ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸೆಂಬರ್‌ನಲ್ಲಿ ದೇಶಿ ಬ್ಯಾಡ್ಮಿಂಟನ್ ಟೂರ್ನಿಗಳಿಗೆ ಚಾಲನೆ

Last Updated 10 ನವೆಂಬರ್ 2021, 12:30 IST
ಅಕ್ಷರ ಗಾತ್ರ

ನವದೆಹಲಿ: ಇಪ್ಪತ್ತು ತಿಂಗಳ ಬಿಡುವಿನ ನಂತರ ದೇಶಿ ಬ್ಯಾಡ್ಮಿಂಟನ್ ಋತು ಮುಂದಿನ ತಿಂಗಳಲ್ಲಿ ಚಾಲನೆ ಪಡೆದುಕೊಳ್ಳಲಿದೆ. ಡಿಸೆಂಬರ್‌ ತಿಂಗಳಿಂದ ಸತತವಾಗಿ ಸೀನಿಯರ್ ರ‍್ಯಾಂಕಿಂಗ್‌ ಟೂರ್ನಿಗಳನ್ನು ನಡೆಸಲಾಗುವುದು ಎಂದು ಭಾರತ ಬ್ಯಾಡ್ಮಿಂಟನ್ ಸಂಸ್ಥೆ ಬುಧವಾರ ತಿಳಿಸಿದೆ.

ಮೊದಲ ಟೂರ್ನಿ ಚೆನ್ನೈಯಲ್ಲಿ ಡಿಸೆಂಬರ್ 16ರಿಂದ 22ರ ವರೆಗೆ ನಡೆಯಲಿದ್ದು ಡಿಸೆಂಬರ್ 24ರಿಂದ 30ರ ವರೆಗೆ ಹೈದರಾಬಾದ್‌ನಲ್ಲಿ ಮತ್ತೊಂದು ಟೂರ್ನಿ ನಡೆಯಲಿದೆ. ಈ ಎರಡೂ ಟೂರ್ನಿಗಳು ತಲಾ ₹ 10 ಲಕ್ಷ ಬಹುಮಾನ ಮೊತ್ತ ಹೊಂದಿರುತ್ತವೆ. ಇವುಗಳಲ್ಲಿ ಭಾರತ ಬ್ಯಾಡ್ಮಿಂಟನ್ ಸಂಸ್ಥೆಯ ಹೊಸ ಮಾದರಿಗಳನ್ನು ಪರಿಚಯಿಸಲಾಗುವುದು ಎಂದು ತಿಳಿಸಲಾಗಿದೆ.

ಸೀನಿಯರ್ ರ‍್ಯಾಂಕಿಂಗ್ ಟೂರ್ನಿಯನ್ನು ಮೂರು ಹಂತಗಳಾಗಿ ವಿಂಗಡಿಸಲಾಗಿದೆ. ಮೂರನೇ ಹಂತದಲ್ಲಿ ವರ್ಷದಲ್ಲಿ ಆರು ಸರಣಿಗಳು ನಡೆಯಲಿವೆ. ಎರಡನೇ ಹಂತದಲ್ಲಿ ನಾಲ್ಕು ಸೂಪರ್‌ ಸೀರಿಸ್ ಹಾಗೂ ಒಂದನೇ ಹಂತದಲ್ಲಿ ಎರಡು ಪ್ರೀಮಿಯರ್ ಸೂಪರ್ ಸೀರಿಸ್‌ ಟೂರ್ನಿಗಳು ನಡೆಯಲಿವೆ.

’ಕೋವಿಡ್ ನಿಯಮಾವಳಿಗಳನ್ನು ಪಾಲಿಸಿಕೊಂಡು ಟೂರ್ನಿಯನ್ನು ಆಯೋಜಿಸಲಾಗುವುದು. ಆಟಗಾರರು ಆರ್‌ಟಿಪಿಸಿಆರ್ ವರದಿ ಹೊಂದಿರಬೇಕಾದುದು ಕಡ್ಡಾಯ‘ ಎಂದು ಸಂಸ್ಥೆಯ ಕಾರ್ಯದರ್ಶಿ ಅಜಯ್ ಕೆ.ಸಿಂಘಾನಿಯಾ ತಿಳಿಸಿದ್ದಾರೆ.

’ಕೋವಿಡ್‌ನಿಂದಾಗಿ ಕ್ರೀಡಾಕ್ಷೇತ್ರ ಮಾತ್ರವಲ್ಲ, ಒಟ್ಟಾರೆ ಜನರ ಬದುಕಿಗೆ ಪೆಟ್ಟು ಬಿದ್ದಿದೆ. ಟೂರ್ನಿಗಳನ್ನು ಆಯೋಜಿಸುವ ಮೂಲಕ ಬ್ಯಾಡ್ಮಿಂಟನ್‌ ಕ್ರೀಡೆಗೆ ನವಚೇತನ ತುಂಬುವ ಪ್ರಯತ್ನ ನಡೆಸಲಾಗುವುದು. ವಿಶ್ವ ದರ್ಜೆಯ ಆಟಗಾರರು ದೇಶಿ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಒಪ್ಪಿಕೊಂಡಿರುವುದು ಖುಷಿಯ ಸಂಗತಿ‘ ಎಂದು ಅವರು ವಿವರಿಸಿದರು.

₹ 2.2 ಕೋಟಿ ಬಹುಮಾನ ಮೊತ್ತ

ದೇಶಿ ಟೂರ್ನಿಗಳಿಗೆ ಒಟ್ಟಾರೆ ₹ 2.2 ಕೋಟಿ ಬಹುಮಾನ ಮೊತ್ತವನ್ನು ನಿಗದಿ ಮಾಡಿದ್ದು ಮೂರನೇ ಹಂತದ ಟೂರ್ನಿಗಳಿಗೆ ₹ 10 ಲಕ್ಷ, ಎರಡನೇ ಹಂತದ ಟೂರ್ನಿಗಳಿಗೆ ₹ 15 ಲಕ್ಷ ಮತ್ತು ಒಂದನೇ ಹಂತಕ್ಕೆ ₹ 25 ಲಕ್ಷವನ್ನು ನಿಗದಿ ಮಾಡಲಾಗಿದೆ. ಈ ಟೂರ್ನಿಗಳ ನಂತರ ರಾಷ್ಟ್ರೀಯ ಟೂರ್ನಿ ನಡೆಯಲಿದೆ. ಇದಕ್ಕೆ ₹ 50 ಲಕ್ಷ ಬಹುಮಾನ ಮೊತ್ತ ನಿಗದಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT