ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಅಥ್ಲೀಟ್‌ ದಿಗ್ಗಜ ಮಿಲ್ಕಾ ಸಿಂಗ್‌ ಆಸ್ಪತ್ರೆಗೆ ದಾಖಲು: ಆರೋಗ್ಯ ಸ್ಥಿರ

Last Updated 24 ಮೇ 2021, 14:28 IST
ಅಕ್ಷರ ಗಾತ್ರ

ಚಂಡೀಗಡ: ಕೊರೊನಾ ಸೋಂಕಿತರಾಗಿರುವ ಭಾರತದ ದಿಗ್ಗಜ ಅಥ್ಲೀಟ್‌ ಮಿಲ್ಕಾ ಸಿಂಗ್ ಅವರನ್ನು ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಜಾಗೃತಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಮಿಲ್ಕಾ ಸಿಂಗ್ ಅವರ ಪುತ್ರ, ಹೆಸರಾಂತ ಗಾಲ್ಫ್ ಆಟಗಾರ ಜೀವ್ ಮಿಲ್ಕಾ ಸಿಂಗ್ ತಿಳಿಸಿದ್ದಾರೆ.

91 ವರ್ಷದ ಮಿಲ್ಕಾ ಅವರಿಗೆ ಹೋದ ಬುಧವಾರ ಸೋಂಕು ದೃಢಪಟ್ಟಿದ್ದು, ಚಂಡೀಗಡದ ನಿವಾಸದಲ್ಲಿ ಏಕಾಂತವಾಸದಲ್ಲಿದ್ದರು. ಅವರನ್ನು ಮೊಹಾಲಿಯ ಫೊರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

‘ಅವರಲ್ಲಿ ಸುಸ್ತು ಕಾಣಿಸಿಕೊಂಡಿತ್ತು; ಸೋಮವಾರದಿಂದ ಊಟ ಮಾಡಿರಲಿಲ್ಲ. ಹೀಗಾಗಿ ಆಸ್ಪತ್ರೆಗೆ ದಾಖಲಿಸಬೇಕಾಯಿತು. ಅವರ ಆರೋಗ್ಯ ಸರಿಯಾಗಿದ್ದರೂ, ಅನುಭವಿ ವೈದ್ಯರ ನಿಗಾ ಬೇಕಾಗುವುದು ಎಂಬ ಕಾರಣಕ್ಕೆ ಆಸ್ಪತ್ರಗೆ ದಾಖಲಿಸುವುದು ಸುರಕ್ಷಿತ ಎನಿಸಿತು‘ ಎಂದು ಜೀವ್ ಹೇಳಿದ್ದಾರೆ.

‘ವೈದ್ಯರು ತಂದೆಯವರ ಕಾಳಜಿ ಚೆನ್ನಾಗಿ ಮಾಡುತ್ತಿದ್ದಾರೆ. ಅವರು ಶೀಘ್ರ ಗುಣಮುಖರಾಗುತ್ತಾರೆ‘ ಎಂದು ಜೀವ್ ಹೇಳಿದ್ದಾರೆ.

ಮಿಲ್ಕಾ ಅವರಿಗೆ ಕೋವಿಡ್ ಖಚಿತಪಟ್ಟ ಹಿನ್ನೆಲೆಯಲ್ಲಿ ದುಬೈನಲ್ಲಿದ್ದ ಜೀವ್ ಶನಿವಾರ ದೆಹಲಿಗೆ ಮರಳಿದ್ದರು.

‘ನನಗೆ ಕೋವಿಡ್ ಲಕ್ಷಣಗಳು ಇರಲಿಲ್ಲ. ಆದರೆ ಕೆಲಸಕ್ಕಿದ್ದ ವ್ಯಕ್ತಿಯೊಬ್ಬರಿಗೆ ಪಾಸಿಟಿವ್ ಆಗಿತ್ತು. ಹೀಗಾಗಿ ಎಲ್ಲರೂ ಪರೀಕ್ಷೆ ಮಾಡಿಸಿಕೊಂಡೆವು. ಬುಧವಾರ ವರದಿ ಬಂದಿದ್ದು ನನಗೆ ಮಾತ್ರ ಸೋಂಕು ಇರುವುದು ದೃಢವಾಗಿದೆ. ಇದನ್ನು ಕಂಡು ಅಚ್ಚರಿಯಾಗಿದೆ’ ಎಂದು ಮಿಲ್ಕಾ ಸಿಂಗ್ ಈ ಮೊದಲು ಹೇಳಿದ್ದರು.

ಏಷ್ಯನ್ ಗೇಮ್ಸ್‌ನಲ್ಲಿ ನಾಲ್ಕು ಚಿನ್ನ ಗೆದ್ದಿರುವ ಮಿಲ್ಕಾ ಸಿಂಗ್ 1958ರ ಕಾಮನ್ವೆಲ್ತ್ ಗೇಮ್ಸ್‌ನಲ್ಲೂ ಚಿನ್ನದ ಪದಕ ಗೆದ್ದಿದ್ದರು. 1960ರ ರೋಮ್ ಒಲಿಂಪಿಕ್ಸ್‌ನ 400 ಮೀಟರ್ಸ್‌ ಓಟದಲ್ಲಿ ಫೈನಲ್ ಪ್ರವೇಶಿಸಿದ್ದ ಅವರು ನಾಲ್ಕನೇ ಸ್ಥಾನ ಗಳಿಸಿದ್ದರು. ಅಲ್ಲಿ ಅವರು ಗುರಿ ಮುಟ್ಟಿದ ಅವಧಿ ರಾಷ್ಟ್ರೀಯ ದಾಖಲೆಯಾಗಿತ್ತು. 38 ವರ್ಷಗಳ ನಂತರ ಪರಮ್‌ಜೀತ್ ಸಿಂಗ್‌ ಈ ದಾಖಲೆಯನ್ನು ಮುರಿದಿದ್ದರು. 1956 ಮತ್ತು 1964ರ ಒಲಿಂಪಿಕ್ಸ್‌ನಲ್ಲೂ ಭಾರತವನ್ನು ಪ್ರತಿನಿಧಿಸಿದ್ದ ಮಿಲ್ಕಾ ಅವರಿಗೆ 1959ರಲ್ಲಿ ಪದ್ಮಶ್ರೀ ಪುರಸ್ಕಾರ ಒಲಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT