ಭಾನುವಾರ, ಜುಲೈ 3, 2022
23 °C

ಫ್ರೆಂಚ್ ಓಪನ್: ನೊವಾಕ್‌–ನಡಾಲ್ ಮೇಲೆ ಕಣ್ಣು

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಪ್ಯಾರಿಸ್: ದಾಖಲೆಯ ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಸ್ಪೇನ್‌ನ ರಫೆಲ್ ನಡಾಲ್ ಮತ್ತು ವಿಶ್ವ ಕ್ರಮಾಂಕದಲ್ಲಿ ಒಂದನೇ ಸ್ಥಾನದಲ್ಲಿರುವ ಸರ್ಬಿಯಾದ ನೊವಾಕ್ ಜೊಕೊವಿಚ್ ಭಾನುವಾರ ಆರಂಭವಾಗಲಿರುವ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಗಮನ ಸೆಳೆಯಲಿದ್ದಾರೆ.  ಯುವ ಆಟಗಾರ ಕಾರ್ಲೋಸ್ ಅಲ್ಕರಾಜ್ ಸವಾಲನ್ನು ಇವರಿಬ್ಬರು ಮೀರಿ ನಿಲ್ಲುವರೇ ಎಂಬುದು ಕುತೂಹಲ ಕೆರಳಿಸಿದೆ.

ಹಾಲಿ ಚಾಂಪಿಯನ್ ಜೊಕೊವಿಚ್ 13 ಬಾರಿಯ ಚಾಂಪಿಯನ್ ನಡಾಲ್ ಅವರನ್ನು ಕ್ವಾರ್ಟರ್ ಫೈನಲ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಇದ್ದು ಇವರಿಬ್ಬರ ಪೈಕಿ ಒಬ್ಬರಿಗೆ ಅಲ್ಕರಾಜ್ ಸೆಮಿಫೈನಲ್‌ನಲ್ಲಿ ಎದುರಾಗುವ ಸಾಧ್ಯತೆ ಇದೆ. 

ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಜನವರಿಯಲ್ಲಿ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಆಡಲು ಅವಕಾಶ ಸಿಗದ ಜೊಕೊವಿಚ್ ಕಳೆದ ವರ್ಷ ಫ್ರೆಂಚ್ ಓಪನ್‌ ಟೂರ್ನಿಯ ಎರಡನೇ ಪ್ರಶಸ್ತಿ ಗೆದ್ದುಕೊಂಡಿದ್ದರು.

ಭಾನುವಾರ 35ನೇ ವರ್ಷಕ್ಕೆ ಕಾಲಿಡಲಿರುವ ಅವರು ಈ ವರ್ಷ ಕೇವಲ ಐದು ಟೂರ್ನಿಗಳಲ್ಲಿ ಆಡಿದ್ದಾರೆ. ಕಳೆದ ವಾರ ನಡೆದ ಇಟಾಲಿಯನ್ ಓಪನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದು ವೃತ್ತಿಜೀವನದಲ್ಲಿ ಸಾವಿರ ಪಂದ್ಯಗಳನ್ನು ಗೆದ್ದ 5ನೇ ಆಟಗಾರ ಎನಿಸಿಕೊಂಡಿದ್ದರು. 94ನೇ ಶ್ರೇಯಾಂಕದ ಜಪಾನ್ ಆಟಗಾರ ಯೊಶಿಹಿತೊ ನಿಶಿಯೋಕ ಎದುರು ಅವರು ಮೊದಲ ಸುತ್ತಿನಲ್ಲಿ ಆಡುವರು.  

ಪಾದದಲ್ಲಿ ನೋವು ಕಾಣಿಸಿಕೊಂಡಿರುವ ನಡಾಲ್‌, ಇಟಾಲಿಯನ್ ಓಪನ್‌ನಲ್ಲಿ ನೀರಸ ಆಟವಾಡಿದ್ದರು. ಆದರೆ ಬುಧವಾರ ಅಭ್ಯಾಸದ ವೇಳೆ ಅವರಲ್ಲಿ ಯಾವುದೇ ತೊಂದರೆ ಕಾಣಿಸಿಕೊಂಡಿರಲಿಲ್ಲ. 21 ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದು ರೋಜರ್ ಫೆಡರರ್ ಮತ್ತು ನೊವಾಕ್ ಜೊಕೊವಿಚ್ ಅವರನ್ನು ಹಿಂದಿಕ್ಕಿರುವ ನಡಾಲ್ ಫ್ರೆಂಚ್ ಓಪನ್‌ನಲ್ಲಿ ಒಟ್ಟು 105 ಪಂದ್ಯಗಳನ್ನು ಗೆದ್ದುಕೊಂಡಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಅವರು ಆಸ್ಟ್ರೇಲಿಯಾದ ಜೋರ್ಡಾನ್ ಥಾಮ್ಸನ್ ವಿರುದ್ಧ ಸೆಣಸಲಿದ್ದಾರೆ. 

ಮಹಿಳೆಯರ ವಿಭಾಗದಲ್ಲಿ ಸ್ಲಾನೆ ಸ್ಟೀಫನ್ಸ್, ಆನ್ಸ್ ಜಬೆವುರ್, ಗಾರ್ಬೈನ್ ಮುಗುರುಜಾ, ಕರೋಲಿನಾ ಮುಚೋವ, ಮರಿಯಾ ಸಕ್ಕರಿ, ಕೊಕೊ ಗಫ್ ಮುಂತಾದವರು ಕಣದಲ್ಲಿರುವ ಪ್ರಮುಖರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.