ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈನಲ್‌ಗೆ ಅನಾಹತ್‌

ಬ್ರಿಟಿಷ್‌ ಜೂನಿಯರ್‌ ಓಪನ್ ಸ್ಕ್ವಾಷ್‌ ಚಾಂಪಿಯನ್‌ಷಿಪ್‌
Last Updated 5 ಜನವರಿ 2020, 17:03 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಂ: ಅಮೋಘ ಆಟ ಆಡಿದ ಭಾರತದ ಅನಾಹತ್‌ ಸಿಂಗ್‌ ಅವರು ಪ್ರತಿಷ್ಠಿತ ಬ್ರಿಟಿಷ್‌ ಜೂನಿಯರ್‌ ಓಪನ್‌ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಭಾನುವಾರ ನಡೆದ 13 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ದೆಹಲಿಯ ಅನಾಹತ್‌ 7–11, 11–7, 13–11, 5–11, 17–15 ಗೇಮ್‌ಗಳಿಂದ ಈಜಿಪ್ಟ್‌ನ ಜಾನಾ ಗಲಾಲ್‌ ಅವರನ್ನು ಪರಾಭವಗೊಳಿಸಿದರು.

ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಶ್ರೇಯಾಂಕ ಹೊಂದಿದ್ದ ಜಾನಾ ಮೊದಲ ಗೇಮ್‌ನಲ್ಲಿ ಮಿಂಚಿನ ಆಟ ಆಡಿ 1–0 ಮುನ್ನಡೆ ಪಡೆದರು. ರೋಚಕ ಹೋರಾಟ ಕಂಡುಬಂದ ನಂತರದ ಎರಡು ಗೇಮ್‌ಗಳಲ್ಲೂ ಛಲದಿಂದ ಹೋರಾಡಿದ ಅನಾಹತ್‌ 2–1 ಮುನ್ನಡೆ ತಮ್ಮದಾಗಿಸಿಕೊಂಡರು.

ಇದರಿಂದ ವಿಚಲಿತರಾಗದ ಈಜಿಪ್ಟ್‌ನ ಆಟಗಾರ್ತಿ ನಾಲ್ಕನೇ ಗೇಮ್‌ನಲ್ಲಿ ತಿರುಗೇಟು ನೀಡಿದರು.

ನಿರ್ಣಾಯಕ ಎನಿಸಿದ್ದ ಐದನೇ ಗೇಮ್‌ನಲ್ಲಿ ಜಾನಾ 7–1ರಿಂದ ಮುಂದಿದ್ದರು. ಇದರಿಂದ ಧೃತಿಗೆಡದ ಅನಾಹತ್‌ ಅವರು ಗುಣಮಟ್ಟದ ಸಾಮರ್ಥ್ಯ ತೋರಿ ಗೆಲುವಿನ ತೋರಣ ಕಟ್ಟಿದರು.

ಫೈನಲ್‌ನಲ್ಲಿ ಅನಾಹತ್‌ ಅವರು ಈಜಿಪ್ಟ್‌ನ ಆಟಗಾರ್ತಿ, ಚಾಂಪಿಯನ್‌ಷಿಪ್‌ನಲ್ಲಿ ಅಗ್ರಶ್ರೇಯಾಂಕ ಹೊಂದಿರುವ ಅಮಿನಾ ಒರ್ಫಿ ಎದುರು ಸೆಣಸಲಿದ್ದಾರೆ.

‘ಅನಾಹತ್‌, ಫೈನಲ್‌ ಪ್ರವೇಶಿಸಿರುವುದರಿಂದ ಅತೀವ ಖುಷಿಯಾಗಿದೆ. ಹಿಂದಿನ ಮೂರು ವರ್ಷಗಳಲ್ಲಿ ಆಕೆಯ ಆಟದಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಅವಳ ಸಾಧನೆಯಿಂದ ನಾವೆಲ್ಲಾ ಹೆಮ್ಮೆಯಿಂದ ಬೀಗುವಂತಾಗಿದೆ’ ಎಂದು ಭಾರತ ತಂಡದ ಮುಖ್ಯ ಕೋಚ್‌ ಸಿರಸ್‌ ಪೂಂಚಾ ಸಂತಸ ವ್ಯಕ್ತಪಡಿಸಿದ್ದಾರೆ.

ಸೆಮಿಗೆ ವೀರ್‌: 19 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ನಲ್ಲಿ ಭಾರತದ ವೀರ್‌ ಚೋಟ್ರಾನಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಕ್ವಾರ್ಟರ್‌ ಫೈನಲ್‌ನಲ್ಲಿ ವೀರ್‌ 11–6, 19–17, 10–12, 9–11, 11–8ರಲ್ಲಿ ಅಮೆರಿಕದ ಥಾಮಸ್‌ ರೊಶಿನ್‌ ಅವರನ್ನು ಸೋಲಿಸಿದರು.

ಇದೇ ವಿಭಾಗದ ಎಂಟರ ಘಟ್ಟದ ಮತ್ತೊಂದು ಪಂದ್ಯದಲ್ಲಿ ಯಶ್‌ ಫಡ್ತೆ 7–11, 9–11, 3–11ರಲ್ಲಿ ಈಜಿಪ್ಟ್‌ನ ಮುಸ್ತಾಫಾ ಅಲ್‌ ಸಿರ್ಟಿ ಎದುರು ಮಣಿದರು.

17ವರ್ಷದೊಳಗಿನ ಬಾಲಕರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ನೀಲ್‌ ಜೋಶಿ 8–11, 11–5, 11–8, 5–11, 6–11ರಲ್ಲಿ ಮಲೇಷ್ಯಾದ ಇಶಾಂತ್‌ ಶಾ ಎದುರು ಸೋತರು.

15 ವರ್ಷದೊಳಗಿನವರ ವಿಭಾಗದ ಎಂಟರ ಘಟ್ಟದ ಹಣಾಹಣಿಯಲ್ಲಿ ಯುವರಾಜ್‌ ವಾಧ್ವಾನಿ 16–14, 9–11, 9–11, 8–11ರಲ್ಲಿ ಯೂಸುಫ್‌ ಶೇಖ್‌ ವಿರುದ್ಧ ಪರಾಭವಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT