ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ನಲ್ಲೂ ನಿಲ್ಲದ ಸೈಕ್ಲಿಂಗ್ ಚಕ್ರ

Last Updated 17 ಮೇ 2020, 19:45 IST
ಅಕ್ಷರ ಗಾತ್ರ

ಕೊರೊನಾ ಸೋಂಕು ಹರಡುವ ಭೀತಿಯಿಂದ ಘೋಷಣೆಯಾದ ಲಾಕ್‌ಡೌನ್ ಅನೇಕ ಕ್ರೀಡಾಪಟುಗಳಲ್ಲಿ ಹೊಸತನ ಹುಟ್ಟು ಹಾಕಿದೆ. ಹೆಚ್ಚು ದೈಹಿಕ ಸಾಮರ್ಥ್ಯ ಬೇಕಾಗುವ ಸೈಕ್ಲಿಸ್ಟ್‌ಗಳಿಗೆ ಮನೆಯೇ ಸೈಕ್ಲಿಂಗ್‌ ಟ್ರ್ಯಾಕ್‌ ಹಾಗೂ ಜಿಮ್ ಆಗಿದೆ. ಓಣಿಯ ರಸ್ತೆಗಳೇ ಅಭ್ಯಾಸಕ್ಕೆ ಮೈದಾನವಾಗಿವೆ!

ಕರ್ನಾಟಕದ ಸೈಕ್ಲಿಂಗ್‌ ಕಾಶಿ ಎಂದು ಕರೆಸಿಕೊಳ್ಳುವ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಪ್ರಮಾಣಗಳು ಹೆಚ್ಚುತ್ತಿವೆ. ಆದ್ದರಿಂದ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಸೈಕ್ಲಿಸ್ಟ್‌ಗಳು ನಿತ್ಯ ಮನೆಯಲ್ಲೇ ಅಭ್ಯಾಸ ಮಾಡಿ ಫಿಟ್‌ನೆಸ್ ಉಳಿಸಿಕೊಳ್ಳುತ್ತಿದ್ದಾರೆ. ವಿಜಯಪುರ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ನೆಲೆಸಿರುವ ಸೈಕ್ಲಿಸ್ಟ್‌ಗಳು ಹಳ್ಳದ ದಂಡೆಯ ಖಾಲಿ ಜಾಗದಲ್ಲಿ, ತೋಟ, ಹೊಲಗಳಲ್ಲಿ ದೈಹಿಕ ಕಸರತ್ತು ನಡೆಸುತ್ತಿದ್ದಾರೆ.

ವಿಜಯಪುರದ ಸಹನಾ ಕೂಡಿಗನೂರು 2018ರಲ್ಲಿ ಇಂಡೊನೇಷ್ಯಾ, 2019ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದಿದ್ದ ಏಷ್ಯನ್‌ ಚಾಂಪಿಯನ್‌ಷಿಪ್‌ ಮತ್ತು 2018ರಲ್ಲಿ ದೆಹಲಿಯಲ್ಲಿ ಜರುಗಿದ್ದ ಏಷ್ಯಾ ಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ರಾಷ್ಟ್ರೀಯ ಟೂರ್ನಿಗಳಲ್ಲಿ ಎಂಟು ಚಿನ್ನ ಸೇರಿದಂತೆ 16 ಪದಕಗಳನ್ನು ಜಯಿಸಿದ್ದಾರೆ. ಇದೇ ಕ್ರೀಡೆಯಲ್ಲಿ ಇನ್ನಷ್ಟು ಸಾಧನೆಯ ಹೆಗ್ಗುರಿ ಹೊಂದಿರುವ ಸಹನಾ ಮನೆಯಲ್ಲೇ ರೂಲರ್‌ ಹಾಗೂ ಟ್ರೈನರ್‌ಗೆ ಸೈಕಲ್‌ ಅಳವಡಿಸಿ ಕುಳಿತಲ್ಲೇ ಪೆಡಲ್‌ ತುಳಿಯುತ್ತಾರೆ.

ಹೋದ ವರ್ಷ ಬಿಕಾನೇರ್‌ನಲ್ಲಿ ನಡೆದಿದ್ದ 24ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್‍ಷಿಪ್‌ನಲ್ಲಿ ಬೆಂಗಳೂರಿನ ನವೀನ್ ಜಾನ್ ಬೆಳ್ಳಿ ಜಯಿಸಿದ್ದರು. ಅವರು ಅಭ್ಯಾಸಕ್ಕಾಗಿ ಹೊಸ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಮನೆಯಲ್ಲೇ ಮಿನಿ ಜಿಮ್‌ ಮಾಡಿಕೊಂಡಿದ್ದಾರೆ. ಈ ಹಿಂದಿನ ಐದು ವಾರಗಳ ಕಾಲ ದಿನಕ್ಕೆ ಎರಡರಿಂದ ಮೂರು ತಾಸು ಒಳಾಂಗಣ ಮೈದಾನದಲ್ಲಿ ಸೈಕ್ಲಿಂಗ್‌ ಅಭ್ಯಾಸ ಮಾಡಿದ್ದಾರೆ. ವಿಡಿಯೊ ಗೇಮ್‌ ಮಾದರಿಯಲ್ಲಿ ಆನ್‌ಲೈನ್‌ನಲ್ಲಿ ಸ್ಪರ್ಧೆಗಳನ್ನು ಆಡಿದ್ದಾರೆ. ವಿಶ್ವದ ಶ್ರೇಷ್ಠ ಹವ್ಯಾಸಿ ಹಾಗೂ ವೃತ್ತಿಪರ ಸೈಕ್ಲಿಸ್ಟ್‌ಗಳು ಪಾಲ್ಗೊಳ್ಳುವ ಸ್ಪರ್ಧೆಯಲ್ಲಿ ಭಾಗವಹಿಸಿ ಸೈಕ್ಲಿಂಗ್‌ ಜೊತೆಗಿನ ಸಂಪರ್ಕವನ್ನು ಲಾಕ್‌ಡೌನ್ ಅವಧಿಯಲ್ಲೂ ಮುಂದುವರಿಸಿಕೊಂಡು ಹೋಗಿದ್ದಾರೆ.

‘ಮೊದಲಾಗಿದ್ದರೆ ಫಿಟ್‌ನೆಸ್‌ಗಾಗಿ ನಿತ್ಯ ಓಡುತ್ತಿದ್ದೆ. ಲಾಕ್‌ಡೌನ್‌ ಕಾರಣ ಓಡಲು ಸಾಧ್ಯವಾಗಲಿಲ್ಲ. zwift ಆ್ಯಪ್‌ ಮೂಲಕ ಆನ್‌ಲೈನ್‌ನಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸುತ್ತೇನೆ. ಅಲ್ಲಿ ಕಲಿತ ಪಾಠಗಳನ್ನು ಸ್ಪರ್ಧೆಗಳಲ್ಲಿ ಪ್ರಯೋಗಕ್ಕೆ ಒಳಪಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ’ ಎನ್ನುತ್ತಾರೆ ನವೀನ್‌.

ವಿಜಯಪುರ ಜಿಲ್ಲೆಯ ಕೊರ್ತಿ ಕೊಲ್ಹಾರದ ಸೈಕ್ಲಿಸ್ಟ್‌ ಯಲಗೂರಪ್ಪ ಈರಪ್ಪ ಗಡ್ಡಿ 2019ರಲ್ಲಿ ಕುರುಕ್ಷೇತ್ರದಲ್ಲಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ರಾಷ್ಟ್ರೀಯ ಟೂರ್ನಿಯಲ್ಲಿ ನಾಲ್ಕು ಪದಕಗಳನ್ನು ಗೆದ್ದಿರುವ ಅವರಿಗೆ ಪೊಲೀಸ್‌ ಇಲಾಖೆಯಲ್ಲಿ ಕೆಲಸಕ್ಕೆ ಸೇರುವ ಆಸೆಯಿದೆ. ನೌಕರಿಯಿಂದ ಆರ್ಥಿಕ ಭದ್ರತೆ ಲಭಿಸುತ್ತದೆ; ಇದರಿಂದ ಸೈಕ್ಲಿಂಗ್‌ನಲ್ಲಿ ಇನ್ನಷ್ಟು ಸಾಧನೆ ಮಾಡಬಹುದು ಎನ್ನುವ ಕನಸು ಅವರದ್ದು.

ಸೈಕ್ಲಿಂಗ್‌ ಮತ್ತು ಪೊಲೀಸ್‌ ನೌಕರಿ ಈ ಎರಡೂ ಉದ್ದೇಶಕ್ಕಾಗಿ ಹಣ ಹೊಂದಿಸಲು ಯಲಗೂರಪ್ಪ ತರಕಾರಿ ವ್ಯಾಪಾರ ಮಾಡುತ್ತಿದ್ದಾರೆ. ಫಿಟ್‌ನೆಸ್‌ಗಾಗಿ ಸೂರ್ಯೋದಯದ ಒಳಗೆ 15 ಕಿ.ಮೀ. ಓಟ ಮುಗಿಸಿ ಮನೆ ಸೇರುತ್ತಾರೆ. ವಾರದಲ್ಲಿ ಒಂದೆರೆಡು ದಿನ ಬೆಳಗಿನ ಜಾವ 80ರಿಂದ 100 ಕಿ.ಮೀ. ಸೈಕಲ್‌ ಓಡಿಸುತ್ತಾರೆ.

‘ನಿತ್ಯ ಹೊಳೆ ದಂಡೆಯಲ್ಲಿ ಫಿಟ್‌ನೆಸ್‌ ಮತ್ತು ಮನೆಯಲ್ಲಿ ಫ್ಲೋರ್‌ ಎಕ್ಸರ್‌ಸೈಜ್‌ ಅಭ್ಯಾಸ ಮಾಡುತ್ತೇನೆ. ಲಾಕ್‌ಡೌನ್‌ ಘೋಷಣೆಯಾಗುವುದು ತಡವಾಗಿದ್ದರೆ ಪೊಲೀಸ್‌ ಇಲಾಖೆಯಲ್ಲಿ ನೌಕರಿ ಸಿಗುವ ಭರವಸೆಯಿತ್ತು. ಈಗ ನೌಕರಿಯೂ ಇಲ್ಲ; ಟೂರ್ನಿಗಳೂ ನಡೆಯುತ್ತಿಲ್ಲ. ಆದ್ದರಿಂದ ಫಿಟ್‌ನೆಸ್‌ ಉಳಿಸಿಕೊಳ್ಳಲು ದೇಹಕ್ಕೆ ತೂಕದ ವಸ್ತುಗಳನ್ನು ಕಟ್ಟಿಕೊಂಡು ಎಳೆಯುವುದು ಸೇರಿದಂತೆ ಸಾಕಷ್ಟು ಅಭ್ಯಾಸ ಮಾಡುತ್ತಿದ್ದೇನೆ’ ಎನ್ನುತ್ತಾರೆ ಯಲಗೂರಪ್ಪ.⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT