ಬುಧವಾರ, ಮೇ 18, 2022
24 °C

ಕಬಡ್ಡಿಯಲ್ಲಿ ಬೈಲಹೊಂಗಲದ ಯುವತಿ ಸಾಧನೆ: ಭಾರತ ತಂಡಕ್ಕೆ ಆಂಜಲಿ ಆಯ್ಕೆ

ರವಿ ಎಂ. ಹುಲಕುಂದ Updated:

ಅಕ್ಷರ ಗಾತ್ರ : | |

Prajavani

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಪಟ್ಟಣದ ಇಂದಿರಾ ನಗರ ನಿವಾಸಿ, ಪ್ರಥಮ ದರ್ಜೆ ಮಹಿಳಾ ಸರ್ಕಾರಿ ಕಾಲೇಜಿನ ಬಿ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ ಅಂಜಲಿ ಕೊಟಬಾಗಿ ಖೇಲೋ ಇಂಡಿಯಾ ವತಿಯಿಂದ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಅಂತರರಾಷ್ಟ್ರೀಯ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಪುರಸಭೆ ವಾರ್ಡ್ ನಂ.24ರ ಸದಸ್ಯೆ ಅಂಬಿಕಾ ಪ್ರಕಾಶ ಕೊಟಬಾಗಿ ಅವರ ಪುತ್ರಿಯಾದ ಅಂಜಲಿ, ಫೆ.11ರಿಂದ 15ರವರೆಗೆ ನೇಪಾಳದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯದಲ್ಲಿ ಭಾರತ ತಂಡ ಪ್ರತಿನಿಧಿಸಲ್ಲಿದ್ದಾರೆ.

‘ಈ ಸಾಧನೆಗೆ ಆತ್ಮವಿಶ್ವಾಸ ಬಹು ಮುಖ್ಯವಾಗಿದೆ. ಓದು, ಬರಹದ ಜೊತೆಗೆ ಆಟ, ಓಟ ಅತ್ಯವಶ್ಯವಿದೆ. ಕೊರೊನಾ ಪರಿಸ್ಥಿತಿಯಿಂದ ಸಿಕ್ಕಿದ್ದ ಬಿಡುವಿನ ವೇಳೆಯಲ್ಲಿ ಓದಿನ ಜೊತೆಗೆ ಕಬಡ್ಡಿ ಆಟದ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದ್ದೆ. ಇದು ಗುರಿ ಸಾಧನೆಗೆ ಸಹಕಾರಿ ಆಗಿದೆ. ತರಬೇತುದಾರ ಶಿಕ್ಷಕರ ಕೊಡುಗೆಯೂ ಇದೆ’ ಎಂದು ಅಂಜಲಿ ‘ಪ್ರಜಾವಾಣಿ’ಗೆ ತಿಳಿಸಿದರು.

ಆಗ್ರಾದಲ್ಲಿ ನಡೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಚಿನ್ನದ ಪದಕ ಗೆದ್ದಿದ್ದಾರೆ. ಉತ್ತಮ ಆಟ ಪ್ರದರ್ಶಿಸಿದ 8 ಜಿಲ್ಲೆಗಳವರನ್ನು ಒಳಗೊಂಡ ರಾಜ್ಯ ತಂಡದಲ್ಲಿ ಅವರೂ ಒಬ್ಬರಾಗಿದ್ದರು.

‘ಅಂತರರಾಷ್ಟ್ರೀಯ ಪಂದ್ಯದಲ್ಲಿ ಎಂಟು ದೇಶಗಳ ತಂಡಗಳು ಮುಖಾಮುಖಿ ಆಗಲಿವೆ. ಅಂಜಲಿ ಭಾರತ ತಂಡದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾಳೆ. ಬರುವ ದಿನಗಳಲ್ಲೂ ಉತ್ತಮ ಆಟ ಪ್ರದರ್ಶಿಸಿ ಸಾಧಕಿಯಾಗಿ ಹೊರಹೊಮ್ಮಲಿ’ ಎಂದು ಕರ್ನಾಟಕ ತಂಡದ ತರಬೇತುದಾರ ಶಿಕ್ಷಕ ಮಹೇಶ ಅಂಕುಲ ಹಾರೈಸಿದರು.

‘ಮಗಳ ಸಾಧನೆಯಿಂದ ನಮ್ಮ ಗೌರವ ಮತ್ತಷ್ಟು ಹೆಚ್ಚಿದೆ. ನೆರೆ, ಹೊರೆಯವರು ಆಕೆಯನ್ನು ಕೊಂಡಾಡುತ್ತಿದ್ದಾರೆ. ಹೆಣ್ಣು ಮಗಳು ಕಬಡ್ಡಿಯಲ್ಲಿ ಸಾಧನೆ ಮಾಡುವುದು ಸುಲಭದ ಮಾತಲ್ಲ. ಆ ಸಾಧಕರ ಪಟ್ಟಿಯಲ್ಲಿ ಮಗಳು ಸೇರಿರುವುದು ಹರ್ಷ ತಂದಿದೆ. ಕಾಲೇಜಿನವರ ಸಹಕಾರ ಮರೆಯಲಾಗದು’ ಎನ್ನುತ್ತಾರೆ ತಂದೆ ಪ್ರಕಾಶ ಕೊಟಬಾಗಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.