಿಳಿ ಕಾಯಿಗಳಲ್ಲಿ ಆಡಿದ ಆನಂದ್ ಒಂದು ಹಂತದಲ್ಲಿ ಎಕ್ಸ್‌ಟ್ರಾ ಪಾನ್ ಹೊಂದಿದ್ದರು. ಆದರೆ ಕಾರ್ಲ್‌ಸನ್ ಛಲದ ಆಟ ಪ್ರದರ್ಶಿಸಿ ಸೋಲಿನಿಂದ ಬಚಾವಾದರು. ಇನ್ನೂ ಆರು ಸುತ್ತಿನ ಆಟಗಳು ಬಾಕಿಯಿವೆ.
ಇರಾನ್‌ನ 16 ವರ್ಷದ ಪ್ರತಿಭಾನ್ವಿತ ಅಲಿರೇಝಾ ಫಿರೋಜ್‌ಐದು ಪಾಯಿಂಟ್‌ಗಳೊಡನೆ ಏಕಾಂಗಿಯಾಗಿ ಅಗ್ರಸ್ಥಾನದಲ್ಲಿದ್ದಾರೆ. ಅವರು ಏಳನೇ ಸುತ್ತಿನಲ್ಲಿ ಅಮೆರಿಕದ ಜೆಫ್ರಿ ಕ್ಸಿಯಾಂಗ್ ಅವರನ್ನು ಸೋಲಿಸಿದರು. ಜೋರ್ಡಾನ್ ವಾನ್ ಫಾರೀಸ್ಟ್ (ನೆದರ್ಲೆಂಡ್ಸ್) ಅವರು ಕಪ್ಪು ಕಾಯಿಗಳಲ್ಲಿ ಆಡಿ ಪಂದ್ಯ ಗೆದ್ದ ಮೊದಲ ಆಟಗಾರ ಎನಿಸಿದರು. ಅವರು ರಷ್ಯದ ನಿಕಿತಾ ವಿಟುಯಿಗೊವ್ ವಿರುದ್ಧ ಜಯಗಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.