ಗುರುವಾರ , ಆಗಸ್ಟ್ 6, 2020
27 °C
18 ವರ್ಷದೊಳಗಿನವರ ಬಾಲಕ–ಬಾಲಕಿಯರ ರಾಜ್ಯ ಬ್ಯಾಸ್ಕೆಟ್‌ಬಾಲ್ ಟೂರ್ನಿ

ಸಾಯ್‌, ರಾಜಮಹಲ್‌ಗೆ ಭಾರಿ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಧಾರವಾಡ ಕೇಂದ್ರ ಮತ್ತು ಬೆಂಗಳೂರಿನ ರಾಜಮಹಲ್ ತಂಡಗಳು ಜೂನಿಯರ್ (18 ವರ್ಷದೊಳಗಿನವರು) ರಾಜ್ಯ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಗುರುವಾರದ ಪಂದ್ಯಗಳಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಜಯ ಗಳಿಸಿದವು.

ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಬಾಲಕರ ವಿಭಾಗದ ಪಂದ್ಯದಲ್ಲಿ ಸಾಯ್‌ 78–47 ಪಾಯಿಂಟ್‌ಗಳಿಂದ ಕೋರಮಂಗಲ ಬ್ಯಾಸ್ಕೆಟ್‌ಬಾಲ್ ಕ್ಲಬ್‌ ಎದುರು ಗೆದ್ದಿತು. ಸೇತು ಮತ್ತು ಪ್ರಥಮ್ (ತಲಾ 21 ಪಾಯಿಂಟ್), ಅಶ್ರಫ್‌ (17) ಅವರ ಪ್ರಭಾವಿ ಆಟದ ಬಲದಿಂದ ಆರಂಭದಲ್ಲೇ ಆಧಿಪತ್ಯ ಸ್ಥಾಪಿಸಿದ್ದ ಧಾರವಾಡ ತಂಡ ಮೊದಲಾರ್ಧದಲ್ಲಿ 34–21ರ ಮುನ್ನಡೆ ಗಳಿಸಿತ್ತು. ಕೋರಮಂಗಲ ತಂಡಕ್ಕಾಗಿ ಕರಣ್‌ (23) ಏಕಾಂಗಿ ಹೋರಾಟ ನಡೆಸಿದರು. 

ಬಾಲಕಿಯರ ವಿಭಾಗದ ಪಂದ್ಯದಲ್ಲಿ ರಾಜಮಹಲ್ ತಂಡ ಪಟ್ಟಾಭಿರಾಮನಗರ ಬ್ಯಾಸ್ಕೆಟ್‌ಬಾಲ್ ಕ್ಲಬ್‌ ವಿರುದ್ಧ 51–19 ಪಾಯಿಂಟ್‌ಗಳಿಂದ ಜಯ ಗಳಿಸಿತು. ರಾಜಮಹಲ್‌ಗಾಗಿ ಶರಣ್ಯ 22 ಮತ್ತು ಐಶ್ವರ್ಯಾ 10 ಪಾಯಿಂಟ್ ಗಳಿಸಿದರು. ಎದುರಾಳಿ ತಂಡದ ಕೀರ್ತನಾ 8 ಪಾಯಿಂಟ್ ಕಲೆ ಹಾಕಿದರು.

ಡಿವೈಇಎಸ್‌, ಎನ್‌ಜಿವಿಗೆ ಗೆಲುವು: ಬಾಲಕರ ವಿಭಾಗದ ಮತ್ತೊಂದು ಪಂದ್ಯದಲ್ಲಿ ಬೆಂಗಳೂರಿನ ಡಿವೈಇಎಸ್‌ 70–53ರಲ್ಲಿ ಮಂಗಳೂರು ಬ್ಯಾಸ್ಕೆಟ್‌ಬಾಲ್ ಕ್ಲಬ್ ತಂಡವನ್ನು ಸೋಲಿಸಿತು. ಶಶಿಧರ್‌ (26) ಮತ್ತು ಶಶಾಂಕ್ (10) ಡಿವೈಇಎಸ್ ಪರ ಮಿಂಚಿದರು. ಮಂಗಳೂರಿಗಾಗಿ ಮೊಹಮ್ಮದ್ 26 ಪಾಯಿಂಟ್ ಗಳಿಸಿದರು. 

ನ್ಯಾಷನಲ್ ಗೇಮ್ಸ್‌ ವಿಲೇಜ್ ಬಿ.ಸಿ ತಂಡ 87–56ರಲ್ಲಿ ಎಂಎನ್‌ಕೆ ರಾವ್ ಪಾರ್ಕ್‌ ತಂಡವನ್ನು ಮಣಿಸಿತು. ವ್ಯಾಸ್‌ (32) ಮತ್ತು ಶೈಲೇಶ್‌ ಎನ್‌ಜಿವಿ ಪರ ಮಿಂಚಿದರೆ ಪ್ರಬೋಧ್‌ (38) ಎಂಎನ್‌ಕೆಗಾಗಿ ಗಮನಾರ್ಹ ಆಟ ಆಡಿದರು. ಯಂಗ್‌ ಬುಲ್ಸ್‌ ವಿರುದ್ಧ ಐಬಿಬಿಸಿ 56–51ರಲ್ಲಿ ಗೆಲುವು ಸಾಧಿಸಿತು. ಆ್ಯರನ್‌ ದಿನೊ ಐಬಿಬಿಸಿಗಾಗಿ 12 ಪಾಯಿಂಟ್‌, ಸುಮಂತ್‌ ಯಂಗ್‌ ಬುಲ್ಸ್‌ಗಾಗಿ 24 ಪಾಯಿಂಟ್ ಕಲೆ ಹಾಕಿದರು. ಬೆಂಗಳೂರು ಸಿಟಿ ಬಿ.ಸಿ (ಆಕಾಶ್‌ ರಾವ್‌ 24, ನವನೀತ್‌ 17) 67–49ರಲ್ಲಿ ಪಟ್ಟಾಭಿರಾಮನಗರ ಬಿ.ಸಿ (ಶ್ರೀನಿಧೀ 17, ಅಭಿಷೇಕ್‌14)ಯನ್ನು ಸೋಲಿಸಿತು.

ಮೈಸೂರಿನ ಆರ್ಯನ್ಸ್ ಬಿ.ಸಿ (ಧವನ್‌ 20) ವೈಸಿ ಬಿ.ಸಿ (ಆದಿತ್ಯ 13, ಕಮಲೇಶ್‌ 12)ಯನ್ನು 65–45ರಲ್ಲಿ ಮಣಿಸಿತು. ವೈಎಂಎಂಎ (ಪ್ರಶಾಂತ್ ತೋಮರ್‌ 33, ವಿಷ್ಣು ಸಿಂಗ್‌ 11) 65–56ರಲ್ಲಿ ಮಲ್ಲಸಜ್ಜನ ಬಿ.ಸಿಯನ್ನು (ಕಾರ್ತಿಕ್‌ 13, ಚಿನ್ಮಯ್‌ ಹೆಗ್ಡೆ 19) ಮಣಿಸಿತು. ಬೀಗಲ್ಸ್ ಬಿ.ಸಿ (ಶ್ರೇಯಸ್‌ 20, ಶ್ರೀಶ 12) ಮೈಸೂರಿನ ನ್ಯಾಷನಲ್‌ ಬಿ.ಸಿಯನ್ನು (ಸುಮನ್‌ 10) 72–30ರಲ್ಲಿ ಸೋಲಿಸಿತು.

ಬಾಲಕಿಯರ ವಿಭಾಗದಲ್ಲಿ ಮೈಸೂರಿನ ಡಿವೈಇಎಸ್‌ 38–11ರಲ್ಲಿ ಅಲಸೂರು ಎಸ್‌ಯುವನ್ನು ಸೋಲಿಸಿತು. ಬೀಗಲ್ಸ್ ಬಿ.ಸಿ (ಅನಘಾ 18, ಮೀನಾ 10) 32–27ರಲ್ಲಿ ಕೋಲಾರದ ಕನಕ (ನಿತ್ಯಶ್ರೀ 10) ತಂಡವನ್ನು ಸೋಲಿಸಿತು. ಮೌಂಟ್ಸ್ ಕ್ಲಬ್ (ಅಬಿಗೇಲ್ 12) 46–19ರಲ್ಲಿ ವಿಮಾನಪುರ ಬಿ.ಸಿಯನ್ನು ಮಣಿಸಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು