ಶುಕ್ರವಾರ, ನವೆಂಬರ್ 15, 2019
27 °C

ವಿಶ್ವಕಪ್ ಬ್ಯಾಸ್ಕೆಟ್‌ಬಾಲ್‌: ಸ್ಪೇನ್–ಅರ್ಜೆಂಟೀನಾ ಫೈನಲ್ ಹಣಾಹಣಿ

Published:
Updated:
Prajavani

ಬೀಜಿಂಗ್: ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು ಕಾದಾಡಿದ ಸ್ಪೇನ್‌ ತಂಡ ವಿಶ್ವಕಪ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಫೈನಲ್ ಪ್ರವೇಶಿಸಿತು. ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸ್ಪೇನ್ 95–88ರಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿತು.

ಎನ್‌ಬಿಎ ಟೂರ್ನಿಯಲ್ಲಿ ಮಿಂಚಿದ್ದ ಮಾರ್ಕ್ ಗಸೋಲ್ ಅವರು ಸ್ಪೇನ್ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದರು. ಭಾನುವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಈ ತಂಡ ಅರ್ಜೆಂಟೀನಾವನ್ನು ಎದುರಿಸಲಿದೆ.

ಶುಕ್ರವಾರ ನಡೆದ ಎರಡನೇ ಸೆಮಿಫೈನಲ್‌ನಲ್ಲಿ ಅರ್ಜೆಂಟೀನಾ 80–66ರಲ್ಲಿ ಫ್ರಾನ್ಸ್‌ ತಂಡವನ್ನು ಮಣಿಸಿತು.

ನಿಗದಿತ ಅವಧಿಯಲ್ಲಿ ಸ್ಪೇನ್ ಮತ್ತು ಆಸ್ಟ್ರೇಲಿಯಾ 71–71ರ ಸಮಬಲ ಸಾಧಿಸಿದ್ದವು. ಓವರ್‌ಟೈಂನಲ್ಲಿ ಕೆಚ್ಚೆದೆಯಿಂದ ಆಡಿದ ಸ್ಪೇನ್‌ ಜಯಭೇರಿ ಮೊಳಗಿಸಿತು.

ಗಸೋಲ್ ಆರು ರೀಬೌಂಡ್‌ಗಳು ಒಳಗೊಂಡಂತೆ ಒಟ್ಟು 33 ಪಾಯಿಂಟ್ ಕಲೆ ಹಾಕಿದರು. ರಿಕಿ ರುಬಿಯೊ 12 ಅಸಿಸ್ಟ್ಸ್ ಒಳಗೊಂಡಂತೆ 19 ಪಾಯಿಂಟ್ಸ್ ಗಳಿಸಿದರು. ಆಸ್ಟ್ರೇಲಿಯಾ ಪರ ಪ್ಯಾಟಿ ಮಿಲ್ಸ್ 34 ಪಾಯಿಂಟ್ಸ್ ಗಳಿಸಿದರು.

ಮಿಂಚಿದ ಲೂಯಿಸ್‌ ಸ್ಕೋಲ: ಫಾರ್ವರ್ಡ್ ಆಟಗಾರ ಲೂಯಿಸ್ ಸ್ಕೋಲ ಗಳಿಸಿದ 28 ಪಾಯಿಂಟ್‌ಗಳ ಬಲದಿಂದ ಅರ್ಜೆಂಟೀನಾ ತಂಡ ಫ್ರಾನ್ಸ್ ವಿರುದ್ಧ ಜಯ ಗಳಿಸಿತು. ಚಾಂಪಿಯನ್‌ ಅಮೆರಿಕವನ್ನು ಕ್ವಾರ್ಟರ್ ಫೈನಲ್‌ನಲ್ಲಿ ಮಣಿಸಿದ್ದ ಫ್ರಾನ್ಸ್ ಭರವಸೆಯಿಂದಲೇ ಕಣಕ್ಕೆ ಇಳಿದಿತ್ತು. ಆದರೆ ತಂಡದ ಆಟಗಾರರಿಗೆ ಅರ್ಜೆಂಟೀನಾದ ತಂತ್ರಗಳಿಗೆ ಪ್ರತಿತಂತ್ರ ಹೆಣೆಯಲು ಆಗಲಿಲ್ಲ.

ಪ್ರತಿಕ್ರಿಯಿಸಿ (+)