ಗುರುವಾರ , ಆಗಸ್ಟ್ 22, 2019
25 °C
ಬೆಂಗಳೂರು ಕಪ್ ಅಖಿಲ ಭಾರತ ಹಾಕಿ ಟೂರ್ನಿ: ಗೋಲು ಗಳಿಸಿದ ಸೋಮಯ್ಯ, ಪೃಥ್ವಿರಾಜ್

ಮೊದಲ ದಿನ ಡ್ರಾ ಪಂದ್ಯಗಳ ರಂಜನೆ

Published:
Updated:
Prajavani

ಬೆಂಗಳೂರು: ಜಿದ್ದಾಜಿದ್ದಿಯ ಹೋರಾಟಕ್ಕೆ ಸಾಕ್ಷಿಯಾದ ಪಂದ್ಯದಲ್ಲಿ ಹಾಕಿ ಕರ್ನಾಟಕ ತಂಡ ಮುಂಬೈನ ಏರ್‌ ಇಂಡಿಯಾ ವಿರುದ್ಧ ಡ್ರಾ ಸಾಧಿಸಿತು. ಶಾಂತಿನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕ್ರೀಡಾಂಗಣದಲ್ಲಿ ಶನಿವಾರ ಆರಂಭಗೊಂಡ ಬೆಂಗಳೂರು ಕಪ್ ಅಖಿಲ ಭಾರತ ಹಾಕಿ ಟೂರ್ನಿಯ ‘ಬಿ’ ಗುಂಪಿನ ಮೊದಲ ಪಂದ್ಯದಲ್ಲಿ ಉಭಯ ತಂಡಗಳು ತಲಾ 2 ಗೋಲು ಗಳಿಸಿದವು.

ಆರಂಭದಿಂದಲೇ ರೋಚಕ ಹಣಾಹಣಿ ಕಂಡುಬಂದ ಪಂದ್ಯದಲ್ಲಿ ಕೆ.ಪಿ.ಸೋಮಯ್ಯ 3ನೇ ನಿಮಿಷದಲ್ಲಿ ಗಳಿಸಿದ ಗೋಲಿನ ಮೂಲಕ ಹಾಕಿ ಕರ್ನಾಟಕ ಮುನ್ನಡೆ ಸಾಧಿಸಿತು. ಆದರೆ ಕೇವಲ ನಾಲ್ಕೇ ನಿಮಿಷಗಳಲ್ಲಿ ಏರ್ ಇಂಡಿಯಾ ತಿರುಗೇಟು ನೀಡಿತು. ಜೋಗಿಂದರ್ ಸಿಂಗ್ ಗೋಲು ಗಳಿಸಿದರು.

ಎರಡನೇ ಕ್ವಾರ್ಟರ್‌ನಲ್ಲಿ ಉಭಯ ತಂಡಗಳ ಆಟಗಾರರು ಕೂಡ ಅಮೋಘ ಆಟವಾಡಿದರು. ಹಾಕಿ ಕರ್ನಾಟಕಕ್ಕೆ ಈ ಹಂತದಲ್ಲಿ ಸಾಕಷ್ಟು ಅವಕಾಶಗಳು ಒದಗಿ ಬಂದಿದ್ದವು. ಆದರೆ ಗೋಲ್ ಕೀಪರ್ ಗುರುಪ್ರೀತ್ ಸಿಂಗ್ ಅವರ ಚಾಣಾಕ್ಷತನ ಏರ್ ಇಂಡಿಯಾದ ನೆರವಿಗೆ ಬಂತು.

ಮೊದಲಾರ್ಧದಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಂಡು ದ್ವಿತೀಯಾರ್ಧದಲ್ಲಿ ಕಣಕ್ಕೆ ಇಳಿದ ಹಾಕಿ ಕರ್ನಾಟಕ ಮತ್ತಷ್ಟು ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. 36ನೇ ನಿಮಿಷದಲ್ಲಿ ಎದುರಾಳಿ ತಂಡದ ರಕ್ಷಣಾ ವಿಭಾಗದವರು ಮಾಡಿದ ಎಡವಟ್ಟಿನ ಲಾಭ ಪಡೆದುಕೊಂಡ ಪೃಥ್ವಿರಾಜ್ ಚೆಂಡನ್ನು ಗುರಿ ಮುಟ್ಟಿಸಿದರು. ಆದರೆ 43ನೇ ನಿಮಿಷದಲ್ಲಿ ಶಿವೇಂದ್ರ ಸಿಂಗ್ ಗಳಿಸಿದ ಗೋಲು ಏರ್ ಇಂಡಿಯಾಗೆ ಸಮಬಲ ತಂದುಕೊಟ್ಟಿತು.

ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಅಖಿಲ ಭಾರತ ಕಸ್ಟಮ್ಸ್ ತಂಡ ಕೂಡ 2–2ರ ಡ್ರಾ ಸಾಧಿಸಿತು. ಬಿಪಿಸಿಎಲ್ ಪರ ಮೊಹಮ್ಮದ್ ಅಮೀರ್ ಖಾನ್ (26ನೇ ನಿಮಿಷ) ಮತ್ತು ಶಿಲಾನಂದ್ ಲಾಕ್ರಾ (50ನೇ ನಿ)ದಲ್ಲಿ ಗೋಲು ಗಳಿಸಿದರೆ ಕಸ್ಟಮ್ಸ್‌ಗಾಗಿ ಹಸನ್‌ ಬಾಷಾ (16ನೇ ನಿ) ಮತ್ತು ಜೋಶುವಾ ವೆಸಾಕರ್ (54ನೇ ನಿ) ಗೋಲು ತಂದುಕೊಟ್ಟರು.

ಇಂದಿನ ಪಂದ್ಯಗಳು

ಭಾನುವಾರ ಮಧ್ಯಾಹ್ನ 2 ಗಂಟೆಗೆ ಆರ್ಮಿ ಇಲೆವನ್ ಮತ್ತು ಇಂಡಿಯನ್ ಏರ್‌ ಫೋರ್ಸ್‌, ಸಂಜೆ 4 ಕ್ಕೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮತ್ತು ಇಂಡಿಯನ್ ನೇವಿ ತಂಡಗಳು ಸೆಣಸಲಿವೆ.

Post Comments (+)