ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pv Web Exclusive: ಆತಂಕದ ಮಧ್ಯೆ ಕ್ರೀಡಾ ಮೇಳಕ್ಕೆ ದಿನಗಣನೆ

ಕೋವಿಡ್‌ ಪಿಡುಗಿನ ನಡುವೆ ಯಶಸ್ವಿಯಾಗಿ ಒಲಿಂಪಿಕ್ಸ್ ಸಂಘಟಿಸುವ ಸವಾಲು
Last Updated 16 ಜುಲೈ 2021, 7:30 IST
ಅಕ್ಷರ ಗಾತ್ರ

ಹಿಂದೆಂದೂ ಕಾಣದ ಆತಂಕ, ಬಿಗಿ ನಿರ್ಬಂಧಗಳ ನಡುವೆ ಜಪಾನ್‌ನ ರಾಜಧಾನಿ ಟೋಕಿಯೊಕ್ಕೆ ವಿಶ್ವದ ವಿವಿಧ ದೇಶಗಳಿಂದ ಕ್ರೀಡಾಪಟುಗಳು ಬರತೊಡಗಿದ್ದಾರೆ. 29ನೇ ಒಲಿಂಪಿಕ್ ಕ್ರೀಡೆಗಳ ಆರಂಭಕ್ಕೆ ದಿನಗಣನೆ ನಡೆದಿದೆ. ಆದರೆ ಎಂದಿನಂತೆ ಕಾಣುವ ಸಂಭ್ರಮ ಈ ಬಾರಿ ಮೂಡಿಲ್ಲ. ಕ್ರೀಡೆಗಳು ಆರಂಭವಾದ ಮೇಲೂ ಸಂಭ್ರಮಾಚರಣೆ ಇರುವುದಿಲ್ಲ. ಏಕೆಂದರೆ ಈ ಒಲಿಂಪಿಕ್ಸ್‌ ನಡೆಯುತ್ತಿರುವುದು ಖಾಲಿ ಕ್ರೀಡಾಂಗಣಗಳಲ್ಲಿ.

ಕೋವಿಡ್‌ ಕರಿನೆರಳಿನ ಮಧ್ಯೆಯೇ ಜುಲೈ 23 ರಿಂದ ಆಗಸ್ಟ್‌ 8ರವರೆಗೆ ಈ ಕ್ರೀಡಾಮೇಳ ನಡೆಯಬೇಕಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ (ಜುಲೈ 24 ರಿಂದ ಆಗಸ್ಟ್‌ 9) ಈ ಕ್ರೀಡೆಗಳು ನಿಗದಿಯಾಗಿದ್ದವು. ಆದರೆ ಮೊದಲ ಅಲೆ ಎಬ್ಬಿಸಿದ ಕೋಲಾಹಲದಿಂದ ನಾಲ್ಕು ತಿಂಗಳ ಮೊದಲೇ ಮುಂದೂಡಲಾಯಿತು. ಹಲವು ದೇಶಗಳಲ್ಲಿ ಹೊಸದಾಗಿ ವಿವಿಧ ಪ್ರಮಾಣದಲ್ಲಿ ಲಾಕ್‌ಡೌನ್‌ ಹೇರಲಾಗಿದೆ. ಜಪಾನ್‌ ದೇಶದಲ್ಲೂ ಕೊರೊನಾ ಸೋಂಕು ಭಯ ಇದ್ದೇ ಇದೆ. ಪ್ರಕರಣಗಳು ಸ್ಫೋಟಗೊಂಡು ವೈದ್ಯಕೀಯ ಬಿಕ್ಕಟ್ಟು ತಲೆದೋರಬಾರದೆಂಬ ಮುನ್ನೆಚ್ಚರಿಕೆಯಿಂದ ಸೋಮವಾರದಿಂದಲೇ (ಜುಲೈ 11) ಟೋಕಿಯೊದಲ್ಲಿ ಕೋವಿಡ್‌ ತುರ್ತುಸ್ಥಿತಿ ಹೇರಲಾಗಿದೆ. ಕ್ರೀಡೆಗಳು ನಡೆಯುವ ವೇಳೆಯೂ ನಿರ್ಬಂಧಗಳು ಮುಂದುವರಿಯಲಿವೆ.

ಎಲ್ಲವನ್ನು ಅಚ್ಚುಕಟ್ಟಾಗಿ ನಡೆಸುವುದಕ್ಕೆ ಹೆಸರು ಪಡೆದಿರುವ ಜಪಾನ್‌ಗೆ ಕೊರೊನಾ ಸಂಕಟ ತಲೆಬೇನೆ ತಂದಿದೆ. ವೈರಾಣು ಕಾಟದಿಂದ ತಲೆದೋರಿದ ಸಂಕಟ ನಿಭಾಯಿಸುವುದರಲ್ಲಿ ದೇಶದ ವೈದ್ಯಕೀಯ ಸಿಬ್ಬಂದಿ ಹೈರಾಣಾಗಿದ್ದಾರೆ. ನಾಗರಿಕರಲ್ಲಿ ಅರ್ಧಕ್ಕರ್ಧ ಜನ ಈಗಲೂ ಒಲಿಂಪಿಕ್ಸ್‌ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೆಚ್ಚಿನ ಸಮೀಕ್ಷೆಗಳಲ್ಲಿ ಈ ವಿಷಯ ಎದ್ದುಕಂಡಿದೆ. ಈಗಿನ ಸ್ಥಿತಿಯಲ್ಲಿ ಒಲಿಂಪಿಕ್‌ ಕ್ರೀಡೆಗಳ ಅಗತ್ಯವಿರಲಿಲ್ಲ ಎಂದೇ ಜಪಾನೀಯರಲ್ಲಿ ಬಹುಪಾಲು ಮಂದಿ ಹೇಳುತ್ತಿದ್ದಾರೆ. ಕ್ರೀಡೆಗಳು ‘ಕೋವಿಡ್‌ ಹಾಟ್‌ಸ್ಪಾಟ್‌’ಗಳಾಗಬಹುದು ಎಂಬ ಆತಂಕ ಆರೋಗ್ಯ ಕ್ಷೇತ್ರದ ತಜ್ಞರಲ್ಲಿ ಇದ್ದೇ ಇದೆ.

ಹಲವು ಪ್ರಥಮ:ಯುದ್ಧೇತರ ಕಾರಣದಿಂದಾಗಿ ಬಹುಶಃ ಮುಂದಕ್ಕೆ ಹೋದ ಒಲಿಂಪಿಕ್ಸ್‌ ಇದೊಂದೇ. ಬೇಡವಾದ ಕಾರಣಗಳಿಂದ ಈ ಒಲಿಂಪಿಕ್ಸ್‌ ಹಲವು ಪ್ರಥಮಗಳನ್ನೂ ಕಾಣುವಂತಾಗಿದೆ. ಖಾಲಿ ಕ್ರೀಡಾಂಗಣದಲ್ಲಿ ಸ್ಪರ್ಧೆಗಳು ನಡೆಯುವುದು ಇದೇ ಮೊದಲು. ಸ್ಯಾನಿಟೈಸ್‌ ಮಾಡಿದ ಟ್ರೇಗಳಿಂದ ಪದಕಗಳನ್ನು ವಿಜೇತ ಕ್ರೀಡಾಪಟುಗಳೇ ಎತ್ತಿ ಧರಿಸಿಕೊಳ್ಳಬೇಕೆಂಬ ನಿಯಮ ತರಲಾಗಿದೆ. ಕ್ಲೀಷೆಯಂತಿದ್ದ– ಪದಕಕ್ಕೆ ಕೊರಳೊಡ್ಡಿದವರು ಎಂಬ– ಪದಕ್ಕೆ ಈ ಬಾರಿ ಅರ್ಥ ಇರುವುದಿಲ್ಲ! ಅಂತರ ಕಾಪಾಡಲು ವಿಶೇಷ ರೀತಿಯ ಪೋಡಿಯಂಗಳನ್ನು (ವಿಜೇತರ ವೇದಿಕೆ) ರೂಪಿಸಲಾಗುತ್ತಿದೆ.

ಕಮರಿದ ಕನಸು:ಲಾಕ್‌ಡೌನ್‌, ನಿರ್ಬಂಧದ ಕಾರಣಗಳಿಂದಾಗಿ ಅನೇಕ ದೇಶಗಳ ಬಹುಪಾಲು ಕ್ರೀಡಾಪಟುಗಳಿಗೆ ಪೂರ್ಣಪ್ರಮಾಣದ ಸಿದ್ಧತೆ ನಡೆಸಿಕೊಂಡು ಬರಲು ಸಾಧ್ಯವಾಗಿಲ್ಲ. ಕೋವಿಡ್‌ ಹರಡಿದ ಪರಿಣಾಮ ಹಲವು ಸಿದ್ಧತಾ ಕೂಟಗಳು, ಒಲಿಂಪಿಕ್‌ ಅರ್ಹತಾ ಟೂರ್ನಿಗಳು ರದ್ದಾಗಿವೆ. ಏಷ್ಯಾದಲ್ಲೇ ಮೂರು ಪ್ರಮುಖ ಬ್ಯಾಡ್ಮಿಂಟನ್‌ ಟೂರ್ನಿಗಳು ರದ್ದಾಗಿವೆ. ಹೀಗಾಗಿ ಸೈನಾ ನೆಹ್ವಾಲ್‌ ಅಂಥ ಆಟಗಾರ್ತಿಯರು ಅರ್ಹತೆ ಪಡೆಯಲಾಗದೇ ನಿರಾಶರಾಗಿದ್ದಾರೆ.

ಅದೆಷ್ಟೊ ಮಂದಿ ಕ್ರೀಡಾಪಟುಗಳು, ತಮ್ಮ ದೇಶಗಳಲ್ಲಿ ಹೇರಿದ ಲಾಕ್‌ಡೌನ್‌ನಿಂದಾಗಿ ವಿದೇಶದಲ್ಲಿ ತರಬೇತಿ ಪಡೆಯವುದು ಅನಿವಾರ್ಯವಾಯಿತು. ದೀರ್ಘಾವಧಿಯ ಲಾಕ್‌ಡೌನ್‌ನಿಂದಾಗಿ ಕ್ರೀಡಾಪಟುಗಳ ಹೊರಾಂಗಣ ಅಭ್ಯಾಸ ಮೊಟಕುಗೊಂಡಿತು. ಸ್ವತಃ ಸೋಂಕು ಪೀಡಿತರಾದ ಸ್ಪರ್ಧಿಗಳೂ ಇದ್ದಾರೆ. ಮಾನಸಿಕ ಕ್ಷೋಭೆಗೆ ಒಳಗಾದವರೂ ಕಡಿಮೆಯಿಲ್ಲ.

ತಾರೆಗಳ ಗೈರು:ಈ ಬಾರಿಯ ಒಲಿಂಪಿಕ್ಸ್‌ಗೆ ಕೆಲವು ತಾರೆಗಳ ಅನುಪಸ್ಥಿತಿಯೂ ಕಾಡಲಿದೆ. ಕೆಲವರು ಗಾಯಾಳಾಗಿದ್ದರೆ, ಇನ್ನು ಕೆಲವರು ವಿಶ್ರಾಂತಿ ಬಯಸಿದ್ದಾರೆ. ಕೋವಿಡ್‌ ಕಾರಣದಿಂದಲೂ ಕೆಲವರು ಟೋಕಿಯೊಕ್ಕೆ ಹೋಗದಿರಲು ನಿರ್ಧರಿಸಿದ್ದಾರೆ. ಇನ್ನು ಕೆಲವು ಹೆಸರಾಂತ ಅಥ್ಲೀಟುಗಳು ಅರ್ಹತಾ ಮಟ್ಟ ಸಾಧಿಸಲು ವಿಫಲರಾಗಿದ್ದಾರೆ.

ಟೆನಿಸ್‌ ಲೋಕದ ಮೂವರು ದಿಗ್ಗಜರಲ್ಲಿ ಒಬ್ಬರಾದ ಸ್ಪೇನ್‌ನ ದೈತ್ಯ ಆಟಗಾರ ರಫೆಲ್‌ ನಡಾಲ್‌ ಭಾಗವಹಿಸುವುದಿಲ್ಲ ಎಂದಿದ್ದಾರೆ. ಲಂಡನ್‌ (2012) ಒಲಿಂಪಿಕ್ಸ್‌ನಲ್ಲಿ ರನ್ನರ್‌ ಅಪ್‌ ಆಗಿದ್ದ ರೋಜರ್‌ ಫೆಡರರ್‌ ಮೊಣಗಂಟಿನ ನೋವಿನಿಂದಾಗಿ ಹಿಂದೆ ಸರಿದಿದ್ದಾರೆ. ಈ ವರ್ಷ ಮೂರು ಗ್ರ್ಯಾಂಡ್‌ಸ್ಲಾಮ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು ಗೋಲ್ಡನ್‌ ಸ್ಲ್ಯಾಮ್‌ ಅವಕಾಶ ಹೊಂದಿರುವ ನೊವಾಕ್‌ ಜೊಕೊವಿಚ್‌ ಭಾಗವಹಿಸಬೇಕೇ ಬೇಡವೇ ಎಂಬ ಗೊಂದಲದಲ್ಲಿ ಮುಳುಗಿದ್ದಾರೆ. ಆಸ್ಟ್ರೇಲಿಯಾದ ಸಿಡುಕ ಆಟಗಾರ ನಿಕ್‌ ಕಿರ್ಗಿಯೋಸ್‌ ಗೈರಾಗಲಿದ್ದಾರೆ. ಕೋವಿಡ್ ಭಯದಿಂದ ಕೆನಡಾದ ಅಗ್ರಮಾನ್ಯ ಆಟಗಾರ್ತಿ ಬಿಯಾಂಕ ಆ್ಯಂಡ್ರುಸ್ಕಾ ಹಿಂದೆಸರಿದಿದ್ದಾರೆ.

ಡೊಮಿನಿಕ್‌ ಥೀಮ್‌ (ಆಸ್ಟ್ರಿಯಾ) ವಿಶ್ರಾಂತಿ ಬಯಸಿದ್ದರೆ, ಸ್ವಿಜರ್ಲೆಂಡ್‌ನ ಸ್ಟಾನಿಸ್ಲಾವ್‌ ವಾವ್ರಿಂಕಾ ಅವರು ಪೂರ್ಣ ದೈಹಿಕ ಕ್ಷಮತೆ ಹೊಂದಿಲ್ಲ. ಥೀಮ್‌ 2008ರ ಬೀಜಿಂಗ್‌ ಕ್ರೀಡೆಗಳ ಡಬಲ್ಸ್‌ನಲ್ಲಿ ಚಿನ್ನ ಗೆದ್ದುಕೊಂಡಿದ್ದರು.

