ಪ್ರಶಸ್ತಿ ಗೆಲುವು ನಮ್ಮ ಗುರಿಯಾಗಿರಲಿಲ್ಲ

7
ಪ್ರೊ ಕಬಡ್ಡಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ತಂಡದ ಕೋಚ್‌ ಬಿ.ಸಿ.ರಮೇಶ್‌ ಮನದ ಮಾತು

ಪ್ರಶಸ್ತಿ ಗೆಲುವು ನಮ್ಮ ಗುರಿಯಾಗಿರಲಿಲ್ಲ

Published:
Updated:
Prajavani

ಬೆಂಗಳೂರು: ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌) ಆರನೇ ಆವೃತ್ತಿಗೆ ತೆರೆ ಬಿದ್ದಿದೆ. ರೋಹಿತ್‌ ಕುಮಾರ್‌ ಸಾರಥ್ಯದ ಬೆಂಗಳೂರು ಬುಲ್ಸ್‌ ತಂಡ ಪ್ರಶಸ್ತಿ ಗೆದ್ದು ಸತತ ನಾಲ್ಕು ವರ್ಷಗಳಿಂದ ಕಾಡುತ್ತಿದ್ದ ಕೊರಗನ್ನು ದೂರ ಮಾಡಿದೆ.

ಬುಲ್ಸ್‌ ಸಾಧನೆಯ ಹಿಂದೆ ಕನ್ನಡಿಗ ಬಿ.ಸಿ.ರಮೇಶ್‌ ಅವರ ಕಠಿಣ ಪರಿಶ್ರಮವೂ ಅಡಗಿದೆ. ಬುಲ್ಸ್‌ ಚಾಂಪಿಯನ್‌ ಆಗುತ್ತಿದ್ದಂತೆ  ಸಾಮಾಜಿಕ ಜಾಲತಾಣಗಳಲ್ಲಿ ರಮೇಶ್‌ ಕುರಿತು ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ತಂಡದ ಮುಖ್ಯ ಕೋಚ್‌ ಆಗಿರುವ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

* ಬುಲ್ಸ್‌ ತಂಡ ಈ ಬಾರಿ ಪ್ರಶಸ್ತಿ ಜಯಿಸಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ಇದು ಸಾಧ್ಯವಾಗಿದ್ದು ಹೇಗೆ?
ಈ ಸಲದ ಆಟಗಾರರ ಹರಾಜಿನಲ್ಲಿ ಯುವಕರನ್ನೇ ಹೆಚ್ಚು ಸೆಳೆದುಕೊಂಡಾಗ ನಮ್ಮದು ದುರ್ಬಲ ತಂಡ, ಈ ಬಾರಿಯೂ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಕಾಣಿಸಿಕೊಳ್ಳಲಿದೆ ಎಂದು ಸಾಕಷ್ಟು ಮಂದಿ ಮೂದಲಿಸಿದ್ದರು. ಆ ಬಗ್ಗೆ ನಾವು ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಈ ಹಿಂದೆ ತಂಡದಲ್ಲಿ ಸಾಕಷ್ಟು ಮಂದಿ ಅನುಭವಿಗಳು ಇದ್ದರು. ಹೀಗಿದ್ದರೂ ಪ್ರಶಸ್ತಿ ಗೆಲ್ಲಲಾಗಿರಲಿಲ್ಲ. ಆದ್ದರಿಂದ ಹೊಸಬರಿಗೆ ಅವಕಾಶ ನೀಡಲು ನಿರ್ಧರಿಸಿದೆವು. ಹರಾಜು ಮುಗಿದ ಕೂಡಲೇ ಚೆನ್ನೈನಲ್ಲಿರುವ ‘ಒ ಆ್ಯಂಡ್‌ ಒ’ ಅಕಾಡೆಮಿಯಲ್ಲಿ ಎರಡು ತಿಂಗಳ ಕಾಲ ವಿಶೇಷ ತರಬೇತಿ ಶಿಬಿರ ಹಮ್ಮಿಕೊಂಡಿದ್ದೆವು. ಇದರಲ್ಲಿ ಫಿಟ್‌ನೆಸ್‌ಗೆ ಹೆಚ್ಚು ಒತ್ತು ನೀಡಿದ್ದೆವು. ವಿಡಿಯೊ ವಿಶ್ಲೇಷಣೆಯ ಮೂಲಕ ಆಟಗಾರರ ತಪ್ಪುಗಳನ್ನು ಗುರುತಿಸಿ ಅವುಗಳನ್ನು ತಿದ್ದುವ ಕೆಲಸ ಮಾಡಿದ್ದೆವು. 

* ಈ ಬಾರಿ ಪ್ರಶಸ್ತಿ ಜಯಿಸುವ ವಿಶ್ವಾಸ ಇತ್ತೇ?
ಪ್ರಶಸ್ತಿ ಜಯಿಸಬೇಕು ಎಂಬ ಗುರಿ ನಮ್ಮದಾಗಿರಲಿಲ್ಲ. ಎಲ್ಲಾ ಪಂದ್ಯಗಳಲ್ಲೂ ಸಾಮರ್ಥ್ಯಕ್ಕೆ ಅನುಗುಣವಾಗಿ ಆಡಬೇಕು ಎಂದು ಆಟಗಾರರಿಗೆ ಕಿವಿಮಾತು ಹೇಳಿದ್ದೆವು. ಅವರ ನಡುವೆ ಹೊಂದಾಣಿಕೆ ಮೂಡಿಸಿ ತಂಡದ ಶಕ್ತಿ ಹೆಚ್ಚಿಸಬೇಕೆಂಬುದಷ್ಟೇ ನಮ್ಮ ಉದ್ದೇಶವಾಗಿತ್ತು.

* ಪಂದ್ಯಕ್ಕೂ ಮುನ್ನ ನೀವು ಹೆಣೆಯುತ್ತಿದ್ದ ಯೋಜನೆಗಳೇನು?
ಎದುರಾಳಿ ತಂಡ ಈ ಹಿಂದೆ ಆಡಿದ್ದ ಪಂದ್ಯಗಳ ವಿಡಿಯೊಗಳನ್ನು ನೋಡುತ್ತಿದ್ದೆವು. ಇದರಿಂದ ಅವರ ಬಲ ಮತ್ತು ದೌರ್ಬಲ್ಯಗಳನ್ನು ಪತ್ತೆ ಹಚ್ಚುವುದು ಸುಲಭವಾಗುತ್ತಿತ್ತು. ಅದನ್ನು ಗಮನದಲ್ಲಿಟ್ಟುಕೊಂಡು ರಣನೀತಿ ರೂಪಿಸುತ್ತಿದ್ದೆವು. ತಂಡದಲ್ಲಿದ್ದವರ ಪೈಕಿ ಕೆಲವರು ಆ್ಯಂಕಲ್ ಹೋಲ್ಡ್‌ ಮಾಡುವುದರಲ್ಲಿ ನಿಸ್ಸೀಮರಾಗಿದ್ದರು. ಕೆಲವರಿಗೆ ಡೈವ್‌ ಕ್ಯಾಚ್‌,  ಫಾಲೋ ಕ್ಯಾಚ್‌, ಟ್ರಂಕ್‌ ಕ್ಯಾಚ್‌ ಮಾಡಲು ಬರುತ್ತಿರಲಿಲ್ಲ. ಯಾವ ಸಂದರ್ಭಗಳಲ್ಲಿ ರನ್ನಿಂಗ್ ಟಚ್‌ ಮಾಡಬೇಕು, ಡುಬ್ಕಿ ಹೊಡೆಯಬೇಕು, ಬೋನಸ್‌ ಪಾಯಿಂಟ್ಸ್‌ ಗಳಿಸಬೇಕು, ಯಾವಾಗ ಡೈವ್‌ ಮಾಡಬೇಕು ಎಂಬುದರ ಅರಿವೂ ಇರಲಿಲ್ಲ. ಪ್ರತಿ ಪಂದ್ಯಕ್ಕೂ ಮುನ್ನ ಈ ವಿಷಯಗಳ ಕುರಿತು ಆಟಗಾರರಿಗೆ ಅಗತ್ಯ ಮಾರ್ಗದರ್ಶನ ನೀಡುತ್ತಿದ್ದೆವು.

*ಪವನ್‌ ಶೆರಾವತ್‌ ಮತ್ತು ರೋಹಿತ್‌ ಕುಮಾರ್‌ ಅವರ ಬಗ್ಗೆ ಹೇಳಿ?
ಈ ಬಾರಿಯ ಲೀಗ್‌ನ ಎಲ್ಲಾ ಪಂದ್ಯಗಳಲ್ಲೂ ಪವನ್ ಅಮೋಘ ಸಾಮರ್ಥ್ಯ ತೋರಿದರು. ಪಾದರಸದಂತಹ ಚಲನೆ, ಮಿಂಚಿನ ವೇಗ ಮತ್ತು ರನ್ನಿಂಗ್‌ ಟಚ್‌ ಮೂಲಕ ಎದುರಾಳಿಗಳನ್ನು ಕಂಗೆಡಿಸುವ ಸಾಮರ್ಥ್ಯ ಅವರಲ್ಲಿತ್ತು. ಫೈನಲ್‌ಗೂ ಮುನ್ನಾ ದಿನ  ಹೊಟ್ಟೆ ನೋವಿನಿಂದ ಬಳಲಿದ್ದರು. ಹೀಗಿದ್ದರೂ ಎದೆಗುಂದದೆ ಆಡಿ ಪಂದ್ಯದ ಚಿತ್ರಣ ಬದಲಿಸಿದರು. ರೋಹಿತ್‌ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಅವುಗಳಿಗೆ ಅನುಗುಣವಾಗಿ ಆಡಲಿಲ್ಲ. ಆದರೆ ತಂಡವನ್ನು ಸಮರ್ಥವಾಗಿ ಮುನ್ನಡೆಸಿದರು.

*ಫೈನಲ್‌ ಪಂದ್ಯದ ಮೊದಲಾರ್ಧದ ಆಟ ಮುಗಿದಾಗ ಗುಜರಾತ್‌ ಮುನ್ನಡೆ ಗಳಿಸಿತ್ತು. ಆಗ ನಿಮ್ಮಲ್ಲಿ ಆತಂಕ ಮನೆ ಮಾಡಿತ್ತೇ?
ಖಂಡಿತವಾಗಿಯೂ ಇಲ್ಲ. ಎದುರಾಳಿಗಳು ಕೇವಲ ಏಳು ಪಾಯಿಂಟ್ಸ್‌ಗಳಿಂದ ಮುಂದಿದ್ದರು. ಆ ಬಗ್ಗೆ ಹೆಚ್ಚು ಯೋಚಿಸದೆ  ವಿಶ್ವಾಸದಿಂದ ಆಡಿ. ಗೆಲುವು ನಮ್ಮದೇ ಎಂದು ಆಟಗಾರರನ್ನು ಹುರಿದುಂಬಿಸಿದ್ದೆ. ಮೊದಲ ಕ್ವಾಲಿಫೈಯರ್‌ನಲ್ಲೂ ನಾವು ಆರಂಭದಲ್ಲಿ ಹಿನ್ನಡೆ ಕಂಡು ನಂತರ ಫಾರ್ಚೂನ್‌ಜೈಂಟ್ಸ್‌ಗೆ ತಿರುಗೇಟು ನೀಡಿದ್ದೆವು. ಅದರ ಬಗ್ಗೆಯೂ ಆಟಗಾರರಿಗೆ ತಿಳಿಸಿದ್ದೆ.

*ನೀವು ಕೋಚ್‌ ಆಗಿದ್ದರಿಂದಲೇ ಬುಲ್ಸ್‌ ತಂಡ ಚಾಂಪಿಯನ್‌ ಆಯಿತು ಎಂಬ ಮಾತುಗಳು ಕೇಳಿಬರುತ್ತಿವೆಯಲ್ಲ?
ಹಾಗೇನಿಲ್ಲ. ತಂಡವನ್ನು ಬಲಯುತಗೊಳಿಸಬೇಕೆಂಬುದು ನನ್ನ ಗುರಿಯಾಗಿತ್ತು. ಅದಕ್ಕಾಗಿ ಹಗಲಿರುಳೆನ್ನದೆ ಶ್ರಮಿಸಿದ್ದೆ. ಆಟಗಾರನಾಗಿ ಸಾಕಷ್ಟು ಅನುಭವ ಇತ್ತು. ಕಠಿಣ ಪರಿಶ್ರಮದಿಂದ ಎಲ್ಲವನ್ನೂ ಸಾಧಿಸಬಹುದೆಂಬ ಅದಮ್ಯ ವಿಶ್ವಾಸವನ್ನೂ ಹೊಂದಿದ್ದೆ. ತಾಂತ್ರಿಕ ಕೌಶಲಗಳನ್ನು ಹೇಳಿಕೊಡುವತ್ತ ಹೆಚ್ಚು ಚಿತ್ತ ಹರಿಸಿದ್ದೆ. ಈ ಶ್ರಮಕ್ಕೆ ಫಲ ಸಿಕ್ಕಿದೆ. 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !