ಬುಧವಾರ, ಆಗಸ್ಟ್ 4, 2021
24 °C

ಅಥ್ಲೆಟಿಕ್ಸ್ | ಬಹದ್ದೂರ್‌ ಸಿಂಗ್‌ ಕೋಚಿಂಗ್‌‌ ಪಯಣ ಅಂತ್ಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತ ಅಥ್ಲೆಟಿಕ್ಸ್‌ ತಂಡಕ್ಕೆ 25 ವರ್ಷಗಳ ಕಾಲ ಮಾರ್ಗದರ್ಶನ ನೀಡಿದ್ದ ಬಹದ್ದೂರ್‌ ಸಿಂಗ್‌ ಅವರ ಕೋಚಿಂಗ್‌ ಪಯಣ ಅಂತ್ಯಗೊಂಡಿದೆ.

74 ವರ್ಷ ವಯಸ್ಸಿನ ಬಹದ್ದೂರ್‌ ಅವರ ಒಪ್ಪಂದದ ಅವಧಿಯು ಜೂನ್ 30ಕ್ಕೆ ಮುಕ್ತಾಯಗೊಂಡಿತ್ತು. 70 ವರ್ಷ ಮೇಲ್ಪಟ್ಟವರನ್ನು ಕೋಚ್‌ ಹುದ್ದೆಗೆ ನೇಮಿಸಿಕೊಳ್ಳಬಾರದೆಂದು ಕೇಂದ್ರ ಕ್ರೀಡಾ ಸಚಿವಾಲಯವು ನಿಯಮ ರೂಪಿಸಿದೆ. ಹೀಗಾಗಿ ಬಹದ್ದೂರ್‌ ಅವರನ್ನು ಮುಖ್ಯ ಕೋಚ್‌ ಹುದ್ದೆಯಲ್ಲಿ ಮುಂದುವರಿಸದಿರಲು ಭಾರತೀಯ ಕ್ರೀಡಾ ಪ್ರಾಧಿಕಾರವು (ಸಾಯ್‌) ನಿರ್ಧರಿಸಿದೆ.

1978ರಲ್ಲಿ ಬ್ಯಾಂಕಾಕ್‌  ಮತ್ತು 1982ರಲ್ಲಿ ದೆಹಲಿಯಲ್ಲಿ ನಡೆದಿದ್ದ ಏಷ್ಯನ್‌ ಕ್ರೀಡಾಕೂಟದ ಶಾಟ್‌ಪಟ್‌ ಸ್ಪರ್ಧೆಯಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದ ಬಹದ್ದೂರ್‌ ಅವರು 1995ರ ಫೆಬ್ರುವರಿಯಲ್ಲಿ ಭಾರತ ಅಥ್ಲೆಟಿಕ್ಸ್‌ ತಂಡದ ಮುಖ್ಯ ಕೋಚ್‌ ಹುದ್ದೆಗೆ ಏರಿದ್ದರು.

‘ಶಾಟ್‌ಪಟ್‌ ಸ್ಪರ್ಧಿ ಹಾಗೂ ಮುಖ್ಯ ಕೋಚ್‌ ಆಗಿ ಬಹದ್ದೂರ್ ಸಿಂಗ್‌ ಅವರು ಭಾರತದ ಅಥ್ಲೆಟಿಕ್ಸ್‌ಗೆ ನೀಡಿರುವ ಕೊಡುಗೆ ಅಪಾರ. ಟೋಕಿಯೊ ಒಲಿಂಪಿಕ್ಸ್‌ನಲ್ಲೂ ಅವರು ಭಾರತದ ಅಥ್ಲೀಟ್‌ಗಳಿಗೆ ತರಬೇತಿ ನೀಡಬೇಕೆಂಬ ಆಸೆ ನಮಗಿತ್ತು. ಕೊರೊನಾ ಬಿಕ್ಕಟ್ಟಿನಿಂದಾಗಿ ಒಲಿಂಪಿಕ್ಸ್‌ ಮುಂದೂಡಲಾಯಿತು. ಅವರ ಅನುಭವ ವ್ಯರ್ಥವಾಗಲು ನಾವು ಬಿಡುವುದಿಲ್ಲ. ಮುಂದೆಯೂ ಅವರು ನಮ್ಮ ಜೊತೆಗೆ ಇದ್ದು ಅಗತ್ಯ ಮಾರ್ಗದರ್ಶನ ನೀಡಲಿದ್ದಾರೆ. ಅವರಿಗೆ ಸೂಕ್ತ ಸ್ಥಾನಮಾನ ಕೊಡುತ್ತೇವೆ’ ಎಂದು ಭಾರತ ಅಥ್ಲೆಟಿಕ್ಸ್‌ ಫೆಡರೇಷನ್‌ (ಎಎಫ್‌ಐ) ಅಧ್ಯಕ್ಷ ಆದಿಲ್‌ ಸುಮರಿವಾಲಾ ಮಂಗಳವಾರ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಬಹದ್ದೂರ್‌ ಅವರು 1974ರಲ್ಲಿ ಟೆಹರಾನ್‌ನಲ್ಲಿ ನಡೆದಿದ್ದ ಏಷ್ಯನ್‌ ಕ್ರೀಡಾಕೂಟದಲ್ಲಿ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದ್ದರು. ಏಷ್ಯನ್‌ ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌ ಚಾಂಪಿಯನ್‌ಷಿಪ್‌ನಲ್ಲಿ ಅವರು ಒಂದು ಚಿನ್ನ (1975), ಒಂದು ಬೆಳ್ಳಿ (1981) ಹಾಗೂ ಎರಡು ಕಂಚಿನ ಪದಕಗಳನ್ನು (1973 ಮತ್ತು 1979) ಜಯಿಸಿದ್ದರು.

1980ರಲ್ಲಿ ಮಾಸ್ಕೊದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಬಹದ್ದೂರ್‌ ಅವರಿಗೆ ಪದ್ಮಶ್ರೀ, ಅರ್ಜುನ ಹಾಗೂ ದ್ರೋಣಾಚಾರ್ಯ ಗೌರವಗಳೂ ಸಂದಿವೆ.

ಬಹದ್ದೂರ್‌ ಅವರ ಮಾರ್ಗದರ್ಶನದಲ್ಲಿ ತರಬೇತುಗೊಂಡಿದ್ದ ಭಾರತ ಅಥ್ಲೆಟಿಕ್ಸ್‌ ತಂಡವು 2010ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಎರಡು ಚಿನ್ನ ಸೇರಿದಂತೆ ಒಟ್ಟು 12 ಪದಕಗಳನ್ನು ಜಯಿಸಿತ್ತು.

2018ರಲ್ಲಿ ಜಕಾರ್ತದಲ್ಲಿ ನಡೆದಿದ್ದ ಏಷ್ಯನ್‌ ಕ್ರೀಡಾಕೂಟದ ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌ ವಿಭಾಗದಲ್ಲಿ ತಂಡವು 20 ಪದಕಗಳನ್ನು ಗೆದ್ದಿತ್ತು. ಇದರಲ್ಲಿ ಎಂಟು ಚಿನ್ನ ಹಾಗೂ ಒಂಬತ್ತು ಬೆಳ್ಳಿಯ ಪದಕಗಳು ಸೇರಿದ್ದವು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು