ಶುಕ್ರವಾರ, ಜುಲೈ 30, 2021
22 °C
ಜಪಾನ್‌ನಲ್ಲಿ ಕೋವಿಡ್ ತುರ್ತುಪರಿಸ್ಥಿತಿ 20 ದಿನಗಳಿಗೆ ವಿಸ್ತರಣೆ

ಟೋಕಿಯೊ ಒಲಿಂಪಿಕ್ಸ್: ಜಪಾನ್‌ ಪ್ರೇಕ್ಷಕರಿಗೂ ಇಲ್ಲ ಅವಕಾಶ?

ಎಪಿ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಕೋವಿಡ್‌–19 ಸಾಂಕ್ರಾಮಿಕ ನಿಯಂತ್ರಿಸಲು ಜಪಾನ್‌ನ ಟೋಕಿಯೊ ಮತ್ತು ಇತರ ಪ್ರದೇಶಗಳಲ್ಲಿ ಜಾರಿ ಮಾಡಲಾಗಿರುವ ತುರ್ತುಪರಿಸ್ಥಿಯನ್ನು ಶುಕ್ರವಾರ ಮತ್ತೆ 20 ದಿನಗಳಿಗೆ ವಿಸ್ತರಿಸಲಾಗಿದೆ. ಕೊರೊನಾ ಪ್ರಕರಣಗಳು ಇನ್ನೂ ಏರುಗತಿಯಲ್ಲಿರುವುದರಿಂದ ಈ ಬಾರಿಯ ಒಲಿಂಪಿಕ್ಸ್ಅನ್ನು ಪ್ರೇಕ್ಷಕರಿಲ್ಲದೆ ಆಯೋಜಿಸುವ ಸುಳಿವನ್ನೂ ಆಯೋಜನಾ ಸಮಿತಿ ನೀಡಿದೆ.

‘ಸೋಂಕು ಪ್ರಕರಣಗಳು ಹೆಚ್ಚುತ್ತಲೇ ಇವೆ. ಪಶ್ಚಿಮ ಜಪಾನ್‌ನ ಒಸಾಕ ಪ್ರಾಂತ್ಯವು ಹೆಚ್ಚು ಬಾಧಿತವಾಗಿದೆ. ಇಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆಯಿದೆ‘ ಎಂದು ನಿರ್ಧಾರ ಪ್ರಕಟಿಸುವ ವೇಳೆ ಜಪಾನ್‌ ಪ್ರಧಾನಿ ಯೋಶಿಹಿದೆ ಸುಗಾ ತಿಳಿಸಿದ್ದಾರೆ.

ಒಲಿಂಪಿಕ್ಸ್‌ಗೆ ವಿದೇಶಿ ಪ್ರೇಕ್ಷಕರಿಗೆ ನಿರ್ಬಂಧ ನಿರ್ಧಾರವನ್ನು ಒಂದು ತಿಂಗಳ ಹಿಂದೆಯೇ ತೆಗದುಕೊಳ್ಳಲಾಗಿದೆ. ಅದೇ ರೀತಿ ಸ್ಥಳೀಯ ಪ್ರೇಕ್ಷಕರನ್ನೂ ಕೂಟದಿಂದ ನಿರ್ಬಂಧಿಸಲಾಗುತ್ತದೆಯೇ ಎಂಬುದರ ಕುರಿತು ನಿರ್ಧಾರ ತಳೆಯಬೇಕಿದೆ. ಜಪಾನ್‌ನ ಅಥ್ಲೀಟ್‌ಗಳಿಗೆ ಲಸಿಕೆ ನೀಡಲು ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

2020ರಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್‌ಅನ್ನು ಕೋವಿಡ್‌ ಹಾವಳಿಯ ಹಿನ್ನೆಲೆಯಲ್ಲಿ ಈ ವರ್ಷದ ಜುಲೈ 23ರಿಂದ ನಡೆಸಲು ಉದ್ದೇಶಿಸಲಾಗಿದೆ. ರೂಪಾಂತರಿ ವೈರಸ್‌ ಹರಡುವ ಕಳವಳ ಹಾಗೂ ಲಸಿಕೆ ನೀಡಿಕೆಯಲ್ಲಿ ನಿಧಾನಗತಿಯು ನಾಗರಿಕರ ಆತಂಕಕ್ಕೆ ಕಾರಣವಾಗಿದ್ದು, ಕೂಟವನ್ನು ರದ್ದುಗೊಳಿಸಲು ಆಗ್ರಹಿಸುತ್ತಿದ್ದಾರೆ. ವೈದ್ಯಕೀಯ ಪರಿಣತರು ಮತ್ತು ಪ್ರಾಯೋಜಕ ಸಂಸ್ಥೆಯೊಂದು ಈ ಕೂಗಿಗೆ ದನಿಗೂಡಿಸಿದೆ.

‘ಕೂಟಕ್ಕೆ ಸ್ಥಳೀಯ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಬೇಕೆ ಬೇಡವೇ ಎಂಬುದನ್ನು ಸಾಧ್ಯವಾದಷ್ಟು ಶೀಘ್ರ ನಿರ್ಧರಿಸಲು ಬಯಸುತ್ತೇವೆ. ತುರ್ತುಪರಿಸ್ಥಿತಿಯನ್ನು ತೆಗೆದುಹಾಕಿದ ಬಳಿಕ ಈ ಕುರಿತು ತೀರ್ಮಾನಿಸುತ್ತೇವೆ‘ ಎಂದು ಆಯೋಜನಾ ಸಮಿತಿಯ ಅಧ್ಯಕ್ಷೆ ಶೀಕೊ ಹಸಿಮೋಟೊ ತಿಳಿಸಿದ್ದಾರೆ.

‘ಒಲಿಂಪಿಕ್ಸ್ಅನ್ನು ಪ್ರೇಕ್ಷಕರಿಲ್ಲದೆ ನಡೆಸಬೇಕೆಂದು ಬಹಳಷ್ಟು ಜನ ಹೇಳುತ್ತಿದ್ದಾರೆ. ಇತರ ಕ್ರೀಡಾಕೂಟಗಳಲ್ಲಿಯೂ ಪ್ರೇಕ್ಷಕರಿಗೆ ಅವಕಾಶ ನೀಡಲಾಗುತ್ತಿದೆ. ಈ ವಿಷಯಗಳನ್ನೆಲ್ಲಾ ಗಮನದಲ್ಲಿಟ್ಟುಕೊಳ್ಳಬೇಕು.ಇದರಿಂದ ಸ್ಥಳೀಯ ವೈದ್ಯಕೀಯ ಸೇವೆಗಳ ಮೇಲೆ ಪರಿಣಾಮ ಬೀರಬಾರದು. ಈ ವಿಷಯಗಳನ್ನು ಪರಿಗಣಿಸಿ ಪ್ರೇಕ್ಷಕರ ಪ್ರವೇಶ ಕುರಿತು ನಿರ್ಧಾರ ತೆಗದುಕೊಳ್ಳಬೇಕಾಗಿದೆ‘ ಎಂದು ಅವರು ನುಡಿದರು.

ಶೂಟಿಂಗ್ ತಂಡದೊಂದಿಗೆ ಇಬ್ಬರು ಕೋಚ್‌ಗಳು
ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತ ಶೂಟಿಂಗ್ ತಂಡದೊಂದಿಗೆ ರೈಫಲ್ ಕೋಚ್‌ ಒಲೆಗ್‌ ಮಿಖೈಲೊವ್ ಮತ್ತು ಪಿಸ್ತೂಲ್ ಕೋಚ್‌ ಪಾವೆಲ್‌ ಸ್ಮಿರ್ನೊವ್ ಮಾತ್ರ ಇದ್ದು ಮಾರ್ಗದರ್ಶನ ಮಾಡಲಿದ್ದಾರೆ. ಇನ್ನುಳಿದ ಕೋಚ್‌ಗಳು ರೊಟೇಶನ್ ಮಾದರಿಯಲ್ಲಿ ಶೂಟರ್‌ಗಳಿಗೆ ಸಲಹೆ ನೀಡಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು