ಬುಧವಾರ, ಜನವರಿ 22, 2020
28 °C

ಟೀಕೆಗಳಿಂದ ವಿಚಲಿತ ಆಗಲಾರೆ, ಒಲಿಂಪಿಕ್‌ ಪದಕ ಗೆಲ್ಲುವ ಕಡೆಗಷ್ಟೇ ಗಮನ: ಸಿಂಧು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಆಟದ ಕೌಶಲ ಸುಧಾರಿಸಿ ಒಲಿಂಪಿಕ್ಸ್‌ನಲ್ಲಿ ಎರಡನೇ ಪದಕವನ್ನು ಗೆಲ್ಲುವ ಕಡೆಗಷ್ಟೇ ಗಮನಹರಿಸುತ್ತಿದ್ದೇನೆ. ಟೀಕೆ–ಟಿಪ್ಪಣಿಗಳು ಅಥವಾ ನಿರೀಕ್ಷೆಯ ಭಾರ ನನ್ನನ್ನು ವಿಚಲಿತಗೊಳಿಸದು’ ಎಂದು ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ ಪಿ.ವಿ.ಸಿಂಧು ಹೇಳಿದರು.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಬ್ಯಾಡ್ಮಿಂಟನ್‌ ಪಟು ಎಂಬ ಶ್ರೇಯಕ್ಕೆ ಸಿಂಧು ಕಳೆದ ವರ್ಷ  ಪಾತ್ರರಾಗಿದ್ದರು. ಆದರೆ ನಂತರ ಸಾಲು ಸಾಲು ಟೂರ್ನಿಗಳಲ್ಲಿ ಬೇಗನೇ ನಿರ್ಗಮಿಸಿ ನಿರಾಶೆಯನ್ನೂ ಅನುಭವಿಸಿದ್ದರು. ಕಳೆದ ತಿಂಗಳು ವಿಶ್ವ ಟೂರ್‌ ಫೈನಲ್ಸ್‌ನಲ್ಲೂ ಪ್ರಶಸ್ತಿ ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಗಿರಲಿಲ್ಲ.

‘ವಿಶ್ವ ಚಾಂಪಿಯನ್‌ಷಿಪ್‌ ನನ್ನ ಪಾಲಿಗೆ ಒಳ್ಳೆಯ ಟೂರ್ನಿಯಾಗಿತ್ತು. ಆದರೆ ನಂತರದ ಟೂರ್ನಿಗಳಲ್ಲಿ ಮೊದಲ ಸುತ್ತುಗಳಲ್ಲೇ ಸೋಲುತ್ತಿದ್ದೆ. ಆದರೆ ನಾನು ಸಕಾರಾತ್ಮಕವಾಗಿಯೇ ಇದ್ದೇನೆ. ಪ್ರತೀ ಬಾರಿ ಗೆಲ್ಲಬೇಕೆಂದರೆ ಆಗುವುದಿಲ್ಲ. ಕೆಲವು ಬಾರಿ ಅಮೋಘ ಆಟವಾಡಲು ಸಾಧ್ಯವಾಗುತ್ತದೆ. ಕೆಲವೊಮ್ಮೆ ತಪ್ಪುಗಳೂ ಆಗುತ್ತಿರುತ್ತವೆ’ ಎಂದು ಸಿಂಧು ಬುಧವಾರ ಸುದ್ಧಿ ಸಂಸ್ಥೆಗೆ ತಿಳಿಸಿದರು.

ಹೈದರಾಬಾದ್‌ನ ಈ ಆಟಗಾರ್ತಿ ಸದ್ಯ ಪ್ರೀಮಿಯರ್‌ ಬ್ಯಾಡ್ಮಿಂಟನ್ ಲೀಗ್‌ (ಪಿಬಿಎಲ್‌)ನಲ್ಲಿ ಪಾಲ್ಗೊಳ್ಳಲಿದ್ದಾರೆ. ಜನವರಿ 20 ರಿಂದ ಫೆಬ್ರುವರಿ 9ರವರೆಗೆ ಈ ಲೀಗ್‌ ನಡೆಯಲಿದೆ. ಹೈದರಾಬಾದ್‌ ಹಂಟರ್ಸ್‌ ತಂಡ, ಪಿಬಿಎಲ್‌ ಹರಾಜಿನಲ್ಲಿ ₹ 77 ಲಕ್ಷ ನೀಡಿ ಸಿಂಧು ಅವರನ್ನು ಉಳಿಸಿಕೊಂಡಿದೆ.

‘ತಪ್ಪುಗಳಿಂದ ಸಾಕಷ್ಟು ಕಲಿತಿದ್ದೇನೆ. ಸಕಾರಾತ್ಮಕ ಮನೋಭಾವದೊಡನೆ, ಈಗಿನ ಹಿನ್ನಡೆಯಿಂದ ಪುನರಾಗಮನ ಮಾಡುವುದಷ್ಟೇ ನನಗೆ ಮುಖ್ಯ’ ಎಂದರು.

‘ನಿಜ, ನನ್ನ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ಆದರೆ ಒತ್ತಡ ಮತ್ತು ಟೀಕೆಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ. ನಾನು ಹೋದ ಕಡೆಯಲ್ಲೆಲ್ಲಾ ಗೆಲ್ಲಬೇಕೆಂದು ಜನರು ಬಯಸುತ್ತಾರೆ. ಯಾರಿಗೇ ಆಗಲಿ ಒಲಿಂಪಿಕ್ಸ್ ಅಂತಿಮ ಗುರಿ’ ಎಂದು 24 ವರ್ಷದ ಆಟಗಾರ್ತಿ ಹೇಳಿದರು. ಟೋಕಿಯೊ ಒಲಿಂಪಿಕ್ಸ್‌, ಜುಲೈ 24 ರಿಂದ ಆಗಸ್ಟ್‌ 9ರವರೆಗೆ ನಡೆಯಲಿದೆ.

2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಸಿಂಧು ಬೆಳ್ಳಿಯ ಪದಕ ಗೆದ್ದುಕೊಂಡಿದ್ದರು. ಅವರು ಟೋಕಿಯೊದಲ್ಲೂ ಪದಕ ಗೆದ್ದರೆ, ಸತತ ಎರಡು ಒಲಿಂಪಿಕ್ಸ್‌ಗಳಲ್ಲಿ ಪದಕ ಗೆದ್ದಿರುವ ಕುಸ್ತಿಪಟು ಸುಶೀಲ್‌ ಕುಮಾರ್ ಅವರ ಸಾಧನೆ ಸರಿಗಟ್ಟಿದಂತಾಗುತ್ತದೆ.  

‘ಈ ವರ್ಷ ನಮ್ಮ ಹಾದಿ ಸುಲಭವೇನಲ್ಲ. ಮಲೇಷ್ಯಾ (ಜನವರಿ 7 ರಿಂದ 12), ಇಂಡೊನೇಷ್ಯಾ (ಜ. 14 ರಿಂದ 19)ದಲ್ಲಿ ಟೂರ್ನಿಗಳ ನಂತರ ಒಲಿಂಪಿಕ್ಸ್ ಅರ್ಹತೆಗಾಗಿ ಕೆಲವು ಟೂರ್ನಿಗಳು ನಿಗದಿಯಾಗಿವೆ. ಹೀಗಾಗಿ ನಮಗೆ ಎಲ್ಲವೂ ಮಹತ್ವದ್ದು’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು