ಆಕಾಶ್ ಕುಮಾರ್‌ಗೆ ಕಂಚಿನ ಪದಕ

ಬೆಲ್‌ಗ್ರೇಡ್: ಮೊದಲ ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡ ಭಾರತದ ಆಕಾಶ್ ಕುಮಾರ್ ಕಂಚಿನ ಪದಕಕ್ಕೆ ಮುತ್ತನ್ನಿತ್ತಿದ್ದಾರೆ. ಗುರುವಾರ ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ ಅವರು ಕಜಕಸ್ತಾನದ ಯುವ ಬಾಕ್ಸರ್ ಮಖಮುದ್ ಸಬೀರ್‌ಖಾನ್ ಎದುರು 0–5ರಲ್ಲಿ ಸೋತರು.
ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಐದು ಪದಕ ಗೆದ್ದುಕೊಂಡಿರುವ ಶಿವ ಥಾಪಾ ಮತ್ತು ಏಷ್ಯನ್ ಚಾಂಪಿಯನ್ ಸಂಜೀತ್ ಸೇರಿದಂತೆ ಭಾರತದ ಪ್ರಮುಖ ಬಾಕ್ಸರ್‌ಗಳು ಸೆಮಿಫೈನಲ್ ಪ್ರವೇಶಿಸುವುದಕ್ಕೂ ಸಾಧ್ಯವಾಗದೇ ನಿರಾಸೆಗೆ ಒಳಗಾಗಿದ್ದರು. ಆದರೆ 54 ಕೆಜಿ ವಿಭಾಗದಲ್ಲಿ ಆಕಾಶ್ ಕುಮಾರ್ ಅಮೋಘ ಸಾಮರ್ಥ್ಯ ತೋರುತ್ತ ಬಂದಿದ್ದರು.
ಕಂಚು ಗೆಲ್ಲುವ ಮೂಲಕ ಈ ಬಾರಿಯ ಚಾಂಪಿಯನ್‌ಷಿಪ್‌ನಲ್ಲಿ ದೇಶದ ಪರವಾಗಿ ಪದಕ ಗೆದ್ದ ಏಕೈಕ ಬಾಕ್ಸರ್ ಎನಿಸಿಕೊಂಡರು. 19 ವರ್ಷದ ಮಖಮುದ್ ಅವರು ಕಜಕಸ್ತಾನದ ರಾಷ್ಟ್ರೀಯ ಚಾಂಪಿಯನ್ ಕೂಡ ಆಗಿದ್ದಾರೆ. ತಾಳ್ಮೆಯಿಂದ ಆಡಿದರು. ತಂತ್ರಗಳನ್ನು ಪ್ರಯೋಗಿಸುವಲ್ಲಿ ಚಾಣಾಕ್ಷತನ ಮೆರೆದ ಅವರು ಪ್ರತಿ ದಾಳಿ ನಡೆಸುವ ಅವಕಾಶಗಳಲ್ಲಿ ಎಡವಲಿಲ್ಲ. ಹೀಗಾಗಿ ಸುಲಭವಾಗಿ ಪಾಯಿಂಟ್‌ಗಳು ಒಲಿದು ಬಂದವು.
ಮೊದಲ ಸುತ್ತಿನಲ್ಲಿ ಏಕಪಕ್ಷೀಯ ಜಯ ಸಾಧಿಸಿದ ಮಖಮುದ್ ಎರಡನೇ ಸುತ್ತಿನ ಆರಂಭದಲ್ಲಿ ಮುನ್ನಡೆ ಸಾಧಿಸಿದ್ದರು. ಈ ಹಂತದಲ್ಲಿ ತಿರುಗೇಟು ನೀಡಲು ಆಕಾಶ್ ಪ್ರಯತ್ನಿಸಿದರು. ಆದರೆ ಅವರ ಪಂಚ್‌ಗಳು ನಿರೀಕ್ಷೆಗೆ ತಕ್ಕಂತೆ ಪ್ರಭಾವ ಬೀರಲಿಲ್ಲ. ನಿಖರ ದಾಳಿಯ ಮೂಲಕ ಮಖಮುದ್ ಗೆಲುವು ಸಾಧಿಸಿದರು.
ಪಾಲಕರಿಲ್ಲ; ಸಹೋದರ ಜೈಲಿನಲ್ಲಿ
ಪುಣೆಯ ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತಿ ಪಡೆಯುತ್ತಿರುವ ಆಕಾಶ್ ಕುಮಾರ್ ಅವರು ಸೆಪ್ಟೆಂಬರ್‌ನಲ್ಲಿ ತಾಯಿಯನ್ನು ಕಳೆದುಕೊಂಡಿದ್ದರು. ಶ್ವಾಸಕೋಶದ ಸೋಂಕಿಗೆ ಒಳಗಾಗಿ ಅವರು ಸಾವಿಗೀಡಾಗಿದ್ದರು. ಆಕಾಶ್ ತಂದೆ ಒಂದು ದಶಕದ ಹಿಂದೆಯೇ ಮೃತಪಟ್ಟಿದ್ದರು. ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಸಹೋದರ 2017ರಿಂದ ಜೈಲಿನಲ್ಲಿದ್ದಾರೆ.
ಆದರೂ ಎದೆಗುಂದದೆ ಅಭ್ಯಾಸ ನಡೆಸಿರುವ ಆಕಾಶ್ ಅವರು ವಿಶ್ವ ಚಾಂಪಿಯನ್‌ಷಿಪ್‌ನ ಆರಂಭದಿಂದಲೇ ಉತ್ತಮ ಸಾಧನೆ ಮಾಡುತ್ತ ಭರವಸೆ ಮೂಡಿಸಿದ್ದರು. ಹರಿಯಾಣದ ಭಿವಾನಿಯವರಾದ ಆಕಾಶ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗಳಿಸಿದ್ದ ವೆನೆಜುವೆಲಾದ ಯೊಯೆಲ್ ಫಿನೊಲ್ ರಿವಾಸ್ ಎದುರು ಕ್ವಾರ್ಟರ್ ಫೈನಲ್‌ನಲ್ಲಿ ಜಯ ಗಳಿಸಿದ್ದರು.
ಈ ಹಿಂದಿನ ಪದಕ ವಿಜೇತರು
ವಿಜೇಂದರ್ ಸಿಂಗ್–ಕಂಚು (2009), ವಿಕಾಸ್ ಕೃಷನ್–ಕಂಚು (2011), ಶಿವ ಥಾಪಾ–ಕಂಚು (2015), ಗೌರವ್ ಬಿಧೂರಿ–ಕಂಚು (2017), ಅಮಿತ್ ಪಂಘಾಲ್–ಬೆಳ್ಳಿ (2019), ಕೌಶಿಕ್–ಕಂಚು (2019).
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.