ಸೋಮವಾರ, ಆಗಸ್ಟ್ 26, 2019
21 °C

ಅಥ್ಲೆಟಿಕ್ಸ್‌: ನಿರ್ಮಲಾಗೆ ನಿರಾಸೆ

Published:
Updated:
Prajavani

ಲಂಡನ್‌ (ಪಿಟಿಐ): ವಿಶ್ವ ಚಾಂಪಿಯನ್‌ಷಿಪ್‌ನ ಮಹಿಳೆಯರ 400 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಭಾರತದ ನಿರ್ಮಲಾ ಶೆರಾನ್‌ ಅವರು ಸೆಮಿಫೈನಲ್‌ನಲ್ಲಿ ನಿರಾಸೆ ಕಂಡರು.

ಒಲಿಂಪಿಕ್ಸ್‌ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್‌ನ ಎರಡನೇ ಹೀಟ್‌ನಲ್ಲಿ ನಿರ್ಮಲಾ ಅವರು
53.07 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಈ ಮೂಲಕ ಒಟ್ಟಾರೆ 22ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಹೀಟ್‌ನಲ್ಲಿ ಒಟ್ಟು 24 ಓಟಗಾರ್ತಿಯರು ಭಾಗವಹಿಸಿದ್ದರು.

50.08 ಸೆಕೆಂಡುಗಳಲ್ಲಿ ನಿಗದಿತ ದೂರ ಕ್ರಮಿಸಿದ ಬಹ್ರೇನ್‌ನ  ಸಾಲ್ವ ನಾಸೆರ್‌ ಮೊದಲ ಸ್ಥಾನ ಪಡೆದು ಫೈನಲ್‌ಗೆ ಅರ್ಹತೆ ಗಳಿಸಿದರು.

ಹಿಂದಿನ ಆವೃತ್ತಿಯಲ್ಲಿ ಚಿನ್ನ ಗೆದ್ದಿರುವ ಅಲಿಸನ್‌ ಫೆಲಿಕ್ಸ್‌ ಅವರು 50.12 ಸೆಕೆಂಡುಗಳಲ್ಲಿ ಅಂತಿಮ ರೇಖೆ ಮುಟ್ಟಿದರು.

ಟ್ರ್ಯಾಕ್‌ನ ಮೂರನೇ ಸಾಲಿನಲ್ಲಿ ಓಡಿದ ನಿರ್ಮಲಾ ಅವರಿಗೆ ಇಲ್ಲಿ ಫೈನಲ್‌ ಪ್ರವೇಶಿಸುವ ಉತ್ತಮ ಅವಕಾಶ ಇತ್ತು.  200 ಮೀಟರ್ಸ್‌
ವರೆಗೂ ದಿಟ್ಟತನದಿಂದ ಓಡಿದ ಅವರು ನಂತರ ವೇಗ ತಗ್ಗಿಸಿಕೊಂಡು ಹಿಂದೆ ಬಿದ್ದರು. ಹೀಟ್ಸ್‌ನಲ್ಲಿ  ನಿರ್ಮಲಾ
ಅವರು 52.01 ಸೆಕೆಂಡುಗಳ ಸಾಮರ್ಥ್ಯ ತೋರಿ ಸೆಮಿಫೈನಲ್‌ಗೆ ಅರ್ಹತೆ ಗಳಿಸಿದ್ದರು.

 ‘ಇಲ್ಲಿ ಪದಕ ಗೆಲ್ಲಲಾಗದಿದ್ದರೆ, ವೈಯಕ್ತಿಕ ಸಾಧನೆಯನ್ನಾದರೂ (51.28ಸೆ.) ಉತ್ತಮಪಡಿಸಿಕೊಳ್ಳಬೇಕು ಎಂಬ ಗುರಿ ಇಟ್ಟುಕೊಂಡಿದ್ದೆ. ಹೀಟ್ಸ್‌ನಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಿದ್ದರಿಂದ ವಿಶ್ವಾಸ ಹೆಚ್ಚಿತ್ತು. ಆದರೆ ಸೆಮಿಫೈನಲ್‌ ಹೀಟ್ಸ್‌ನಲ್ಲಿ ಚುರುಕಾಗಿ ಓಡಲು ಆಗಲಿಲ್ಲ’ ಎಂದು ಸ್ಪರ್ಧೆಯ ಬಳಿಕ ನಿರ್ಮಲಾ ಪ್ರತಿಕ್ರಿಯಿಸಿದ್ದಾರೆ.

ಸ್ವಪ್ನಾಗೆ 26ನೇ ಸ್ಥಾನ:ಹೆಪ್ಟಾಥ್ಲಾನ್‌ನಲ್ಲಿ ಕಣಕ್ಕಿಳಿದಿದ್ದ ಸ್ವಪ್ನಾ ಬರ್ಮನ್‌ ಅವರು 26ನೇ ಸ್ಥಾನ ಗಳಿಸಲಷ್ಟೇ ಶಕ್ತರಾದರು.

ಸ್ಪರ್ಧೆಯ ವೇಳೆ ಬೆನ್ನು ನೋವಿನಿಂದ ಬಳಲಿದ್ದ ಅವರು 5,431 ಪಾಯಿಂಟ್ಸ್‌ ಕಲೆಹಾಕಿದರು.

Post Comments (+)