ರಿಯೊ (2016) ಒಲಿಂಪಿಕ್ಸ್‌ನ ಫೈನಲ್‌ನಲ್ಲಿ ಪೆನಾಲ್ಟಿ ಗೋಲು ಗಳಿಸಿ ಬ್ರೆಜಿಲ್‌ ಗೆಲ್ಲಲು ನೆರವಾಗಿದ್ದ ಫುಟ್‌ಬಾಲ್‌ ತಾರೆ ನೇಮರ್‌, ಫ್ರಾನ್ಸ್‌ನ ದಿಗ್ಗಜ ಆಟಗಾರ ಕೈಲಿಯನ್‌ ಬಾಪೆ ಅವರನ್ನು ಪ್ಯಾರಿಸ್‌ ಸೇಂಟ್‌ ಜರ್ಮೇನ್‌ (ಪಿಎಸ್‌ಜಿ) ಕ್ಲಬ್‌ ತಂಡ ಆಯಾ ರಾಷ್ಟ್ರೀಯ ತಂಡಗಳಗೆ ಬಿಟ್ಟುಕೊಟ್ಟಿಲ್ಲ. ಪ್ರೀಮಿಯರ್‌ ಲೀಗ್‌ ಕ್ಲಬ್‌ ಲಿವರ್‌ಪೂಲ್‌ಗೆ ಆಡುವ ಮೊಹಮದ್‌ ಸಲಾ ಅವರೂ ಇದೇ ಕಾರಣದಿಂದಾಗಿ ಈಜಿಪ್ಟ್‌ ತಂಡದಲ್ಲಿ ಸ್ಥಾನ ಪಡೆದಿಲ್ಲ.

ದೂರ ಅಂತರದ ಓಟದಲ್ಲಿ ಬ್ರಿಟನ್‌ಗೆ ಹೆಸರು ತಂದುಕೊಟ್ಟಿದ್ದ ಸರ್‌ ಮೊ ಫರಾ ಈ ವರ್ಷ ಅರ್ಹತೆ ಪಡೆಯಲು ಸ್ವಲ್ಪದರಲ್ಲಿ ವಿಫಲರಾಗಿದ್ದಾರೆ. ಲಂಡನ್‌ ಮತ್ತು ರಿಯೊ ಒಲಿಂಪಿಕ್ಸ್‌ ಕ್ರೀಡೆಗಳಲ್ಲಿ ಸೊಮಾಲಿಯಾ ಸಂಜಾತ ಓಟಗಾರ 5,000 ಮತ್ತು 10,000 ಮೀಟರ್ಸ್‌ ಓಟಗಳೆರಡರಲ್ಲೂ ಚಿನ್ನಕ್ಕೆ ಕೊರಳೊಡ್ಡಿದವರು. 800 ಮೀ. ಓಟದಲ್ಲಿ ವಿಶ್ವದಾಖಲೆ ಹೊಂದಿರುವ ಕೆನ್ಯಾದ ಡೇವಿಡ್‌ ರುದಿಶಾ ಕೂಡ ಪಾಲ್ಗೊಳ್ಳುತ್ತಿಲ್ಲ. ಅವರೂ ಈ ಹಿಂದಿನ ಎರಡು ಒಲಿಂಪಿಕ್ಸ್‌ಗಳಲ್ಲಿ ಚಿನ್ನದ ಪದಕ ಜಯಸಿದ ಪ್ರತಿಭಾನ್ವಿತ.

ಬ್ಯಾಡ್ಮಿಂಟನ್‌ನಲ್ಲಿ ಹಾಲಿ ಮಹಿಳಾ ಸಿಂಗಲ್ಸ್‌ ಚಾಂಪಿಯನ್‌ ಕರೊಲಿನಾ ಮರಿನ್‌ ಕೂಡ ಗಾಯಾಳಾಗಿ ಹಿಂದೆ ಸರಿದಿದ್ದಾರೆ. ಅವರು ರಿಯೊ ಕ್ರೀಡೆಗಳ ಫೈನಲ್‌ನಲ್ಲಿ ಭಾರತದ ತಾರೆ ಪಿ.ವಿ. ಸಿಂಧು ವಿರುದ್ಧ ಜಯಗಳಿಸಿದ್ದರು. ವಿಶ್ವದ ಅಗ್ರಮಾನ್ಯ ಗಾಲ್ಫ್‌ ಆಟಗಾರ ಡಸ್ಟಿನ್‌ ಜಾನ್ಸನ್‌ ಕೂಡ ಇಂಥ ದೀರ್ಘ ಪ್ರಯಾಣ ಒಲ್ಲೆ ಎಂದಿದ್ದಾರೆ.

ದೂರವಾಗದ ಆತಂಕ:ಒಲಿಂಪಿಕ್ ಉತ್ಸವಕ್ಕೆ ಕೆಲವು ದಿನಗಳಿರುವಾಗ ಇನ್ನೇನು ಆಗಬಹುದೊ ಎಂಬ ಆತಂಕ ಇದೆ. ಜಪಾನ್‌ಗೆ ಬಂದಿಳಿದ ವಿವಿಧ ದೇಶಗಳ ನಾಲ್ವರು ಕ್ರೀಡಾಪಟುಗಳಲ್ಲಿ/ ನೆರವು ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.ತಪಾಸಣೆ, ನಿರ್ಬಂಧ, ಖಾಲಿ ಕ್ರೀಡಾಂಗಣ, ಸೀಮಿತ ಸಂಚಾರಕ್ಕೆ ಅವಕಾಶ ಇರುವುದರಿಂದ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಬಹುದೇನೊ? ಕ್ರೀಡೆಗಳ ವ್ಯವಸ್ಥಾಪಕ ಸಮಿತಿ, ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಗೂ ಈ ಕ್ರೀಡಾಕೂಟ ನಡೆಸಿಕೊಟ್ಟರೆ ಸಾಕು ಎಂಬ ಒತ್ತಡವೂ ಇದೆ.

ಕೋಟಿಗಟ್ಟಲೆ ಖರ್ಚು ಮಾಡಿ ಸಿದ್ಧತೆಗಳನ್ನು ನಡೆಸಿರುವ ಜಪಾನ್‌ ಆಡಳಿತಕ್ಕೆ ಕ್ರೀಡೆಗಳನ್ನು ಅಚ್ಚುಕಟ್ಟಾಗಿ ನಡೆಸುವುದು ಪ್ರತಿಷ್ಠೆಯ ವಿಷಯ. ಕೊರೊನಾ ಕಾಲದಲ್ಲೂ ಇಷ್ಟು ದೊಡ್ಡ ಮಟ್ಟದ ಕ್ರೀಡೆಗಳನ್ನು ಯಶಸ್ವಿಯಾಗಿ ನಡೆಸಿದರೆ ಅದು ಕ್ರೀಡೆಯ ಗೆಲುವೂ ಆಗಲಿದೆ ಎಂಬ ಸಂದೇಶ ರವಾನಿಸಲು ಸಾಧ್ಯವಾಗಬಹುದು. 1964ರಲ್ಲಿ ಈ ಮಹಾನಗರಿಯಲ್ಲಿ ಮೊದಲ ಬಾರಿ ಒಲಿಂಪಿಕ್ಸ್‌ ನಡೆದಿತ್ತು. ಆದರೆ ಈ ಬಾರಿ ನಡೆಯುತ್ತಿರುವುದು ಭಿನ್ನ ವಾತಾವರಣದಲ್ಲಿ. 1945ರ ಆಗಸ್ಟ್‌ನಲ್ಲಿ ಎರಡು ಅಣುಬಾಂಬ್‌ ದಾಳಿಗಳಿಗೆ ತುತ್ತಾದ ಮೇಲೆ ಜಪಾನ್‌ ಬೆಳೆದ ಪರಿ ಅಮೋಘ. ಈಗ ಜಗತ್ತಿನ ಮೇಲೆ ಕೊರೊನಾ ವೈರಸ್‌ ಸಾರಿರುವ ‘ಮಹಾ ಯುದ್ಧ’ದ ಸಂದರ್ಭದಲ್ಲಿ ಒಲಿಂಪಿಕ್ಸ್‌ ನಡೆಸುವ ಸವಾಲನ್ನು ಜಪಾನ್‌ ಎದುರಿಸಬೇಕಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT