ಮಂಗಳವಾರ, ಜನವರಿ 25, 2022
28 °C

ಹೊಸ ವರ್ಷದ ಯಶಸ್ಸಿಗೆ ದಿಕ್ಸೂಚಿ ಏಷ್ಯಾ ಕಪ್ ಹಾಕಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಈ ವರ್ಷದ ಯಶಸ್ಸಿನ ಪಯಣಕ್ಕೆ ಏಷ್ಯಾ ಕಪ್ ಹಾಕಿ ‌ಚಾಂಪಿಯನ್‌ಷಿಪ್ ದಿಕ್ಸೂಚಿಯಾಗಲಿದೆ ಎಂದು ಭಾರತ ಮಹಿಳಾ ಹಾಕಿ ತಂಡದ ಉಪನಾಯಕಿ ಸವಿತಾ ಪೂನಿಯಾ ಹೇಳಿದರು. 

ಒಮನ್‌ನಲ್ಲಿ ಇದೇ 21ರಿಂದ 28ರವರೆಗೆ  ಏಷ್ಯಾ ಕಪ್ ಟೂರ್ನಿ ನಡೆಯಲಿದೆ. ಹಾಲಿ ಚಾಂಪಿಯನ್ ಭಾರತ ತಂಡವು ಇಲ್ಲಿಯ ಭಾರತ ಕ್ರೀಡಾ ಪ್ರಾಧಿಕಾರದ ವಸತಿ ನಿಲಯದಲ್ಲಿ ಪೂರ್ವಸಿದ್ಧತೆ ನಡೆಸುತ್ತಿದೆ. ಈ ಕುರಿತು ಮಂಗಳವಾರ ಹಾಕಿ ಇಂಡಿಯಾ ನೀಡಿರುವ ಪ್ರಕಟಣೆಯಲ್ಲಿ ಸವಿತಾ ಹೇಳಿಕೆ ನೀಡಿದ್ದಾರೆ. 

‘2017ರಲ್ಲಿ ನಮ್ಮ ತಂಡ ಏಷ್ಯಾ ಕಪ್ ಜಯಿಸಿತ್ತು. ಅದರಿಂದಾಗಿ ಲಂಡನ್‌ನಲ್ಲಿ ನಡೆದ ವಿಶ್ವಕಪ್ ಟೂರ್ನಿಗೆ ನೇರ ಅರ್ಹತೆ ಗಳಿಸಿದೆವು. ಅದು ನಮ್ಮ ತಂಡ ಮತ್ತು ಭಾರತದ ಮಹಿಳಾ ಹಾಕಿ ಕ್ರೀಡೆಯು ಬೆಳವಣಿಗೆಯತ್ತ ಮುಖ ಮಾಡಲು ಕಾರಣವಾಯಿತು. ಕಳೆದ ನಾಲ್ಕು ವರ್ಷಗಳಲ್ಲಿ ನಮ್ಮ ತಂಡದ ಸಾಧನೆಯ ಓಟ ಆಶಾದಾಯಕವಾಗಿದೆ’ ಎಂದು ಸವಿತಾ ಹೇಳಿದರು.

‘ಈಚೆಗೆ ಒಲಿಂಪಿಕ್ಸ್‌ನಲ್ಲಿ ನಮ್ಮ ತಂಡದ ಸಾಧನೆಯು ಗಮನಾರ್ಹವಾಗಿತ್ತು. ಅದರಿಂದಾಗಿ ತಂಡಕ್ಕೆ ಬಹಳಷ್ಟು ಬೆಂಬಲ ಲಭಿಸಿದೆ. ದೊಡ್ಡ ಮಟ್ಟದ ಸ್ಪರ್ಧೆಗಳಲ್ಲಿ ಉತ್ತಮವಾಗಿ ಆಡುವುದರಿಂದ ಬೆಳವಣಿಗೆಗೆ ಬಹಳಷ್ಟು ಅವಕಾಶ ಸಿಗುತ್ತದೆ. ಆತ್ಮವಿಶ್ವಾಸ ವೃದ್ಧಿಸುತ್ತದೆ’ ಎಂದು ಸವಿತಾ ಅಭಿಪ್ರಾಯಪಟ್ಟರು.  

ಟೂರ್ನಿಯಲ್ಲಿ ಭಾರತ, ಚೀನಾ, ದಕ್ಷಿಣ ಕೊರಿಯಾ, ಜಪಾನ್, ಮಲೇಷ್ಯಾ, ಥಾಯ್ಲೆಂಡ್, ಇಂಡೋನೆಷ್ಯಾ ಮತ್ತು ಸಿಂಗಪುರ ತಂಡಗಳು ಸ್ಪರ್ಧಿಸಲಿವೆ. ಈ ಟೂರ್ನಿಯಲ್ಲಿ ಮೊದಲ ನಾಲ್ಕು ಸ್ಥಾನ ಗಳಿಸುವ ತಂಡವು ಎಫ್‌ಐಎಚ್‌ ವಿಶ್ವಕಪ್ ಟೂರ್ನಿಗೆ ಅರ್ಹತೆ ಗಳಿಸಲಿವೆ. ಈ ವರ್ಷದ ಜುಲೈನಲ್ಲಿ  ಸ್ಪೇನ್ ಮತ್ತು ನೆದರ್ಲೆಂಡ್ಸ್‌ ಆತಿಥ್ಯದಲ್ಲಿ ವಿಶ್ವಕಪ್ ಟೂರ್ನಿ ನಡೆಯಲಿದೆ. 

 ಈ ಬಾರಿ ಏಷ್ಯಾ ಕಪ್ ಟೂರ್ನಿಯ ನಂತರ ಬರ್ಮಿಂಗ್‌ಹ್ಯಾಮ್‌ನಲ್ಲಿ ಕಾಮನ್‌ವೆಲ್ತ್‌ ಕ್ರೀಡಾಕೂಟ, ಚೀನಾದಲ್ಲಿ ಏಷ್ಯನ್ ಕ್ರೀಡಾಕೂಟ ನಡೆಯಲಿದೆ. ಅದರಲ್ಲಿ ಚಿನ್ನ ಗೆದ್ದ ತಂಡವು 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು