ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆಯ ‘ಟ್ರ್ಯಾಕ್‌’ನಲ್ಲಿ ಮುನ್ನಡೆಸಿದ ‘ದ್ರೋಣಾಚಾರ್ಯ’

Last Updated 23 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಸ್ಪ್ರಿಂಟ್‌ನಲ್ಲಿ ಮಿಂಚು ಮೂಡಿಸಿದ ಅಶ್ವಿನಿ ನಾಚಪ್ಪ, ಪುಷ್ಪಾ ನಾಚಪ್ಪ, ರೋಸಾ ಕುಟ್ಟಿ, ಮುರಳಿಕುಟ್ಟನ್, ಮಾಲಾ ಎನ್‌.ಸಿದ್ಧಿ, ಎಂ.ಕೆ.ಆಶಾ; ಹರ್ಡಲ್ಸ್‌ನಲ್ಲಿ ಜಿಂಕೆಯ ಜಿಗಿತ ಪ್ರದರ್ಶಿಸಿದ ಕಮಲಾ ಸಿದ್ಧಿ, ಸುಮವತಿ, ಯೇಸುದಾಸ್ ಪಿ.ಟಿ; ಹೈಜಂಪ್‌ನಲ್ಲಿ ಎತ್ತರದ ಸಾಧನೆ ಮಾಡಿದ ಜೈಸಿ ಥಾಮಸ್; ಶಾಟ್‌ಪಟ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿದ ಎಸ್‌.ಡಿ.ಈಶನ್; ದೂರ ಅಂತರದ ಓಟದಲ್ಲಿ ಗುರಿ ಸಾಧಿಸಿದ ಸತ್ಯನಾರಾಯಣ; ಸ್ಟೀಪಲ್ ಚೇಸ್‌ನಲ್ಲಿ ಅಡೆತಡೆ ಮೆಟ್ಟಿ ನಿಂತ ಅರುಣ್ ಡಿ‘ಸೋಜಾ, ಡೆಕಾಥ್ಲಾನ್ ಮತ್ತು ಹೆಪ್ಟಾಥ್ಲಾನ್‌ನಲ್ಲಿ ಬಹುಶಿಸ್ತು ಮೆರೆದ ಬಾಬುಶೆಟ್ಟಿ, ಪ್ರಮೀಳಾ ಜಿ.ಜಿ, ಜಾವೆಲಿನ್‌ ಎಸೆತದಲ್ಲಿ ಮುನ್ನುಗ್ಗಿದ ಚಂದ್ರಶೇಖರ ರೈ...

1974ರಿಂದ ದಶಕಗಳ ಕಾಲ ಭಾರತದ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಈ ಹೆಸರುಗಳನ್ನು ಕೇಳದವರೇ ಇರಲಾರರು. ಕೆಲವರು ದಕ್ಷಿಣ ಏಷ್ಯಾ ಗೇಮ್ಸ್‌ನಲ್ಲಿ, ಇನ್ನು ಕೆಲವರು ಏಷ್ಯನ್ ಗೇಮ್ಸ್‌ನಲ್ಲಿ, ಮತ್ತೆ ಹಲವರು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ, ಮೂವರು ಒಲಿಂಪಿಕ್ಸ್‌ನಲ್ಲಿ ಬೆಳಗಿದವರು. ಇವರೆಲ್ಲರ ಹಿಂದೆ ಇದ್ದ ಶಕ್ತಿ–ಪುರುಷೋತ್ತಮ ರೈ. ಬ್ಯಾಂಕ್ ಉದ್ಯೋಗಿಯಾಗಿ, ಸೈನಿಕನಾಗಿ, ಕ್ರೀಡಾಪಟುವಾಗಿ, ಕೊನೆಗೆ ಕೋಚ್ ಆಗಿ ಗಮನ ಸೆಳೆದದಕ್ಷಿಣ ಕನ್ನಡದ ಪುತ್ತೂರಿನ ಪುರುಷೋತ್ತಮ ಅವರ ಬದುಕಿನ ಹಾದಿ ವರ್ಣಮಯ. ಬೆಂಗಳೂರಿನಲ್ಲಿ ನೆಲೆಸಿರುವ ಅವರೀಗ ‘ದ್ರೋಣಾಚಾರ್ಯ’.

ತಮ್ಮ ಬಳಿ ತರಬೇತಿ ಪಡೆದು ಮೂವರು ಅರ್ಜುನ ಪ್ರಶಸ್ತಿಗೆ ಭಾಜನರಾದಾಗಲೂ ‘ನನಗೆ ನನ್ನ ಶಿಷ್ಯಂದಿರ ಸಾಧನೆಯಲ್ಲೇ ತೃಪ್ತಿ’ ಎಂದು ಹೇಳುತ್ತ ನಸುನಗೆ ಸೂಸಿದ ಪುರುಷೋತ್ತಮ ಅವರು ‘ಯಾರ ಬಳಿ ಏನನ್ನೂ ಕೇಳಲಿಲ್ಲ. ಆದ್ದರಿಂದ ಈ ವರೆಗೆ ಯಾವ ಪ್ರಶಸ್ತಿಯೂ ಬಂದಿರಲಿಲ್ಲ. ಈಗ ಕೇಂದ್ರ ಸರ್ಕಾರವೇ ಗುರುತಿಸಿ ಪ್ರಶಸ್ತಿ ನೀಡಿದೆ. ಸಂತಸವಾಗಿದೆ’ ಎಂದು ನಿರ್ಭಾವುಕರಾಗಿ ನುಡಿಯುತ್ತಾರೆ.

ಒಂಬತ್ತನೇ ವಯಸ್ಸಿನಲ್ಲಿ ಟ್ರ್ಯಾಕ್‌ಗೆ ಇಳಿದ ಅಶ್ವಿನಿ ನಾಚಪ್ಪ ಅವರಿಂದ ಹಿಡಿದು 25ನೇ ವಯಸ್ಸಿನಲ್ಲಿ ತಮ್ಮ ಬಳಿಗೆ ಬಂದ ರೋಸಾ ಕುಟ್ಟಿ ವರೆಗೂ ತರಬೇತಿ ನೀಡಿದ ಪುರುಷೋತ್ತಮ ಅವರು ಒಟ್ಟು 33 ಖ್ಯಾತನಾಮರನ್ನು ಬೆಳೆಸಿದ್ದಾರೆ. 1974ರಲ್ಲಿ ಮುರಳಿಕುಟ್ಟನ್‌ ಅವರಿಗೆ ತರಬೇತಿ ನೀಡುವುದರಿಂದ ಶುರುವಾದ ಅವರ ‘ದ್ರೋಣಾಚಾರ್ಯ’ ವೃತ್ತಿ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಬೆಳಗಿದ ರಾಜ್ಯದ ವಿಶ್ವಾಂಬರ ಕೋಳೆಕಾರ್ ಅವರಿಗೆ 2017ರಲ್ಲಿ ಮಧ್ಯಮ ದೂರ ಓಟದ ತಂತ್ರಗಳನ್ನು ಹೇಳಿಕೊಡುವ ವರೆಗೂ ಮುಂದುವರಿದಿತ್ತು. ಅವರಿಗೀಗ 79ರ ಹರಯ (ಜನನ–ಜುಲೈ 2). ಆದರೂ ಅಥ್ಲೆಟಿಕ್ಸ್ ಬಗ್ಗೆ ಪ್ರಸ್ತಾಪಿಸಿದರೆ ಅವರ ಮಾತಿನಲ್ಲಿ ನವಯುವಕನ ಉತ್ಸಾಹ ಧ್ವನಿಸುತ್ತದೆ.

ಪುರುಷೋತ್ತಮ ಅವರ ಸಾಧಕ ಶಿಷ್ಯಂದಿರ ಪಟ್ಟಿಯಲ್ಲಿ ಮೂವರು ಒಲಿಂಪಿಯನ್‌ ಇದ್ದಾರೆ. ಅಶ್ವಿನಿ ನಾಚಪ್ಪ, ರೋಸಾಕುಟ್ಟಿ ಮತ್ತು ಜಿ.ಜಿ.ಪ್ರಮೀಳಾ ಆ ಪ್ರತಿಭೆಗಳು. ಮೂವರು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಂಡ ಐವರು ಒಟ್ಟು ಆರು ಪದಕಗಳನ್ನು ಗೆದ್ದುಕೊಟ್ಟಿದ್ದಾರೆ. ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲೂ ಆರು ಮಂದಿ ಪಾಲ್ಗೊಂಡಿದ್ದು ಆರು ಪದಕಗಳು ಬಂದಿವೆ. ಏಷ್ಯನ್ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್‌ಷಿಪ್ ಇಬ್ಬರು ಎರಡು ಪದಕಗಳನ್ನು ಗಳಿಸಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಂಡ ಅವರ ಶಿಷ್ಯಂದಿರ ಒಟ್ಟು ಸಂಖ್ಯೆ 17. ಅಶ್ವಿನಿ ನಾಚಪ್ಪ, ರೋಸಾ ಕುಟ್ಟಿ ಮತ್ತು ಎಸ್‌.ಡಿ.ಈಶನ್ ಅವರು ಅರ್ಜುನ ಪ್ರಶಸ್ತಿಯನ್ನೂ ಗಳಿಸಿದ್ದಾರೆ.

ಅಂದಹಾಗೆ, ಪುರುಷೋತ್ತಮ ಅವರು ಡೆಕಾಥ್ಲಾನ್ ಪಟು. ಕೇರಳದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮತ್ತು ತಮಿಳುನಾಡಿನಲ್ಲಿ ಆಯೋಜಿಸಿದ್ದ ಮುಕ್ತ ಕೂಟದಲ್ಲಿ ಬೆಳ್ಳಿ ಪದಕ ಗಳಿಸಿದ ಅಥ್ಲೀಟ್. ಕರ್ನಾಟಕ ರಾಜ್ಯ ಹ್ಯಾಂಡ್‌ಬಾಲ್ ತಂಡವನ್ನೂ ಮುನ್ನಡೆಸಿದ್ದಾರೆ. ಪುತ್ತೂರಿನ ಬೋರ್ಡ್‌ ಶಾಲೆಯಲ್ಲಿ 10ನೇ ತರಗತಿ ವರೆಗೆ ಕಲಿತ ಅವರು ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ ಓದಿದರು. ಬ್ಯಾಂಕಿನಲ್ಲಿ ಉದ್ಯೋಗ ಮಾಡುತ್ತಿದ್ದಾಗ ಭಾರತ–ಚೀನಾ ಯುದ್ಧದ ಕಹಳೆ ಮೊಳಗಿತ್ತು. ಆಗ ಸ್ನೇಹಿತರು ಸೇನೆಗೆ ಸೇರಲು ಪ್ರೇರಣೆಯಾದರು. ಸರ್ವಿಸಸ್‌ನ ಅಥ್ಲೆಟಿಕ್ಸ್‌ನಲ್ಲಿ ಸಾಧನೆ ಮಾಡಿದ ಅವರು 1973ರಲ್ಲಿ ಎನ್‌ಐಎಸ್‌ನಲ್ಲಿ, ಕೋಚಿಂಗ್ ತರಬೇತಿ ಪೂರ್ಣಗೊಳಿಸಿದರು. 1977ರಲ್ಲಿ ಬೆಂಗಳೂರಿಗೆ ವರ್ಗವಾಯಿತು. ಕಂಠೀರವ ಕ್ರೀಡಾಂಗಣದಲ್ಲಿ ತರಬೇತಿ ನೀಡಲು ಆರಂಭಿಸಿದ ನಂತರ ಶಿಷ್ಯಂದಿರ ಸಂಖ್ಯೆ ಹೆಚ್ಚಾಯಿತು. 1981ರಲ್ಲಿ ಸೇನೆಯಿಂದ ನಿವೃತ್ತರಾಗಿ ಕ್ರೀಡಾ ಇಲಾಖೆ ಸೇರಿದರು. 1987ರಲ್ಲಿ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ಕೋಚ್ ಆಗಿ ನೇಮಕಗೊಂಡರು. ಪತ್ನಿ ಆ್ಯನಿ ಪಿ.ರೈ ಜಾವೆಲಿನ್ ಥ್ರೋ ಮತ್ತು ವೇಟ್‌ಲಿಫ್ಟಿಂಗ್‌ನಲ್ಲಿ ಸಾಧನೆ ಮಾಡಿದವರು. ಪುತ್ರ ಪೃಥ್ವಿ ರೈ 16 ವರ್ಷದೊಳಗಿನವರ ಡಿಸ್ಕಸ್ ಥ್ರೋದಲ್ಲಿ ರಾಜ್ಯದ ದಾಖಲೆ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT