ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics | ಬಾಕ್ಸಿಂಗ್‌: ಸುರ್ಮೆನೆಲಿಗೆ ಚಿನ್ನದ ಮಾಲೆ

Last Updated 7 ಆಗಸ್ಟ್ 2021, 20:18 IST
ಅಕ್ಷರ ಗಾತ್ರ

ಟೋಕಿಯೊ: ಟರ್ಕಿಯ ಬುಸೆನಾಜ್‌ ಸುರ್ಮೆನೆಲಿ ಹಾಗೂ ಬಲ್ಗೇರಿಯಾದ ಸ್ಟೋಯಿಕಾ ಕ್ರಾಸ್ತೆವಾ ಅವರು ತಮ್ಮ ದೇಶಗಳಿಗೆ ಮೊದಲ ಬಾರಿ ಮಹಿಳಾ ವಿಭಾಗದಲ್ಲಿ ಒಲಿಂಪಿಕ್ಸ್ ಚಿನ್ನದ ಪದಕ ಕಳಶ ತೊಡಿಸಿದರು.

35 ವರ್ಷದ ಕ್ರಾಸ್ತೆವಾ ಇಲ್ಲಿ ನಡೆದ ಫ್ಲೈ ವೇಟ್ ವಿಭಾಗದ ಫೈನಲ್ ಬೌಟ್‌ನಲ್ಲಿ ಟರ್ಕಿಯ ಬುಸೆನಾಜ್‌ ಕಾಕಿರೊಗ್ಲು ಅವರನ್ನು 5–0ಯಿಂದ ಸುಲಭವಾಗಿ ಮಣಿಸಿದರು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕ್ರಾಸ್ತೆವಾ ಐದನೇ ಸ್ಥಾನ ಗಳಿಸಿದ್ದರು.

ವೆಲ್ಟರ್‌ವೇಟ್‌ ವಿಭಾಗದ ಫೈನಲ್‌ ಹಣಾಹಣಿಯಲ್ಲಿ 23 ವರ್ಷದ ಸುರ್ಮೆನೆಲಿ 3–0ಯಿಂದ ಚೀನಾದ ಗು ಹಾಂಗ್ ಅವರನ್ನು ಪರಾಭವಗೊಳಿಸಿದರು. ಆರಂಭದಲ್ಲಿ ಗು ಹಾಂಗ್ ಮುನ್ನಡೆಯಲ್ಲಿದ್ದರು. ಆದರೆ ತಿರುಗೇಟು ನೀಡಿದ ಟರ್ಕಿಯ ತಾರೆ ಬಲಶಾಲಿ ಪಂಚ್‌ಗಳ ಮೂಲಕ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು. ಗೆಲುವು ಒಲಿಸಿಕೊಂಡರು.

ಸೆಮಿಫೈನಲ್‌ ಬೌಟ್‌ನಲ್ಲಿ ಸುರ್ಮೆನೆಲಿ ಅವರು ಭಾರತದ ಲವ್ಲಿನಾ ಬೊರ್ಗೊಹೈನ್ ವಿರುದ್ಧ ಗೆಲುವು ಸಾಧಿಸಿದ್ದರು.

2012ರ ಕೂಟದಲ್ಲಿ ಮಹಿಳಾ ಬಾಕ್ಸಿಂಗ್‌ನ್ನು ಪರಿಚಯಿಸಲಾಯಿತು. ಆಗ ಕೇವಲ ಮೂರು ತೂಕ ವಿಭಾಗಗಳಲ್ಲಿ ಸ್ಪರ್ಧೆಯಿತ್ತು. ಟೋಕಿಯೊದಲ್ಲಿ ಐದು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಯಿತು.

ಮಿಂಚಿದ ಸೌಸಾ, ಗೆಲಾಲ್‌

ಬ್ರೆಜಿಲ್‌ನ ಹರ್ಬರ್ಟ್‌ ಸೌಸಾ ಹಾಗೂ ಬ್ರಿಟನ್‌ನ ಗೆಲಾಲ್ ಯಫಾಯಿ ಅವರು ಕ್ರಮವಾಗಿ ಪುರುಷರ ಮಿಡ್ಲ್‌ವೇಟ್‌ ಮತ್ತು ಫ್ಲೈವೇಟ್ ವಿಭಾಗದಲ್ಲಿ ಚಿನ್ನದ ಪದಕ ಕೊರಳಿಗೇರಿಸಿಕೊಂಡರು.

ರೋಚಕ ಫೈನಲ್‌ ಬೌಟ್‌ನಲ್ಲಿ ಸೌಸಾ, ಉಕ್ರೇನ್‌ನ ಅಲೆಕ್ಸಾಂಡರ್‌ ಕ್ಯಾಜಿನಿಯಾಕ್ ಅವರನ್ನು ಪರಾಭವಗೊಳಿಸಿದರು. ಮೂರು ಸುತ್ತುಗಳ ನಾಕೌಟ್‌ನಲ್ಲಿ ಸೌಸಾ ಗೆದ್ದು ಬೀಗಿದರು.

ಗೆಲಾಲ್ ಯಫಾಯಿ ಟೋಕಿಯೊ ಒಲಿಂಪಿಕ್ಸ್‌ನ ಬಾಕ್ಸಿಂಗ್ ವಿಭಾಗದಲ್ಲಿ ತಮ್ಮ ದೇಶಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟರು. ಫೈನಲ್‌ನಲ್ಲಿ ಅವರು ಪಿಲಿಪ್ಪೀನ್ಸ್‌ನ ಕಾರ್ಲೊ ಪಾಲಮ್ ಅವರ ಮೇಲೆ ಸಂಪೂರ್ಣ ಪಾರಮ್ಯ ಮೆರೆದರು. ನಿಖರ ಪಂಚ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು. 4–1ರಿಂದ ಅವರಿಗೆ ಜಯ ಒಲಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT