ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಗ್ಗಜ ಅಥ್ಲೀಟ್ ಮಿಲ್ಕಾ ಸಿಂಗ್ ಆರೋಗ್ಯ ಸ್ಥಿರವಾಗಿದೆ: ಪಿಜಿಐಎಂಇಆರ್

ಅಕ್ಷರ ಗಾತ್ರ

ಚಂಡೀಗಡ: ಕೊರೊನಾ ಸೋಂಕಿತರಾಗಿರುವ ಭಾರತದ ದಿಗ್ಗಜ ಅಥ್ಲೀಟ್ ಮಿಲ್ಕಾ ಸಿಂಗ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಚಂಡೀಗಡದ ಪಿಜಿಐಎಂಇಆರ್ ಆರೋಗ್ಯ ಬುಲೆಟಿನ್‌ನಲ್ಲಿ ತಿಳಿಸಿದೆ.

ಚಂಡೀಗಡದ ಪಿಜಿಐಎಂಇಆರ್‌ನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಿಲ್ಕಾ ಸಿಂಗ್, ನಿನ್ನೆಗಿಂತಲೂ ಚೇತರಿಸಿಕೊಂಡಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

ಕೊರೊನಾ ಸೋಂಕಿನಿಂದ ಬಳಲುತ್ತಿರುವ ಮಿಲ್ಕಾ ಸಿಂಗ್ ಅವರನ್ನು ಜೂನ್ 3ರಂದು ಪಿಜಿಐಎಂಇಆರ್‌ಗೆ ದಾಖಲಿಸಲಾಗಿತ್ತು.

ಶನಿವಾರ ಬೆಳಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮಿಲ್ಕಾ ಸಿಂಗ್ ಸಾವಿನ ಸುದ್ದಿ ಹರಿದಾಡಿತ್ತು. ಇದು ಸತ್ಯಕ್ಕೆ ದೂರ ಎಂದು ಪಿಜಿಐಎಂಇಆರ್ ವಕ್ತಾರ ಪ್ರೊ. ಅಶೋಕ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

91 ವರ್ಷದ ಮಿಲ್ಕಾ ಸಿಂಗ್ ಅವರ ಆರೋಗ್ಯ ಸ್ಥಿತಿಯನ್ನು ಮೂವರು ವೈದ್ಯರನ್ನೊಳಗೊಂಡ ತಂಡವು ನಿಗಾ ವಹಿಸುತ್ತಿದೆ ಎಂದು ಪ್ರಕಟಣೆಯು ತಿಳಿಸಿದೆ.

ಕಳೆದ ತಿಂಗಳು ಕೋವಿಡ್ ಸೋಂಕಿಗೆ ಒಳಗಾಗಿದ್ದ ಮಿಲ್ಕಾ ಸಿಂಗ್ ಅವರು ಮೊಹಾಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಬಳಿಕ ಆಮ್ಲಜನಕ ಮಟ್ಟ ಕಡಿಮೆಯಾಗಿದ್ದರಿಂದ ಜೂನ್ 3ರಂದು ಪಿಜಿಐಎಂಇಆರ್‌ಗೆ ದಾಖಲಾಗಿದ್ದಾರೆ.

ಏಷ್ಯನ್ ಗೇಮ್ಸ್‌ನಲ್ಲಿ ನಾಲ್ಕು ಚಿನ್ನ ಗೆದ್ದಿರುವ ಮಿಲ್ಕಾ ಸಿಂಗ್ 1958ರ ಕಾಮನ್ವೆಲ್ತ್ ಗೇಮ್ಸ್‌ನಲ್ಲೂ ಚಿನ್ನದ ಪದಕ ಗೆದ್ದಿದ್ದರು. 1960ರ ರೋಮ್ ಒಲಿಂಪಿಕ್ಸ್‌ನ 400 ಮೀಟರ್ಸ್‌ ಓಟದಲ್ಲಿ ಫೈನಲ್ ಪ್ರವೇಶಿಸಿದ್ದ ಅವರು ನಾಲ್ಕನೇ ಸ್ಥಾನ ಗಳಿಸಿದ್ದರು. ಅಲ್ಲಿ ಅವರು ಗುರಿ ಮುಟ್ಟಿದ ಅವಧಿ ರಾಷ್ಟ್ರೀಯ ದಾಖಲೆಯಾಗಿತ್ತು. 38 ವರ್ಷಗಳ ನಂತರ ಪರಮ್‌ಜೀತ್ ಸಿಂಗ್‌ ಈ ದಾಖಲೆಯನ್ನು ಮುರಿದಿದ್ದರು. 1956 ಮತ್ತು 1964ರ ಒಲಿಂಪಿಕ್ಸ್‌ನಲ್ಲೂ ಭಾರತವನ್ನು ಪ್ರತಿನಿಧಿಸಿದ್ದ ಮಿಲ್ಕಾ ಅವರಿಗೆ 1959ರಲ್ಲಿ ಪದ್ಮಶ್ರೀ ಪುರಸ್ಕಾರ ಒಲಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT