ಶನಿವಾರ, ನವೆಂಬರ್ 26, 2022
23 °C
ವಿಶ್ವಕಪ್‌ ಅರ್ಹತಾ ಪಂದ್ಯದಲ್ಲಿ ಸೋಲು

ಬ್ಯಾಸ್ಕೆಟ್‌ಬಾಲ್‌: ಲೆಬನಾನ್‌ಗೆ ಸಾಟಿಯಾಗದ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಲೆಬನಾನ್ ತಂಡದ ಆಟಗಾರರ ವೇಗ ಮತ್ತು ಚಾಕಚಕ್ಯತೆಗೆ ಸರಿಸಾಟಿಯಾಗಿ ನಿಲ್ಲುವಲ್ಲಿ ವಿಫಲವಾದ ಭಾರತ ತಂಡ, ಫಿಬಾ ವಿಶ್ವಕಪ್‌ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಏಷ್ಯಾ ವಲಯದ ಅರ್ಹತಾ ಪಂದ್ಯದಲ್ಲಿ ನಿರಾಸೆ ಅನುಭವಿಸಿತು.

ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಭಾರತ 63–95 ಪಾಯಿಂಟ್‌ಗಳಿಂದ ಪರಾಭವಗೊಂಡಿತು.

ಜೊನಾಥನ್‌ ಅರ್ಲೆಜ್‌ (21) ಮತ್ತು ವಯೆಲ್‌ ಅರಾಕ್ಜಿ (15) ಅವರು ಲೆಬನಾನ್‌ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಭಾರತದ ಪರ ಪ್ರಿನ್ಸ್‌ ಪ್ರಣವ್‌ 19 ಪಾಯಿಂಟ್ಸ್‌ ಕಲೆಹಾಕಿದರೆ, ಪ್ರಶಾಂತ್‌ ಸಿಂಗ್‌ ರಾವತ್‌ ಮತ್ತು ಮುನಿ ಬೆಕ್‌ ಹಫೀಜ್‌ ಅವರು ತಲಾ 10 ಪಾಯಿಂಟ್ಸ್‌ ಗಳಿಸಿದರು.

ಪಂದ್ಯದಲ್ಲಿ ಭಾರತ ಸಕಾರಾತ್ಮಕ ಆರಂಭ ಪಡೆದಿತ್ತು. ಮೊದಲ ಐದು ನಿಮಿಷಗಳಲ್ಲಿ 11–9 ರಲ್ಲಿ ಮುನ್ನಡೆ ಪಡೆದಿತ್ತು. ಮರುಹೋರಾಟ ನಡೆಸಿದ ಲೆಬನಾನ್‌ ಕೆಲವೇ ನಿಮಿಷಗಳಲ್ಲಿ 16–11 ರಲ್ಲಿ ಮೇಲುಗೈ ಸಾಧಿಸಿತು. ಆ ಬಳಿಕ ಪಂದ್ಯದ ಕೊನೆಯವರೆಗೂ ಭಾರತಕ್ಕೆ ಮುನ್ನಡೆ ಗಳಿಸಲು ಎದುರಾಳಿಗಳು ಅವಕಾಶ ನೀಡಲಿಲ್ಲ.

ಮೊದಲ ಕ್ವಾರ್ಟರ್‌ ಕೊನೆಗೊಂಡಾಗ ಲೆಬನಾನ್‌ ಹತ್ತು ಪಾಯಿಂಟ್‌ಗಳ (27–17) ಮೇಲುಗೈ ಸಾಧಿಸಿತ್ತು. ಎರಡನೇ ಕ್ವಾರ್ಟರ್‌ನಲ್ಲೂ ಪ್ರವಾಸಿ ತಂಡದ ಪ್ರಭುತ್ವ ಮುಂದುವರಿಯಿತು. ವಿರಾಮದ ವೇಳೆಗೆ 49–29 ರಲ್ಲಿ ಮುನ್ನಡೆಯಲ್ಲಿತ್ತು. ಈ ವೇಳೆಗೆ ಜೊನಾಥನ್‌ ಅರ್ಲೆಜ್‌ ಅವರು 16 ಪಾಯಿಂಟ್ಸ್‌ ಕಲೆಹಾಕಿದ್ದರು.

ಎರಡನೇ ಅವಧಿಯಲ್ಲಿ ಮರುಹೋರಾಟ ನಡೆಸುವ ಭಾರತದ ಪ್ರಯತ್ನ ಫಲಿಸಲಿಲ್ಲ. ಮೂರನೇ ಕ್ವಾರ್ಟರ್‌ ಕೊನೆಗೊಂಡಾಗ ಲೆಬನಾನ್‌ ತನ್ನ ಮುನ್ನಡೆಯನ್ನು 29 ಪಾಯಿಂಟ್‌ಗಳಿಗೆ (71–42) ಹೆಚ್ಚಿಸಿಕೊಂಡು ಗೆಲುವು ಬಹುತೇಕ ಖಚಿತಪಡಿಸಿಕೊಂಡಿತ್ತು.

ಲೆಬನಾನ್‌ ತಂಡ ಆಟಗಾರರು ಮೂರು ಪಾಯಿಂಟ್‌ಗಳನ್ನು ಲೀಲಾಜಾಲವಾಗಿ ಕಲೆಹಾಕುತ್ತಿದ್ದರೆ, ಈ ವಿಭಾಗದಲ್ಲಿ ಭಾರತಕ್ಕೆ ಅಷ್ಟೊಂದು ಯಶಸ್ಸು ದೊರೆಯಲಿಲ್ಲ. ಫ್ರೀ ಥ್ರೋಗಳಲ್ಲಿ ಪಾಯಿಂಟ್‌ ಗಳಿಸುವಲ್ಲಿ ಭಾರತ ಹೆಚ್ಚು ನಿಖರತೆ ತೋರಿತು.

ಭಾರತ ತಂಡ ತನ್ನ ಮುಂದಿನ ಪಂದ್ಯದಲ್ಲಿ ನ.10 ರಂದು ಸೌದಿ ಅರೇಬಿಯಾವನ್ನು ಎದುರಿಸಲಿದೆ. ಈ ಪಂದ್ಯ ಸೌದಿ ಅರೇಬಿಯಾದಲ್ಲಿ ನಡೆಯಲಿದೆ.

ವಿಶ್ವಕಪ್‌ ಟೂರ್ನಿಯ ಏಳು ಸ್ಥಾನಗಳಿಗೆ ಏಷ್ಯಾ ವಲಯದಿಂದ 16 ತಂಡಗಳು ಪೈಪೋಟಿಯಲ್ಲಿವೆ. ವಿಶ್ವಕಪ್‌ ಟೂರ್ನಿ 2023ರ ಆ.25ರಿಂದ ಸೆ.10ರ ವರೆಗೆ ಫಿಲಿಪ್ಪೀನ್ಸ್‌, ಜಪಾನ್‌ ಮತ್ತು ಇಂಡೊನೇಷ್ಯಾದ ಜಂಟಿ ಆತಿಥ್ಯದಲ್ಲಿ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು