ಬಾಲ್ ಬ್ಯಾಡ್ಮಿಂಟನ್: ಮಂಗಳೂರು ವಿವಿ ಮಹಿಳಾ ತಂಡ ಚಾಂಪಿಯನ್

ಮಂಗಳೂರು: ಮಹಿಳೆಯರ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಮಂಗಳೂರು ವಿಶ್ವವಿದ್ಯಾಲಯ ಸತತ ಎಂಟನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ.
ಚೆನ್ನೈನ ಕ್ರೆಸೆಂಟ್ ವಿವಿ ಆಶ್ರಯದಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಸೋಮವಾರ ನಡೆದ ಮೂರು ಸೆಮಿಫೈನಲ್ ಲೀಗ್ ಪಂದ್ಯಗಳಲ್ಲೂ ಏಕಪಕ್ಷೀಯ ಜಯ ಸಾಧಿಸಿದ ತಂಡ ಒಟ್ಟು 12ನೇ ಬಾರಿ ಚಾಂಪಿಯನ್ ಆದ ಸಾಧನೆಗೆ ಪಾತ್ರವಾಯಿತು.
ಒಟ್ಟು 84 ವಿವಿಗಳು ಭಾಗವಹಿಸಿದ್ದ ಟೂರ್ನಿಯಲ್ಲಿ ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶ ಪಡೆದಿದ್ದ ಮಂಗಳೂರು ವಿವಿ ಸೇಲಂನ ಪೆರಿಯಾರ್ ವಿವಿ ತಂಡವನ್ನು ಸೋಲಿಸಿ ದಾಖಲೆಯ ಸತತ 18ನೇ ಬಾರಿ ಲೀಗ್ ಹಂತಕ್ಕೆ ಪ್ರವೇಶ ಪಡೆದುಕೊಂಡಿತು. ಸೆಮಿಫೈನಲ್ ಲೀಗ್ ಪಂದ್ಯಗಳಲ್ಲಿ ಅಣ್ಣಾ ವಿವಿ ತಂಡವನ್ನು 35-24, 35-24ರಲ್ಲಿ, ಮದ್ರಾಸ್ ವಿವಿ ತಂಡವನ್ನು 35-27, 35-32ರಲ್ಲಿ ಮತ್ತು ಚೆನ್ನೈನ ಎಸ್.ಆರ್.ಎಂ ವಿವಿ ತಂಡವನ್ನು 35-22, 35-25ರಲ್ಲಿ ಸೋಲಿಸಿತು. ಮಂಗಳೂರು ಒಟ್ಟು 9 ಪಾಯಿಂಟ್ ಪಡೆದುಕೊಂಡಿತು. 4 ಪಾಯಿಂಟ್ ಗಳಿಸಿದ ಮದ್ರಾಸ್ ರನ್ನರ್ ಅಪ್ ಆದರೆ, ಎಸ್‌ಆರ್‌ಎಂ ತೃತೀಯ ಸ್ಥಾನ ಗಳಿಸಿತು. ಮಂಗಳೂರು ತಂಡದ ನಾಯಕಿ, ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಜಯಲಕ್ಷ್ಮಿ 8 ಬಾರಿಯೂ ಪ್ರಶಸ್ತಿ ಗೆದ್ದ ತಂಡ ಪ್ರತಿನಿಧಿಸಿ ದಾಖಲೆ ನಿರ್ಮಿಸಿದ್ದಾರೆ. 4ನೇ ಬಾರಿ ನಾಯಕಿ ಯಾಗಿ ತಂಡವನ್ನು ಮುನ್ನಡೆಸಿದ್ದಾರೆ ಎಂದು ಕೋಚ್ ಪ್ರವೀಣ್ ಕುಮಾರ್ ಕೆ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.