ಭಾನುವಾರ, ಮೇ 22, 2022
25 °C

1964ರ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಭಾರತ ಹಾಕಿ ತಂಡದ ನಾಯಕ ಚರಣ್‌ಜಿತ್‌ ನಿಧನ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಉನಾ (ಹಿಮಾಚಲ ಪ್ರದೇಶ): ಜಪಾನ್‌ನ ಟೋಕಿಯೊದಲ್ಲಿ 1964ರಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಭಾರತೀಯ ಹಾಕಿ ತಂಡದ ನಾಯಕ ಚರಣ್‌ಜಿತ್‌ ಸಿಂಗ್ ಅವರು ಗುರುವಾರ ನಿಧನರಾಗಿದ್ದಾರೆ. ಹಿಮಾಚಲ ಪ್ರದೇಶದ ಉನಾದಲ್ಲಿನ ತಮ್ಮ ಮನೆಯಲ್ಲೇ ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಚರಣ್‌ಜಿತ್‌ ಸಿಂಗ್‌ ಅವರು ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ. ಅವರಿಗೆ ಐದು ವರ್ಷಗಳ ಹಿಂದೆ ಪಾರ್ಶ್ವವಾಯು ಆಗಿತ್ತು.

‘ಅಪ್ಪ ಐದು ವರ್ಷಗಳ ಹಿಂದೆ ಪಾರ್ಶ್ವವಾಯುವಿಗೆ ಒಳಗಾಗಿದ್ದರು. ಅಂದಿನಿಂದಲೂ ಊರುಗೋಲಿನ ಸಹಾಯದಿಂದ ನಡೆಯುತ್ತಿದ್ದ ಅವರ ಆರೋಗ್ಯ ಕಳೆದ ಎರಡು ತಿಂಗಳಿನಿಂದ ಹದಗೆಟ್ಟಿತು. ಇಂದು ಬೆಳಿಗ್ಗೆ ಅವರು ನಮ್ಮನ್ನು ಅಗಲಿದ್ದಾರೆ’ ಎಂದು ಪುತ್ರ ವಿ ಪಿ ಸಿಂಗ್ ಅವರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

1964 ರ ಒಲಿಂಪಿಕ್ಸ್‌ನಲ್ಲಿ ಭಾರತೀಯ ಹಾಕಿ ತಂಡ ಸಿಂಗ್‌ ನಾಯಕತ್ವದಲ್ಲಿ ಚಿನ್ನ ಗೆದ್ದಿತ್ತು. 1960ರ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ವಿಜೇತ ತಂಡದ ಸದಸ್ಯರಾಗಿದ್ದರು. 1962 ರ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ಭಾರತ ತಂಡದಲ್ಲೂ ಅವರು ಆಡಿದ್ದರು.

‘ದೆಹಲಿಯಲ್ಲಿರುವ ನನ್ನ ಸಹೋದರಿ ಉನಾ ತಲುಪಿದ ಕೂಡಲೇ ತಂದೆಯವರ ಅಂತ್ಯಕ್ರಿಯೆ ನಡೆಯಲಿದೆ’ ಎಂದು ವಿ. ಪಿ. ಸಿಂಗ್ ಹೇಳಿದ್ದಾರೆ.

ಸಿಂಗ್‌ ಪತ್ನಿ 12 ವರ್ಷಗಳ ಹಿಂದೆ ನಿಧನರಾಗಿದ್ದರು. ಅವರ ಹಿರಿಯ ಮಗ ಕೆನಡಾದಲ್ಲಿ ವೈದ್ಯರಾಗಿದ್ದಾರೆ.

ಇಂದು ಸಂಜೆ ಉನಾದಲ್ಲಿ ಅವರ ಅಂತಿಮ ಸಂಸ್ಕಾರ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು