ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಟಿಂಗ್ ಮಾಡುವಾಗ ಜಾಸ್ತಿ ಯೋಚಿಸಿದರೆ ಯೋಜನೆ ತಲೆಕೆಳಗಾಗಬಹುದು: ಎಂ.ಎಸ್.ಧೋನಿ

Last Updated 11 ಅಕ್ಟೋಬರ್ 2021, 5:09 IST
ಅಕ್ಷರ ಗಾತ್ರ

ದುಬೈ: ಬ್ಯಾಟಿಂಗ್ ಮಾಡುವಾಗ ಹೆಚ್ಚು ಯೋಚನೆ ಮಾಡಿದರೆ ನಿಮ್ಮ ಯೋಜನೆ ತಲೆಕೆಳಗಾಗಬಹುದು ಎಂದು ಚೆನ್ನೈ ಸೂಪರ್‌ಕಿಂಗ್ಸ್ ನಾಯಕ ಎಂ.ಎಸ್.ಧೋನಿ ಹೇಳಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಭಾನುವಾರದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೊನೆಯ ಹಂತದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಅವರು ಕೇವಲ ಆರು ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 18 ರನ್ ಗಳಿಸಿ ಔಟಾಗದೆ ಉಳಿದಿದ್ದರು.

ಪಂದ್ಯದ ಬಳಿಕ ಮಾತನಾಡಿದ ಅವರು, ‘ಈ ಟೂರ್ನಿಯಲ್ಲಿ ನಾನು ಹೆಚ್ಚು ಸಾಧನೆ ಮಾಡಿಲ್ಲ. ಹೀಗಾಗಿ ಚೆಂಡಿನ ಮೇಲೆ ಮತ್ತು ಬೌಲರ್‌ ಯಾವ ರೀತಿ ದಾಳಿ ಮಾಡಬಹುದು ಎಂಬುದರ ಮೇಲಷ್ಟೇ ಗಮನ ಕೇಂದ್ರೀಕರಿಸಿದ್ದೆ. ನೆಟ್ ಅಭ್ಯಾಸದ ವೇಳೆ ನಾನು ಚೆನ್ನಾಗಿಯೇ ಬ್ಯಾಟಿಂಗ್ ಮಾಡುತ್ತಿದ್ದೆ. ಆದರೆ, ಹೆಚ್ಚು ಯೋಚಿಸುತ್ತಿರಲಿಲ್ಲ. ಹೆಚ್ಚು ಯೋಚನೆ ಮಾಡಿದರೆ ಯೋಜನೆ ತಲೆಕೆಳಗಾಗುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಬೌಲಿಂಗ್ ಅನ್ನು ಧೋನಿ ಶ್ಲಾಘಿಸಿದ್ದಾರೆ.

‘ನನ್ನ ಇನ್ನಿಂಗ್ಸ್ ನಿರ್ಣಾಯಕವಾಗಿತ್ತು. ದೆಹಲಿ ತಂಡದವರು ಉತ್ತಮವಾಗಿ ಬೌಲಿಂಗ್ ಸಂಘಟಿಸುತ್ತಿದ್ದರು. ಅವರು ಪರಿಸ್ಥಿತಿಯನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದರು. ಹೀಗಾಗಿ ನಮಗೂ ಕಷ್ಟವಿದೆ ಎಂಬುದು ತಿಳಿದಿತ್ತು. ನನ್ನ ಯೋಜನೆ ಸರಳವಾಗಿತ್ತು. ಅದೇನೆಂದರೆ, ಚೆಂಡನ್ನು ಸರಿಯಾಗಿ ಗಮನಿಸಿ ಹೊಡೆಯುವುದು ಅಷ್ಟೆ’ ಎಂದು ಧೋನಿ ಹೇಳಿದ್ದಾರೆ.

ಭಾನುವಾರದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ನಾಲ್ಕು ವಿಕೆಟ್ ಅಂತರದ ರೋಚಕ ಜಯ ಗಳಿಸಿರುವ ಚೆನ್ನೈ ಐಪಿಎಲ್‌ ಫೈನಲ್ ಪ್ರವೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT