ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಾಲಿಂಪಿಕ್ಸ್‌: ದಾಖಲೆ ಮುರಿದ ಗುವೊ ಲಿಂಗ್ಲಿಂಗ್ ‘ಪವರ್‌’

ಸೈಕ್ಲಿಂಗ್‌ನಲ್ಲಿ ಅಲ್ಫೊನ್ಸೊ ಮಿಂಚು; ಮನ ಗೆದ್ದ ಉಗಾಂಡದ 14ರ ಬಾಲೆ
Last Updated 27 ಆಗಸ್ಟ್ 2021, 4:31 IST
ಅಕ್ಷರ ಗಾತ್ರ

ಟೋಕಿಯೊ: ಚೀನಾದಗುವೊ ಲಿಂಗ್ಲಿಂಗ್ ಅವರು ಚೊಚ್ಚಲ ಪ್ಯಾರಾಲಿಂಪಿಕ್ಸ್‌ನಲ್ಲೇ ಪವರ್‌ ತೋರಿಸಿದರು. ಮಹಿಳೆಯರ 41 ಕೆಜಿ ವಿಭಾಗದ ಪವರ್‌ಲಿಫ್ಟಿಂಗ್‌ನಲ್ಲಿ ಅವರು 108 ಕೆಜಿ ಭಾರ ಎತ್ತಿ ವಿಶ್ವ ಚಿನ್ನದ ಪದಕ ಗೆದ್ದುಕೊಂಡರು. ವಿಶ್ವ ದಾಖಲೆಯನ್ನೂ ಬರೆದರು.

ಇಂಡೊನೇಷ್ಯಾದ ವಿಡಿಯಾಶಿನ್ ನೀ ನಿಂಗಾ 98 ಕೆಜಿ ಭಾರ ಎತ್ತಿ ಬೆಳ್ಳಿ ಪದಕ ಗಳಿಸಿದರೆ ವೆನೆಜುವೆಲಾದ ಫಾಂಟಿಸ್ ಮೊನಸ್ಟೆರಿಯೊ (97 ಕೆಜಿ) ಕಂಚಿನ ಪದಕ ಗೆದ್ದುಕೊಂಡರು.

ಸ್ಪೇನ್‌ನ ಸೈಕ್ಲಿಸ್ಟ್‌ ಅಲ್ಫೊನ್ಸೊ ಕಾಬೆಲೊ ಅವರು ಸಿ4 ವಿಭಾಗದ ಸಾವಿರ ಮಿಟರ್ಸ್‌ ಟೈಮ್ ಟ್ರಯಲ್‌ನಲ್ಲಿ ಚಿನ್ನ ಗೆದ್ದು ವಿಶ್ವ ದಾಖಲೆ ಮುರಿದರು.1 ನಿಮಿಷ 01.557 ಸೆಕೆಂಡಿನಲ್ಲಿ ಗುರಿ ಮುಟ್ಟಿದ ಅವರು ಬ್ರಿಟನ್‌ನ ಕ್ಯೂಂಡಿ ಜೋಡಿ (1 ನಿಮಿಷ 01.847ಸೆ) ಅವರನ್ನು ಹಿಂದಿಕ್ಕಿದರು. ಸ್ಲೊವಾಕಿಯಾದ ಮೆಟೆಲ್ಕ ಜೋಸೆಫ್‌ (1:04.786) ಕಂಚಿನ ಪದಕ ಗಳಿಸಿದರು.

14ರ ಬಾಲೆಯ ಸಾಹಸ

ಈ ಬಾರಿ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿರುವವರ ಪೈಕಿ ಅತಿ ಕಿರಿಯ ವಯಸ್ಸಿನ ಅಥ್ಲೀಟ್ ಉಗಾಂಡದ ಈಜುಪಟು ಹುಸ್ನಾ ಕುಕುಂಡಕ್ವೆ ಈಜು ಸ್ಪರ್ಧೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಎಸ್‌ಬಿ–8 ವಿಭಾಗದ 100 ಮೀಟರ್ಸ್ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಸ್ಪರ್ಧಿಸಿದ ಅವರ ವಯಸ್ಸು 14 ವರ್ಷ.

ಬಲಭಾಗದ ಮುಂಗೈ ಇಲ್ಲದೇ ಜನಿಸಿದ ಕುಕುಂಡಕ್ವೆ ನಂತರ ಎಡಗೈಯ ಸ್ವಾಧೀನ ಕಳೆದುಕೊಂಡಿದ್ದರು. ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಲು ಅವರಿಗೆ ಸಾಧ್ಯವಾಗಲಿಲ್ಲ. ಅದರೂ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಲು ಸಾಧ್ಯವಾಯಿತು. ‘ಅಂತಿಮ ಸುತ್ತು ಪ್ರವೇಶಿಸಲು ಆಗದೇ ಇದ್ದರೂ ಇಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿದ್ದರಿಂದ ನನ್ನ ಆತ್ಮವಿಶ್ವಾಸ ಆಕಾಶದೆತ್ತರಕ್ಕೆ ಏರಿದೆ’ ಎಂದು ಅವರು ಹೇಳಿದರು.

‘ಅಂಗವೈಕಲ್ಯ ಇರುವವರ ಬಗ್ಗೆ ಉಗಾಂಡದ ಜನರ ಅಭಿಪ್ರಾಯ ಬದಲಿಸುವುದು ನನ್ನ ಸ್ಪರ್ಧೆಯ ಪ್ರಮುಖ ಉದ್ದೇಶವಾಗಿದೆ. ವೈಕಲ್ಯ ಇರುವವರೆಲ್ಲರಿಗೂ ಈ ಕ್ರೀಡಾಕೂಟ ಪ್ರೇರಣೆಯಾಗಬೇಕು’ ಎಂದು ಅವರು ಹೇಳಿದರು. ಅವರಿಗಿಂತ ಒಂದು ತಿಂಗಳು ಹಿರಿಯರಾದ ಜಪಾನ್‌ನ ಮಿಯುಕಿ ಯಮಂಡ ಅವರೂ ಬುಧವಾರದ ಸ್ಪರ್ಧೆಯಲ್ಲಿದ್ದರು.

ಪ್ರೀ ಕ್ವಾರ್ಟರ್ ಫೈನಲ್‌ಗೆ ಭವಿನಾ ಬೆನ್

ಭಾರತದಪ್ಯಾರಾ ಟೇಬಲ್ ಟೆನಿಸ್ ಪಟು ಭವಿನಾ ಬೆನ್ ಅವರು ಮಹಿಳೆಯರ ಸಿಂಗಲ್ಸ್‌ನ ಕ್ಲಾಸ್–4 ವಿಭಾಗದಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಆದರೆ ಸೋನಲ್ ಬೆನ್ ಪಟೇಲ್ ಸೋತು ಹೊರಬಿದ್ದರು.

ಬ್ರಿಟನ್‌ನ ಮೇಗನ್ ಶೇಕ್ಲಿಟನ್ ಎದುರಿನ ಪಂದ್ಯದಲ್ಲಿ ಭವಿನಾ ಬೆನ್ 11-7, 9-11, 17-15, 13-11ರಲ್ಲಿ ಜಯ ಗಳಿಸಿದರು. 34 ವರ್ಷದ ಭವಿನಾ ವಿಶ್ವ ಕ್ರಮಾಂಕದಲ್ಲಿ ಒಂಬತ್ತನೇ ಸ್ಥಾನದಲ್ಲಿರುವ ಮೇಗನ್‌ ಎದುರು ಜಯ ಗಳಿಸಲು 41 ನಿಮಿಷ ತೆಗೆದುಕೊಂಡರು.

ಸೋನಲ್‌ಬೆನ್‌ ಪಟೇಲ್ ಕ್ಲಾಸ್‌–3 ವಿಭಾಗದ ಗುಂಪು ಹಂತದ ಎರಡನೇ ಪಂದ್ಯದಲ್ಲಿ 12-10, 5-11, 3-11, 9-11ರಲ್ಲಿ ಕೊರಿಯಾದ ಎಂಜಿ ಲೀ ಎದುರು ಸೋಲನುಭವಿಸಿದರು.

ಸುಯಶ್‌ಗೆ ಅನಾರೋಗ್ಯ: ಸ್ಪರ್ಧೆಗಿಲ್ಲ

ಭಾರತದ ಈಜುಪಟು ಸುಯಶ್‌ ಜಾಧವ್‌ ಅನಾರೋಗ್ಯದಿಂದಾಗಿ ಸ್ಪರ್ಧಿಸುವುದಿಲ್ಲ. ಎಸ್‌ಎಂ–7 ವಿಭಾಗದ ಸ್ಪರ್ಧಿಯಾಗಿರುವ ಅವರು ಶುಕ್ರವಾರ 200 ಮೀಟರ್ಸ್ ವೈಯಕ್ತಿಕ ಮೆಡ್ಲೆಯಲ್ಲಿ ಪಾಲ್ಗೊಳ್ಳಬೇಕಾಗಿತ್ತು.

‘ಅವರು ನೆಗಡಿ ಮತ್ತು ಗಂಟಲು ಕೆರೆತ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಸ್ಪರ್ಧೆಯಿಂದ ದೂರ ಇರುವಂತೆ ವೈದ್ಯರು ಸೂಚಿಸಿದ್ದಾರೆ. ಅವರ ಕೋವಿಡ್‌ ಪರೀಕ್ಷೆ ವರದಿ ನೆಗೆಟಿವ್ ಆಗಿದೆ’ ಎಂದು ಭಾರತ ತಂಡದ ಚೆಫ್‌ ಡಿ ಮಿಷನ್ ಗುರುಶರಣ್‌ ಸಿಂಗ್‌ ತಿಳಿಸಿದ್ದಾರೆ.

ಸೆಪ್ಟೆಂಬರ್‌ ಒಂದರಂದು 100 ಮೀಟರ್ಸ್ ಬ್ರೆಸ್ಟ್‌ ಸ್ಟ್ರೋಕ್‌ ಮತ್ತು ಸೆಪ್ಟೆಂಬರ್ ಮೂರರಂದು 50 ಮೀಟರ್ಸ್‌ ಬಟರ್‌ಫ್ಲೈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಮಸ್ಯೆ ಇಲ್ಲ ಎಂದು ತಿಳಿಸಲಾಗಿದೆ.

ಸುಯಶ್‌ ಜಾಧವ್‌ ಅವರಿಗೆ ಈಗ 27 ವರ್ಷ. 11ನೇ ವಯಸ್ಸಿನಲ್ಲಿ ಮೊಣಕೈಗಳ ಕೆಳಗಿನ ಭಾಗವನ್ನು ಕೃತಕ ಅಂಗ ಜೋಡಿಸಲಾಗಿತ್ತು. 2018ರ ಏಷ್ಯನ್ ಪ್ಯಾರಾ ಗೇಮ್ಸ್‌ನ 50 ಮೀಟರ್ಸ್ ಬಟರ್‌ಫ್ಲೈಯಲ್ಲಿ ಚಿನ್ನ, 200 ಮೀಟರ್ಸ್ ವೈಯಕ್ತಿಕ ಮೆಡ್ಲೆ ಹಾಗೂ 50 ಮೀಟರ್ಸ್ ಪ್ರೀಸ್ಟೈಲ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

***

ಇದೇ ಮೊದಲ ಬಾರಿ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದೇನೆ. ವಿಶ್ವ ದಾಖಲೆಯೊಂದಿಗೆ ದೇಶಕ್ಕೆ ಚಿನ್ನ ಗೆದ್ದುಕೊಡಲು ಸಾಧ್ಯವಾದದ್ದು ಭಾರಿ ಖುಷಿ ತಂದಿದೆ. ಇದು ನನ್ನ ಪಾಲಿಗೆ ವಿಶಿಷ್ಟ ದಿನವಾಗಿದೆ.

- ಗುವೊ ಲಿಂಗ್ಲಿಂಗ್ ಚೀನಾ ಪವರ್ ಲಿಫ್ಟರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT