ಮಂಗಳವಾರ, ಅಕ್ಟೋಬರ್ 22, 2019
23 °C
ನಾಲ್ಕನೇ ಸ್ಥಾನಕ್ಕೇರಿದ ಯು ಮುಂಬಾ

ಪ್ರೊ ಕಬಡ್ಡಿ ಲೀಗ್‌: ಡೆಲ್ಲಿಗೆ ಸೋಲುಣಿಸಿದ ಬೆಂಗಾಲ್‌

Published:
Updated:
Prajavani

ಪಂಚಕುಲ: ನಾಯಕ ಮಣಿಂದರ್‌ ಸಿಂಗ್‌ ಅವರ ಅದ್ಭುತ ರೇಡಿಂಗ್‌ ನೆರವಿನಿಂದ ಬೆಂಗಾಲ್‌ ವಾರಿಯರ್ಸ್ ತಂಡ, ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ಸೋಮವಾರ ದಬಂಗ್‌ ಡೆಲ್ಲಿ ತಂಡವನ್ನು 42–33 ಪಾಯಿಂಟ್ಸ್‌ನಿಂದ ಸೋಲಿಸಿತು.

ಮಣಿಂದರ್‌ ಒಟ್ಟು 13 ರೇಡ್‌ ಪಾಯಿಂಟ್ಸ್ ಗಳಿಸಿದರು. ಡೆಲ್ಲಿ ತಂಡದ ನವೀನ್‌ಕುಮಾರ್‌ ಗಳಿಸಿದ ಮತ್ತೊಂದು ‘ಸೂಪರ್‌ ಟೆನ್‌’  ತಂಡ ಗೆಲುವಿಗೆ ಸಾಕಾಗಲಿಲ್ಲ. ಅವರು 15 ಪಾಯಿಂಟ್ಸ್ ಗಳಿಸಿದರು.

ತಂಡದ ಪರ ಮೊದಲ ರೇಡ್‌ನಲ್ಲೇ ಮಣಿಂದರ್‌ ಯಶಸ್ಸು ಸಾಧಿಸಿದರು. ಆ ಬಳಿಕ ನವೀನ್‌ ಕುಮಾರ್‌ ಹಾಗೂ ಚಂದ್ರನ್‌ ರಂಜಿತ್‌ ಅವರ ಎರಡು ಯಶಸ್ವಿ ರೇಡ್‌ಗಳ ಮೂಲಕ ಡೆಲ್ಲಿ 3–1ರಿಂದ ಮುನ್ನಡೆ ಸಾಧಿಸಿತು. ಆ ಬಳಿಕ ಎರಡೂ ತಂಡಗಳು ಮುನ್ನಡೆ ಗಳಿಸಲು ತೀವ್ರ ಪ್ರಯತ್ನ ನಡೆಸಿದವು. ನಂತರ ನವೀನ್‌ ಮಿಂಚಲಾರಂಭಿಸಿದರು. ಮೊದಲಾರ್ಧದ ಮುಕ್ತಾಯದ ವೇಳೆಗೆ ಬೆಂಗಾಲ್‌ 25–14ರ ಉತ್ತಮ ಮುನ್ನಡೆ ಸಾಧಿಸಿತು.

ದ್ವಿತೀಯಾರ್ಧದಲ್ಲಿ ಡೆಲ್ಲಿ ಹಿನ್ನಡೆಯನ್ನು ತಗ್ಗಿಸುತ್ತಾ ಸಾಗಿದರೂ ಪೂರ್ಣ ಪ್ರಮಾಣದಲ್ಲಿ ಯಶಸ್ಸು ಸಾಧಿಸಲಾಗಲಿಲ್ಲ. ಮಣಿಂದರ್‌ ಸಿಂಗ್‌ ಈ ಋತುವಿನಲ್ಲಿ ಒಟ್ಟು 200 ಪಾಯಿಂಟ್‌ ಗಳಿಸಿದ ಸಾಧನೆ ಮಾಡಿದರು. 10 ಸೂಪರ್‌ ಟೆನ್‌ಗಳ ಸಾಧನೆಯನ್ನೂ ಮಣಿಂದರ್‌ ಈ ಪಂದ್ಯದ ಮೂಲಕ ಪೂರೈಸಿದರು. ಆಕ್ರಮಣಕಾರಿ ಆಟ ಮುಂದು ವರಿಸಿದ ಬೆಂಗಾಲ್‌ ಪಂದ್ಯ ಮುಗಿಯಲು 14 ನಿಮಿಷಗಳು ಇರುವಾಗ 36–20ರಿಂದ ಮುಂದಿತ್ತು. ಏಳು ನಿಮಿಷ ಇರುವಾಗ ಈ ಮುನ್ನಡೆ 40–30ಕ್ಕೆ ತಲುಪಿತ್ತು. ಆ ಬಳಿಕ ಎಷ್ಟೇ ಪ್ರಯತ್ನಿಸಿದರೂ ಡೆಲ್ಲಿ ತಂಡಕ್ಕೆ ಬೆಂಗಾಲ್‌ ಸವಾಲು ಮೀರಲಾಗಲಿಲ್ಲ.

ಮುಂಬಾಗೆ ಜಯ: ಯು ಮುಂಬಾ ಮತ್ತೊಂದು ಪಂದ್ಯದಲ್ಲಿ 36–32 ಪಾಯಿಂಟ್‌ಗಳಿಂದ ತಮಿಳ್‌ ತಲೈವಾಸ್‌ ತಂಡವನ್ನು ಸೋಲಿಸಿತು. ಪಾಯಿಂಟ್‌ ಪಟ್ಟಿ ತಳದಲ್ಲಿರುವ ತಲೈವಾಸ್‌ಗೆ ಇದು 20 ಪಂದ್ಯಗಳಲ್ಲಿ 14ನೇ ಸೋಲು ಎನಿಸಿತು. ಇನ್ನೊಂದೆಡೆ 19ನೇ ಪಂದ್ಯ ಆಡಿದ ಮುಂ‌ಬಾ ತಂಡ 10ನೇ ಗೆಲುವಿನೊಡನೆ ಒಟ್ಟು 59 ಅಂಕ ಗಳಿಸಿ ನಾಲ್ಕನೇ ಸ್ಥಾನಕ್ಕೇರಿತು.

ತಲೈವಾಸ್‌ ಪರ ರೇಡರ್‌ ವಿ.ಅಜಿತ್‌ ಕುಮಾರ್‌ 14 ಪಾಯಿಂಟ್‌ ಗಳಿಸಿದರೆ, ಮುಂಬಾ ಪರ ಅಭಿಷೇಕ್‌ 10 ಮತ್ತು ಅತುಲ್‌ ಎಂ.ಎಸ್‌. ಆರು ಪಾಯಿಂಟ್‌ ಗಳಿಸಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)