ಮಂಗಳವಾರ, ಮಾರ್ಚ್ 2, 2021
30 °C
ಹೀನಾಯ ಸೋಲಿನೊಂದಿಗೆ ಅಭಿಯಾನ ಮುಗಿಸಿದ ಪಾಕಿಸ್ತಾನ

ಹಾಕಿ ವಿಶ್ವಕಪ್‌: ಕ್ವಾರ್ಟರ್‌ ಫೈನಲ್‌ಗೆ ಬೆಲ್ಜಿಯಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಭುವನೇಶ್ವರ: ಹಾಕಿ ವಿಶ್ವಕಪ್‌ನಲ್ಲಿ ಚೊಚ್ಚಲ ಚಿನ್ನದ ಪದಕಕ್ಕೆ ಮುತ್ತಿಕ್ಕುವ ಗುರಿ ಹೊಂದಿರುವ ಬೆಲ್ಜಿಯಂ ತಂಡ ಈ ಹಾದಿಯಲ್ಲಿ ಭರವಸೆಯ ಹೆಜ್ಜೆ ಇಟ್ಟಿದೆ.

ಥಾಮಸ್‌ ಬ್ರೀಲ್ಸ್‌ ಸಾರಥ್ಯದ ‘ರೆಡ್‌ ಲಯನ್ಸ್‌’ ಈ ಬಾರಿಯ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ.

ಕಳಿಂಗ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮೂರನೇ ‘ಕ್ರಾಸ್‌ ಓವರ್‌’ ಹಣಾಹಣಿಯಲ್ಲಿ ಬೆಲ್ಜಿಯಂ 5–0 ಗೋಲುಗಳಿಂದ ನಾಲ್ಕು ಬಾರಿಯ ಚಾಂಪಿಯನ್‌ ಪಾಕಿಸ್ತಾನ ತಂಡವನ್ನು ಪರಾಭವಗೊಳಿಸಿತು.

ಗುರುವಾರ ನಡೆಯುವ ಎಂಟರ ಘಟ್ಟದ ಪೈಪೋಟಿಯಲ್ಲಿ ಬ್ರೀಲ್ಸ್‌ ಪಡೆ ಜರ್ಮನಿ ಎದುರು ಸೆಣಸಲಿದೆ.

ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿಯ ಪದಕ ಗೆದ್ದ ಸಾಧನೆ ಮಾಡಿರುವ ಬೆಲ್ಜಿಯಂ ತಂಡ ಆರಂಭಿಕ ಕ್ವಾರ್ಟರ್‌ನ ಮೊದಲ ಒಂಬತ್ತು ನಿಮಿಷಗಳಲ್ಲಿ ಎದುರಾಳಿಗಳಿಂದ ಪ್ರಬಲ ಸ್ಪರ್ಧೆ ಎದುರಿಸಿತು. ನಂತರ ಈ ತಂಡದ ಆಟ ರಂಗೇರಿತು. 10ನೇ ನಿಮಿಷದಲ್ಲಿ ಬ್ರೀಲ್ಸ್‌ ಬಳಗಕ್ಕೆ ಪೆನಾಲ್ಟಿ ಕಾರ್ನರ್‌ ಲಭಿಸಿತು. ಈ ಅವಕಾಶದಲ್ಲಿ ‘ಲೋ ಫ್ಲಿಕ್‌’ ಮೂಲಕ ಚೆಂಡನ್ನು ಗುರಿ ಮುಟ್ಟಿಸಿದ ಅಲೆಕ್ಸಾಂಡರ್‌ ಹೆನ್ರಿಕ್ಸ್‌ ಕ್ರೀಡಾಂಗಣದಲ್ಲಿ ಸಂಭ್ರಮ ಮೇಳೈಸುವಂತೆ ಮಾಡಿದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಮೂರನೇ ಸ್ಥಾನ ಹೊಂದಿರುವ ಬೆಲ್ಜಿಯಂ, ನಂತರ ಪ್ರಾಬಲ್ಯ ಮೆರೆಯಿತು. ವಿಶ್ವ ರ‍್ಯಾಂಕಿಂಗ್‌ನಲ್ಲಿ 13ನೇ ಸ್ಥಾನದಲ್ಲಿರುವ ಪಾಕಿಸ್ತಾನ ತಂಡದ ದುರ್ಬಲ ರಕ್ಷಣಾ ಕೋಟೆಯನ್ನೇ ಗುರಿಯಾಗಿಟ್ಟುಕೊಂಡು ದಾಳಿ ನಡೆಸಿದ ಬ್ರೀಲ್ಸ್‌ ಬಳಗದವರು ಅಭಿಮಾನಿಗಳನ್ನು ರಂಜಿಸಿದರು.

13ನೇ ನಿಮಿಷದಲ್ಲಿ ನಾಯಕ ಬ್ರೀಲ್ಸ್‌ ಕೈಚಳಕ ತೋರಿದರು. ಎದುರಾಳಿ ಆವರಣದ ಬಲಭಾಗದಿಂದ ನಿಕೊಲಸ್‌ ಡಿ ಕಾರ್ಪೆಲ್‌ ತಮ್ಮತ್ತ ತಳ್ಳಿದ ಚೆಂಡನ್ನು ನಿಯಂತ್ರಣಕ್ಕೆ ಪಡೆದ ಬ್ರೀಲ್ಸ್‌ ಅದನ್ನು ಚಾಕಚಕ್ಯತೆಯಿಂದ ಗುರಿ ಸೇರಿಸಿ ‘ರೆಡ್‌ ಲಯನ್ಸ್‌’ ಪಾಳಯದಲ್ಲಿ ಸಂಭ್ರಮ ಇಮ್ಮಡಿಸುವಂತೆ ಮಾಡಿದರು.

ಎರಡನೇ ಕ್ವಾರ್ಟರ್‌ನಲ್ಲಿ ಪಾಕಿಸ್ತಾನ ತಂಡ ಚೇತರಿಕೆಯ ಆಟ ಆಡಿತು. 16ನೇ ನಿಮಿಷದಲ್ಲಿ ಅಮ್ಮದ್‌ ಪಡೆಗೆ ಮೊದಲ ಪೆನಾಲ್ಟಿ ಕಾರ್ನರ್‌ ಸಿಕ್ಕಿತ್ತು. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ತಂಡ ವಿಫಲವಾಯಿತು. ಇದರ ಬೆನ್ನಲ್ಲೇ ಅಲಿ ಶಾನ್‌ ಅವರ ‘ರಿವರ್ಸ್‌ ಹಿಟ್‌’ ಪ್ರಯತ್ನವನ್ನು ಬೆಲ್ಜಿಯಂ ಗೋಲ್‌ಕೀಪರ್‌ ವಿನ್ಸೆಂಟ್‌ ವ್ಯಾನಷ್‌ ವಿಫಲಗೊಳಿಸಿದರು.

ಮೊದಲಾರ್ಧದ ಆಟ ಮುಗಿಯಲು ಮೂರು ನಿಮಿಷಗಳು ಬಾಕಿ ಇದ್ದಾಗ (27) ಬೆಲ್ಜಿಯಂ ತಂಡ ಮುನ್ನಡೆ ಹೆಚ್ಚಿಸಿಕೊಂಡಿತು. ಸೆಡ್ರಿಕ್‌ ಚಾರ್ಲಿಯರ್‌ ಫೀಲ್ಡ್‌ ಗೋಲು ಬಾರಿಸಿದರು. ಸೆಡ್ರಿಕ್‌ ಅವರು ‘ರಿವರ್ಸ್‌ ಹಿಟ್‌’ ಮೂಲಕ ಚೆಂಡನ್ನು ಗುರಿ ಮುಟ್ಟಿಸಿದ ರೀತಿ ಮನ ಸೆಳೆಯುವಂತಿತ್ತು.

ದ್ವಿತೀಯಾರ್ಧದಲ್ಲೂ ಬ್ರೀಲ್ಸ್‌ ಬಳಗದ ಅಬ್ಬರ ಮುಂದುವರಿಯಿತು. 35ನೇ ನಿಮಿಷದಲ್ಲಿ ಸೆಬಾಸ್ಟಿಯನ್‌ ಡಾಕಿಯರ್‌ ಮೋಡಿ ಮಾಡಿದರು. ಫೀಲ್ಡ್‌ ಗೋಲು ಗಳಿಸಿದ ಅವರು ‘ರೆಡ್‌ ಲಯನ್ಸ್‌’ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು.

ಇದರ ಬೆನ್ನಲ್ಲೇ ಬೆಲ್ಜಿಯಂ ತಂಡಕ್ಕೆ ಪೆನಾಲ್ಟಿ ಕಾರ್ನರ್‌ ಸಿಕ್ಕಿತ್ತು. ಈ ಅವಕಾಶವನ್ನು ಬ್ರೀಲ್ಸ್‌ ಬಳಗ ಕೈಚೆಲ್ಲಿತು. ನಾಲ್ಕನೇ ಕ್ವಾರ್ಟರ್‌ನಲ್ಲಿ ಪಾಕ್‌ ತಂಡದ ಆಟ ಇನ್ನಷ್ಟು ಸಪ್ಪೆಯಾಗಿತ್ತು. 53ನೇ ನಿಮಿಷದಲ್ಲಿ ಬೆಲ್ಜಿಯಂ ಖಾತೆಗೆ ಮತ್ತೊಂದು ಗೋಲು ಸೇರ್ಪಡೆಯಾಯಿತು. ಪಾಕಿಸ್ತಾನದ ರಕ್ಷಣಾ ವಿಭಾಗದ ಆಟಗಾರನಿಗೆ ಚೆಂಡು ತಾಗಿದ್ದರಿಂದ ಬ್ರೀಲ್ಸ್‌ ಪಡೆಗೆ ‘ಪೆನಾಲ್ಟಿ ಸ್ಟ್ರೋಕ್‌’ ಲಭಿಸಿತು. ಈ ಅವಕಾಶದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ಟಾಮ್ ಬೂನ್‌ ಸಂಭ್ರಮಿಸಿದರು. 

ಇಂದಿನ ಪಂದ್ಯಗಳು

(ಕ್ವಾರ್ಟರ್ ಫೈನಲ್‌)

 ಅರ್ಜೆಂಟೀನಾ–ಇಂಗ್ಲೆಂಡ್‌

ಆರಂಭ: ಸಂಜೆ 4.45

ಆಸ್ಟ್ರೇಲಿಯಾ–ಫ್ರಾನ್ಸ್‌

ಆರಂಭ: ರಾತ್ರಿ 7

ನೇರ ಪ್ರಸಾರ: ಸ್ಟಾರ್‌ ನೆಟ್‌ವರ್ಕ್‌/ದೂರದರ್ಶನ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು